
- ಗಿರೀಶ್ ಲಿಂಗಣ್ಣ
ರಕ್ಷಣಾ ವಿಶ್ಲೇಷಕ
ಶಕ್ತಿಶಾಲಿ ರಾಷ್ಟ್ರವೇ ಒಂದು ದುರ್ಬಲ ದೇಶದ ವಿರುದ್ಧದ ಯುದ್ಧದಲ್ಲಿ ಗೆಲ್ಲಬೇಕು ಎನ್ನುವ ನಿಯಮ ಎಲ್ಲಾದರೂ ಇದೆಯೇ? ಎರಡನೇ ವಿಶ್ವ ಸಮರದ ಬಳಿಕ ಅನೇಕ ಶಕ್ತಿಶಾಲಿ ರಾಷ್ಟ್ರಗಳು ತಮ್ಮ ದುರ್ಬಲ ಗುರಿಗಳ ವಿರುದ್ಧ ತಮ್ಮ ಮಿಲಿಟರಿ ಯುದ್ಧಗಳನ್ನು ಕಳೆದುಕೊಂಡಿವೆ. ಎರಡು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸುತ್ತಿರುವ ದುಸ್ಸಾಹಸಗಳು ಮತ್ತು ಅದರ ಪರಿಣಾಮಗಳು ಒಂದು ಅತ್ಯುತ್ತಮ ಉದಾಹರಣೆಯಾಗಿದೆ. 1991ರಲ್ಲಿ ನಡೆದ ಗಲ್ಫ್ ಯುದ್ಧವನ್ನು ಹೊರತುಪಡಿಸಿ, ಯಾವುದೇ ಶಕ್ತಿಯ ವಿರುದ್ಧ ಗಮನಾರ್ಹ ವಿಜಯವನ್ನು ಸಾಧಿಸಲು ಅಮೆರಿಕವು ವಿಫಲವಾಗಿದೆ. ಅಫ್ಘಾನಿಸ್ತಾನದ ಹೊರತಾಗಿ ಕೊರಿಯಾ, ವಿಯೆಟ್ನಾಂ ಮತ್ತು ಇರಾಕ್ನಲ್ಲೂ ಅದರ ಬಂದೂಕುಗಳು ಗೆಲುವು ಸಾಧಿಸಲಿಲ್ಲ.
2021ರಲ್ಲಿ ಬಿಡುಗಡೆಯಾದ ತಮ್ಮ ಪುಸ್ತಕ "ದಿ ಅಮೇರಿಕನ್ ವಾರ್ ಇನ್ ಅಫ್ಘಾನಿಸ್ತಾನ್ - ಎ ಹಿಸ್ಟರಿ"ಯಲ್ಲಿ, ಇತಿಹಾಸಕಾರ ಮತ್ತು ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡಿದ ಅಮೆರಿಕದ ಸೇನಾ ಕಮಾಂಡರ್ನ ಮಾಜಿ ಸಲಹೆಗಾರ ಕಾರ್ಟರ್ ಮಲ್ಕಾಸಿಯನ್ ಅವರು 1945ರಿಂದಲೂ ಅಮೆರಿಕವು ಸೋಲುತ್ತ ಬಪರಲು ಕಾರಣವಾದ ಕೆಲವು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಸ್ಥಳೀಯ ಉಗ್ರಗಾಮಿಗಳನ್ನು ಎದುರಿಸಲಾಗದೆ ಅಮೆರಿಕವು ಯುದ್ಧಗಳನ್ನು ಕಳೆದುಕೊಂಡಿದೆ ಎಂದು ಲೇಖಕರು ಹೇಳುತ್ತಾರೆ. ಸ್ಥಳೀಯ ಬಂಡುಕೋರರು ಅಮೆರಿಕದ ಸೇನೆಯಂತೆ ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ. ಆದರೆ ಬದ್ಧತೆ, ನಿರ್ಣಯ ಮತ್ತು ಧೈರ್ಯದಲ್ಲಿ ಅವರು ಅಮೆರಿಕದ ಮಿಲಿಟರಿ ಶಕ್ತಿಯನ್ನೂ ಮೀರಿಸಿದ್ದರು.
ಜಾರ್ಜಿಯಾ ವಿಶ್ವವಿದ್ಯಾನಿಲಯದ ರಾಜಕೀಯ ವಿಜ್ಞಾನಿ ಪೆಟ್ರೀಷಿಯಾ ಸುಲ್ಲಿವಾನ್ ಅವರು ಸಂಶೋಧನೆ-ಬೆಂಬಲಿತ ಅಧ್ಯಯನವೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಹೀಗೆ ಹೇಳುತ್ತಾರೆ: ಎರಡನೇ ಮಹಾಯುದ್ಧದ ಅನಂತರ 122 ಯುದ್ಧಗಳು ಮತ್ತು ಮಿಲಿಟರಿ ಹಸ್ತಕ್ಷೇಪಗಳಲ್ಲಿ ಅಮೆರಿಕ, ಸೋವಿಯತ್ ಒಕ್ಕೂಟ, ಚೀನಾ, ಯುಕೆ ಮತ್ತು ಫ್ರಾನ್ಸ್ ದುರ್ಬಲ ಎದುರಾಳಿಗಳೊಂದಿಗೆ ಹೋರಾಡಿದವು. ಈ ಪೈಕಿ 39% ಸಂದರ್ಭಗಳಲ್ಲಿ ದೊಡ್ಡ ದೇಶಗಳು ಕೈ ಸುಟ್ಟುಕೊಂಡವು. ತಾನು ನಡೆಸಿದ 34 ಮಿಲಿಟರಿ ಹಸ್ತಕ್ಷೇಪಗಳ ಪೈಕಿ 10ರಲ್ಲಿ ಅಮೆರಿಕ ಪಲಾಯನ ಮಾಡಿದೆ. ಬಂದೂಕುಗಳೇ ಪ್ರಮುಖವಾದಾಗ, ದೊಡ್ಡ ದೇಶಗಳು ಗೆಲ್ಲುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಆದರೆ, ಅಂತಿಮ ಉದ್ದೇಶವು ಗುರಿಯನ್ನು ಸಾಧಿಸುವುದು ಮತ್ತು ಅದನ್ನು ತನ್ನ ದಾರಿಗೆ ತರುವುದು ಆಗಿದ್ದಾಗ, ವೈಫಲ್ಯ ಸಂಭವಿಸುವುದು ನಿಶ್ಚಿತ.
ಈ ವರ್ಷದ ಫೆಬ್ರವರಿ 23ರಂದು ಉಕ್ರೇನ್ ವಿರುದ್ಧ ರಷ್ಯಾ ಆರಂಭಿಸಿರುವ ಯುದ್ಧಕ್ಕೆ ಸದ್ಯ ಯಾವುದೇ ಬಿಡುವು ಇಲ್ಲದಂತಾಗಿದೆ. ಆಕ್ರಮಣ ಮಾಡಿರುವ ರಷ್ಯಾ ಸೈನ್ಯದ ವಿರುದ್ಧ ಹೋರಾಡಲು ಉಕ್ರೇನ್ಗೆ ಯಾವುದೇ ಉಗ್ರಗಾಮಿಗಳು ಅಥವಾ ಅಲ್ಟ್ರಾಗಳಿಲ್ಲ. ರಷ್ಯಾ ಕೂಡ ಆರ್ಥಿಕವಾಗಿ ಬಲಿಷ್ಠವಲ್ಲದಿದ್ದರೂ, ಅದಕ್ಕೆ ಹೋಲಿಸಿದರೆ ಉಕ್ರೇನ್ ತುಂಬ ದುರ್ಬಲ ದೇಶವಾಗಿದೆ. ಲಂಡನ್ನ ಚಿಂತಕರ ಚಾವಡಿಯಾದ ಕಾರ್ಯತಂತ್ರಗಳ ಅಧ್ಯಯನಗಳ ಅಂತಾರಾಷ್ಟ್ರೀಯ ಸಂಸ್ಥೆಯ ಪ್ರಕಾರ, ಉಕ್ರೇನ್ ಕೇವಲ 2.09 ಲಕ್ಷ ಸೈನಿಕರನ್ನು ಹೊಂದಿದ್ದರೆ, ರಷ್ಯಾದ ಯೋಧರ ಸಂಖ್ಯೆ 9 ಲಕ್ಷ ದಾಟುತ್ತದೆ. ಆದರೆ. ಉಕ್ರೇನ್ ಸೈನಿಕರ ಸಂಖ್ಯೆಯು ಇತ್ತೀಚಿನ ನೇಮಕಾತಿಗಳನ್ನು ಒಳಗೊಂಡಿಲ್ಲ.
ಉಕ್ರೇನ್ ಆರ್ಥಿಕವಾಗಿ ವಿಫಲವಾದ ಹಾಗೂ ಮಧ್ಯಮ-ಆದಾಯವಿರುವ ದೇಶವಾಗಿದ್ದು, ಸೋವಿಯತ್ ಒಕ್ಕೂಟದ ಮಹಾಪತನದ ಬಳಿಕ ಅದರ ಜಿಡಿಪಿ ತಲಾ $ 13,000 ರಷ್ಟಿದೆ. ವಿಶ್ವಬ್ಯಾಂಕ್ ಹೇಳುವಂತೆ, 1990ರ ಸ್ಥಿತಿಗೆ ಹೋಲಿಸಿದರೆ ಉಕ್ರೇನ್ ಈಗ 20% ಹೆಚ್ಚು ಬಡ ರಾಷ್ಟ್ರವಾಗಿದೆ. ಅದರೂ, ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಪೋಲೆಂಡ್, ಟರ್ಕಿ ಮತ್ತು ರೊಮೇನಿಯಾ $ 35,000 ವ್ಯಾಪ್ತಿಯಲ್ಲಿ ಪ್ರಭಾವಶಾಲಿ ಜಿಡಿಪಿ ಹೊಂದಿವೆ. ಉಕ್ರೇನ್ ಏಕೆ ಆರ್ಥಿಕ ವೈಫಲ್ಯ ಅನುಭವಿಸಿತು ಎನ್ನುವುದಕ್ಕೆ ತಜ್ಞರು ಅನೇಕ ಅಂಶಗಳನ್ನು ಸೂಚಿಸುತ್ತಾರೆ. ಅವುಗಳಲ್ಲಿ ಉತ್ತಮ ವಿದೇಶಾಂಗ ನೀತಿಯ ಕೊರತೆ, ಭ್ರಷ್ಟಾಚಾರ, ದಶಕಗಳಿಂದ ಅಧಿಕ ಹಣದುಬ್ಬರ, ಹದಗೆಟ್ಟಿರುವ ಸೂಕ್ಷ್ಮ ಆರ್ಥಿಕತೆ, ಕೈತಪ್ಪಿರುವ ರಫ್ತು ಅವಕಾಶಗಳು, ಉತ್ಪಾದನಾ ವಲಯದಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡದಿರುವುದು ಮತ್ತು 2007ರಿಂದ ರಷ್ಯಾದಿಂದ ಅಗ್ಗದ ಅನಿಲ ಪೂರೈಕೆ ಸ್ಥಗಿತಗೊಂಡಿರುವುದು ಪ್ರಮುಖ ಕಾರಣಗಳಾಗಿವೆ. ಉಕ್ರೇನ್ ಆರ್ಥಿಕವಾಗಿ ಪ್ರಬಲವಾಗಿದ್ದರೆ, ಕಾರ್ಯಸೂಚಿಯಂತೆ ಅದು ಅಭಿವೃದ್ಧಿಯನ್ನು ಹೊಂದಿರುತ್ತಿತ್ತು. ಯುರೋಪಿಯನ್ ಯೂನಿಯನ್ ಜತೆಗಿದ್ದರೂ ದೇಶವು ಅಭಿವೃದ್ಧಿಯ ವಿಷಯದಲ್ಲಿ ಅಂತಹ ಅದ್ಭುತ ಪ್ರಗತಿಯನ್ನೇನೂ ಸಾಧಿಸಿಲ್ಲ.
ಲಭ್ಯವಿರುವ ಉಚಿತ ಮತ್ತು ಮುಕ್ತ ದತ್ತಾಂಶದ ಅನುಸಾರ, ತನ್ನ ಮಿಲಿಟರಿ ಶಕ್ತಿಯನ್ನು ಬಲಪಡಿಸುವುದು ಉಕ್ರೇನ್ನ ಆದ್ಯತೆಯಾಗಿದೆ. ಸ್ಟಾಕ್ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನ ಸಂಸ್ಥೆ (SIPRI) ವರದಿಯ ಪ್ರಕಾರ, 2020ರಲ್ಲಿ ದೇಶವು ಒಟ್ಟು ದೇಶೀಯ ಉತ್ಪನ್ನದ 4.1% ಅನ್ನು ಸೇನಾ ಬಜೆಟ್ ಆಗಿ ಮೀಸಲಿಟ್ಟಿದೆ, ರಷ್ಯಾವು ಸೇನಾ ಬಜೆಟ್ ಪಾಲು 4.3% ಆಗಿದೆ. ಅಮೆರಿಕವು ಸೇನೆಗಾಗಿ 3.7% ಖರ್ಚು ಮಾಡುತ್ತಿದ್ದರೆ, ಭಾರತವು 2.9% ವೆಚ್ಚ ಮಾಡುತ್ತಿದೆ.
ತನ್ನ ಬಹುಪಾಲು ಭೂಮಿಯನ್ನು ರಷ್ಯಾಕ್ಕೆ ಕಳೆದುಕೊಳ್ಳುವ ಭಯದಲ್ಲಿ ಉಕ್ರೇನ್ ತನ್ನ ಸೇನಾ ವೆಚ್ಚವನ್ನು ಹೆಚ್ಚಿಸಿಕೊಂಡಿದೆ. 2014ರಲ್ಲಿ ರಷ್ಯಾವು ಸದ್ದಿಲ್ಲದೆ ಆಕ್ರಮಣ ಮಾಡಿ, ಉಕ್ರೇನ್ ನಗರವಾದ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡ ಮೇಲೆ ಈ ಭಯವು ತೀವ್ರಗೊಂಡಿದೆ. ಉಕ್ರೇನ್ ಸ್ವತಃ ರಷ್ಯಾ ಪರ ಮತ್ತು ವಿರೋಧಿ ಪ್ರತ್ಯೇಕತಾವಾದಿಗಳ ನಡುವೆ ಸಿಲುಕಿಕೊಂಡಿದೆ. ಇದರಿಂದಾಗಿ ಕೈವ್ (ಉಕ್ರೇನ್ ರಾಜಧಾನಿ) ತನ್ನ ದೇಶದ ರಕ್ಷಣಾ ಬಜೆಟ್ ಅನ್ನು ದ್ವಿಗುಣಗೊಳಿಸಿದೆ. ಹಾಗಾಗಿ, ಮಿಲಿಟರಿ ಶಕ್ತಿಯ ದೃಷ್ಟಿಯಿಂದ ಉಕ್ರೇನ್ ದುರ್ಬಲ ದೇಶವೆಂದು ಯಾರಾದರೂ ಊಹಿಸಿದರೆ, ಅದು ತಪ್ಪಾಗಿದೆ.
ಶಸ್ತ್ರಾಸ್ತ್ರಗಳ ಸಂಗ್ರಹ:
ಪಾಶ್ಚಿಮಾತ್ಯ ದೇಶಗಳು ಪೂರೈಸಿರುವ ಕ್ಷಿಪಣಿಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಉಕ್ರೇನ್ ಸಂಗ್ರಹಿಸುತ್ತಿದೆ. ಹಿಂದಿನ ಸೋವಿಯತ್ ಒಕ್ಕೂಟದ ಬೂದಿಯಿಂದ ಸೃಷ್ಟಿಯಾಗಿರುವ ಅರ್ಮೇನಿಯಾದಿಂದ ಉಜ್ಬೆಕಿಸ್ತಾನದ ವರೆಗೆ ತನ್ನ 15 ಸದಸ್ಯ ರಾಷ್ಟ್ರಗಳನ್ನು ಈಗ ಉಕ್ರೇನ್ ಮೇಲೆ ದಾಳಿ ಮಾಡಿರುವಂತೆ ರಷ್ಯಾ ಹಂತ ಹಂತವಾಗಿ ಗುರಿಯಾಗಿಸಿಕೊಳ್ಳಬಹುದು ಎಂದು ಯುರೋಪಿಯನ್ ಒಕ್ಕೂಟ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಇದೇ ಕಾರಣಕ್ಕಾಗಿ ಜಗತ್ತಿನ ಹಲವಾರು ದೇಶಗಳು ಕೈವ್ಗೆ ಮಿಲಿಟರಿ ಸಹಾಯವನ್ನು ಕಳುಹಿಸುತ್ತಿವೆ.
ಒಂದೇ ಕ್ಷಣದಲ್ಲಿ, ಅಮೆರಿಕವು ಉಕ್ರೇನ್ ರಕ್ಷಣೆಗಾಗಿ $ 350 ಮಿಲಿಯನ್ ನಿಧಿಯನ್ನು ಘೋಷಿಸಿತು. ಶಸ್ತ್ರಾಸ್ತ್ರಗಳ ಖರೀದಿಗೆ $ 502 ಮಿಲಿಯನ್ ಹಣವನ್ನು ಉಕ್ರೇನ್ಗೆ ನೀಡಿ ಸಹಾಯ ಮಾಡುವ ಮೂಲಕ ಇಯು ಇತಿಹಾಸವನ್ನು ಸೃಷ್ಟಿಸಿದೆ. ಯುನೈಟೆಡ್ ಕಿಂಗ್ಡಮ್ ಹಗುರವಾದ ಶಸ್ತ್ರಾಸ್ತ್ರ-ವಿರೋಧಿ ರಕ್ಷಣಾತ್ಮಕ ವ್ಯವಸ್ಥೆಗಳನ್ನು ಪೂರೈಸಿದೆ. ಫ್ರಾನ್ಸ್ ದೇಶವು ಇಂಧನದ ಜತೆಗೆ ಮಿಲಿಟರಿ ಉಪಕರಣಗಳ ರವಾನೆಯನ್ನೂ ಘೋಷಿಸಿತು. ಶಸ್ತ್ರಾಸ್ತ್ರಗಳ ವಿಷಯದಲ್ಲಿ ಉಕ್ರೇನ್ ಅನ್ನು ಬಲಪಡಿಸಲು ನೆದರ್ಲ್ಯಾಂಡ್ಸ್, ಜರ್ಮನಿ, ಕೆನಡಾ, ಸ್ವೀಡನ್, ಫಿನ್ಲೆಂಡ್, ಬೆಲ್ಜಿಯಂ, ಸ್ಪೇನ್, ರೊಮೇನಿಯಾ, ಗ್ರೀಸ್ ಮುಂತಾದ ದೇಶಗಳು ಸೇರಿಕೊಂಡಿವೆ. ನ್ಯಾಟೋ ಮತ್ತು ಇತರ ವಿಶ್ವ ಶಾಂತಿ-ಪಾಲನಾ ಸಂಸ್ಥೆಗಳು ರೂಪಿಸಿರುವ ತಟಸ್ಥ ನೀತಿಗಳನ್ನು ಉಲ್ಲಂಘಿಸಿ ಈ ಎಲ್ಲ ಮತ್ತು ಇನ್ನಷ್ಟು ಸರಬರಾಜುಗಳು ತೀವ್ರವಾದ ವೇಗದಲ್ಲಿ ಉಕ್ರೇನ್ನತ್ತ ಚಲಿಸುತ್ತಿವೆ. ನಿರ್ಬಂಧಗಳ ಮಳೆಗೆ ಸಿಲುಕಿರುವ ವ್ಲಾಡಿಮಿರ್ ಪುಟಿನ್, ಉಕ್ರೇನ್ನಲ್ಲಿ ಪಾಶ್ಚಿಮಾತ್ಯ ದೇಶಗಳಿಂದ ಪೂರೈಕೆಯಾಗುತ್ತಿರುವ ಶಸ್ತ್ರಾಸ್ತ್ರಗಳನ್ನು ಗುರಿಯಾಗಿಸಿ ತಮ್ಮ ಮಿಲಿಟರಿ ಪಡೆಗಳು ದಾಳಿ ಮಾಡುತ್ತವೆಂದು ಬೆದರಿಕೆ ಹಾಕಿದ್ದಾರೆ.
ಉಕ್ರೇನಿಯನ್ನರು ಮತ್ತು ಅವರನ್ನು ಬೆಂಬಲಿಸುವವರ ನೈತಿಕತೆ ತುಂಬಾ ಉನ್ನತ ಮಟ್ಟದಲ್ಲಿದೆ ಎಂದು ವರದಿಯಾಗಿದೆ. ಆದರೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ವಿದೇಶಿ ಹೋರಾಟಗಾರರು, ಉಕ್ರೇನ್ ಜತೆ ಸೇರಿ, ತಮ್ಮ ದೇಶಕ್ಕಾಗಿ ಹೋರಾಡಲು ಹೆಚ್ಚಿನ ಸಂಖ್ಯೆಯಲ್ಲಿ ಉಪಾಯದಿಂದ ಸೇನೆಯನ್ನು ಸೇರುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಉಕ್ರೇನ್ ನಿರಾಶ್ರಿತರನ್ನು ಸಾವಿರಾರು ಸಂಖ್ಯೆಯಲ್ಲಿ ಪೋಲೆಂಡ್ಗೆ ಕಳುಹಿಸಲಾಗುತ್ತಿರುವಾಗ, ಹೊರಗಿನಿಂದ ಹೊಸ ಸದಸ್ಯರು "ಉಕ್ರೇನ್ ಪ್ರತಿರೋಧ ಪಡೆ"ಗೆ ಸೇರುತ್ತಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಇಂಟರ್ನ್ಯಾಷನಲ್ ಲೀಜನ್ ಆಫ್ ಟೆರಿಟೋರಿಯಲ್ ಡಿಫೆನ್ಸ್ ನಲ್ಲಿ ಕನಿಷ್ಠ 16,000 ವಿದೇಶಿಗರು ನೋಂದಾಯಿಸಿಕೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಬೆಂಬಲ ನೀಡುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಮಾಡಿರುವ ಮನವಿಗೆ ಅಮೆರಿಕದ 3,000 ಸ್ವಯಂಸೇವಕರು ಪ್ರತಿಕ್ರಿಯಿಸಿದ್ದಾರೆ ಎಂದು ಅಮೆರಿಕವು ಹೇಳಿದೆ. ತರಬೇತಿ ಪಡೆಯದ ನಾಗರಿಕರು ಬಂದೂಕುಗಳನ್ನು ಹಿಡಿದು ಯುದ್ಧಭೂಮಿಗೆ ಹೇಗೆ ನುಗ್ಗಬಲ್ಲರು? ಮಿಲಿಟರಿ ಕಾರ್ಯಾಚರಣೆಯಲ್ಲಿ ವಿದೇಶಿಯರು ಸೇರಲು ಹೇಗೆ ಅವಕಾಶವಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಸರಿಯಾದ ಉತ್ತರವಿಲ್ಲ. ಹೌದು, ತಮ್ಮ ರಾಷ್ಟ್ರಕ್ಕಾಗಿ ಹೋರಾಡುವ ಛಲವು ಉಕ್ರೇನಿಯನ್ನರಲ್ಲಿ ಮೂಡಲು ಪುಟಿನ್ ಕಾರಣರಾಗಿದ್ದಾರೆ. ಪುಟಿನ್ ಒಬ್ಬರೇ ರಾಷ್ಟ್ರೀಯವಾದಿ ಅಲ್ಲ, ಅವರಿಗೆ ತಾವೇನೂ ಕಡಿಮೆಯಿಲ್ಲ ಎಂದು ಈ ಎಲ್ಲರೂ ತೋರಿಸಿದ್ದಾರೆ.
ಯುದ್ಧವನ್ನು ಸೋಲಲು ಅಥವಾ ಗೆಲ್ಲಲು, ಒಂದು ಅಂಶ ಕಾರಣವಾಗಲಿಕ್ಕಿಲ್ಲ. ಆಕ್ರಮಣದ ಆರಂಭದಿಂದಲೂ ಪುಟಿನ್ ತಪ್ಪು ಮಾಡಿದ್ದಾರೆ ಎಂದು ರಕ್ಷಣಾ ಪಂಡಿತರು ಹೇಳುತ್ತಿದ್ದಾರೆ. 2014ರಿಂದಲೂ ಮಿಲಿಟರಿ ಶಕ್ತಿಯನ್ನು ಬಲಪಡಿಸಿಕೊಳ್ಳುತ್ತಿರುವ ಉಕ್ರೇನ್ನ ಸಾಮರ್ಥ್ಯವನ್ನು ಪುಟಿನ್ ಅವರು ಕಡಿಮೆ ಮಟ್ಟದಲ್ಲಿ ಅಂದಾಜಿಸಿದ್ದಾರೆ. ರಷ್ಯಾದ ಮಿಲಿಟರಿಗೆ ಉಕ್ರೇನ್ನ ಈ ಹೊಸ ಅವತಾರ ಹೆಚ್ಚು ಪರಿಚಿತವಾಗಿಲ್ಲ.
ಪುಟಿನ್ ಅವರು ರಾಜಕೀಯ ವಿಜಯವನ್ನು ಸಾಧಿಸುವ ಉದ್ದೇಶದಿಂದ ನಗರಗಳನ್ನು ವಶಪಡಿಸಿಕೊಳ್ಳುತ್ತಿಲ್ಲ, ಆದರೆ ಅವು ಕ್ರಮೇಣ ಶರಣಾಗುವಂತೆ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸುವವರೂ ಇದ್ದಾರೆ. ನಾಗರಿಕ ಸಾವು-ನೋವುಗಳನ್ನು ಕಡಿಮೆ ಮಾಡಲು ಅವರು ಯುದ್ಧವನ್ನು ನಿಧಾನ ತಂತ್ರದಿಂದಲೇ ನಡೆಸುತ್ತಿದ್ದಾರೆ. ಸಂಘರ್ಷದ ಆರಂಭದಲ್ಲಿ, ಕಾರ್ಯತಂತ್ರದ ಭಾಗವಾಗಿ ಅವರು ಉಕ್ರೇನ್ನ ರೆಕ್ಕೆಗಳನ್ನು ಕತ್ತರಿಸಲು ಸಂವಹನ ವ್ಯವಸ್ಥೆಗಳು, ವಿದ್ಯುತ್ ಸರಬರಾಜು ನಿಲ್ಲಿಸಿದರಲ್ಲದೆ, ಪರಮಾಣು ಸ್ಥಾವರವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ, 1991ರಲ್ಲಿ ಅಮೆರಿಕವು ಕಾರ್ಪೆಟ್ ಬಾಂಬ್ ದಾಳಿ ಮಾಡಿದ್ದನ್ನು ಅನುಸರಿಸಿದ್ದರೆ, ರಷ್ಯಾ ಕೂಡ ಉಕ್ರೇನಿಯನ್ನರನ್ನು ಸಾಮೂಹಿಕವಾಗಿ ಹತ್ಯೆ ಮಾಡಬಹುದಿತ್ತು. ಆದರೆ. ಅಂತಹ ಮಾರ್ಗವನ್ನು ರಷ್ಯಾ ಆಯ್ದುಕೊಂಡಿಲ್ಲ. ಯುದ್ಧವು ಮೇ ತಿಂಗಳ ವರೆಗೆ ಮುಂದುವರಿಯಬಹುದು ಎಂದು ಇತ್ತೀಚೆಗೆ ರಷ್ಯಾದ ರಕ್ಷಣಾ ಪ್ರತಿನಿಧಿಯು ಘೋಷಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳಿಂದ ಹಿನ್ನಡೆ ಅನುಭವಿಸಿದ ಅವರು ಮತ್ತು ಅವರ ಪಡೆಗಳು ಅಂತಿಮವಾಗಿ ಉಕ್ರೇನ್ನಲ್ಲಿ ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳ ಸರಬರಾಜನ್ನು ಗುರಿಯಾಗಿಸಿಕೊಂಡವು. ರಷ್ಯಾವನ್ನು ಭೌಗೋಳಿಕವಾಗಿ ಮುಗಿಸಲು ಅಮೆರಿಕವು ಶಸ್ತ್ರಾಸ್ತ್ರಗಳ ಪೂರೈಕೆಗೆ ವ್ಯವಸ್ಥೆ ಮಾಡಿದೆ ಎಂಬ ಬಲವಾದ ಅಭಿಪ್ರಾಯವನ್ನು ಅವರು ಹೊಂದಿದ್ದಾರೆ.
ಬಂದೂಕುಗಳನ್ನು ಹಿಡಿದಿರುವ ಮಾತ್ರಕ್ಕೆ ಯಾವುದೇ ದೇಶಕ್ಕೆ ಯಶಸ್ಸು ಖಾತ್ರಿಯಾಗುಪುದಿಲ್ಲ. ಈ ಹಂತದಲ್ಲಿ ಪಾಶ್ಚಿಮಾತ್ಯ ದೇಶಗಳು ತೆಗೆದುಕೊಳ್ಳಲಿರುವ ನಿರ್ಣಾಯಕ ನಿರ್ಧಾರಗಳು ಉಕ್ರೇನ್ ಮತ್ತು ರಷ್ಯಾದ ಭವಿಷ್ಯವನ್ನೂ ನಿರ್ಧರಿಸುತ್ತವೆ. ಪಾಶ್ಚಿಮಾತ್ಯ ದೇಶಗಳು ಮುಂಚೂಣಿಯಲ್ಲಿ ನಿಂತು ಯುದ್ಧವನ್ನು ಮುಂದುವರಿಸುವ ಸಾಧ್ಯತೆ ಉಕ್ರೇನ್ಗೆ ಗೋಚರಿಸುತ್ತಿಲ್ಲ.

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ.