ಬಂಜರು ಭೂಮಿಯನ್ನು ಕೊಳಗಳಾಗಿ ಪರಿವರ್ತಿಸಿ ಮೀನುಗಾರಿಕೆ: ಇತರರಿಗೆ ಮಾದರಿಯಾದ ಬಸಾಪುರದ ರೈತ!
ತಾಳ್ಮೆ ಹಾಗೂ ಬುದ್ದಿವಂತಿಕೆಯಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಬ್ಬ ರೈತ ಉದಾಹರಣೆಯಾಗಿದ್ದಾರೆ. ಭೂಮಿ ಬಂಜರಾಗಿದ್ದರೂ ಇದಕ್ಕೆ ತಲೆಕೊಡಿಸದ ಬಸಾಪುರದ ರೈತರೊಬ್ಬರು ಇದೇ ಭೂಮಿಯಲ್ಲಿ ಕೊಳಗಳನ್ನು ನಿರ್ಮಿಸಿ ಮೀನುಗಾರಿಕೆ ನಡೆಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
Published: 09th February 2022 01:44 PM | Last Updated: 09th February 2022 01:59 PM | A+A A-

ಗದಗ: ತಾಳ್ಮೆ ಹಾಗೂ ಬುದ್ದಿವಂತಿಕೆಯಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಬ್ಬ ರೈತ ಉದಾಹರಣೆಯಾಗಿದ್ದಾರೆ. ಭೂಮಿ ಬಂಜರಾಗಿದ್ದರೂ ಇದಕ್ಕೆ ತಲೆಕೊಡಿಸದ ಬಸಾಪುರದ ರೈತರೊಬ್ಬರು ಇದೇ ಭೂಮಿಯಲ್ಲಿ ಕೊಳಗಳನ್ನು ನಿರ್ಮಿಸಿ ಮೀನುಗಾರಿಕೆ ನಡೆಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಭೂಮಿ ಬಂಜರಾಗಿ ಬೆಳೆಗಳ ಬೆಳೆಯಲು ಸಾಧ್ಯವಾಗದಿದ್ದರೂ ಇದಕ್ಕೆ ತಲೆಕೆಡಿಸಿಕೊಳ್ಳದ 57 ವರ್ಷದ ಹನುಮಂತಪ್ಪ ಅವರು, ತಜ್ಞರ ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಇದರಂತೆ ತಮ್ಮ ಭೂಮಿಯಲ್ಲಿ 5 ಕೊಳಗಳನ್ನು ನಿರ್ಮಿಸಿದ್ದು, ಈ ಕೊಳಗಳಲ್ಲಿ ಇದೀಗ ಮೀನುಗಾರಿಗೆ ನಡೆಸುತ್ತಿದ್ದಾರೆ. ಕೊಳಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಮೀನುಗಳಿವೆ ಎಂದು ಹನುಮಂತಪ್ಪ ಅವರು ಹೇಳಿದ್ದಾರೆ.
ಇದನ್ನೂ ಓದಿ: ದುರ್ಗದ ನಾಗೇನಹಳ್ಳಿ: ಕರ್ನಾಟಕ ಕುಗ್ರಾಮ ಮತ್ತು ಅದರ ಹಸಿರು ಕ್ರಾಂತಿ ಎಲ್ಲರಿಗೂ ಮಾದರಿ!
ಬಸಾಪುರದಲ್ಲಿಯೇ ಇದು ಅತೀ ದೊಡ್ಡ ಮೀನುಗಾರಿಕೆ ಕೃಷಿಯಾಗಿದ್ದು, ಹನುಮಂತಪ್ಪ ಅವರ ಈ ಕಾರ್ಯ ಇದೀಗ ಇತರರಿಗೆ ಮಾದರಿಯಾಗಿದೆ. ಹಲವಾರು ರೈತರು ಇದೀಗ ಹನುಮಂತಪ್ಪ ಅವರ ಕೊಳಗಳತ್ತ ಬರುತ್ತಿದ್ದು, ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಮುಂಡರಗಿಯಲ್ಲಿ ಹಿಂದುಳಿದ ಗ್ರಾಮಗಳಲ್ಲಿ ಬಸಾಪುರ ಕೂಡ ಈ ಹಿಂದೆ ಒಂದಾಗಿತ್ತು. ಆದರೆ ಇದೀಗ ಗ್ರಾಮೀಣ ಪ್ರದೇಶ ಬದಲಾಗುತ್ತಿದ್ದು, ರೈತರೂ ಹೊಸ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ.
ಕಾರಣಾಂತರಗಳಿಂದ ಹನುಮಂತಪ್ಪ ಅವರ ಜಮೀನಿನ ಕಲ್ಲು ಪುಡಿ ಮಾಡುವ ಕೆಲಸ ಸ್ಥಗಿತಗೊಂಡಾಗ ಕಂಗಾಲಾದ ಹನುಮಂತಪ್ಪ ಅವರು ತಜ್ಞರನ್ನು ಸಂಪರ್ಕಿಸಿದ್ದರು. ಈ ವೇಳೆ ತಜ್ಞರು ಸ್ಥಳದಲ್ಲಿ ಮೀನುಗಾರಿಕೆ ನಡೆಸುವಂತೆ ಸಲಹೆ ನೀಡಿದ್ದರು. ಬಳಿಕ ಮೀನುಗಾರಿಕೆ ಇಲಾಖೆ ಅಧಿಕಾರಿಗಳೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಹನುಮಂತಪ್ಪ ಅವರಿಗೆ ತರಬೇತಿ ನೀಡಿದ್ದರು. ಇದೀಗ ಹನುಮಂತಪ್ಪ ಅವರಿಗೆ ಮೀನುಗಳ ರಕ್ಷಣೆ ಮಾಡುವುದು ಹಾಗೂ ಅವುಗಳಿಗೆ ಆಹಾರವನ್ನು ಹೇಗೆ ಒದಗಿಸುವುದು ಎಂಬೆಲ್ಲಾ ಮಾಹಿತಿ ತಿಳಿದಿದೆ.
ಇದನ್ನೂ ಓದಿ: ಡ್ರೈ ಫ್ರೂಟ್ಸ್ ಮಾರಾಟದಿಂದ ಹೈನುಗಾರಿಕೆ ಉದ್ಯಮದವರೆಗೆ: ಕಾಶ್ಮೀರ ವ್ಯಕ್ತಿಯ ಸ್ವಯಂ ಉದ್ಯೋಗದ ಯಶಸ್ಸಿನ ಕಥೆ
ಮೀನು ಕೃಷಿಗೆ ತಜ್ಞರು ಸಲಹೆ ನೀಡಿದಾಗ, ಅದು ನನಗೆ ಹೊಸ ವಿಚಾರವಾಗಿತ್ತು. ಆದರೆ ಇದರಿಂದ ಇತರರಿಗಿಂತ ಭಿನ್ನವಾಗಿ ಏನನ್ನಾದರೂ ಮಾಡಬಹುದು ಎಂಬ ಸಂತೋಷ ನನಗಿತ್ತು. ಬಳಿಕ ತರಬೇತಿ ಪಡೆದುಕೊಂಡೆ. ಜಮೀನಿನಲ್ಲಿ ಬೋರ್ವೆಲ್ ಅಳವಡಿಸಿ ಮೀನು ಸಾಕಾಣಿಕೆ ಆರಂಭಿಸಿದೆ. ಈ ವೇಳೆ ಮೀನುಗಳ ತಿನ್ನಲು ಪಕ್ಷಿಗಳು ಬರಲು ಆರಂಭಿಸಿದ್ದವು. ಕೊಕ್ಕರೆಗಳನ್ನು ಸ್ಥಳಕ್ಕೆ ಬರುವಂತೆ ಮಾಡುತ್ತಿದ್ದ ಪಕ್ಷಗಳು, ಕೊಕ್ಕರೆ ನೀರಿನೊಳಗೆ ಇಳಿದು ಮೀನು ತಿನ್ನುವಂತೆ ಮಾಡುತ್ತಿದ್ದವು. ಬಳಿಕ ತಜ್ಞರ ಭೇಟಿ ಮಾಡಿ ಸಲಹೆ ಪಡೆದುಕೊಂಡೆ. ಕೊಳದಲ್ಲಿ ಕನ್ನಡಿ ಬುಟ್ಟಿಗಳನ್ನು ಅಳವಡಿಸಿದೆ. ಪ್ರತಿಬಿಂಬದಿಂದಾಗಿ ಪಕ್ಷಿಗಳು ಮೀನುಗಳು ತಿನ್ನುವುದನ್ನು ತಪ್ಪಿಸಿದೆ. ಇದೀಗ ಭತ್ತ ಮತ್ತು ಪುಡಿ ಮಾಡಿದ ಇತರೆ ಧಾನ್ಯಗಳನ್ನು ಮೀನುಗಳಿಗೆ ಆಹಾರವಾಗ ನೀಡುತ್ತಿದ್ದೇನೆ. ಇದೀಗ ಬೇರೆ ಜಿಲ್ಲೆಗಳ ರೈತರೂ ಇಲ್ಲಿಗೆ ಬಂದು ಸಲಹೆ ಪಡೆದುಕೊಂಡು ಹೋಗುತ್ತಿದ್ದಾರೆಂದು ಹನುಮಂತಪ್ಪ ಅವರು ಹೇಳಿದ್ದಾರೆ.
ಗದಗದ ಮೀನುಗಾರಿಕಾ ಇಲಾಖೆ ಅಧಿಕಾರಿ ಮಾತನಾಡಿ, ‘ಎಲ್ಲಾ ತಾಲ್ಲೂಕಿನಲ್ಲಿ ಕೆಲವು ರೈತರಿಗೆ ಮೀನು ಸಾಕಾಣಿಕೆ ಮಾಡಲು ತರಬೇತಿ ನೀಡಿದ್ದೇವೆ. ಆದರೆ, ಬಸಾಪುರದಲ್ಲಿ ದೊಡ್ಡ ಜಾಗದಲ್ಲಿ ಮೀನು ಕೃಷಿ ನಡೆಸಲಾಗುತ್ತಿದೆ. 1 ಎಕರೆ 8 ಗುಂಟೆಯ ದೊಡ್ಡ ಜಾಗದಲ್ಲಿ ಕೊಳಗಳ ನಿರ್ಮಿಸಿ ರೈತರೊಬ್ಬರು ಮೀನುಗಾರಿಕೆ ನಡೆಸುತ್ತಿದ್ದಾರೆ. ಇದು ಅತೀ ದೊಡ್ಡ ಮೀನು ಕೃಷಿಯಾಗಿದೆ. ಮಾಲೀಕರು ಆಸಕ್ತಿ ತೋರಿದ್ದರಿಂದ ಪ್ರೋತ್ಸಾಹ ನೀಡಿದ್ದೇವೆ. ಮತ್ತಷ್ಟು ರೈತರಿಗೂ ಮೀನು ಕೃಷಿ ನಡೆಸಲು ಪ್ರೋತ್ಸಾಹ ನೀಡುತ್ತೇವೆಂದು ಹೇಳಿದ್ದಾರೆ.