ಚೀನೀಯರಿಗೆ ಹೊಸ ವರ್ಷ 'ನೀರು ಹುಲಿಯ ವರ್ಷ'ದ ಸಂಭ್ರಮ; Chinese new year spring festival ಏನಿದು, ಆಚರಣೆ ಹೇಗಿರುತ್ತದೆ?
ಚೀನಿಯರಿಗೆ (Chinese new year) ಈಗ ಹೊಸ ವರ್ಷದ ಸಂಭ್ರಮ. ಸ್ಪ್ರಿಂಗ್ ಫೆಸ್ಟಿವಲ್ (Spring festival) ಇದಕ್ಕಿರುವ ಇನ್ನೊಂದು ಹೆಸರು. ಇಡೀ ವರ್ಷದಲ್ಲಿ ಬರುವ ಇತರೆ ಎಲ್ಲಾ ಹಬ್ಬಗಳಿಗಿಂತಲೂ ಇದು ಅತ್ಯಂತ ದೊಡ್ಡ ಹಬ್ಬ.
Published: 31st January 2022 02:13 PM | Last Updated: 31st January 2022 02:43 PM | A+A A-

ಚೀನೀಯರ ಹೊಸ ವರ್ಷದ ಸಂಭ್ರಮ
ಬರಹ- ಕೆ ಎಸ್ ಶ್ರೀವಿದ್ಯಾ
ಚೀನಿಯರಿಗೆ(Chinese new year) ಈಗ ಹೊಸ ವರ್ಷದ ಸಂಭ್ರಮ. ಸ್ಪ್ರಿಂಗ್ ಫೆಸ್ಟಿವಲ್(Spring festival) ಇದಕ್ಕಿರುವ ಇನ್ನೊಂದು ಹೆಸರು. ಇಡೀ ವರ್ಷದಲ್ಲಿ ಬರುವ ಇತರೆ ಎಲ್ಲಾ ಹಬ್ಬಗಳಿಗಿಂತಲೂ ಇದು ಅತ್ಯಂತ ದೊಡ್ಡ ಹಬ್ಬ. ವರ್ಷಪೂರ್ತಿ ಭೇಟಿಯಾಗದೇ ಇರುವ ಕುಟುಂಬ ಸದಸ್ಯರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಈ ಹಬ್ಬದಂದು ಒಟ್ಟು ಸೇರುವುದು ಸಂಪ್ರದಾಯ. ನ್ಯೂ ಮೂನ್ ದಿನದಂದು ಆರಂಭವಾಗುವ ಈ ಹಬ್ಬ 15 ದಿನಗಳವರೆಗೆ ಮುಂದುವರಿದು ಕೊನೆಯ ಘಟ್ಟದಲ್ಲಿ ಲಾಂಟರ್ನ್ ಹಬ್ಬದೊಂದಿಗೆ ಸಮಾಪ್ತಿಗೊಳ್ಳುತ್ತದೆ.
ಚೀನೀ ಹೊಸ ವರ್ಷವು ಹಲವಾರು ಪುರಾಣಗಳು ಮತ್ತು ಪದ್ಧತಿಗಳೊಂದಿಗೆ ಒಳಗೊಂಡಿವೆ. ಸಾಂಪ್ರದಾಯಿಕವಾಗಿ ದೇವತೆಗಳನ್ನು ಹಾಗೂ ಪೂರ್ವಜರನ್ನು ಗೌರವಿಸುವ ಪ್ರಯುಕ್ತ ನಡೆಯುತ್ತದೆ. ಈ ಹಬ್ಬದ ಹಿಂದಿನ ಸಂಜೆ "ವಾರ್ಷಿಕ ಪುನರ್ಮಿಲನ ಭೋಜನ" ಎಂಬ ಪದ್ದತಿ ವಿಜೃಂಭಣೆಯಿಂದ ನಡೆಯುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಈ ಔತಣಕೂಟದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲೇಬೇಕು.
ಲೂನಿಸೋಲಾರ್ ಚೈನೀಸ್ ಕ್ಯಾಲೆಂಡರ್ ಪ್ರಕಾರ ಹಬ್ಬದ ದಿನವನ್ನು ಗೊತ್ತು ಮಾಡಲಾಗುತ್ತದೆ. ಲೂನಿಸೋಲಾರ್ ಅಂದರೆ ಚಂದ್ರ ಮತ್ತು ಸೌರ ಕ್ಯಾಲೆಂಡರ್‌ಗಳಿಂದ ಸಂಯೋಜನೆಗೊಂಡದ್ದಾಗಿದೆ. ಜೊತೆಗೆ ಇದರ ದಿನಾಂಕಗಳು ಚಂದ್ರನ ಹಂತ ಮತ್ತು ಸೌರ ವರ್ಷದ ಸಮಯವನ್ನು ಸೂಚಿಸುತ್ತದೆ. ಈ ಕ್ಯಾಲೆಂಡರ್, ಚೀನಾದಿಂದ ಪ್ರಭಾವಿತವಾಗಿರುವ ಅಥವಾ ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಹೊಸ ವರ್ಷದ ಆಚರಣೆಯು ಚಾಲ್ತಿಗೆ ಬರುವ ಮೊದಲೆಲ್ಲಾ ಶರತ್ಕಾಲದಲ್ಲಿ ನಡೆಯುವ ಸುಗ್ಗಿಯ ಅಂತ್ಯವನ್ನು ಸಂಕೇತಿಸುವ ಸಲುವಾಗಿಈ ಹಬ್ಬವನ್ನು ಆಚರಿಸಲಾಗುತ್ತಿತ್ತು.
ಚೀನಿಯರ ಹಬ್ಬ ಬಂತೆಂದರೆ ಸಾಕು, ಇಡೀ ನಗರವೇ ಕೆಂಪು ಬಣ್ಣಗಳಿಂದ ಕಂಗೊಳಿಸುತ್ತವೆ. ಕೆಂಪು ಬಣ್ಣದ ತೂಗುದೀಪಗಳು, ಪೇಪರ್ ಆಕೃತಿಗಳು, ಆಯಾ ವರ್ಷದ ಪ್ರಾಣಿಗಳ ಮೂರ್ತಿಗಳು ರಾರಾಜಿಸುತ್ತಿರುತ್ತವೆ. ಕೆಂಪು ಬಣ್ಣ ಚೀನಿಯರ ಅದೃಷ್ಟದ ಬಣ್ಣ. ಇದಕ್ಕೊಂದು ಪುರಾಣವಿದೆ.
ವಾರ್ಷಿಕ ವಸಂತ ಋತುವಿನ ಹಬ್ಬದ ಸಂದರ್ಭದಲ್ಲಿ ನಿಯಾನ್ ಎಂಬ ಮೃಗವು ಗ್ರಾಮಗಳಿಗೆ ಭೇಟಿ ನೀಡಿ ಮಕ್ಕಳು, ಜನರನ್ನು ತಿಂದು ಹಾಕುತಿತ್ತು. ಈ ಭಯದಿಂದ ಪ್ರತಿ ಬಾರಿಯೂ ಗ್ರಾಮಸ್ಥರು ರಾತ್ರಿಯ ವೇಳೆ ಅಡಗಿ ಕುಳಿತುಕೂಳ್ಳುವುದು ಸಾಮಾನ್ಯವಾಗಿತ್ತು. ಆದರೆ ಒಂದು ಬಾರಿ ಓರ್ವ ಹಿರಿಯ ವ್ಯಕ್ತಿ, ಆ ಮೃಗಕ್ಕೆ ಪಾಠ ಕಲಿಸುವುದಾಗಿ ಪಣತೊಟ್ಟು ತಾನೊಬ್ಬನೇಉಳಿದುಕೊಳ್ಳುವುದಾಗಿ ಗ್ರಾಮಸ್ಥರಲ್ಲಿ ತಿಳಿಸುತ್ತಾರೆ. ಆ ಮೃಗ ಬರುವ ವೇಳೆ ಕೆಂಪು ಬಣ್ಣದ ಕಾಗದವನ್ನು ಹೊತ್ತಿಸಿದ್ದಲ್ಲದೆ ಪಟಾಕಿಯನ್ನು ಸಿಡಿಸುತ್ತಾರೆ. ಈ ಬಗ್ಗೆ ತಿಳಿದ ಗ್ರಾಮಸ್ಥರು ಅಂದಿನಿಂದ ಆ ಪ್ರಾಣಿಯ ವಿರುದ್ಧ ಇದೇ ಕ್ರಮವನ್ನು ಮುಂದುವರಿಸುತ್ತಾರೆ.ಹೀಗೆ ಆರಂಭಗೊಂಡ ಸಂಪ್ರದಾಯ ಈಗಲೂಕೆಲ ಊರುಗಳಲ್ಲಿ ಮುಂದುವರಿದಿದೆ.
ಸಿಂಗಾಪುರದಲ್ಲಿ ಕೊರೊನ ಭೀತಿಯ ನಡುವೆಯೂ ಇದೀಗ ಹಬ್ಬದ ಸಡಗರ. ವೇಗವಾಗಿ ಹರಡುತ್ತಿರುವ ಓಮೈಕ್ರಾನ್ ನಿಯಂತ್ರಣಕ್ಕೆ ತಂದಿರುವ ಒಂದಷ್ಟು ನಿಯಮಗಳು ಚೀನಿ ಹೊಸ ವರ್ಷಕ್ಕೆ ಕೊಂಚ ಅಡ್ಡಿಯನ್ನುಂಟುಮಾಡಿದ್ದು ಸುಳ್ಳಲ್ಲ. ಆದರೆ ಕಳೆದ ಬಾರಿ ತಟಸ್ಥ ರೀತಿಯಲ್ಲಿ ಆಚರಣೆಗೊಂಡ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಕೊರೊನ ಲಸಿಕೆ, ಸಂಚಾರ ವ್ಯವಸ್ಥೆಗಳು ಕುಟುಂಬಸ್ಥರ ಭೇಟಿಗೆ ಅನುವುಮಾಡಿಕೊಟ್ಟಿದೆ. ಸಾಮಾನ್ಯವಾಗಿ ಚೀನಿ ಹೊಸವರ್ಷದ ಪ್ರಯುಕ್ತ ನಡೆಯುವ ಸಂಚಾರವನ್ನು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮಾನವ ವಲಸೆ ಎಂದು ಬಣ್ಣಿಸಲಾಗುತ್ತದೆ.
ಚೀನಿಯರ ಈ ಬಾರಿಯ ವರ್ಷವನ್ನು "ನೀರು ಹುಲಿಯ ವರ್ಷ" ವೆಂದು ಕರೆಯಲಾಗುತ್ತದೆ. ಇದು ಫೆಬ್ರವರಿ 1, 2022 ರಿಂದ ಆರಂಭವಾಗಿ ಜನವರಿ 21, 2023 ರಂದು ಕೊನೆಗೊಳ್ಳುತ್ತದೆ. ಪ್ರತಿ 60 ವರ್ಷಗಳಿಗೊಮ್ಮೆ ನೀರು ಹುಲಿ ವರ್ಷ ಸಂಭವಿಸುತ್ತದೆ. 1902, 1914, 1926, 1938, 1950, 1962, 1974, 1986, 1998, 2010, 2022 ವರ್ಷಗಳಲ್ಲಿ ಹುಟ್ಟಿದ ವ್ಯಕ್ತಿಗಳೆಲ್ಲರ ಚೀನಿ ರಾಶಿಯು ಹುಲಿಯ ಹೆಸರಿನೊಂದಿಗೆ ಜೋಡಣೆಯಾಗುತ್ತದೆ. ಹುಲಿಯನ್ನು ಚೀನಾದಲ್ಲಿ ಎಲ್ಲಾ ಪ್ರಾಣಿಗಳ ರಾಜ ಎಂದು ಕರೆಯಲಾಗುತ್ತದೆ. ಇದನ್ನು ದುಷ್ಟಶಕ್ತಿಗಳ ನಾಶ ಮತ್ತು ಧೈರ್ಯ, ಶಕ್ತಿಯ ಸಂಕೇತ ಎಂದು ಬಿಂಬಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಅನೇಕ ಚೀನೀ ಮಕ್ಕಳು ಅದೃಷ್ಟಕ್ಕಾಗಿ ಹುಲಿ ಚಿತ್ರದೊಂದಿಗಿನ ಟೋಪಿಗಳು ಅಥವಾ ಬೂಟುಗಳನ್ನು ಧರಿಸುವುದು ವಾಡಿಕೆ.
ಈ ರಾಶಿಚಕ್ರದ ಪ್ರಾಣಿಗಳ ಕುರಿತಂತೆ ಒಂದು ಜಾನಪದ ಕಥೆಯಿದೆ. ಜೇಡ್ ಚಕ್ರವರ್ತಿಯ ಆಡಳಿತಾವಧಿಯಲ್ಲಿ ನಡೆದ ಒಂದು ಘಟನೆ. ರಾಶಿ ಚಕ್ರದ ಕ್ಯಾಲಂಡರ್ ನ್ನಲ್ಲಿ ಪ್ರಾಣಿಗಳ ಹೆಸರಿಡುವ ಬಗ್ಗೆ ಸ್ಪರ್ಧೆ ನಡೆಯುತ್ತದೆ. ಈಜು ಬಾರದ ಇಲಿ ಮತ್ತು ಬೆಕ್ಕು, ಎತ್ತಿನ ಸಹಾಯ ಪಡೆದು ನದಿ ದಾಟುತ್ತವೆ. ಅದಾದ ಬಳಿಕ ಹುಲಿ, ಮೊಲ, ಡ್ರ್ಯಾಗನ್, ಕುದುರೆ, ಹಾವು, ಆಡು, ಮಂಗ, ಹುಂಜ ನಾಯಿ ಹಾಗೂ ಹಂದಿ ಕ್ರಮವಾಗಿ ಅವುಗಳದ್ದೇ ವೇಗದಲ್ಲಿ ಅರಮನೆಗೆ ಆಗಮಿಸುತ್ತವೆ. ಈ ಮೂಲಕ ಹುಲಿಗೆ ಮೂರನೇ ಸ್ಥಾನ ದಕ್ಕುತ್ತದೆ.
.
ಈ ಹಬ್ಬದ ಪ್ರಯುಕ್ತ ನೂಡಲ್ಸ್, ಡಂಪ್ಲಿಂಗ್‌ಗಳು, ಸ್ಪ್ರಿಂಗ್ ರೋಲ್‌ಗಳು ಮತ್ತು ಹಬೆಯಲ್ಲಿ ಬೇಯಿಸಿದ ಮೀನುಗಳು ಶಾಸ್ತ್ರೋಕ್ತವಾಗಿ ತಯಾರಿಸಬೇಕಾದ ತಿನಿಸುಗಳು. ಹಬ್ಬದ ವೇಳೆ ಇವು ಅದೃಷ್ಟವನ್ನು ತರಬಲ್ಲುದು ಎಂಬುದು ಚೀನಿಯರ ನಂಬಿಕೆ. ಹಿರಿಯರ ಆಶೀರ್ವಾದದೊಂದಿಗೆ ಮನೆಮಂದಿ - ಕುಟುಂಬ ಸದಸ್ಯರು ಸೇರಿ ಈ ಹಬ್ಬ ನೆರವೇರುತ್ತದೆ. ಹಬ್ಬದ ಪ್ರಯುಕ್ತ ಪ್ರಮುಖ ದೇವಾಲಯಗಳಲ್ಲಿ ದೇವರ ಸೇವೆಯ ರೂಪದಲ್ಲಿ ಹುಲಿಯ ಕುಣಿತ, ಡ್ರ್ಯಾಗನ್ ನೃತ್ಯಗಳು ನಡೆಯುತ್ತವೆ.
ಫೆಬ್ರವರಿ 1ರಂದು ಚಾಲನೆ ದೊರೆಯುವ ಈ ಹಬ್ಬ ಮುಂದಿನ 15 ದಿನಗಳವರೆಗೆ ನಡೆಯಲಿವೆ. ಪ್ರತಿ ದಿನವೂ ಒಂದೊಂದು ಆಚರಣೆಗಳು ಕ್ರಮ ಬದ್ಧವಾಗಿ ಕೈಗೊಳ್ಳಲಾಗುತ್ತದೆ. ಕೊರೊನ ನಿಯಮಗಳನ್ನು ಪಾಲಿಸುತ್ತ ಸಿಂಗಾಪುರದಲ್ಲಿರುವ ಚೀನಿ ಸಮುದಾಯ ಹೊಸವರ್ಷವನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತಿದೆ.