ಹುಲಿ, ಚಿರತೆ, ಕರಡಿಗಳ ಆವಾಸಸ್ಥಾನ ಖಾನಾಪುರದ ದಟ್ಟ ಅರಣ್ಯದೊಳಗೆ ನಾಲ್ಕು ದಿನ ಸಿಲುಕಿ ಬಚಾವಾಗಿ ಬಂದ ಎರಡೂವರೆ ವರ್ಷದ ಮಗು!
ಇದನ್ನು ಪವಾಡ ಎನ್ನಬೇಕೆ, ದೇವರೇ ಕಾಪಾಡಿದ್ದು ಅನ್ನಬೇಕೋ, ಎರಡೂವರೆ ವರ್ಷದ ಹೆಣ್ಣುಮಗು ಬೆಳಗಾವಿ ಜಿಲ್ಲೆಯ ಖಾಲಾಪುರ ತಾಲ್ಲೂಕಿನ ದಟ್ಟ ಚಪೋಲಿ ಅರಣ್ಯದೊಳಗೆ ಕಾಣೆಯಾದ ನಾಲ್ಕು ದಿನಗಳ ನಂತರ ಪತ್ತೆಯಾಗಿದ್ದಾಳೆ.
Published: 05th May 2022 08:44 AM | Last Updated: 05th May 2022 06:47 PM | A+A A-

ಅದಿತಿ ಇಟ್ಗೇಕರ್ ತನ್ನ ತಂದೆ ಶಿವಾಜಿಯೊಂದಿಗೆ
ಬೆಳಗಾವಿ: ಇದನ್ನು ಪವಾಡ ಎನ್ನಬೇಕೆ, ದೇವರೇ ಕಾಪಾಡಿದ್ದು ಅನ್ನಬೇಕೋ, ಎರಡೂವರೆ ವರ್ಷದ ಹೆಣ್ಣುಮಗು ಬೆಳಗಾವಿ ಜಿಲ್ಲೆಯ ಖಾಲಾಪುರ ತಾಲ್ಲೂಕಿನ ದಟ್ಟ ಚಪೋಲಿ ಅರಣ್ಯದೊಳಗೆ ಕಾಣೆಯಾದ ನಾಲ್ಕು ದಿನಗಳ ನಂತರ ಪತ್ತೆಯಾಗಿದ್ದಾಳೆ.
ಚಪೋಲಿ ಕಾಡು ದೊಡ್ಡ ದೊಡ್ಡ ಹುಲಿ, ಚಿರತೆ, ಕರಡಿ ಮತ್ತು ಇನ್ನೂ ಅನೇಕ ಘೋರ ವನ್ಯಮೃಗಗಳು ಮತ್ತು ವಿಷಕಾರಿ ಸರೀಸೃಪಗಳಿಗೆ ಹೆಸರುವಾಸಿ. ಈ ದಟ್ಟ ಅರಣ್ಯದ ಮಧ್ಯೆ ಎರಡೂವರೆ ವರ್ಷದ ಕಂದಮ್ಮ ಅದಿತಿ ಇಟ್ಗೇಕರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದಳು. ಅದು ಹಸಿವೆ, ಬಾಯಾರಿಕೆ ಮತ್ತು ಭಯದಿಂದ ಆ ರೀತಿ ಆಗಿದ್ದು ಸೊಳ್ಳೆಗಳು ಮಗುವಿನ ದೇಹಪೂರ್ತಿ ಕಚ್ಚಿದ್ದು ಬಿಟ್ಟರೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಯಾಗಿಲ್ಲ. ಆದರೆ ಜೀವಂತವಾಗಿ ಮಗು ಸಿಕ್ಕಿದ್ದು ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿದ್ದು ಅಲ್ಲದೆ ಸಂತೋಷವಾಗಿದೆ.
ಆಗಿದ್ದೇನು?: ಕಳೆದ ಏಪ್ರಿಲ್ 26ರಂದು ಅದಿತಿ ತನ್ನ ಪೋಷಕರಾದ ಶಿವಾಜಿ ಮತ್ತು ಸುನಿತಾರ ಜೊತೆ ಸಂಬಂಧಿಕರಾದ ಶಿವಾಜಿ ಹಂಬರ್ ಮನೆಗೆ ಹೋಗಿದ್ದಳು. ಅದು ಇರುವುದು ಚಪೋಲಿ ಅರಣ್ಯದ ಚಿರೆಖಾನಿ ಗ್ರಾಮದಲ್ಲಿ. ಮನೆ ಹಿಂಬದಿಯಲ್ಲಿ ಮಗು ಆಟವಾಡುತ್ತಾ ಅರಣ್ಯದೊಳಗೆ ಹೋಗಿದ್ದು ಗೊತ್ತೇ ಆಗಲಿಲ್ಲ. ಆಕೆಯ ಪೋಷಕರು ಹತ್ತಿರದ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ದಟ್ಟ ಅರಣ್ಯದೊಳಗೆ ಸಿಕ್ಕ ಮಗು ಅದಿತಿ: ಮಗು ಕಾಣೆಯಾಗಿದೆ ಎಂದು ಗೊತ್ತಾದ ಕೂಡಲೇ ಅದಿತಿಯ ಪೋಷಕರಿಗೆ ದಿಕ್ಕೇ ತೋಚದಂತಾಯಿತು. ಮಗು ಕಾಣೆಯಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಜಾಗೃತರಾದರು. 150ಕ್ಕೂ ಹೆಚ್ಚು ಗ್ರಾಮಸ್ಥರು ಅರಣ್ಯಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಸತತ 4 ದಿನ ಮಗುವನ್ನು ಹುಡುಕುತ್ತಾ ಹೋದರು. ಆದರೆ ಮಗು ಪತ್ತೆಯಾಗಲಿಲ್ಲ.
ಇಡೀ ಗ್ರಾಮವು ಅದಿತಿಯನ್ನು ಜೀವಂತವಾಗಿ ನೋಡುವ ಭರವಸೆಯನ್ನು ಬಿಟ್ಟುಬಿಡುತ್ತಿದ್ದಂತೆಯೇ, ಯುವಕರ ಒಂದು ಗುಂಪು ಏಪ್ರಿಲ್ 29 ರ ಸಂಜೆ ಕೊನೆಯ ಪ್ರಯತ್ನವನ್ನು ಮಾಡಲು ನಿರ್ಧರಿಸಿತು. ಪಟ್ಟುಬಿಡದೆ ಸಂಪೂರ್ಣವಾಗಿ ಇಡೀ ಕಾಡಲ್ಲಿ ಹುಡುಕಾಡಿದರು.
ಕೊನೆಗೂ ಯುವಕರ ಗುಂಪಿಗೆ ಮಗು ಅರಣ್ಯದೊಳಗೆ ಬಿದ್ದುಕೊಂಡಿರುವುದು ಕಾಣಿಸಿತು. ಆದರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಮಗು ಬಿದ್ದಿದ್ದ ಸ್ಥಳ ಮನೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿತ್ತು. ಕೂಡಲೇ ಯುವಕರ ತಂಡ ಮಗುವನ್ನು ಗ್ರಾಮಕ್ಕೆ ಕರೆತಂದು ವೈದ್ಯರ ಬಳಿಗೆ ಕರೆದುಕೊಂಡು ಹೋದರು. ಮಗು ಹಸಿವಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದೆ ಎಂದು ವೈದ್ಯರು ಪರೀಕ್ಷಿಸಿ ಹೇಳಿದರು. ನಂತರ ಕೆಲ ದಿನಗಳಲ್ಲಿ ಮಗುವಿನ ಆರೋಗ್ಯ ಸುಧಾರಿಸಿತು.
ಖಾನಾಪುರದಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ, ಆನೆ, ಚಿರತೆ, ಕರಡಿಗಳು ಗ್ರಾಮಗಳಿಗೆ ನುಗ್ಗುತ್ತಿರುವ ಹಲವಾರು ಘಟನೆಗಳು ವರದಿಯಾಗುತ್ತಿವೆ. ಕೆಲವು ವರ್ಷಗಳ ಹಿಂದೆ ಖಾನಾಪುರ ಅರಣ್ಯದಿಂದ ಬೆಳಗಾವಿಯ ಹೊರವಲಯದ ಪ್ರದೇಶಗಳಿಗೆ ದಾರಿತಪ್ಪಿ ಬಂದಿದ್ದ ಹುಲಿಯೊಂದು ಮಹಿಳೆಯನ್ನು ಜಾಂಬೋಟಿ ಬಳಿ ಕರೆದೊಯ್ದು ಕೊಂದು ಹಾಕಿತ್ತು.
ದಶಕದ ಹಿಂದೆ ಕರ್ನಾಟಕ-ಗೋವಾ ಗಡಿಭಾಗದ ಖಾನಾಪುರದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಇಬ್ಬರು ಇದ್ದ ಹೆಲಿಕಾಪ್ಟರ್ ನಲ್ಲಿ ಓರ್ವ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದರೆ ಇನ್ನೊಬ್ಬ ಅಪಘಾತಕ್ಕೀಡಾದ ಸ್ಥಳದಿಂದ ಸಹಾಯ ಕೋರಿ ಹೋದವರು ನಾಪತ್ತೆಯಾಗಿ ನಂತರ ಸಿಕ್ಕಿರಲೇ ಇಲ್ಲ, ಕಾಡುಪ್ರಾಣಿಗಳ ಆಹಾರವಾಗಿರಬಹುದು ಎಂದು ಹೇಳಲಾಗುತ್ತಿದೆ.