ನಶಿಸುತ್ತಿರುವ ಕಲೆ: ಕೊಡವರ ಸಾಂಪ್ರದಾಯಿಕ ಡ್ರಮ್ 'ದುಡಿ' ತಯಾರಿಕೆ ಕುರಿತ ಒಂದು ವಿಶೇಷ ವರದಿ
ಸಾಂಪ್ರದಾಯಿಕ 'ದುಡಿ'ಗಳು ಸಮುದಾಯದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದರೂ, ದುಡಿಗಳನ್ನು ಮಾಡುವ ಕಲೆ ನಿಧಾನವಾಗಿ ನಶಿಸುತ್ತಿದೆ. ಇಂದು ಬೆರಳೆಣಿಕೆಯಷ್ಟು ಕುಶಲಕರ್ಮಿಗಳು ಮಾತ್ರ ಈ ವಿಶಿಷ್ಟ ಡೋಲುಗಳನ್ನು ತಯಾರಿಸುತ್ತಿದ್ದಾರೆ.
Published: 06th March 2022 11:41 AM | Last Updated: 07th March 2022 03:48 PM | A+A A-

ಕೊಡವರ ಸಾಂಪ್ರಾದಾಯಿಕ ಡೋಲು ದುಡಿ
ಮಡಿಕೇರಿ: ಕೊಡವರ ಹಬ್ಬ, ಹರಿದಿನ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಸಾಂಪ್ರಾದಾಯಿಕ ಡೋಲು 'ದುಡಿ'ಯ ನಿನಾದ ಕೊಡಗು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕೇಳಿಬರುತ್ತದೆ. ಲೋಹದ ಬೇಸ್ ಮತ್ತು ಪ್ರಾಣಿಗಳ ಚರ್ಮದೊಂದಿಗೆ ಮಾಡಲಾದ ಈ ಸಣ್ಣ ಡೋಲುಗಳಿಗೆ ಕೊಡವರ ಧಾರ್ಮಿಕ ಆಚರಣೆ ಸಂದರ್ಭಗಳಲ್ಲಿ ವಿಶೇಷ ಸ್ಥಾನವಿದೆ. ಸಾಂಪ್ರಾದಾಯಿಕ ವೇಷಭೂಷಣ ತೊಟ್ಟ ಕೊಡವರು, ಸಣ್ಣ ಡೋಲುಗಳನ್ನು ನುಡಿಸುವ ಮೂಲಕ ನರ್ತಿಸಿ ಖುಷಿಪಡುತ್ತಾರೆ.
ಸಾಂಪ್ರದಾಯಿಕ 'ದುಡಿ'ಗಳು ಸಮುದಾಯದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದರೂ, ದುಡಿಗಳನ್ನು ಮಾಡುವ ಕಲೆ ನಿಧಾನವಾಗಿ ನಶಿಸುತ್ತಿದೆ. ಇಂದು ಬೆರಳೆಣಿಕೆಯಷ್ಟು ಕುಶಲಕರ್ಮಿಗಳು ಮಾತ್ರ ಈ ವಿಶಿಷ್ಟ ಡೋಲುಗಳನ್ನು ತಯಾರಿಸುತ್ತಿದ್ದಾರೆ. ಅವರಲ್ಲಿ ವೃದ್ದ ಸುಬ್ಬಯ್ಯ.ಯು ಕೂಡಾ ಒಬ್ಬರು. ದುಡಿಗಳ ತಯಾರಿಕೆ ಕುರಿತಂತೆ ವಿವರಿಸಿದ ಸುಬ್ಬಯ್ಯ, ಹಿಂದೆ ಸಿಂಗಳೀಕಗಳ ಚರ್ಮದಿಂದ ದುಡಿ ಮಾಡುತ್ತಿದ್ದೆ. ಆದರೆ ಈಗ ಸಿಂಗಳೀಕ ಭೇಟೆಯನ್ನು ನಿರ್ಬಂಧಿಸಿರುವುದರಿಂದ ಮೇಕೆಯ ಚರ್ಮವನ್ನು ಬಳಸುತ್ತಿರುವುದಾಗಿ ತಿಳಿಸಿದರು.
ಕುಶಲಕರ್ಮಿಗಳು ಮೊದಲಿಗೆ ಮಾಂಸದ ಅಂಗಡಿಗಳಿಂದ ಸುಮಾರು 350 ರೂ.ಗಳಿಗೆ ಚರ್ಮ ಖರೀದಿಸುತ್ತಾರೆ. ಅನಂತರ ಡ್ರಮ್ ಮಾಡುವ ಸಂಕೀರ್ಣವಾದ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಮೊದಲ ಕಠಿಣ ಕೆಲಸವೆಂದರೆ ಮೇಕೆ ಚರ್ಮದಿಂದ ಕೂದಲು ತೆಗೆಯುವುದು. ಈ ಕೆಲಸಕ್ಕೆ ಬ್ಲೇಡ್ಗಳನ್ನು ಬಳಸಲಾಗದು, ಏಕೆಂದರೆ ಅದು ಚರ್ಮವನ್ನು ಹಾನಿಗೊಳಿಸುತ್ತದೆ. ಕೂದಲನ್ನು ತೆಗೆದುಹಾಕಲು ನಾವು ಕಲ್ಲುಗಳಂತೆ ಮೇಲ್ಮೈ ಗಟ್ಟಿಯಾಗುವಂತೆ ಚರ್ಮವನ್ನು ಉಜ್ಜುತ್ತೇವೆ ಮತ್ತು ನಂತರ ಅದನ್ನು ಡೋಲು ಗಾತ್ರಕ್ಕೆ ಕತ್ತರಿಸುತ್ತೇವೆ. ದುಡಿ ಮಾಡಲು ಎರಡು ಚರ್ಮ ಬೇಕು ಎಂದು ಸುಮಾರು ಮೂರು ದಶಕಗಳಿಂದ ದುಡಿಯನ್ನು ತಯಾರಿಸುತ್ತಿರುವ ಮತ್ತೊಬ್ಬ ಕುಶಲಕರ್ಮಿ 65ರ ಹರೆಯದ ಕೆ.ಎ.ಗಣಪತಿ ಹೇಳುತ್ತಾರೆ.
ಹಿಂದೆ ವನವಾಸಿಗಳು ಮನರಂಜನೆಗಾಗಿ ದುಡಿಯನ್ನು ತಯಾರಿಸುತ್ತಿದ್ದರು. ಕಾಡಿನಲ್ಲಿ ಪ್ರತಿಧ್ವನಿಸುವ ಮರಕುಟಿಗದ ಧ್ವನಿಯನ್ನು ಅನುಕರಿಸಲು ಅವರು ಬಯಸಿದ್ದರು ಎಂದು ಹೇಳಲಾಗಿದೆ. ಮೊದಲು ಸಿಂಗಳೀಕದ ಚರ್ಮ ಹಾಗೂ ಮರದ ತೊಗಟೆಗಳನ್ನು ದುಡಿ ತಯಾರಿಸಲು ಬಳಸಲಾಗುತಿತ್ತು ಎಂದು ಇತಿಹಾಸಕಾರ ಬಾಚರಣಿಯಂಡ ಅಪ್ಪಣ್ಣ ಇವುಗಳ ಇತಿಹಾಸ ಕುರಿತಂತೆ ಮಾಹಿತಿ ನೀಡಿದ್ದಾರೆ. ಗಿಡದ ನಾರುಗಳಿಂದ ಮಾಡಿದ ಹಗ್ಗಗಳನ್ನು ಡ್ರಮ್ ಸುತ್ತಲೂ ಹಾಕಲಾಗುತಿತ್ತು ಮತ್ತು ಮರಕುಟಿಗದ ಧ್ವನಿಯನ್ನು ಅನುಕರಿಸಲು ಬೆತ್ತಗಳನ್ನು ಬಳಸಲಾಯಿತು. ಕ್ರಮೇಣ, ಮರದ ಬದಲಿಗೆ ಕಂಚು ಮತ್ತು ತಲೆಗೆ ಮೇಕೆ ಚರ್ಮವನ್ನು ಬದಲಾಯಿಸಲಾಯಿತು ಎಂದು ಅವರು ವಿವರಿಸಿದರು.
ಸ್ವಚ್ಛಗೊಳಿಸಿದ ಮೇಕೆ ಚರ್ಮವನ್ನು ಮೊದಲು ನೀರಿನಲ್ಲಿ ನೆನೆಸಿ ನಂತರ ಒಂದು ಗಂಟೆ ಕಾಲ ಪಾತ್ರೆಯಲ್ಲಿಡಲಾಗುತ್ತದೆ. ನಂತರ ಹವರ್-ಗ್ಲಾಸ್ ಆಕಾರದ ಮೆಟಲ್ ಬೇಸ್ ಮೇಲೆ ಇರಿಸಲಾಗುತ್ತದೆ. ಸಸ್ಯದ ನಾರುಗಳನ್ನು ಬಳಸಿ ರಚಿಸಲಾದ ಚರ್ಮದ ಮೇಲೆ ಮತ್ತು ಲೋಹದ ತಳದ ಸುತ್ತ ರಂದ್ರವನ್ನು ಹಾಕಲಾಗುತ್ತದೆ. ನಂತರ ಅವುಗಳನ್ನು ಹಗ್ಗಗಳಿಂದ ಹೊಲಿಯಲಾಗುತ್ತದೆ, ಇದು ಮೊದಲು ಸಸ್ಯ ಆಧಾರಿತವಾಗಿತ್ತು ಆದರೆ ಈಗ ನೈಲಾನ್ನಿಂದ ಮಾಡಲ್ಪಟ್ಟಿದೆ. ನಂತರ ಹಗ್ಗಗಳನ್ನು ಎಚ್ಚರಿಕೆಯಿಂದ ದುಡಿಯ ಸುತ್ತಲೂ ಬಿಗಿಗೊಳಿಸಲಾಗುತ್ತದೆ. ದುಡಿಯ ಎರಡು ಬದಿಗಳು ಸ್ವಲ್ಪ ವಿಭಿನ್ನವಾದ ಧ್ವನಿಯನ್ನು ನೀಡುತ್ತವೆ ಮತ್ತು ಅವುಗಳನ್ನು ಗಂಡು ಮತ್ತು ಹೆಣ್ಣು ಶಬ್ದ ಎಂದು ಪ್ರತ್ಯೇಕಿಸಲಾಗಿದೆ ಎಂದು ಗಣಪತಿ ತಿಳಿಸಿದರು.
ದುಡಿಯ ಕುಶಲಕರ್ಮಿಗಳಿಗೆ ಇಂದಿಗೂ ಅವರ ವಿಶೇಷ ಕೆಲಸಕ್ಕಾಗಿ ಬೇಡಿಕೆ ಇದೆ. ಆದರೆ ಕಲೆ ಶೀಘ್ರದಲ್ಲೇ ನಶಿಸಿಹೋಗಬಹುದು. ಕೊಡವರ ಮದುವೆ, ಹಬ್ಬ ಹರಿದಿನಗಳು ಮತ್ತು ಅಂತ್ಯಕ್ರಿಯೆಯ ಸಂದರ್ಭದಲ್ಲಿಯೂ ದುಡಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದಾಗ್ಯೂ, ಈ ಸಾಂಪ್ರದಾಯಿಕ ಉಪಕರಣಗಳನ್ನು ಈಗ ಸಾಮೂಹಿಕ ಉತ್ಪಾದನಾ ಕೇಂದ್ರಗಳಿಂದ ಪಡೆಯಲಾಗುತ್ತಿದೆ.
ದುಡಿಯನ್ನು ಮಾಡಲು ಸಾಕಷ್ಟು ಶ್ರಮ ಪಡುವ ಹಳೆ ಕಾಲದ ಕುಶಲಕರ್ಮಿಗಳು ಒಂದು ದುಡಿಗೆ 500 ರಿಂದ 700 ರೂ.ವರೆಗೆ ಬೆಲೆ ಕೇಳುತ್ತಾರೆ ಮತ್ತು ಹಳೆಯದನ್ನು ರಿಪೇರಿ ಮಾಡಿಕೊಡಲು ಸಿದ್ಧರಿದ್ದಾರೆ. ಬುಡಕಟ್ಟು ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಿರುವ ಈ ಕುಶಲಕರ್ಮಿಗಳ ನಶಿಸುತ್ತಿರುವ ಕಲೆಯನ್ನು ಪುನರುಜ್ಜೀವನಗೊಳಿಸಲು ಸಾಮಾಜಿಕ ಪ್ರಯತ್ನದ ಜೊತೆಗೆ ಸರ್ಕಾರದ ಪ್ರತ್ನವೂ ಸಹಕಾರಿ.