
'ಶ್ರೀ ನರೇಂದ್ರ ಮೋದಿ ನಿಲಯ' ಮನೆ
ಬಹುಶಃ ಪ್ರಧಾನಿ ನರೇಂದ್ರ ಮೋದಿ ಅವರು, ದೆಹಲಿ, ಗುಜರಾತ್ ನ ವಡ್ನಗರದಲ್ಲಿರುವ ತಮ್ಮ ಮನೆಯ ಮುಂದೆ ತಮ್ಮ ಹೆಸರನ್ನು ಕೆತ್ತಿಸದೇ ಇರಬಹುದು. ಆದರೆ 1992 ರಿಂದ ಶ್ರೀನಗರದ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಬಿಜೆಪಿ ತಂಡದ ಭಾಗವಾಗಿದ್ದ ಪ್ರಧಾನಿಯವರ ಅಭಿಮಾನಿ, ಚನ್ನಗಿರಿಯ ಗೌಡರ ಹಾಲೇಶ್ ಅವರು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನಲ್ಲಿ ನೆಲೆಸಿರುವ ತಮ್ಮ ಪುತ್ರಿ ಭುವನೇಶ್ವರಿ ಅವರಿಗಾಗಿ ಮನೆಯನ್ನು ನಿರ್ಮಿಸಿದ್ದಾರೆ. ಆ ಮನೆಗೆ ಪ್ರಧಾನಿ ಮೋದಿ ಹೆಸರಿಟ್ಟಿದ್ದಾರೆ.
ಆರಂಭದಲ್ಲಿ ಹಾಲೇಶ್ ಅವರು, ತಮ್ಮ ಮನೆಯ ಹೆಸರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ಹಂತದಲ್ಲಿಯೇ ಪ್ರಧಾನಿ ಹೆಸರು ಹೊಳೆದು ನಾಮಫಲಕವನ್ನು ಕೂಡ ಸಿದ್ಧಪಡಿಸಿದರು. ಇದರೊಂದಿಗೆ ಹಾಲೇಶ್ ಮನೆ ಮುಂದೆ ನರೇಂದ್ರ ಮೋದಿಯವರ ದೊಡ್ಡ ಭಾವಚಿತ್ರವನ್ನೂ ಹಾಕಿಕೊಂಡಿದ್ದಾರೆ. ಚನ್ನಗಿರಿಯ ಕಗ್ಗತ್ತೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಮನೆ 'ಶ್ರೀ ನರೇಂದ್ರ ಮೋದಿ ನಿಲಯ' ಹೆಸರಲ್ಲಿ ಸಾರ್ವಜನಿಕರ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ. ಮನೆ ಮುಂದೆ ಅಂಟಿಸಿರುವ ಪ್ರಧಾನಿಯವರ ದೊಡ್ಡ ಭಾವಚಿತ್ರವನ್ನು ನೋಡಲು ಚನ್ನಗಿರಿ ಹಾಗೂ ಅಕ್ಕಪಕ್ಕದ ಪ್ರದೇಶದ ಜನರೆಲ್ಲರೂ ಮನೆಗೆ ಭೇಟಿ ನೀಡುತ್ತಿದ್ದಾರೆ. ಮೇ 3ರಂದು ಬಸವೇಶ್ವರ ಜಯಂತಿಯಂದು ಮನೆ ಉದ್ಘಾಟನೆಯಾಗುತ್ತಿದ್ದು, ಮನೆ ಉದ್ಘಾಟನೆ ವೇಳೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಹಾಲೇಶ್ ಅವರು, "ನಾವು ಮನೆ ನಿರ್ಮಿಸುವಾಗ, ನಾನು ಮತ್ತು ನನ್ನ ಮಗಳು ಭುವನೇಶ್ವರಿ ಮನೆಗೆ ಹೆಸರು ಹುಡುಕುತ್ತಿದ್ದೆವು. ಆಗ ನಾವು ಶಿವಾಜಿ ಮತ್ತು ಸಹ್ಯಾದ್ರಿ ಸೇರಿದಂತೆ ಹಲವಾರು ಹೆಸರುಗಳನ್ನು ಪರಿಗಣಿಸಿದ್ದೆವು. ಈ ಕ್ಷಣದಲ್ಲಿ ನರೇಂದ್ರ ಮೋದಿ ಹೆಸರು ಹೊಳೆಯಿತು. ಬಳಿಕ ನಾವು ಅದೇ ಹೆಸರಿಡಲು ನಿರ್ಧಿರಿಸಿದೆವು. ಅದೇ ಹೆಸರನ್ನಿಡಲು ನನ್ನ ಮಗಳು ಕೂಡ ಒಪ್ಪಿದಳು. ಅಲ್ಲದೆ ಆಕೆ ಕೂಡ ಮೋದಿ ಅವರ ಕಟ್ಟಾ ಅಭಿಮಾನಿಯಾಗಿದ್ದಾಳೆ. ಹೀಗಾಗಿ ಮೋದಿ ಹೆಸರಿಡಲು ಕೂಡಲೇ ಒಪ್ಪಿದಳು. ಶಿವಮೊಗ್ಗದಲ್ಲಿ ಸಿದ್ಧಪಡಿಸಿದ್ದ ಪ್ರಧಾನಿಯವರ ಭಾವಚಿತ್ರ ಪಡೆದು ಮನೆ ಮುಂದೆ ಮೆಗಾ ಭಾವಚಿತ್ರ ಇಟ್ಟು ಮನೆ ಮುಂದೆ ಹೆಸರು ಕೆತ್ತಲಾಗಿದೆ ಎಂದರು.
"ನರೇಂದ್ರ ಮೋದಿ ಅವರು ಗುಜರಾತ್ನ ಮುಖ್ಯಮಂತ್ರಿಯಾದಾಗಿನಿಂದ ಮತ್ತು ಈಗ ಪ್ರಧಾನಿಯಾದಾಗಿನಿಂದ ನಾವು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದೇವೆ. ಕನಿಷ್ಠ ಪಕ್ಷ ನನ್ನ ಮಗಳ ಮನೆಗಾದರೂ ಅವರ ಹೆಸರು ಇಟ್ಟಿರುವ ತೃಪ್ತಿ ನನಗಿದ್ದು, ಬಸವೇಶ್ವರ ಜಯಂತಿಯ ಶುಭ ದಿನದಂದು ಉದ್ಘಾಟನೆ ಮಾಡಲಾಗುವುದು ಎಂದರು. ಈ ಹಿಂದೆ `ಗ್ಯಾಸ್ ಸಬ್ಸಿಡಿಯನ್ನು ತ್ಯಜಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದಾಗ, ನಾನು ತಕ್ಷಣವೇ ಸಬ್ಸಿಡಿಯನ್ನು ನಿರಾಕರಿಸಿದೆ ಮತ್ತು ಕೋವಿಡ್ -19 ಸಮಯದಲ್ಲಿ ಪಿಎಂ ಕೇರ್ಸ್ ನಿಧಿಗೆ ಸಹ ಕೊಡುಗೆ ನೀಡಿದ್ದೇನೆ. ಜನರು ಪ್ರಧಾನಿ ತೋರಿದ ಮಾರ್ಗವನ್ನು ಅನುಸರಿಸಬೇಕು ಮತ್ತು ವಿಶ್ವ ವೇದಿಕೆಯಲ್ಲಿ ಭಾರತವನ್ನು ಶ್ರೇಷ್ಠಗೊಳಿಸಬೇಕು ಎಂದು ಅವರು ಹೇಳಿದರು.