ಬೀದಿನಾಯಿಗಳು, ಪ್ರಾಣಿ-ಪಕ್ಷಿಗಳನ್ನು ಸಲಹುವ ಮಂಗಳೂರಿನ ರಜನಿ ಶೆಟ್ಟಿ: ಮಹಿಳೆಯ ಪ್ರಾಣಿ ಪ್ರೇಮದ ವೈಖರಿಯೇ ಮಾದರಿ!
ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅಂತಾರೆ, ನಮ್ಮ ಸುತ್ತಮುತ್ತ ಹತ್ತಾರು ಹೀರೋಗಳಿರುತ್ತಾರೆ. ಅವರು ಹೀರೋಗಳು ಎನಿಸಿಕೊಳ್ಳುವುದು ಅವರು ಮಾಡುವ ಕೆಲಸ, ಸಮಾಜಸೇವೆ, ನಡೆ-ನುಡಿಗಳಿಂದ. ಇಂತಹ ಮಹಿಳೆಯೊಬ್ಬರಿದ್ದಾರೆ. ಅವರು 42 ವರ್ಷದ ರಜನಿ ಶೆಟ್ಟಿ.
Published: 16th January 2022 01:12 PM | Last Updated: 17th January 2022 06:46 PM | A+A A-

ಮಂಗಳೂರಿನಲ್ಲಿ ಬೀದಿನಾಯಿಗಳಿಗೆ ಆಹಾರ ಉಣಿಸುತ್ತಿರುವ ರಜನಿ ಶೆಟ್ಟಿ ಮತ್ತು ಆಕೆಯ ಮಗಳು ಶ್ವೇತ
ಮಂಗಳೂರು: ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅಂತಾರೆ, ನಮ್ಮ ಸುತ್ತಮುತ್ತ ಹತ್ತಾರು ಹೀರೋಗಳಿರುತ್ತಾರೆ. ಅವರು ಹೀರೋಗಳು ಎನಿಸಿಕೊಳ್ಳುವುದು ಅವರು ಮಾಡುವ ಕೆಲಸ, ಸಮಾಜಸೇವೆ, ನಡೆ-ನುಡಿಗಳಿಂದ. ಇಂತಹ ಮಹಿಳೆಯೊಬ್ಬರಿದ್ದಾರೆ. ಅವರು 42 ವರ್ಷದ ರಜನಿ ಶೆಟ್ಟಿ.
ಹಸಿವು-ಅಪಾಯಕ್ಕೆ ಸಿಲುಕಿರುವ ಬೀದಿ ನಾಯಿಗಳನ್ನು, ಪಕ್ಷಿಗಳನ್ನು ಕಾಪಾಡಿ ಅವರಿಗೆ ಹೊತ್ತು ಹೊತ್ತಿಗೆ ತಿನಿಸು ನೀಡುವ ಕಾಯಕದಲ್ಲಿ ಕಳೆದ 22 ವರ್ಷಗಳಿಂದ ನಿರತರಾಗಿದ್ದಾರೆ. ರಜನಿ ಶೆಟ್ಟಿ ಮಂಗಳೂರಿನ ಬಲ್ಲಾಳ್ ಬಾಗ್ ನಿವಾಸಿ.
ಹುಟ್ಟು, ಬಾಲ್ಯ ಜೀವನವನ್ನು ಮುಂಬೈ ನಗರದಲ್ಲಿ ಕಳೆದ ರಜನಿ ಶೆಟ್ಟಿ ಒಂದು ದಿನ ಚರಂಡಿಯಲ್ಲಿ ನಾಯಿಮರಿಯೊಂದು ಅಳುತ್ತಾ ಬಿದ್ದಿತ್ತಂತೆ. ಅದನ್ನು ನೋಡಿ ಮರುಗಿದ ರಜನಿ ಕೂಡಲೇ ಚರಂಡಿಯಿಂದ ನಾಯಿಮರಿಯನ್ನು ಎತ್ತಿ ತಂದು ಕಾಪಾಡಿ ನಂತರ 14 ವರ್ಷ ಸಾಕಿದರಂತೆ. ನಂತರ ನಾಯಿ ಅವರ ಕುಟುಂಬದ ಭಾಗವಾಗಿಯೇ ಹೋಯಿತು ಎನ್ನುತ್ತಾರೆ ರಜನಿ. ರಜನಿ ಅವರು ಮನೆಕೆಲಸ ಮಾಡಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ತಾಯಿ ಹೃದಯದ ರಜನಿ ಇದುವರೆಗೆ 2 ಸಾವಿರಕ್ಕೂ ಅಧಿಕ ಪ್ರಾಣಿ-ಪಕ್ಷಿಗಳನ್ನು ಕಾಪಾಡಿದ್ದಾರೆ. ದಾಮೋದರ್ ಶೆಟ್ಟಿ ಎಂಬುವವರನ್ನು ಮದುವೆಯಾದ ದಂಪತಿಗೆ ಇಬ್ಬರು ಪುತ್ರಿಯರಾದ ಶ್ವೇತ ಮತ್ತು ರಿಥಿಕಾ ಹಾಗೂ ಪುತ್ರ ಪ್ರತಿಕ್ ಇದ್ದಾರೆ.
ಮಂಗಳೂರಿನ ಬೀದಿಗಳಲ್ಲಿ 750 ಕ್ಕೂ ಹೆಚ್ಚು ನಾಯಿ ಮತ್ತು ಬೆಕ್ಕುಗಳಿಗೆ ಉಣಿಸಲು ಕೋಳಿಯ ಮಾಂಸದೊಂದಿಗೆ 60 ಕೆಜಿ ಅಕ್ಕಿಯನ್ನು ರಜನಿ ಬೇಯಿಸುತ್ತಾರೆ. ಕೋಳಿ ಪದಾರ್ಥ ಸಿಗದಿದ್ದರೆ ಹಾಲು ಮತ್ತು ಮೊಟ್ಟೆ ಬೆರೆಸಿ ಅನ್ನವನ್ನು ಬೇಯಿಸುತ್ತಾರೆ. ಬೆಳಗ್ಗೆ 5.30 ಕ್ಕೆ ತನ್ನ ದಿನವನ್ನು ಪ್ರಾರಂಭಿಸಿ, ರಜನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ದ್ವಿಚಕ್ರ ವಾಹನವನ್ನು ಹತ್ತಿ ಪ್ರಾಣಿಗಳಿಗೆ ಆಹಾರವನ್ನು ನೀಡುತ್ತಾ ನಗರವನ್ನು ಸುತ್ತುತ್ತಾರೆ. ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ರ ತನಕ ಅವರಿಗೆ ಇದುವೇ ಕೆಲಸ.
ಇದನ್ನೂ ಓದಿ: ದಿನನಿತ್ಯ ಬೀದಿ ಪ್ರಾಣಿಗಳಿಗೆ ಅಡುಗೆ; ಥರ ಥರದ ಮೆನು: ದಶಕಗಳಿಂದ ಆಂಧ್ರ ದಂಪತಿಯ ಮಹತ್ಕಾರ್ಯ
ಹೆಂಚಿನ ಮನೆಯಲ್ಲಿ ತಿಂಗಳಿಗೆ 9 ಸಾವಿರ ಬಾಡಿಗೆ ಕೊಟ್ಟು ಐವರ ಕುಟುಂಬ ಜೀವನ ನಡೆಯುತ್ತಿದೆ. “ನಾನು ತಿಂಗಳಿಗೆ 12,000 ರೂಪಾಯಿ ಸಂಪಾದಿಸುತ್ತೇನೆ. ಅದರಲ್ಲಿ ಒಂದು ಭಾಗವನ್ನು ಪ್ರಾಣಿಗಳು ಮತ್ತು ಪಕ್ಷಿಗಳನ್ನು ನೋಡಿಕೊಳ್ಳಲು ಇಡುತ್ತೇನೆ. ನನ್ನ ಮನೆಯಲ್ಲಿ 29 ನಾಯಿಗಳಿವೆ, ಅವುಗಳಲ್ಲಿ ಐದು ಪಾರ್ಶ್ವವಾಯು ಪೀಡಿತ ನಾಯಿಗಳು, 15 ಬೆಕ್ಕುಗಳು, ಮೊಲ ಮತ್ತು ಐದು ಗಾಯಗೊಂಡ ಹದ್ದುಗಳು ಇವೆ ಎನ್ನುತ್ತಾರೆ.

ನೀವು ಏಕೆ ಈ ಕೆಲಸ ಮಾಡುತ್ತಿದ್ದೀರಿ ಎಂದಾಗ, ಜನರಿಗೆ ಸ್ಫೂರ್ತಿ ನೀಡುವುದು ನನ್ನ ಗುರಿ. ಗಾಯಗೊಂಡು ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ. ಪ್ರಾಣಿ-ಪಕ್ಷಿಗಳ ಯಾತನೆ ಬಗ್ಗೆ ಜನರು ಕಣ್ಣುಮುಚ್ಚಿ ನೋಡಬಾರದು ಎನ್ನುತ್ತಾರೆ ಅವರು.
ಪ್ರಾಣಿಗಳನ್ನು ರಕ್ಷಿಸಲು ರಜನಿ ಹಲವಾರು ಬಾರಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾಳೆ. 2020 ರಲ್ಲಿ ಮೊದಲ ಕೋವಿಡ್-ಪ್ರೇರಿತ ಲಾಕ್ಡೌನ್ ಸಮಯದಲ್ಲಿ, ನಾಯಿಯನ್ನು ರಕ್ಷಿಸಲು ತನ್ನ ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಂಡು ಬಾವಿಗೆ ಇಳಿಯುವ ವೀಡಿಯೊ ವೈರಲ್ ಆಗಿತ್ತು. ಇತ್ತೀಚೆಗಷ್ಟೇ 42 ಅಡಿ ಆಳದ ಮತ್ತೊಂದು ಬಾವಿಗೆ ಇಳಿದು ಹಾಲುಣಿಸುತ್ತಿದ್ದ ನಾಯಿಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ಮಹಾಬೂಬಾಬಾದ್ 24x7 ರಕ್ಷಕಿ: ನರಿಯನ್ನು ರಕ್ಷಿಸಲು ಬಾವಿಗೆ ಇಳಿದ ಮೊಹಮ್ಮದ್ ಸುಮಾ, ಇಲ್ಲಿಯವರೆಗೆ 120 ಪ್ರಾಣಿಗಳ ರಕ್ಷಣೆ
ಕಳೆದ 13 ವರ್ಷಗಳಿಂದ ನನ್ನ ಸ್ವಂತ ಹಣದಲ್ಲಿ ಪ್ರಾಣಿಗಳಿಗೆ ಆಹಾರ ನೀಡಿ, ರಕ್ಷಿಸಿ ಚಿಕಿತ್ಸೆ ನೀಡಿದ್ದೇನೆ. ಲಾಕ್ಡೌನ್ ಸಮಯದಲ್ಲಿ, ನಾನು ಅವರಿಗೆ ಆಹಾರ ನೀಡಲು ಹೆಣಗಾಡಿದೆ. ಸುಮಾರು ಐದು ತಿಂಗಳಿನಿಂದ ಮನೆ ಬಾಡಿಗೆ ಕಟ್ಟಲಾಗದೆ ಮನೆ ಖಾಲಿ ಮಾಡಬೇಕಾಯಿತು. ನನ್ನ ಕುಟುಂಬದೊಂದಿಗೆ, ನನ್ನ ಪ್ರಾಣಿಗಳು ಮತ್ತು ಪಕ್ಷಿಗಳು ಸಹ ನಿರಾಶ್ರಿತರಾದರು. ಆದಾಗ್ಯೂ, ನನ್ನ ನಾಯಿ ಪಾರುಗಾಣಿಕಾ ವೀಡಿಯೊ ವೈರಲ್ ಆದ ನಂತರ, ಅನೇಕ ದಾನಿಗಳು ನನಗೆ ಆರ್ಥಿಕವಾಗಿ ಸಹಾಯ ಮಾಡಿದರು. ನಾನು ಆಹಾರ ತಿನ್ನುವ ಬದಲು ಪ್ರಾಣಿಗಳಿಗೆ ಆದ್ಯತೆ ನೀಡುತ್ತೇನೆ. ನಾನು ನಿಯಮಿತವಾಗಿ ಮಂಗಳೂರಿನ ಸ್ಟೇಟ್ ಬ್ಯಾಂಕ್, ಪೊಲೀಸ್ ಕಮಿಷನರೇಟ್, ಹೊಯ್ಗೆ ಬಜಾರ್ ಮತ್ತು ಬಂದರ್ ಪ್ರದೇಶಗಳಿಗೆ ಹೋಗಿ ಪ್ರಾಣಿಗಳಿಗೆ ಆಹಾರ ನೀಡುತ್ತಿರುತ್ತೇನೆ ಎನ್ನುತ್ತಾರೆ.
ಮಂಗಳೂರು ಮೂಲದ ಎನ್ಜಿಒ ಅನಿಮಲ್ ಕೇರ್ ಟ್ರಸ್ಟ್ ರಜನಿ ಅವರ ಪ್ರಾಣಿಗಳಿಗೆ ಸಂತಾನಹರಣ ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಅವರು ಕುಲಶೇಖರ್ನಲ್ಲಿರುವ ಪಶು ವೈದ್ಯರಾದ ಡಾ ಯಶಸ್ವಿ ನಾರಾವಿ ಮತ್ತು ಜೈಲು ರಸ್ತೆಯಲ್ಲಿರುವ ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ನಡೆಸುತ್ತಿರುವ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡುತ್ತಾರೆ.
ರಜನಿ ಕನಸು: ಮಂಗಳೂರಿನಲ್ಲಿ ಬೀದಿ ಪ್ರಾಣಿಗಳು ಮತ್ತು ಪಕ್ಷಿಗಳಿಗಾಗಿ ಪ್ರತ್ಯೇಕವಾಗಿ 24x7 ಪಶುವೈದ್ಯಕೀಯ ಆಸ್ಪತ್ರೆಯನ್ನು ನಿರ್ಮಿಸುವುದು ಅವರ ಕನಸು. ಮನುಷ್ಯರು ಗಾಯಗೊಂಡರೆ ಅಥವಾ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಜನರು ಅವರಿಗೆ ಸಹಾಯ ಮಾಡಲು ಧಾವಿಸುತ್ತಾರೆ. ಈ ಪ್ರಾಣಿಗಳು ಮತ್ತು ಪಕ್ಷಿಗಳಿಗೂ ಸಹ ಸಹಾಯದ ಅಗತ್ಯವಿದೆ. ನನ್ನ ಅನುಪಸ್ಥಿತಿಯಲ್ಲಿಯೂ ಈ ಮುಗ್ಧ ಜೀವಿಗಳನ್ನು ನೋಡಿಕೊಳ್ಳಲು ಯಾರಾದರೂ ಇರಬೇಕು. ಮಂಗಳೂರಿನಲ್ಲಿ ಪಶುವೈದ್ಯಕೀಯ ಆಸ್ಪತ್ರೆಯ ಅಗತ್ಯವಿದೆ ಎಂದು ರಜನಿ ಶೆಟ್ಟಿ ಹೇಳುತ್ತಾರೆ.