ಬಡ ಕುಟುಂಬಗಳ ವಧುವಿನ ವಿವಾಹಕ್ಕೆ ಬಟ್ಟೆ ಒದಗಿಸುವ ಮಡಿಕೇರಿಯ ಶಹರಬಾನು!
ಅತಿರಂಜಿತ, ಹೆಚ್ಚು ಬೆಲೆಬಾಳುವ ವಧುವಿನ ಉಡುಪುಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕೈಗೆಟುಕಲಾಗದ ಐಷಾರಾಮಿ ವಸ್ತುಗಳಾಗಿವೆ. ಬಡವರ ಮನೆಯ ಹೆಣ್ಣುಮಕ್ಕಳ ಮದುವೆಗೆ ಸಹಾಯವಾಗುತ್ತಿದೆ ಕೊಡಗಿನ ರೈನ್ ಬೋ ಫ್ರೀ ಬ್ರೈಡಲ್ ಬೊಟಿಕ್.
Published: 18th April 2022 02:34 PM | Last Updated: 18th April 2022 02:56 PM | A+A A-

ವಧುವಿನ ಬಟ್ಟೆ ಜೊತೆ ಶಹರಾಬಾನು
ಗಣ್ಯರು, ಶ್ರೀಮಂತರಿಗೆ ಮದುವೆ ಮಾಡಲು ಕಷ್ಟವಿರುವುದಿಲ್ಲ, ಹಣವಿರುತ್ತದೆ, ಅದ್ದೂರಿಯಾಗಿ ಮಾಡುತ್ತಾರೆ. ಶ್ರೀಮಂತ ಕುಟುಂಬಗಳಲ್ಲಿ ವಧುವಿನ ಉಡುಪಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಅತಿರಂಜಿತ, ಹೆಚ್ಚು ಬೆಲೆಬಾಳುವ ವಧುವಿನ ಉಡುಪುಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕೈಗೆಟುಕಲಾಗದ ಐಷಾರಾಮಿ ವಸ್ತುಗಳಾಗಿವೆ. ಬಡವರ ಮನೆಯ ಹೆಣ್ಣುಮಕ್ಕಳ ಮದುವೆಗೆ ಸಹಾಯವಾಗುತ್ತಿದೆ ಕೊಡಗಿನ ರೈನ್ ಬೋ ಫ್ರೀ ಬ್ರೈಡಲ್ ಬೊಟಿಕ್.
ಮಡಿಕೇರಿ ತಾಲೂಕಿನ ಚೆಟ್ಟಳ್ಳಿ ನಿವಾಸಿ 20 ವರ್ಷ ವಯಸ್ಸಿನ ಶಹರಾಬಾನುಗೆ ಸಮಾಜ ಸೇವೆ ಮಾಡುವುದೆಂದರೆ ಬಹಳ ಇಷ್ಟ, ಒಲವು. ಆದರೆ ಆಕೆಗೆ ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ. ಕೇರಳದಲ್ಲಿ ಆಕೆಯ ಸ್ನೇಹಿತೆಯೊಬ್ಬರು ವಧುವಿನ ಬಟ್ಟೆ ಅಂಗಡಿಯನ್ನು ಪ್ರಾರಂಭಿಸಿದಾಗ, ದುಬಾರಿ ವಧುವಿನ ಉಡುಪುಗಳನ್ನು ಪಾವತಿಸಲು ಸಾಧ್ಯವಾಗದ ಸಮಾಜದ ದುರ್ಬಲ ವರ್ಗದ ವಧುಗಳಿಗೆ ಉಚಿತ ಉಡುಪುಗಳನ್ನು ಒದಗಿಸಿದಾಗ ಈಕೆಗೆ ಸ್ಪೂರ್ತಿ ಹುಟ್ಟಿಕೊಂಡಿತು.
ನನ್ನ ಸ್ನೇಹಿತರೊಬ್ಬರು ಕೇರಳದಲ್ಲಿ ಬೊಟಿಕ್ ಪ್ರಾರಂಭಿಸಿದರು. ಸಮಾಜದ ದುರ್ಬಲ ವರ್ಗದ ವಧುಗಳಿಗೆ ಉಚಿತ ಉಡುಪುಗಳನ್ನು ನೀಡುತ್ತಾರೆ. ಕೆಲ ವರ್ಷಗಳು ಕಳೆದ ನಂತರ ಕೊಡಗಿನಲ್ಲಿ ರೈನ್ಬೋ ಫ್ರೀ ಬ್ರೈಡಲ್ ಬೊಟಿಕ್ ಅನ್ನು ಸ್ಥಾಪಿಸಿದೆ, ಇದು ರಾಜ್ಯದಲ್ಲಿ ಮೊದಲನೆಯದು ಎನ್ನುತ್ತಾರೆ ಶಹರಬಾನು.

ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಮೂಲಕ ತನ್ನ ಸಂಸ್ಥೆಯನ್ನು ಪ್ರಚಾರ ಮಾಡುತ್ತಾ, ಶಹರಾಬಾನು ಆರ್ಥಿಕವಾಗಿ ಸ್ಥಿತಿವಂತ ಕುಟುಂಬಗಳ ಮಹಿಳೆಯರನ್ನು ಸಂಪರ್ಕಿಸಿದರು. ಅವರಲ್ಲಿ ವಧುವಿನ ಉಡುಪುಗಳನ್ನು ಉಚಿತವಾಗಿ ನೀಡಲು ಮನವಿ ಮಾಡಿಕೊಂಡರು. ಅವರು ತಮ್ಮ ಮದುವೆಯ ಸಂದರ್ಭದಲ್ಲಿ ಮಾತ್ರ ಬಳಸಿದ ವಧುವಿನ ಉಡುಪುಗಳನ್ನು ಡ್ರೈ ಕ್ಲೀನರ್ ಗೆ ಕೊಟ್ಟು ನಂತರ ಶಹರಬಾನ್ ಅವರ ಅಂಗಡಿಗೆ ನೀಡುವ ವ್ಯವಸ್ಥೆ ಮಾಡಲಾಯಿತು.
ನಾನು ಅನೇಕ ಮದುವೆಯ ಬಟ್ಟೆಗಳನ್ನು ಸಂಗ್ರಹಿಸಿದ್ದೇನೆ. ಕೆಲವು ನನ್ನ ಕುಟುಂಬದ ಸದಸ್ಯರಿಂದ ಕೂಡ ಪಡೆದುಕೊಂಡಿದ್ದೇನೆ. ಮದುವೆಯ ಬಟ್ಟೆಗಳನ್ನು ಪಡೆಯಲು ಸಾಧ್ಯವಾಗದ ಅನೇಕ ಅನಾಥ ಹುಡುಗಿಯರು ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ವಿವಾಹವಾಗುತ್ತಿರುವ ಹೆಣ್ಣುಮಕ್ಕಳಿಗೆ ಈ ಬಟ್ಟೆಗಳನ್ನು ನೀಡಲಾಗುತ್ತದೆ ಎಂದು ವಿವರಿಸುತ್ತಾರೆ.
ಇವರ ಬಳಿ ವಿವಾಹದಲ್ಲಿ ಧರಿಸುವ ಬಟ್ಟೆ ಬೇಕೆಂದು ಬಯಸುವ ಹುಡುಗಿಯರು ತಮ್ಮ ಆರ್ಥಿಕ ಸಂಕಷ್ಟಗಳ ಬಗ್ಗೆ ಸಂಬಂಧಪಟ್ಟ ಧಾರ್ಮಿಕ ಸಮಿತಿಗಳಿಂದ ಪತ್ರವನ್ನು ಸಲ್ಲಿಸುವಂತೆ ಹೇಳುತ್ತಾನೆ, ಅದು ಪ್ರಾಮಾಣಿಕತೆಗಾಗಿ ಎನ್ನುತ್ತಾರೆ ಶಹರಾಬಾನು.
ಇವರ ಅಂಗಡಿಯಿಂದ ಬಟ್ಟೆ ಉಚಿತ ಬಟ್ಟೆ ತೆಗೆದುಕೊಂಡು ಹೋಗಲು ವಧುವಿನ ಧರ್ಮ ಅಥವಾ ಸಮುದಾಯದ ಮೇಲೆ ಯಾವುದೇ ನಿರ್ಬಂಧವಿಲ್ಲ. ವಧು-ವರರು ಕೊಡಗಿನ ಚೆಟ್ಟಳ್ಳಿಯಲ್ಲಿರುವ ನಮ್ಮ ಅಂಗಡಿಗೆ ಭೇಟಿ ನೀಡಿ ಲಭ್ಯವಿರುವ ಬಟ್ಟೆಗಳ ಸೆಟ್ನಿಂದ ತಮಗೆ ಬೇಕಾದ ಡ್ರೆಸ್ಗಳನ್ನು ಆಯ್ಕೆ ಮಾಡಬಹುದು. ಈ ಸೇವೆಯನ್ನು ರಾಜ್ಯದಾದ್ಯಂತದ ಯಾವುದೇ ವಧು ಆರ್ಥಿಕವಾಗಿ ದುರ್ಬಲ ವರ್ಗದವರು ಪಡೆಯಬಹುದು ಎನ್ನುತ್ತಾರೆ.
ಇವರು ಈ ಅಂಗಡಿ ಪ್ರಾರಂಭಿಸಿ 15 ದಿನಗಳಾಗಿವೆ. 40 ಕ್ಕೂ ಹೆಚ್ಚು ವಧುಗಳು ಈಗಾಗಲೇ ಸೇವೆಗಾಗಿ ಬುಕ್ ಮಾಡಿದ್ದಾರೆ, ತಮ್ಮ ವಿವಾಹಕ್ಕೆ 20 ದಿನ ಮೊದಲು ಇಲ್ಲಿಗೆ ಬಂದು ಬಟ್ಟೆ ತೆಗೆದುಕೊಂಡು ಹೋಗಬಹುದು ಎನ್ನುತ್ತಾರೆ.