ತರಕಾರಿ ವ್ಯಾಪಾರಿಗಳಿಗಾಗಿ ಸಂಚಾರಿ ರೆಫ್ರಿಜೆರೇಟರ್ ಕಂಡುಹಿಡಿದ ರಾಜ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು!
ನಂಬಿಕೆ ಇದ್ದರೆ ಯಾವುದೂ ಅಸಾಧ್ಯವಲ್ಲ' ಎಂಬ ನಾಣ್ಣುಡಿಗೆ ಸಾಕ್ಷಿಯಂತೆ ರೈತನ ಮಗನೊಬ್ಬ ತನ್ನ ಮೂವರು ಸಹಪಾಠಿಗಳೊಂದಿಗೆ ತರಕಾರಿ ಮಾರಾಟಗಾರರಿಗೆ ಕಡಿಮೆ ಬೆಲೆಯ ರೆಫ್ರಿಜೆರೇಟರ್ ಕಂಡುಹಿಡಿದಿದ್ದು, ಅವರ ಕಾಲೇಜು ಆವರಣದಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ.
Published: 15th May 2022 10:12 AM | Last Updated: 16th May 2022 02:16 PM | A+A A-

ಸಂಚಾರಿ ರೆಫ್ರಿಜೆರೇಟರ್ ಕಂಡುಹಿಡಿದ ಎಂಜಿನಿಯರ್ ವಿದ್ಯಾರ್ಥಿಗಳು ಶುಭಾಮ್ ಸೇನ್, ಸುಪ್ರೀತಾ ಎಸ್. ವಿವೇಕಾ ಚಂದ್ರಶೇಖರ್, ನವೀನ್ ಹೆಚ್ ವಿ
ಮೈಸೂರು: ‘ನಂಬಿಕೆ ಇದ್ದರೆ ಯಾವುದೂ ಅಸಾಧ್ಯವಲ್ಲ' ಎಂಬ ನಾಣ್ಣುಡಿಗೆ ಸಾಕ್ಷಿಯಂತೆ ರೈತನ ಮಗನೊಬ್ಬ ತನ್ನ ಮೂವರು ಸಹಪಾಠಿಗಳೊಂದಿಗೆ ತರಕಾರಿ ಮಾರಾಟಗಾರರಿಗೆ ಕಡಿಮೆ ಬೆಲೆಯ ರೆಫ್ರಿಜೆರೇಟರ್ ಕಂಡುಹಿಡಿದಿದ್ದು, ಅವರ ಕಾಲೇಜು ಆವರಣದಲ್ಲಿ ಎಲ್ಲರ ಗಮನ ಸೆಳೆದಿದೆ.
ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಂಡ್ಯದ ರೈತರೊಬ್ಬರ ಮಗ ಹೆಚ್ ವಿ ನವೀನ್, ತರಕಾರಿ ವ್ಯಾಪಾರಿಗಳಿಗೆ ಅನೂಕೂಲವಾಗಲೆಂದು ಈ ರೆಫ್ರಿಜೆರೇಟರ್ ಅನ್ವೇಷಿಸಿದ್ದಾರೆ. ನವೀನ್ ಮತ್ತು ಅವರ ಸಹಪಾಠಿಗಳಾದ ಶುಭಾನ್ ಸೇನ್, ಎಸ್. ಸುಪ್ರೀತಾ ಮತ್ತು ವಿವೇಕ್ ಚಂದ್ರಶೇಖರ್, ದೇಶದಲ್ಲಿನ ಬೀದಿ ವ್ಯಾಪಾರಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕಡಿಮೆ ಬೆಲೆಯ ರೆಫ್ರಿಜೆರೇಟರ್ ಕಂಡುಹಿಡಿದಿದ್ದಾರೆ.
ರೈತರ ಸಂಕಷ್ಟಗಳ ಬಗ್ಗೆ ತಿಳುವಳಿಕೆ ಹೊಂದಿದ್ದ ನವೀನ್, ಕೃಷಿ ಉತ್ಪನ್ನಗಳನ್ನು ಮನೆಗಳಿಗೆ ತಲುಪಿಸುವ ಸೂಕ್ಷ್ಮಗಳನ್ನು ತಿಳಿದುಕೊಂಡು ತರಕಾರಿ ವ್ಯಾಪಾರಿಗಳಿಂದಾಗುವ ಅಡಚಣೆಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ನಮಗೆ ಸಮಸ್ಯೆ ತಿಳಿದಿತ್ತು. ಆದರೆ, ವ್ಯಾಪಾರಿಗಳು ನಿಜವಾಗಿಯೂ ಎದುರಿಸುತ್ತಿರುವ ಕಷ್ಟವನ್ನು ತಿಳಿದುಕೊಳ್ಳುವುದು ಅಗತ್ಯವಾಗಿತ್ತು. ತದನಂತರ ನಾವು ಮಾರಾಟಗಾರರಿಗೆ ಕಾರ್ಯಸಾಧ್ಯ ಮತ್ತು ಅನುಕೂಲಕರ ಪರಿಹಾರ ನೀಡಲು ಸಾಧ್ಯವಾಯಿತು ಎಂದು ನವೀನ್ ಹೇಳುತ್ತಾರೆ.
ನಾವು ತಜ್ಞರಿಂದ ಸಲಹೆಗಳನ್ನು ಪಡೆದುಕೊಂಡು, ಅದರ ಆಧಾರದ ಮೇಲೆ, ಗಾಳಿ-ತಂಪಾಗುವ ಕೋಣೆಯನ್ನು ನಿರ್ಮಿಸಿದ್ದೇವೆ ಮತ್ತು ವಿದ್ಯುತ್ ಗಾಗಿ ಸೌರಶಕ್ತಿ ವಿದ್ಯುತ್ ಪಡೆಯುವುದರಿಂದ ಯಂತ್ರ ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಮಾದರಿಯಲ್ಲಿ ಮಾರಾಟಗಾರರು ದಿನಕ್ಕೆ ಒಮ್ಮೆ ಚಾರ್ಜ್ ಮಾಡಬೇಕಾಗುತ್ತದೆ, ನಂತರ ವಿದ್ಯುತ್ ಗಾಗಿ ಸೌರಶಕ್ತಿಯನ್ನು ಅವಲಂಬಿಸಿರುತ್ತದೆ ಎಂದು ನವೀನ್ ಹೇಳಿದರು.
ತರಕಾರಿಗಳು ತಾಜಾತನದಿಂದ ಕೂಡಿರಲು 5 ರಿಂದ 10 ಡಿಗ್ರಿ ಸೆಲ್ಸಿಯನ್ ಉಷ್ಣಾಂಶದ ಅಗತ್ಯವಿರುತ್ತದೆ. ಈ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದೆ ಹೋಗಿದ್ದು, ಡೈರಿ ಉತ್ಪನ್ನ ಮಾರಾಟ ಮಾಡಲು ಬಯಸುವವರಿಗೆ ಉಪಯುಕ್ತತೆಯನ್ನು ವಿಸ್ತರಿಸಿದ್ದಾರೆ. ಶೂನ್ಯ ಡಿಗ್ರಿ ಸೆಲ್ಸಿಯಸ್ ನಿಂದ 10 ಡಿಗ್ರಿ ಸೆಲ್ಸಿಯನ್ ತಾಪಮಾನದಲ್ಲಿ ಕಾರ್ಯನಿರ್ವಹಿಸುವ ರೀತಿಯಲ್ಲಿ ರೆಫ್ರಿಜೆರೇಟರ್ ವಿನ್ಯಾಸಗೊಳಿಸಿದ್ದಾರೆ.
ಪ್ರತಿ ಕಾರ್ಟ್‌ನ ಬೆಲೆ 52,292 ರೂಪಾಯಿ ಎಂದು ನಿರೀಕ್ಷಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೂಲರ್‌ಗಳನ್ನು ಹೊಂದಿರುವ ಕಾರ್ಟ್‌ಗಳಿಗೆ ಹೋಲಿಸಿದರೆ ಇದು ಅಗ್ಗವಾಗಿದೆ. ಕಾರ್ಟ್ ನ್ನು ಮತ್ತಷ್ಟು ಸುಧಾರಿಸುವ ಯೋಜನೆಯಿದೆ ಎಂದು ಟೀಮ್ ಸದಸ್ಯ ವಿವೇಕ್ ಚಂದ್ರಶೇಖರ್ ಹೇಳುತ್ತಾರೆ.
ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಸದಾಶಿವೇಗೌಡ ಮಾತನಾಡಿ, ಇದು ವಿದ್ಯಾರ್ಥಿಗಳ ಉತ್ತಮ ಯೋಜನೆಯಾಗಿದೆ. ಇದರಿಂದ ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಹಣ್ಣುಗಳು ಮತ್ತು ತರಕಾರಿ ಮಾರಾಟಗಾರರಿಗೆ ಸಹಾಯ ಮಾಡುತ್ತದೆ. ಮಾರಾಟಗಾರರು ಅದರ ತಾಜಾತನವನ್ನು ಕಳೆದುಕೊಳ್ಳದೆ ಗ್ರಾಹಕರಿಗೆ ಸರಬರಾಜು ಮಾಡಬಹುದು. ಬೇಸಿಗೆಯಲ್ಲಿ ಮಾತ್ರವಲ್ಲ, ಉಷ್ಣವಲಯದ ದೇಶಗಳಲ್ಲಿ ವರ್ಷಪೂರ್ತಿ ಸಹಾಯಕವಾಗಿರುತ್ತದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.