ರಸ್ತೆಬದಿ ಅನಾಥ ಸ್ಥಿತಿಯಲ್ಲಿದ್ದ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಲೇಡಿ ಪೊಲೀಸ್; ಆರೋಗ್ಯವಂತ ಮಗು ಜನನ!
ರಸ್ತೆಬದಿ ಪರಿತ್ಯಕ್ತ ರೀತಿಯಲ್ಲಿ ಅನಾಥಸ್ಥಿತಿಯಲ್ಲಿ ಬಿದ್ದಿದ್ದ ತುಂಬು ಗರ್ಭಿಣಿಯನ್ನು ಸೈಬರಾಬಾದ್ ಕಮಿಷನರೇಟ್ ನ ಮಹಿಳಾ ಕಾನ್ಸ್ಟೆಬಲ್ ಎ ರಾಜ್ಯಲಕ್ಷ್ಮಿ ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
Published: 03rd June 2022 01:44 PM | Last Updated: 03rd June 2022 02:28 PM | A+A A-

ಆರೋಗ್ಯವಂತ ನವಜಾತ ಶಿಶು ಜೊತೆ ಕಾನ್ಸ್ಟೇಬಲ್ ಎ ರಾಜ್ಯಲಕ್ಷ್ಮಿ
ಹೈದರಾಬಾದ್: ರಸ್ತೆಬದಿ ಪರಿತ್ಯಕ್ತ ರೀತಿಯಲ್ಲಿ ಅನಾಥಸ್ಥಿತಿಯಲ್ಲಿ ಬಿದ್ದಿದ್ದ ತುಂಬು ಗರ್ಭಿಣಿಯನ್ನು ಸೈಬರಾಬಾದ್ ಕಮಿಷನರೇಟ್ ನ ಮಹಿಳಾ ಕಾನ್ಸ್ಟೆಬಲ್ ಎ ರಾಜ್ಯಲಕ್ಷ್ಮಿ ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಹೈದರಾಬಾದ್ ನ ನಿಲೋಫರ್ ಆಸ್ಪತ್ರೆಯಲ್ಲಿ ಮಹಿಳೆ ಆರೋಗ್ಯವಂತ ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ. ಗರ್ಭಿಣಿಗೆ ಹೆರಿಗೆ ನೋವು ಬಂದು ಹೆರಿಗೆ ಸಮಯದಲ್ಲಿ ಮಹಿಳೆಯ ಪಕ್ಕದಲ್ಲಿ ಕುಳಿತಿದ್ದ ರಾಜ್ಯಲಕ್ಷ್ಮಿ ಮಗು ಜನಿಸಿದಾಗ ಭಾವಪರವಶಳಾಗಿ ಕಣ್ಣೀರು ಬಂತು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಘಟನೆ ಆಗಿದ್ದೇನು?: ನಿನ್ನೆ ಗುರುವಾರ ಸಂಜೆ ನರಸಿಂಗಿ ಸರ್ಕಾರಿ ಆಸ್ಪತ್ರೆ ಬಳಿ ತುಂಬು ಗರ್ಭಿಣಿಯೊಬ್ಬರು ರಸ್ತೆಯಲ್ಲಿ ಬಿದ್ದಿರುವ ಬಗ್ಗೆ ಗ್ರೇಹೌಂಡ್ಸ್ ವಿಭಾಗಕ್ಕೆ ನಿಯೋಜಿಸಲಾದ ಕಾನ್‌ಸ್ಟೆಬಲ್ ನರಸಿಂಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿದ್ದ 2020ನೇ ಬ್ಯಾಚ್‌ನ ಕಾನ್‌ಸ್ಟೆಬಲ್ ರಾಜ್ಯಲಕ್ಷ್ಮಿ ಕೂಡಲೇ ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ 108 ಆಂಬುಲೆನ್ಸ್ ಕೂಡ ಸ್ಥಳಕ್ಕೆ ಬಂದಿತು. ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ನಿಲೋಫರ್ ಆಸ್ಪತ್ರೆಗೆ ಸಾಗಿಸಲಾಯಿತು.
ನಿನ್ನೆ ಸಾಯಂಕಾಲ 6.30ರ ಸುಮಾರಿಗೆ ಗರ್ಭಿಣಿ ಹೆರಿಗೆ ನೋವು ಕಾಣಿಸಿಕೊಂಡು ಸಹಜವಾಗಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಗರ್ಭಿಣಿಯನ್ನು ಕರೆತರುವಲ್ಲಿ ತಡವಾಗಿದ್ದರೆ ತಾಯಿ-ಮಗು ಇಬ್ಬರ ಆರೋಗ್ಯಕ್ಕೂ ಅಪಾಯವಿತ್ತು ಎಂದು ನಿಲೋಫರ್ ಆಸ್ಪತ್ರೆಯ ವೈದ್ಯರು ಹೇಳುತ್ತಾರೆ.
ಮಹಿಳೆಯನ್ನು ಸರಿತಾ ಎಂದು ಗುರುತಿಸಲಾಗಿದ್ದು ತಾನು ಇತ್ತೀಚೆಗೆ ತನ್ನ ಪತಿ ರಮೇಶ್ ನನ್ನು ಕಳೆದುಕೊಂಡೆ. ಚಿಲ್ಕೂರ್ ನವಳಾದ ತಾನು ವಿಕರಾಬಾದ್ ಜಿಲ್ಲೆಯ ಕೊಡಂಗಲ್ ನ ರಮೇಶ್ ಎಂಬಾತನನ್ನು ಮದುವೆಯಾದೆ. ಈಗಾಗಲೇ ತನಗೆ ಇಬ್ಬರು ಮಕ್ಕಳಿದ್ದು ಅತ್ತೆ-ಮಾವನ ಜೊತೆ ನೆಲೆಸಿದ್ದಾರೆ ಎಂದು ಹೇಳಿದ್ದಾರೆ. ನಿನ್ನೆ ಸಾಯಂಕಾಲ ಇಲ್ಲಿಗೆ ರಸ್ತೆಬದಿ ಬಂದು ಬಿದ್ದಿದ್ದು ಹೇಗೆ ಎಂಬ ಬಗ್ಗೆ ಆಕೆಗೆ ಹೇಳಲು ಸಾಧ್ಯವಾಗುತ್ತಿಲ್ಲ.