ವಲಸೆ ಕಾರ್ಮಿಕ ಮಹಿಳೆ ಈಗ ಕುಂದಾಪುರದ ಗ್ರಾಮ ಪಂಚಾಯತ್ ಅಧ್ಯಕ್ಷೆ!
ಯಶಸ್ಸು, ಸಾಧನೆ ಎನ್ನುವುದು ಪ್ರತಿಯೊಬ್ಬರೂ ಬಯಸುವ ಅಮೃತ ಫಲ. ಹಾಗಂತ ಅದು ಎಲ್ಲರ ಕೈಗೂ ಸಿಗುವುದಿಲ್ಲ. ಯಾಕೆಂದರೆ, ಹೆಚ್ಚಿನವರ ಪಾಲಿಗೆ ಸಾಧನೆ ಎನ್ನುವುದು ಒಂದು ಕೇವಲ ಕನಸಾಗಿ, ಮಹತ್ವಾಕಾಂಕ್ಷೆಯಾಗಿ ಉಳಿಯುತ್ತದೆ.
Published: 30th January 2022 01:55 PM | Last Updated: 31st January 2022 01:06 PM | A+A A-

ಭೀಮವ್ವ
ಉಡುಪಿ: ಯಶಸ್ಸು, ಸಾಧನೆ ಎನ್ನುವುದು ಪ್ರತಿಯೊಬ್ಬರೂ ಬಯಸುವ ಅಮೃತ ಫಲ. ಹಾಗಂತ ಅದು ಎಲ್ಲರ ಕೈಗೂ ಸಿಗುವುದಿಲ್ಲ. ಯಾಕೆಂದರೆ, ಹೆಚ್ಚಿನವರ ಪಾಲಿಗೆ ಸಾಧನೆ ಎನ್ನುವುದು ಒಂದು ಕೇವಲ ಕನಸಾಗಿ, ಮಹತ್ವಾಕಾಂಕ್ಷೆಯಾಗಿ ಉಳಿಯುತ್ತದೆ. ಆದರೆ, ಸಾಧನೆಗೆ ಬೇಕಿರುವುದು ಬರೀ ಕನಸಲ್ಲ. ಕನಸನ್ನು ನನಸಾಗಿಸಬಲ್ಲ, ಇಚ್ಛಾಶಕ್ತಿ, ಕಠಿಣ ಪರಿಶ್ರಮ, ಎಷ್ಟೇ ಕಷ್ಟವಿದ್ದರೂ ಬೆನ್ನಟ್ಟಬಲ್ಲ ಎದೆಗಾರಿಕೆ ಮತ್ತು ಅದಕ್ಕೆ ಪೂರಕವಾದ ಸಾಮರ್ಥ್ಯವಾಗಿದೆ. ವಲಸೆ ಕಾರ್ಮಿಕರಾಗಿದ್ದರು, ತಮ್ಮ ಸಾಮರ್ಥ್ಯ ಹಾಗೂ ಕಠಿಣ ಶ್ರಮದಿಂದಾಗಿ ಭೀಮವ್ವ ಅವರು ಇದೀಗ ಕುಂದಾಪುರದ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ.
ಬಾಗಲಕೋಟೆಯ ಕಟಗೇರಿಯಿಂದ ಕರಾವಳಿ ಜಿಲ್ಲೆಗೆ ತಮ್ಮ ಪತಿ ಮರಿಯಪ್ಪ ಹಾಗೂ ಪುತ್ರ ರಂಗಮ್ಮ ಅವರೊಂದಿಗೆ ಕೆಲ ವರ್ಷಗಳ ಹಿಂದೆ ಬಂದಿದ್ದ 50 ವರ್ಷ ಭೀಮವ್ವ ಅವರ ವಿದ್ಯಾರ್ಹತೆ 2 ತರಗತಿಯಾಗಿದೆ. ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಲೇ ಭೀಮವ್ವ ಅವರು ಇತರೆ ವಿಚಾರಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಇವರ ಈ ಕಾಳಜಿ ಹಾಗೂ ಶ್ರಮದಾಯಕ ಕಾರ್ಯ ಅವರು ಕುಂದಾಪುರದ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗುವಂತೆ ಮಾಡಿದೆ.
ಕೂಲಿ ಮಾಡಿ ಜೀವನ ನಡೆಸುತ್ತಿದ್ದರು, ಅವರಲ್ಲಿರುವ ಸರಳತೆ ಹಾಗೂ ಕಾಳಜಿಯುತ ಕೆಲಸವನ್ನು ಗಮಿಸಿದ ಕುಂದಾಪುರದ ಪಂಚಾಯತ್ ಮಾಜಿ ಸದಸ್ಯ ಕರುಣ್ ಪೂಜಾರಿ ಅವರು, ಭೀಮವ್ವ ಅವರನ್ನು ತಮ್ಮ ಇತರೆ ಸಮಾಜ ಕಾರ್ಯಗಳಲ್ಲಿ ಬಳಕೆ ಮಾಡಿಕೊಳ್ಳಲು ಮುಂದಾದರು. ಬಳಿಕ ಡಿಸೆಂಬರ್ 2020 ರಲ್ಲಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದರು.
ಎಸ್‌ಟಿ ಸಮುದಾಯದವರಾಗಿರುವುದರಿಂದ ಮೀಸಲಾತಿ ಪ್ರಕಾರ ಪಂಚಾಯಿತಿ ಅಧ್ಯಕ್ಷೆಯಾಗುವ ಅವಕಾಶ ಭೀಮವ್ವ ಅವರಿಗೆ ಒದಗಿ ಬಂದಿದೆ.
ಪಡಿತರ ಚೀಟಿ ಪಡೆಯಲು ನಾನುಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೆ. ನನ್ನಂತೆ ಹಲವಾರು ಬಡವರು ವಿವಿಧ ಸಮಸ್ಯೆಗಳಲ್ಲಿ ಅನುಭವಿಸುತ್ತಿರುವುದನ್ನು ಅರ್ಥ ಮಾಡಿಕೊಂಡಿದ್ದೇನೆ. ಇದೀಗ ನಾನು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದು, ಜನರ ಸಂಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ. ಜನರಿಗಾಗಿ ಸಾಧ್ಯವಿರುವ ಎಲ್ಲಾ ಸಹಾಯವನ್ನು ಮಾಡುತ್ತೇನೆಂದು ಹೇಳಿದ್ದಾರೆ.
ಭೀಮವ್ವ ಅವರಿಗೆ ನಾಲ್ಕು ಮಂದಿ ಮಕ್ಕಳಿದ್ದು, ಈ ಪೈಕಿ ಎರಡನೇ ಮಗ ಶಿವನಾಂದ ಅವರು ಚೀನಾ ಗಡಿಯಲ್ಲಿ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಮ್ಮ ಮತ್ತಿಬ್ಬರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು, ಒಳ್ಳೆಯ ಉದ್ಯೋಗ ದೊರೆಯುವಂತೆ ಮಾಡಬೇಕೆಂಬುದು ಭೀಮವ್ವ ಅವರ ಆಸೆಯಾಗಿದೆ.
ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಕಾರಣ ತಿಳಿಸಿರುವ ಭೀಮವ್ವ ಅವರು, ಇದು ನನ್ನ ಆಸಕ್ತಿಯಾಗಿತ್ತು. ತಲ್ಲೂರಿನಲ್ಲಿರುವ ಜನರು ಇಂದು ನನ್ನನ್ನು ತಮ್ಮ ಸ್ವಂತ ಮಗಳಂತೆ ನೋಡುತ್ತಿದ್ದಾರೆ. ಇದು ನನಗೆ ಸಂತಸ ಸಂದಿದೆ. ವರ್ಷಕ್ಕೊಮ್ಮೆ ನಾನು ಬಾಗಲಕೋಟೆಯ ನನ್ನ ಗ್ರಾಮಕ್ಕೆ ಬಂದು ಹಳ್ಳಿ ಜಾತ್ರೆಯಲ್ಲಿ ಭಾಗವಹಿಸುತ್ತೇನೆಂದು ಭೀಮವ್ವ ಅವರು ಹೇಳಿದ್ದಾರೆ.