ಭಗಿನಿ ನಿವೇದಿತ ಜನ್ಮದಿನ: ಭಾರತಕ್ಕಾಗಿ ತಪಸ್ಸುಗೈದ ಅಕ್ಕ ನಿವೇದಿತರ ಸ್ಮರಣೆ

ಭಾರತವು ಪಶ್ಚಿಮದಿಂದ ಏನನ್ನೂ ಕಲಿಯಬೇಕಿಲ್ಲ. ಹಿಂದೂಧರ್ಮದಲ್ಲೇ ಬೇರೆಯವರಿಗೆ ಕಲಿಸುವ ವಿಚಾರಗಳು ಸಾಕಷ್ಟಿವೆ. ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆಯೂ ಭಾರತದವರು ತಮಗೆ ಬೇಕಾದ ಬದಲಾವಣೆಯನ್ನು ತಾವೇ ಮಾಡಿಕೊಳ್ಳಬಲ್ಲರು
ಸಿಸ್ಟರ್ ನಿವೇದಿತ-ಸ್ವಾಮಿ ವಿವೇಕಾನಂದ (ಸಂಗ್ರಹ ಚಿತ್ರ)
ಸಿಸ್ಟರ್ ನಿವೇದಿತ-ಸ್ವಾಮಿ ವಿವೇಕಾನಂದ (ಸಂಗ್ರಹ ಚಿತ್ರ)

"ಭಾರತವು ಪಶ್ಚಿಮದಿಂದ ಏನನ್ನೂ ಕಲಿಯಬೇಕಿಲ್ಲ. ಹಿಂದೂಧರ್ಮದಲ್ಲೇ ಬೇರೆಯವರಿಗೆ ಕಲಿಸುವ ವಿಚಾರಗಳು ಸಾಕಷ್ಟಿವೆ. ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆಯೂ ಭಾರತದವರು ತಮಗೆ ಬೇಕಾದ ಬದಲಾವಣೆಯನ್ನು ತಾವೇ ಮಾಡಿಕೊಳ್ಳಬಲ್ಲರು. ಹೊರಗಿನವರಿಗೆ ಈ ವಿಚಾರದಲ್ಲಿ ಮೂಗು ತೂರಿಸುವ ಯಾವ ಹಕ್ಕೂ ಇಲ್ಲ. ಜೀವನ ಚಕ್ರದಲ್ಲಿ ಬದಲಾವಣೆ ಎನ್ನುವುದು ನಿಶ್ಚಿತ. ಆದರೆ, ಬದಲಾವಣೆಯೂ ಮೂಲದಿಂದಲೇ ಬರಬೇಕು, ಸ್ವಂತದ್ದಾಗಿರಬೇಕು, ನಾವೇ ನಿರ್ಧರಿಸಿದ್ದಾಗಿರಬೇಕು. ಸಾವಿರಾರು ವರ್ಷಗಳ ಇತಿಹಾಸವುಳ್ಳ ನಾಗರೀಕತೆಯನ್ನು ಇದೀಗ ಜನಿಸಿದ ಪಶ್ಚಿಮವು ಮುನ್ನಡೆಸಲು ಸಾಧ್ಯವೇನು?!" 

ಹೀಗೆ ಆಂಗ್ಲರ ಮುಖಕ್ಕೆ ಹೊಡೆಯುವಂತೆ ಮಾತನಾಡಿದ್ದು ಸೋದರಿ ನಿವೇದಿತಾ! ಹೌದು, ಸ್ವಾಮಿ ವಿವೇಕಾನಂದರ ಒಂದೇ ಮಾತಿಗೆ ತನ್ನ ಹುಟ್ಟಿದ ನಾಡನ್ನು, ತನ್ನ ಬಂಧು-ಬಳಗವನ್ನು, ಸರ್ವಸ್ವವನ್ನೂ ಬಿಟ್ಟು ಭಾರತಕ್ಕೆ ಬಂದವರು ಮಾರ್ಗರೇಟ್ ಎಲಿಜಬೆತ್ ನೊಬೆಲ್. ಇಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಸ್ವಾಮೀಜಿ ಆಕೆಗೆ ದೀಕ್ಷೆಯಿತ್ತು ನಿವೇದಿತಾ ಎಂಬ ನಾಮಕರಣ ಮಾಡಿದರು. 

ನಿವೇದಿತಾ ಬಂಗಾಳದಲ್ಲಿ ಪ್ಲೇಗ್‌ರೋಗ ಹಬ್ಬಿದಾಗ ತನ್ನ ಪ್ರಾಣವನ್ನೂ ಲೆಕ್ಕಿಸದೇ ರೋಗಿಗಳ ಶುಶ್ರೂಷೆ ಮಾಡಿದರು, ಬೀದಿ-ಬೀದಿಗಳನ್ನು ಸ್ವಚ್ಛಗೊಳಿಸಿದರು. ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಿ, ರಾಷ್ಟ್ರೀಯ ಶಿಕ್ಷಣದ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಬರಗಾಲ, ಕ್ಷಾಮದಂತಹ ಭೀಕರ ಹೊತ್ತಿನಲ್ಲಿ ಹಳ್ಳಿ-ಹಳ್ಳಿಗೆ ಭೇಟಿ ನೀಡಿ ಜನರ ಹತ್ತಿರವಾದರು. ಇವೆಲ್ಲ ಸುಲಭದಲ್ಲಾಯಿತು ಎಂದು ಭಾವಿಸಿಬಿಡಬೇಡಿ.

ಸ್ವಾಮಿ ವಿವೇಕಾನಂದರು ಆಕೆಗೆ ದೀಕ್ಷೆಯಿತ್ತ ಕೆಲವೇ ದಿನಗಳ ನಂತರ, "ನೀನು ಯಾವ ರಾಷ್ಟ್ರಕ್ಕೆ ಸೇರಿದವಳು
ಮಾರ್ಗರೇಟ್" ಎಂದು ಕೇಳಿದ್ದಾಗ, ‘ನಾನು ಬ್ರಿಟಿಷ್, ಸ್ವಾಮೀಜಿ" ಎಂದು ಹೆಮ್ಮೆಯಿಂದ ಉತ್ತರ ನೀಡಿದ್ದಳು. ಸ್ವಾಮೀಜಿ ಅಸಮಾಧಾನಗೊಂಡರು. ನಿಧಾನವಾಗಿ ನಿವೇದಿತೆಗೆ ತನ್ನ ತಪ್ಪಿನ ಅರಿವಾಗಿತ್ತು. ಆನಂತರ ಆಕೆ ತಪಸ್ಸುಗೈದು, ತನ್ನನ್ನು ತಾನು ಸಂಪೂರ್ಣವಾಗಿ ಭಾರತಮಾತೆಗೆ ನಿವೇದಿಸಿಕೊಂಡಳು. ಅಕ್ಕ ನಿವೇದಿತೆಯ ಈ ಪರಿವರ್ತನೆಯನ್ನು ಕಂಡ ಗುರುದೇವ ರವೀಂದ್ರನಾಥ ಠಾಕೂರರು ಪಾರ್ವತಿ ಶಿವನನ್ನು ಒಲಿಸಿಕೊಳ್ಳಲು ಹೇಗೆ ತಪಸ್ಸುಗೈದಿದ್ದಳೋ, ಹಾಗೆ ಅಕ್ಕ ನಿವೇದಿತಾ ಭಾರತಕ್ಕಾಗಿ ತಪಸ್ಸುಗೈದಿದ್ದಾಳೆ ಎಂದಿದ್ದರು. ಹೌದು, ಅಕ್ಕ ನಿವೇದಿತಾ ಪ್ರತಿಕ್ಷಣ ಭಾರತವನ್ನೇ ಉಸಿರಾಡುತ್ತಿದ್ದರು. ನಿವೇದಿತಾ ಅದೆಷ್ಟು ಭಾರತವನ್ನು ಆವಾಹಿಸಿಕೊಂಡಿದ್ದರೆಂದರೆ ಯಾರಾದರೂ ಅವರನ್ನು ಆಂಗ್ಲಭಾಷೆಯಲ್ಲಿ ಸಿಸ್ಟರ್ ಎಂದರೆ ಅಕ್ಕನ ಮುಖ ಕೆಂಪೇರಿಬಿಡುತ್ತಿತ್ತು. ತನ್ನನ್ನು ‘ಭಗಿನಿ’ ಎಂದೇ ಕರೆಯಬೇಕೆಂದು ತಾಕೀತು ಮಾಡುತ್ತಿದ್ದರಂತೆ. 

ಅದು 1903ರ ಬೇಸಿಗೆಯ ದಿನಗಳು. ಅಕ್ಕ ನಿವೇದಿತಾ ಬಂಗಾಳದ ಮೇದಿನೀಪುರಕ್ಕೆ ಭೇಟಿ ನೀಡದ್ದರು. ಅಕ್ಕ ರೈಲಿನಿಂದ ಕೆಳಗಿಳಿಯುತ್ತಿದ್ದಂತೆ, ಆಕೆಯನ್ನು ಸ್ವೀಕರಿಸಲೆಂದು ನೆರೆದಿದ್ದ ಅಪಾರ ಜನಸ್ತೋಮ ಉತ್ಸಾಹದಿಂದ "hip hip hurrey" ಎಂಬ ಘೋಷಣೆ ಕೂಗಿತು. ಬಿಳಿಯ ನಾಡಿನಿಂದ ಬಂದ ಅಕ್ಕ ನಿವೇದಿತೆಗೆ ಇದನ್ನು ಕೇಳಿ ಸಂತೋಷವಾಗುತ್ತದೆಂದು ಮೇದಿನೀಪುರದ ಜನ ಭಾವಿಸಿದ್ದಿರಬೇಕು. ಆದರೆ, ಕ್ಷಣಾರ್ಧದಲ್ಲಿ ಅಕ್ಕನ ಕಣ್ಣುಗಳು ಕೆಂಪೇರಿದವು. ಘೋಷಣೆ ಕೂಗುತ್ತಿದ್ದವರನ್ನು ನಿಲ್ಲಿಸುವಂತೆ ಹೇಳಿ, hip hip hurrey’ ಆಂಗ್ಲರ ವಿಜಯದ ಕೂಗು. ಭಾರತೀಯರು ಎಂದೂ ಅದನ್ನು ಬಳಸಬಾರದು"  ಎಂದದ್ದಲ್ಲದೇ ತನ್ನ ಕೈಗಳನ್ನು ಮೇಲಕ್ಕೆ ಎತ್ತಿ ‘ವಾಹೆ ಗುರೂ ಕಿ ಫತೇ"; ಎಂದು ಜೋರಾಗಿ ಕೂಗಿದರು. ನೆರೆದಿದ್ದ ಭಾರತೀಯರು ಮತ್ತಷ್ಟು ಉತ್ಸಾಹದಿಂದ ಇದೇ ಘೋಷಣೆಯನ್ನು ಪುನರುಚ್ಚರಿಸಿದರು.

ಸ್ವಾಮಿ ವಿವೇಕಾನಂದರ ದೇಹತ್ಯಾಗದ ನಂತರ ಅಕ್ಕ ನಿವೇದಿತಾ, ತನ್ನ ಗುರುದೇವರ ಪ್ರೇರಣೆಯಂತೆ ಭಾರತವನ್ನು ಬ್ರಿಟೀಷರಿಂದ ಬಂಧಮುಕ್ತಗೊಳಿಸುವ ಚಟುವಟಿಕೆಯಲ್ಲಿ ನಿರತರಾದರು. ಬಂಗಾಳದಲ್ಲಿ ಬ್ರಿಟೀಷರ ಕ್ರೌರ್ಯ ಹೆಚ್ಚಿದ್ದ ಕಾಲವದು. ಲಾರ್ಡ್ಕರ್ಜನ್ ಬಂಗಾಳವನ್ನು ಮತ-ಧರ್ಮದ ಆಧಾರದ ಮೇಲೆ ವಿಭಜಿಸುವ ಯೋಜನೆ ಸಿದ್ಧಪಡಿಸಿದ್ದ. ಬಂಗಾಳದ ದೇಶಭಕ್ತರು ಸಿಡಿದೆದ್ದರು, ಎಲ್ಲೆಲ್ಲೂ ಪ್ರತಿಭಟನೆ. ಈ ಸಂದರ್ಭದಲ್ಲಿ ಕ್ರಾಂತಿ ಚಟುವಟಿಕೆಯನ್ನು ಚುರುಕುಗೊಳಿಸುವ ಹೊಣೆ ಹೊತ್ತವರು ಅರವಿಂದ ಘೋಷರು ಮತ್ತು ಅಕ್ಕ ನಿವೇದಿತಾ. ಅಕ್ಕ ಆಗಿನ ಎಲ್ಲ ಕ್ರಾಂತಿಕಾರಿಗಳಿಗೆ ಪ್ರೇರಣಾಸ್ರೋತವಾಗಿದ್ದರು. ಬಂಗಾಳದ ಹುಲಿ ಬಾಘಾ ಜತೀನ್, ಸ್ವಾಮಿ ವಿವೇಕಾನಂದರ ತಮ್ಮ ಭೂಪೇಂದ್ರನಾಥ ದತ್ತ, ಅರವಿಂದರ ತಮ್ಮ ಬಾರೀಂದ್ರ ಘೋಷ್, ಖುದಿರಾಂ ಬೋಸ್, ರವೀಂದ್ರನಾಥ ಠಾಕೂರ್, ಗೋಪಾಲಕೃಷ್ಣ ಗೋಖಲೆ, ಹೀಗೆ ಬಂಗಾಳದಲ್ಲಿ ಆಗ ಸ್ವಾತಂತ್ರ‍್ಯದ ಕಿಡಿ ಹೊತ್ತಿಸಿಕೊಂಡ ಬಹುತೇಕರೊಡನೆ ಅಕ್ಕ ನಿವೇದಿತಾ ಸಂಪರ್ಕದಲ್ಲಿದ್ದರು. ಸ್ವದೇಶಿ ಚಳವಳಿಯ ಹೊತ್ತಲ್ಲಿ ಅಕ್ಕ ತಳ್ಳುವ ಗಾಡಿಯಲ್ಲಿ ಸ್ವದೇಶಿ ಬಟ್ಟೆಗಳನ್ನು ಹಾಕಿಕೊಂಡು, ಮನೆ-ಮನೆಗೆ ಮಾರಲು ಹೋಗುತ್ತಿದ್ದರಂತೆ!! 

ಅಕ್ಕ ಅತ್ಯದ್ಭುತ ಮಾತುಗಾರ್ತಿಯಾಗಿದ್ದರು. ಆಕೆಯ ಮಾತನ್ನು ಕೇಳಲು ಯುವಕರು ಸದಾ ನೆರೆದಿರುತ್ತಿದ್ದರಂತೆ. ಅಕ್ಕನಿಗೆ ಬಂಗಾಳದಲ್ಲಲ್ಲದೇ ಮುಂಬೈ, ಮದ್ರಾಸ್‌ಗಳಿಂದಲೂ ಭಾಷಣಕ್ಕಾಗಿ ಕರೆ ಬರುತ್ತಿತ್ತು. ಇವೆಲ್ಲ ಓಡಾಟ, ಕೆಲಸಗಳ ನಡುವೆ ಅಕ್ಕ ಪತ್ರಿಕೆಗಳಿಗೆ ನಿರಂತರವಾಗಿ ಅಂಕಣವನ್ನು ಬರೆಯುತ್ತಿದ್ದರು. ರಾಷ್ಟ್ರೀಯತೆಯ ಪ್ರತೀಕವಾಗಿದ್ದ ಯುಗಾಂತರ, ವಂದೇಮಾತರಂ ಪತ್ರಿಕೆಗಳಿಗೆ ಅಗತ್ಯಬಿದ್ದಾಗ ಸಂಪಾದಕಿಯಾಗಿಯೂ ಕಾರ್ಯ

ನಿರ್ವಹಿಸಿದ್ದಾರೆ. ಆಕೆಯದು ನೇರವಾಗಿ ಹೇಳುವ, ಬರೆಯುವ ನಿರ್ಭೀತ ವ್ಯಕ್ತಿತ್ವ. 1905, ಫೆಬ್ರವರಿ 5ರಂದು
ಕಲ್ಕತ್ತಾ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭ. ವಿಶ್ವವಿದ್ಯಾಲಯದ ಕುಲಪತಿ ಮತ್ಯಾರೂ ಅಲ್ಲ, ಲಾರ್ಡ್ ಕರ್ಜನ್. ಭಾರತೀಯರು ಸುಳ್ಳುಗಾರರು, ಸತ್ಯವನ್ನು ನುಡಿಯಲು ಬಾರದ ಜನ ಎಂಬುದು ಆತನ ಭಾಷಣದ ಮುಖ್ಯ ಅಂಶ. ಇದನ್ನು ಕೇಳಿಸಿಕೊಂಡ ವಿದ್ಯಾರ್ಥಿಗಳಲ್ಲಿ ನೀರವ ಮೌನ. ಯಾರೂ ಪ್ರತಿಭಟಿಸುವ ಗೋಜಿಗೂ ಹೋಗಲಿಲ್ಲ.

ಆದರೆ ಅದೇ ಸಭೆಯಲ್ಲಿದ್ದು, ಈ ಮಾತುಗಳನ್ನು ಕೇಳಲಾರದೇ ಕೆಂಡಾಮಂಡಲವಾಗಿದ್ದು ಮಾತ್ರ ಅಕ್ಕ ನಿವೇದಿತಾ! ಸ್ವತಃ ಕರ್ಜನ್ ಸುಳ್ಳುಗಾರ ಎಂದು ಸಾಬೀತುಪಡಿಸುವ ಅಂಕಣವೊಂದು ಅಮೃತ್ ಬಜಾರ್ ಪತ್ರಿಕೆಯಲ್ಲಿ ಬರುವಂತೆ ನೋಡಿಕೊಂಡರು. ಇಷ್ಟಕ್ಕೇ ಸುಮ್ಮನಾಗದ ಅಕ್ಕ ಸ್ಟೇಟ್ಸ್ಮನ್ ಪತ್ರಿಕೆಗೆ ತಾನೇ ಅಂಕಣವನನು ಬರೆದು ಅದರಲ್ಲಿ ರಾಮಾಯಣ-ಮಹಾಭಾರತದ ವಿಷಯಗಳನ್ನು ಪುಂಖಾನುಪುಂಖವಾಗಿ ಉದಾಹರಿಸುತ್ತಾ, ಭಾರತದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಿದಳು. ಅಕ್ಕ ನಿವೇದಿತಾ ಹೀಗೆ
ಪ್ರತಿಭಟಿಸಿದ ನಂತರವಷ್ಟೇ ಹಲವು ಪತ್ರಿಕೆಗಳು, ರಾಜಕೀಯ ನಾಯಕರು ಕರ್ಜನ್‌ನ ಘಟಿಕೋತ್ಸವದ ಮಾತುಗಳನ್ನು ಪ್ರತಿಭಟಿಸಲು ಮುಂದಾದದ್ದು! ಅಕ್ಕ ಭಾರತದ, ಭಾರತೀಯರ ಮೇಲಿನ ದೂಷಣೆಯನ್ನು ಎಂದೂ ಸಹಿಸುತ್ತಿರಲಿಲ್ಲ. 

ಭಾರತೀಯ ಶಿಕ್ಷಣ, ಕಲೆ ಎಲ್ಲವನ್ನೂ ರಾಷ್ಟ್ರೀಯತೆಯತಳಹದಿಯ ಮೇಲೆ ಪುನರ್‌ರಚಿಸುವ ಕಾರ್ಯವನ್ನು ಅಕ್ಕ ನಿವೇದಿತಾ ಕೊನೆಯ ಕ್ಷಣದವರೆಗೂ ಮಾಡಿದರು. ಭಾರತೀಯ ಶಿಕ್ಷಣ, ಕಲೆ ಮಾತ್ರವಲ್ಲದೇ ವಿಜ್ಞಾನ, ಸಾಹಿತ್ಯ, ಇತಿಹಾಸ ಈ ಎಲ್ಲ ಕ್ಷೇತ್ರಗಳಲ್ಲೂ ಅಕ್ಕನ ಕೊಡುಗೆ ಅಪಾರವಾದ್ದು. ಇಂದು ಅಕ್ಕ ನಿವೇದಿತಾ ಅವರ ಜನ್ಮದಿನ. ಅವರು ಅಕ್ಟೋಬರ್ 28, 1867ರಂದು ಐರ್ಲೆಂಡಿನಲ್ಲಿ ಜನಿಸಿದ್ದು.

- ಪ್ರಿಯ ಶಿವಮೊಗ್ಗ
priyahani1991@gmail.com

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com