ಶ್ರಮಕ್ಕೆ ಪ್ರತಿಫಲ: ಶಾಲಾ ಆವರಣದಲ್ಲಿ 'ಪೌಷ್ಟಿಕ ಕೈತೋಟ', ತಾವೇ ಬೆಳೆದ ತರಕಾರಿಯಿಂದ ಬಿಸಿಯೂಟ ಸೇವಿಸುತ್ತಿರುವ ಕಲಬುರಗಿ ವಿದ್ಯಾರ್ಥಿಗಳು!
ಶ್ರಮಕ್ಕೆ ಖಂಡಿತವಾಗಿಯೂ ತಕ್ಕ ಪ್ರತಿಫಲ ಇದ್ದೇ ಇರುತ್ತದೆ. ಆದರೆ, ಅದಕ್ಕೆ ಗುರಿ, ಛಲ, ಹಠ ಹಾಗೂ ಸಾಧನೆ ಮುಖ್ಯವಾಗಿರುತ್ತದೆ. ಇದೇ ರೀತಿಯ ಗುರಿ, ಹಠ ಹಾಗೂ ಛಲದಿಂದಾಗಿ ಕಲಬುರಗಿಯಲ್ಲಿರುವ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ 'ಪೌಷ್ಟಿಕ ಕೈತೋಟ'ವನ್ನು ನಿರ್ಮಿಸಿದ್ದು, ಈ ತೋಟದಲ್ಲಿ ತಾವೇ ಬೆಳೆದ ತರಕಾರಿಯಿಂದ ಬಿಸಿಯೂಟ ಸಿದ್ಧಪಡಿಸಿ ಆಹಾರ ಸೇವನೆ ಮಾಡುತ್ತಿದ್ದಾರೆ.
Published: 13th February 2022 11:56 AM | Last Updated: 13th February 2022 11:56 AM | A+A A-

ಪೌಷ್ಟಿಕ ಕೈತೋಟದಲ್ಲಿರುವ ವಿದ್ಯಾರ್ಥಿಗಳು.
ಕಲಬುರಗಿ: ಶ್ರಮಕ್ಕೆ ಖಂಡಿತವಾಗಿಯೂ ತಕ್ಕ ಪ್ರತಿಫಲ ಇದ್ದೇ ಇರುತ್ತದೆ. ಆದರೆ, ಅದಕ್ಕೆ ಗುರಿ, ಛಲ, ಹಠ ಹಾಗೂ ಸಾಧನೆ ಮುಖ್ಯವಾಗಿರುತ್ತದೆ. ಇದೇ ರೀತಿಯ ಗುರಿ, ಹಠ ಹಾಗೂ ಛಲದಿಂದಾಗಿ ಕಲಬುರಗಿಯಲ್ಲಿರುವ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ 'ಪೌಷ್ಟಿಕ ಕೈತೋಟ'ವನ್ನು ನಿರ್ಮಿಸಿದ್ದು, ಈ ತೋಟದಲ್ಲಿ ತಾವೇ ಬೆಳೆದ ತರಕಾರಿಯಿಂದ ಬಿಸಿಯೂಟ ಸಿದ್ಧಪಡಿಸಿ ಆಹಾರ ಸೇವನೆ ಮಾಡುತ್ತಿದ್ದಾರೆ.
ಕಲಬುರಗಿಯ ಜಿಲ್ಲೆಯ ಆಳಂದ ತಾಲೂಕಿನ ಗುಂಜ್ ಬಬಲಾದ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು, ಶಾಲೆಯ ಆವರಣದಲ್ಲಿ ಪೌಷ್ಠಿಕ ಕೈತೋಟವನ್ನು ನಿರ್ಮಿಸಿದ್ದು, ಶೈಕ್ಷಣಿಕ ಪಾಠದ ಜೊತೆಗೆ ಕೃಷಿ ಪಾಠವನ್ನೂ ಕಲಿಯುತ್ತಿದ್ದಾರೆ.
ಪೌಷ್ಟಿಕ ಕೈತೋಟವನ್ನು ಶಾಲೆಯ ಮಕ್ಕಳ ಜೊತೆಗೆ, ಅಲ್ಲಿನ ಶಿಕ್ಷಕರು, ಗ್ರಾಮ ಪಂಚಾಯತ್ ಸಿಬ್ಬಂದಿಗಳೂ ನೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬಂಜರು ಭೂಮಿಯನ್ನು ಕೊಳಗಳಾಗಿ ಪರಿವರ್ತಿಸಿ ಮೀನುಗಾರಿಕೆ: ಇತರರಿಗೆ ಮಾದರಿಯಾದ ಬಸಾಪುರದ ರೈತ!
ಶಾಲೆಯಲ್ಲಿ ಈ ತೋಟಗಾರಿಕೆಗೆ ಒಂದು ಎಕರೆ ಜಾಗವನ್ನು ಮೀಸಲಿಡಲಾಗಿದ್ದು, ಅರ್ಧ ಎಕರೆ ಜಮೀನಿನಲ್ಲಿ ತರಕಾರಿಗಳನ್ನು ಬೆಳೆಯಲಾಗಿದೆ. ಸರ್ಕಾರ ನೀಡುತ್ತಿದ್ದ ಅತ್ಯಲ್ಪ ಮೊತ್ತದ ಹಣದಲ್ಲಿ ವಿದ್ಯಾರ್ಥಿಗಳಿಗೆ ಸಮಾಧಾನವಾಗುವ ರೀತಿಯಲ್ಲಿ ರುಚಿಕರ ಆಹಾರ ಸಿದ್ಧಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ನಾವೇ ಬೆಳೆಯುತ್ತಿರುವ ತರಕಾರಿಯಿಂದ ರುಚಿಕರವಾದ ಆಹಾರವನ್ನು ಸೇವನೆ ಮಾಡುತ್ತಿದ್ದೇವೆಂದು 8ನೇ ತರಗತಿಯ ವಿದ್ಯಾರ್ಥಿನಿ ಸ್ನೇಹಾ ಹೇಳಿದ್ದಾರೆ.
“ನಮ್ಮ ಶಾಲೆಯಲ್ಲಿ ಪೌಷ್ಟಿಕ ಕೈತೋಟ ಬಂದಾಗಿನಿಂದ, ಹೇರಳವಾಗಿ ತರಕಾರಿಗಳನ್ನು ಸೇವನೆ ಮಾಡುತ್ತಿದ್ದೇವೆ. ಅಡುಗೆಯವರು ಶಾಲೆಯ ತೋಟದಲ್ಲಿ ಬೆಳೆದ ತರಕಾರಿಗಳನ್ನು ಸಾಂಬಾರ್'ಗೆ ಬಳಸುತ್ತಿದ್ದಾರೆ. ಇದರಿಂದ ಅಡುಗೆಯ ರುಚಿ ಸುಧಾರಿಸಿದೆ ಹೇಳಿದ್ದಾರೆ.
ಮಕ್ಕಳಲ್ಲಿ ಪೌಷ್ಟಿಕಾಂಶ ಸುಧಾರಿಸಲು ಶಾಲಾಧಿಕಾರಿಗಳು ಇದೀಗ ಮೆಂತ್ಯೆ ಸೊಪ್ಪು, ಮೂಲಂಗಿ ಹಾಗೂ ಸೌತೆಕಾಯಿಯಿಂದ ಮಾಡಿದ ಸಲಾಡ್ ನೀಡಲು ಚಿಂತನೆ ನಡೆಸುತ್ತಿದ್ದಾರೆಂದು ಮತ್ತೋರ್ವ ವಿದ್ಯಾರ್ಥಿನಿ ಸಾವಿತ್ರಿಯವರು ಹೇಳಿದ್ದಾರೆ.
ಇದನ್ನೂ ಓದಿ: ದುರ್ಗದ ನಾಗೇನಹಳ್ಳಿ: ಕರ್ನಾಟಕ ಕುಗ್ರಾಮ ಮತ್ತು ಅದರ ಹಸಿರು ಕ್ರಾಂತಿ ಎಲ್ಲರಿಗೂ ಮಾದರಿ!
ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಬಸವರಾಜ್ ಮಾತನಾಡಿ, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ತೋಟದ ಸ್ವಚ್ಛತೆ, ತರಕಾರಿ ಸಂಗ್ರಹಿಸುವ ಕೆಲಸ ಮಾಡುತ್ತಾರೆ. ಪೌಷ್ಟಿಕಾಂಶ ಕೈತೋಟದಿಂದ ಬೆಳೆಗಳನ್ನು ಹೇಗೆ ಬೆಳೆಯಬೇಕೆಂಬುದನ್ನು ಕಲಿಯುತ್ತಿದ್ದೇವೆ. ಇದರಿಂದ ದೈಹಿಕ ವ್ಯಾಯಾಮ ಕೂಡ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಶಾಲಾ ಆವರಣದಲ್ಲಿ ಪೌಷ್ಟಿಕ ಕೈತೋಟಗಳು ಚೆನ್ನಾಗಿ ಬೆಳೆಯಲು ಕಾರಣವಾಗಿದ್ದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಪರಿಶ್ರಮವಾಗಿದೆ. ಆಳಂದ ತಾಲೂಕಿನ ತೋಟಗಾರಿಕೆ ಇಲಾಖೆಯ ಅಧಿಕಾರಿಯಾಗಿರುವ ಶಂಕರಗೌಡ ಅವರು, ಹೆಚ್ಚು ಮುತವರ್ಜಿ ವಹಿಸಿ, ಆಳಂದ ತಾಲೂಕಿನ ಅನೇಕ ಸರ್ಕಾರಿ ಶಾಲೆಗಳಲ್ಲಿ ಪೌಷ್ಟಿಕ ಕೈ ತೋಟವನ್ನು ನಿರ್ಮಾಣ ಮಾಡುವಂತೆ ಮಾಡಿದ್ದಾರೆ.
ತಾಲೂಕಿನ ಅನೇಕ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ, ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರ ಮನವೊಲಿಸುವ ಕೆಲಸ ಮಾಡಿದ್ದಾರೆ. ಖಾಲಿ ಜಾಗ ಇರುವ ಸ್ಥಳದಲ್ಲಿ ಪೌಷ್ಟಿಕ ಕೈ ತೋಟದ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ, ಆಸಕ್ತಿ ತೋರಿಸಿದ ಶಾಲೆಯಲ್ಲಿ ಪೌಷ್ಟಿಕ ತೋಟ ನಿರ್ಮಾಣವಾಗುವಂತೆ ನೋಡಿಕೊಂಡಿದ್ದಾರೆ. ಇನ್ನು ತೋಟಗಾರಿಕೆ ಇಲಾಖೆಯವರು, ಉದ್ಯೋಗ ಖಾತ್ರಿ ಯೋಜನೆಯಡಿ ಪೌಷ್ಟಿಕ ತೋಟವನ್ನು ನಿರ್ಮಾಣ ಮಾಡಿದ್ದಾರೆ. ತೋಟಗಾರಿಕೆ ಇಲಾಖೆಯವರೇ, ಬೇಕಾದ ಬೀಜಗಳನ್ನು ನೀಡಿದ್ದಾರೆ. ಬೇಕಾದ ಮಾಹಿತಿಯನ್ನು ಶಾಲಾ ಸಿಬ್ಬಂದಿಗೆ ನೀಡಿದ್ದಾರೆ.
ಇದನ್ನೂ ಓದಿ: ಸಾವಿರಾರು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ಮಾಡಿದ 'ಗೋಪಾಲಕನ' ಯಶೋಗಾಥೆ!
ಮಕ್ಕಳಲ್ಲಿ ಪೌಷ್ಟಿಕಾಂಶದ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದ್ದು, ಈ ತೋಟಗಾರಿಕಾ ಚಿಂತನೆಗೆ ಈ ಅಂಶವೇ ಕಾರಣವಾಯಿತು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಭುರಾಜ್ ಹಿರೇಮಠ ಅವರು ಹೇಳಿದ್ದಾರೆ.
ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಪ್ರದೇಶದ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ಮಿತಿಮೀರಿದೆ. ಈ ಜಿಲ್ಲೆಗಳ ಮಕ್ಕಳೂ ರಕ್ತಹೀನತೆಯಿಂದ ಬಳಲುತ್ತಿರುವುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪತ್ತೆ ಹಚ್ಚಿದ್ದು, ಡಿಸೆಂಬರ್ 1 ರಿಂದ ಮಾರ್ಚ್ 30 ರವರೆಗೆ ಮೊಟ್ಟೆ ಅಥವಾ ಬಾಳೆಹಣ್ಣನ್ನು ಆಹಾರದಲ್ಲಿ ಸೇರಿಸಲು ನಿರ್ಧರಿಸಿತ್ತು.
ಇದೀಗ ಈ ಪರಿಕಲ್ಪನೆಯನ್ನು ಅಧಿಕಾರಿಗಳು ಬದಲಾಯಿಸಿಕೊಂಡಿದ್ದು, ಪೌಷ್ಟಿಕ ಕೈತೋಟವೆಂದ ಹೊಸ ಪರಿಕಲ್ಪನೆಯನ್ನು ಪರಿಚಯಿಸಲು ಮುಂದಾಗಿದೆ. ಈ ಪರಿಕಲ್ಪನೆಯಲ್ಲಿ ಶಾಲಾ ಆವರಣದಲ್ಲಿ ತರಕಾರಿಗಳನ್ನು ಸ್ವತಃ ಮಕ್ಕಳೇ ಬೆಳೆಯಲಿದ್ದು, ಇದೇ ತರಕಾರಿಗಳನ್ನು ಬಿಸಿಯೂಟದಲ್ಲಿ ಬಳಕೆ ಮಾಡಲಾಗುತ್ತದೆ. ಇದರಿಂದ ಮಕ್ಕಳು ಕೃಷಿ ಬೆಳೆ ಕುರಿತು ಪ್ರಾಯೋಗಿಕ ಅನುಭವವನ್ನು ಪಡೆಯಲಿದ್ದು, ಅವರಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುತ್ತದೆ. ಮನ್ರೇಗಾ ಯೋಜನೆ ಅಡಿಯಲ್ಲಿ ತೋಟಗಾರಿಕೆ ಇಲಾಖೆ ಈ ಹೊಸ ಪರಿಕಲ್ಪನೆಯನ್ನು ಕೈಗೆತ್ತಿಕೊಂಡಿದ್ದು, ಈ ವರ್ಷ ಎಲ್ಲಾ ಜಿಲ್ಲೆಗಳ 339 ಗ್ರಾಮೀಣ ಶಾಲೆಗಳಲ್ಲಿ ಪೌಷ್ಟಿಕ ಕೈತೋಟ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಚಿಂತೆಯಂತೆಯೇ ಈಗಾಗಲೇ 64 ಶಾಲೆಗಳಲ್ಲಿ ಕೈತೋಟಗಳನ್ನು ಪ್ರಾರಂಭಿಸಿದ್ದು, ಇನ್ನೂ 122 ಶಾಲೆಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಡ್ರೈ ಫ್ರೂಟ್ಸ್ ಮಾರಾಟದಿಂದ ಹೈನುಗಾರಿಕೆ ಉದ್ಯಮದವರೆಗೆ: ಕಾಶ್ಮೀರ ವ್ಯಕ್ತಿಯ ಸ್ವಯಂ ಉದ್ಯೋಗದ ಯಶಸ್ಸಿನ ಕಥೆ
ಯೋಜನೆಯಡಿ ತೋಟಗಾರಿಕಾ ಇಲಾಖೆಯು ಶಾಲೆಗಳಿಗೆ ತರಕಾರಿ ಬೀಜಗಳನ್ನು ಉಚಿತವಾಗಿ ನೀಡುತ್ತದೆ ಮತ್ತು ಕೃಷಿಯ ಬಗ್ಗೆ ತಾಂತ್ರಿಕ ಜ್ಞಾನವನ್ನು ನೀಡುತ್ತದೆ. ಪ್ರತಿ ಶಾಲೆಗೆ ಕೂಲಿ ಘಟಕ ಮತ್ತು ಬೀಜ ನೀಡಲು ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ರೂ. 33,000 ಲಭ್ಯವಿರಲಿದೆ.
ಆಳಂದ ಸಹಾಯಕ ತೋಟಗಾರಿಕಾ ಅಧಿಕಾರಿ ಶಂಕರಗೌಡ ಮಾತನಾಡಿ, ಪೋಷಕಾಂಶ ಉದ್ಯಾನ ಪರಿಕಲ್ಪನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವಲ್ಲಿ ಆಳಂದ ತಾಲ್ಲೂಕು ಮುಂಚೂಣಿಯಲ್ಲಿದೆ. ಬೀದರ್ ಜಿಲ್ಲೆಯ ಅಧಿಕಾರಿಗಳು ಯೋಜನೆ ಆರಂಭಿಸುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆಂದು ಹೇಳಿದರು.
ಆಳಂದ ತಾಲೂಕಿನ ಗುಂಜ್ ಬಬಲಾದ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ನಿಂಗಪ್ಪ ಮಾತನಾಡಿ, ತಮ್ಮ ಶಾಲೆಯ ತೋಟದಲ್ಲಿ ಮೆಂತ್ಯೆ ಸೊಪ್ಪು, ಪಾಲಕ್, ಕೊತ್ತಂಬರಿ, ಬದನೆಕಾಯಿ, ಬೆಂಡೇಕಾಯಿ, ನುಗ್ಗೆಕಾಯಿ, ಇತರೆ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಇದೀಗ ಮಾವು ಹಾಗೂ ಸಪೋಟ ಗಿಡಗಳನ್ನೂ ನೆಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸುರಂಗದಲ್ಲಿ ನೀರಿನ ಝರಿ: ಕರ್ನಾಟಕ-ಕೇರಳದ ಗಡಿಯಲ್ಲಿ ಹೊಸ ಮಾದರಿಯ ಕೃಷಿ ನೀರು ನಿರ್ವಹಣೆ!
ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಶ್ ಶಶಿ ಮಾತನಾಡಿ, ಹೆಚ್ಚಿನ ಭೂಮಿ ಮತ್ತು ನೀರು ಲಭ್ಯವಿರುವ ಶಾಲೆಗಳಲ್ಲಿ ಇಂತಹ ತೋಟಗಳ ನಿರ್ಮಿಸಲು ಯೋಜಿಸಲಾಗಿದೆ. “ಇದು ಮಕ್ಕಳಲ್ಲಿ ಪೌಷ್ಠಿಕಾಂಶದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ತೋಟಗಾರಿಕೆಯ ಪ್ರೀತಿಯನ್ನು ಬೆಳೆಸುತ್ತದೆ ಎಂಬುದನ್ನು ಕಂಡುಕೊಂಡಿದ್ದೇವೆ. ಮುಂದಿನ ವರ್ಷದಿಂದ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ಹಾಸ್ಟೆಲ್‌ಗಳಲ್ಲೂ ಇದನ್ನು ಅಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ.