ಸುರಂಗದಲ್ಲಿ ನೀರಿನ ಝರಿ: ಕರ್ನಾಟಕ-ಕೇರಳದ ಗಡಿಯಲ್ಲಿ ಹೊಸ ಮಾದರಿಯ ಕೃಷಿ ನೀರು ನಿರ್ವಹಣೆ!
ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಹಿಂದೊಮ್ಮೆ ಬರಡು ಭೂಮಿಯಾಗಿದ್ದ ಪ್ರದೇಶ ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಬಾಳೆ, ಅಡಿಕೆ, ಕೋಕೋಗಳಿಂದ ಸಮೃದ್ಧವಾಗಿದ್ದು ರೈತರಿಗೆ ಆದಾಯದ ಮೂಲವಾಗಿದೆ.
Published: 31st January 2022 03:04 PM | Last Updated: 31st January 2022 04:19 PM | A+A A-

ಟನಲ್ ಕೊರೆದು ನೀರು ಹರಿಸುತ್ತಿರುವ ದೃಶ್ಯ ( ಚಿತ್ರ ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)
ಮಂಗಳೂರು: ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಹಿಂದೊಮ್ಮೆ ಬರಡು ಭೂಮಿಯಾಗಿದ್ದ ಪ್ರದೇಶ ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಬಾಳೆ, ಅಡಿಕೆ, ಕೋಕೋಗಳಿಂದ ಸಮೃದ್ಧವಾಗಿದ್ದು ರೈತರಿಗೆ ಆದಾಯದ ಮೂಲವಾಗಿದೆ.
ಬಿರು ಬೇಸಿಗೆಯಲ್ಲೂ ಈ ಪ್ರದೇಶಕ್ಕೆ ನೀರು ಹರಿಯುವುದು ಮತ್ತೊಂದು ಅಚ್ಚರಿ. ಇದೆಲ್ಲಾ ಸಾಧ್ಯವಾಗಿದ್ದು, ಸುರಂಗ ಅಥವಾ ಟನಲ್ ನೀರು ನಿರ್ವಹಣಾ ವ್ಯವಸ್ಥೆಯ ಮೂಲಕ.
ಈ ವ್ಯವಸ್ಥೆಯಲ್ಲಿ ಲ್ಯಾಟರೈಟ್ ಬೆಟ್ಟಗಳ ಇಳಿಜಾರುಗಳಿಗೆ ಅಡ್ಡಲಾಗಿ ನೀರಿನ ಸೆಲೆ ಸಿಗುವವರೆಗೂ ಸುರಂಗ ಕೊರೆಯಲಾಗುತ್ತದೆ. ಇಲ್ಲಿಂದ ಸೋರುವ ನೀರು ಸುರಂಗಕ್ಕೆ ಇಳಿಯುತ್ತದೆ. ಈ ನೀರನ್ನು ಪೈಪ್ ಗಳ ಮೂಲಕ ಕೃಷಿ ಬಳಕೆಗೆ ಡ್ರಿಪ್ ಅಥವಾ ಸ್ಪ್ರಿಂಕ್ಲರ್ ಗಳ ಮೂಲಕ ಉಪಯೋಗಿಸಲಾಗುತ್ತದೆ.
ಬಂಟ್ವಾಳ ತಾಲೂಕಿನ ಮನಿಲಾ ಗ್ರಾಮದ ಗೋವಿಂದ್ ಭಟ್ ಎಂಬ ಕೃಷಿಕ 17 ಎಕರೆ ಪ್ರದೇಶಗಳಲ್ಲಿ ಗರಿಷ್ಠ ಸಂಖ್ಯೆಯ ಸುರಂಗವನ್ನು ಹೊಂದಿದ್ದು, ಅವಿಭಕ್ತ ಕುಟುಂಬ ನಿರ್ವಹಣೆ ಮಾಡುತ್ತಿದೆ. ಕಳೆದ ಮೂರು ದಶಕಗಳಲ್ಲಿ ಅವರ ಆಸ್ತಿಯಲ್ಲಿರುವ ಟನಲ್ ಗಳ ಸಂಖ್ಯೆ 22 ಕ್ಕೆ ಏರಿಕೆಯಾಗಿದ್ದು, ಇತ್ತೀಚಿನ ಟನಲ್ 2 ವರ್ಷದ ಹಿಂದೆ ಕೊರೆಯಲಾಗಿದೆ. ತಮ್ಮ ಯಾವುದೇ ಪ್ರಯತ್ನವೂ ವಿಫಲವಾಗದೇ ಇರುವುದಕ್ಕೆ ಭಟ್ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಗುಡ್ಡ ಪ್ರದೇಶದಲ್ಲಿರುವ ಅವರ ಭೂಮಿಯಲ್ಲಿ ಗರಿಷ್ಠ ಪ್ರಮಾಣದವರೆಗೂ ಕೃಷಿಯನ್ನು ವಿಸ್ತರಿಸಿದ್ದು, ಎತ್ತರದ ಪ್ರದೇಶದಲ್ಲಿ ಟ್ಯಾಂಕ್ ನ್ನು ನಿರ್ಮಾಣ ಮಾಡಿದ್ದಾರೆ. ಕೆಳ ಭಾಗದಲ್ಲಿ ಮೂರು ಟ್ಯಾಂಕ್ ಗಳಿದ್ದು ಎಲ್ಲವೂ ಸುರಂಗದ ನೀರಿನಿಂದ ಭರ್ತಿಯಾಗಿದೆ. ಈಗ ಕೊನೆಯದಾಗಿ ಉಳಿದಿರುವ ಒಣ ಭೂಮಿಯನ್ನೂ ಇದೇ ಮಾದರಿಯ ನೀರಿನ ವ್ಯವಸ್ಥೆ ಮಾಡಿ ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಯೋಜನೆಯನ್ನು ಭಟ್ ಹೊಂದಿದ್ದಾರೆ.
ಬೋರ್ವೆಲ್ ಗಳಿಗೆ ಹೋಲಿಕೆ ಮಾಡಿದಲ್ಲಿ, ಟನಲ್ ಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, ಯಶಸ್ವಿ ಟನಲ್ ನ ಸಂಖ್ಯೆಯೂ ಬೋರ್ವೆಲ್ ಗಳಿಗಿಂತಲೂ ಹೆಚ್ಚಾಗಿದೆ ಹಾಗೂ ಕಡಿಮೆ ಖರ್ಚಿನದ್ದೂ ಹೌದಾಗಿದೆ. ಈ ರೀತಿಯ ಟನಲ್ ಗಳು ಬಯಾರು, ಪಡ್ರೆ, ಅಗಲ್ಪಾಡಿ ಗ್ರಾಮಗಳಲ್ಲಿ ಕಂಡುಬರುತ್ತದೆ.