
ಪುತ್ರ ಭರತ್ ಗೌಡ್ರು ಜೊತೆ ಷಣ್ಮುಗಪ್ಪ ಗೌಡ್ರು
ಬಳ್ಳಾರಿ: ಅತಿ ಅಪರೂಪದ ಘಟನೆಯಲ್ಲಿ ತಂದೆ- ಮಗ ಇಬ್ಬರೂ ಒಟ್ಟಿಗೆ 10 ನೇ ತರಗತಿ ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ಈ ಅಪರೂಪದ ಘಟನೆ ವರದಿಯಾಗಿದ್ದು, ಷಣ್ಮುಗಪ್ಪ ಗೌಡ್ರು (41) ಹಾಗೂ ಅವರ ಪುತ್ರ ಭರತ್ ಗೌಡ್ರು ಇಬ್ಬರೂ ಎಸ್ಎಸ್ಎಲ್ ಸಿ ಪರೀಕ್ಷೆ ಪಾಸ್ ಆಗಿದ್ದಾರೆ.
ತಂದೆ-ಮಗ ಈ ಮೂಲಕ ತಮ್ಮ ಗ್ರಾಮದಲ್ಲಿ ಹಲವರಿಗೆ ಶಿಕ್ಷಣ ಮುಂದುವರೆಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವುದಕ್ಕೆ ಸ್ಪೂರ್ತಿಯಾಗಿದ್ದಾರೆ.
ಷಣ್ಮುಗಪ್ಪ ರೈತರಾಗಿದ್ದು ದೇವಲಾಪುರ ಗ್ರಾಮದಲ್ಲಿ ತಮ್ಮ ಮಗ ಓದುತ್ತಿರುವ ಶಾಲೆಯ ಎಸ್ ಡಿಎಂಸಿ ಸದಸ್ಯರೂ ಆಗಿದ್ದು 10 ನೇ ತರಗತಿ ಪಾಸ್ ಮಾಡುವ ಕನಸು ಕಂಡಿದ್ದರು. ಅವರ ಕನಸನ್ನು ಪ್ರೋತ್ಸಾಹಿಸಿದ ಶಾಲೆಯ ಶಿಕ್ಷಕರು ಅಧ್ಯಯನಕ್ಕೆ ಸಹಕಾರ ನೀಡಿ ಅಗತ್ಯ ನೆರವು ನೀಡಿದರು. ಅಂತಿಮವಾಗಿ 625 ಅಂಕಗಳಿಗೆ 307 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದರೆ, ಪುತ್ರ ಭರತ್ 500 ಅಂಕ ಪಡೆದಿದ್ದಾರೆ.
ಈ ವಯಸ್ಸಿನಲ್ಲಿ ಪರೀಕ್ಷೆ ಎದುರಿಸಲು ನನ್ನ ಪುತ್ರ ಹಾಗೂ ಪುತ್ರಿಯೇ ನನಗೆ ಸ್ಪೂರ್ತಿ. ಮಕ್ಕಳನ್ನು ಕಂಡು ನಾನೂ ಪರೀಕ್ಷೆ ಎದುರಿಸಬೇಕೆನಿಸಿತು. ಶಾಲೆಯಲ್ಲಿ ಶಿಕ್ಷಕರೂ ನನಗೆ ನೆರವು ನೀಡಿದರು. ಮಗನೂ ಸಹಾಯ ಮಾಡಿದ. ಶಿಕ್ಷಣದ ಮಹತ್ವವನ್ನು ತಿಳಿದಿದ್ದೇನೆ. ಪರೀಕ್ಷೆಗೆ ತಯಾರಾಗಲು ಮುಖ್ಯ ಶಿಕ್ಷಕರಾದ ಪಿ ಸೋಮಶೇಖರ ಸಹಾಯ ಮಾಡಿದರು ಎನ್ನುತ್ತಾರೆ ಷಣ್ಮುಗಪ್ಪ.
ಈ ಹಿಂದೆ ತಮ್ಮ ಪುತ್ರಿಯ ಜೊತೆ ಪರೀಕ್ಷೆ ಎದುರಿಸಿದ್ದಾಗ ಹಿಂದಿ ಮತ್ತು ಕನ್ನಡದ ವಿಷಯದಲ್ಲಿ ಮಾತ್ರ ತೇರ್ಗಡೆಯಾಗಿದ್ದರು.