ಅಪರಾಧ ಹಿನ್ನೆಲೆ ಮರೆತು, ಒಗ್ಗಟ್ಟಿನಿಂದ ಶಿಕ್ಷಣ ಕಲಿತು ಅಕ್ಷರಸ್ಥರಾಗುತ್ತಿರುವ ಪರಪ್ಪನ ಅಗ್ರಹಾರ ಕೈದಿಗಳು!
ಜೈಲು ಎಂದಾಕ್ಷಣ ಮನಸ್ಸಿಗೆ ಬರುವ ಮೊದಲ ಚಿತ್ರಣ ಎಂದರೆ ಸಮವಸ್ತ್ರದಲ್ಲಿ ಸೆಲ್ ನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು. ಆದರೆ, ಬೆಂಗಳೂರು ಪರಪ್ಪನ ಅಗ್ರಹಾರದ ಕೈದಿಗಳು ತಮ್ಮ ಹಿನ್ನೆಲೆಯನ್ನು ಮರೆತು, ಯಾವುದೇ ಅಡೆತಡೆಗಳಿಲ್ಲದೆ ಅಕ್ಷರಸ್ಥರಾಗಳು, ಸ್ವತಂತ್ರರಾಗಿ ಜೀವನ ನಡೆಸಲು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.
Published: 29th May 2022 12:11 PM | Last Updated: 30th May 2022 01:55 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಜೈಲು ಎಂದಾಕ್ಷಣ ಮನಸ್ಸಿಗೆ ಬರುವ ಮೊದಲ ಚಿತ್ರಣ ಎಂದರೆ ಸಮವಸ್ತ್ರದಲ್ಲಿ ಸೆಲ್ ನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು. ಆದರೆ, ಬೆಂಗಳೂರು ಪರಪ್ಪನ ಅಗ್ರಹಾರದ ಕೈದಿಗಳು ತಮ್ಮ ಹಿನ್ನೆಲೆಯನ್ನು ಮರೆತು, ಯಾವುದೇ ಅಡೆತಡೆಗಳಿಲ್ಲದೆ ಅಕ್ಷರಸ್ಥರಾಗಳು, ಸ್ವತಂತ್ರರಾಗಿ ಜೀವನ ನಡೆಸಲು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.
ಮೇ 15 ರಂದು ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿ ಸಾಕ್ಷರತಾ ಮಿಷನ್ ಪರೀಕ್ಷೆ ನಡೆಸಲಾಗಿದ್ದು, ಈ ಪರೀಕ್ಷೆಗೆ 1,460 ಕೈದಿಗಳು ಹಾಜರಾಗಿದ್ದಾರೆ. ಕಾರಾಗೃಹದಲ್ಲಿ ತರಗತಿಗಳು ನಡೆಯುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ಕೊಲೆ, ಅಪಹರಣ ಅಥವಾ ಅತ್ಯಾಚಾರ ಯಾವುದೇ ಆರೋಪದ ಮೇಲೆ ಜೈಲು ಸೇರಿದ್ದರೂ ಕೂಡ ಜೈಲಿನಿಂದ ಬಿಡುಗಡೆಯಾಗುವುದಕ್ಕೂ ಮೊದಲು ಕನಿಷ್ಟ ತನ್ನ ಹೆಸರಿನಲ್ಲಿ ಸಹಿ ಹಾಕಿ ಹೊರಗೆ ಹೋಗುವ ಗುರಿಯನ್ನು ಇಲ್ಲಿನ ಕೈದಿಗಳು ಹೊಂದಿದ್ದಾರೆ. ಇದರಂತೆ ಪ್ರತೀಯೊಬ್ಬ ಕೈದಿಯೂ ಪೆನ್ನು ಹಾಗೂ ಪುಸ್ತಕವನ್ನು ಹಿಡಿದು ಅಕ್ಷರಾಭ್ಯಾಸ ಮಾಡುತ್ತಿದ್ದಾರೆ.
ನನ್ನ ತರಗತಿಯಲ್ಲಿ ಒಟ್ಟು 30 ಮಹಿಳಾ ವಿದ್ಯಾರ್ಥಿಗಳಿದ್ದು, ಇಲ್ಲಿ ಯಾರಿಗೂ ಆರಂಭದಲ್ಲಿ ಕನ್ನಡದ ಅಕ್ಷರಗಳೇ ಬರುತ್ತಿರಲಿಲ್ಲ. ಇದೀಗ ಕನ್ನಡದ ಪದಗಳನ್ನು ಓದುತ್ತಿದ್ದಾರೆ. ಗಣಿತ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಸಹಿ ಮಾಡುತ್ತಿದ್ದಾರೆಂದು ಕಳೆದ 7 ವರ್ಷಗಳಿಂದ ಕೈದಿಗಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕಿ ಎಂ.ಶೈಲಜಾ ಅವರು ಹೇಳಿದ್ದಾರೆ.
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಬ್ಯಾರಕ್ನಲ್ಲಿ ತರಗತಿಗಳ ನಡೆಸಲಾಗುತ್ತದೆ. ಬೆಳಿಗ್ಗೆ 10 ಗಂಟೆಗೆ ತರಗತಿಗಳು ಆರಂಭವಾಗುತ್ತದೆ. ಮಧ್ಯಾಹ್ನ 1 ಗಂಟೆಗೆ ಊಟದ ವಿರಾಮ ನೀಡಲಾಗುತ್ತದೆ. 3 ಗಂಟೆಗೆ ತರಗತಿಗಳು ಪೂರ್ಣಗೊಳ್ಳುತ್ತವೆ.
ಇದನ್ನೂ ಓದಿ: ಕೋವಿಡ್ ನಿಂದಾಗಿ ವೃತ್ತಿಪರ ತರಬೇತಿಗಳು ಸ್ಥಗಿತ: ಮಹಿಳಾ ಕೈದಿಗಳ ಭವಿಷ್ಯ ಸಂಕಷ್ಟದಲ್ಲಿ!
ಬಾಂಗ್ಲಾದೇಶ ಹಾಗೂ ಉಗಾಂಡ ಮೂಲದ ಇಬ್ಬರು ಮಹಿಳೆಯರು ಕಾರಾಗೃಹದಲ್ಲಿದ್ದು, ಇಬ್ಬರೂ ಇದೀಗ ಕನ್ನಡ ಓದುವುದು ಹಾಗೂ ಬರೆಯುವುದನ್ನು ಕಲಿತಿದ್ದಾರೆ.
ಜೈಲಿನಿಂದ ಬಿಡುಗಡೆಯಾಗುವ ವೇಳೆ ನಾವು ಕೇವಲ ಜ್ಞಾನವನ್ನಷ್ಟೇ ಪಡೆದುಕೊಂಡಿರುವುದಿಲ್ಲ. ಹೊಸ ಭಾಷೆಯನ್ನು ಕಲಿತುಕೊಂಡಿರುತ್ತೇವೆ. ಅಲ್ಲದೆ. ವ್ಯವಹಾರ ಜ್ಞಾನವನ್ನು ಪಡೆದುಕೊಂಡಿರುತ್ತೇವೆ. ನನ್ನ ಜೊತೆಗಿದ್ದ ಸಹ ಕೈದಿಗಳು ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಅರಿತುಕೊಳ್ಳುವಂತೆ ಮಾಡಿದರು ಎಂದು ಕಾರಾಗೃಹದಲ್ಲಿರುವ ಬಾಂಗ್ಲಾದೇಶ ಹಾಗೂ ಉಗಾಂಡ ಮೂಲದ ಕೈದಿಗಳು ಹೇಳಿದ್ದಾರೆ.
ಕಾರಾಗೃಹದಲ್ಲಿ ಫೋನ್ ಇದ್ದು, ಕುಟುಂಬಸ್ಥರೊಂದಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿದೆ. ಇದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಈ ಸಾಕ್ಷರತಾ ಕಾರ್ಯಕ್ರಮಕ್ಕೆ ಧನ್ಯವಾದಗಳ ಹೇಳಲು ಬಯಸುತ್ತೇನೆ. ನಾನು 7ನೇ ತರಗತಿವರೆಗೂ ಓದಿದ್ದೆ. ಹಲವು ವರ್ಷಗಳಾದ ಹಿನ್ನೆಲೆಯಲ್ಲಿ ಓದುವುದು, ಬರೆಯುವುದನ್ನು ಮರೆತಿದ್ದೆ. ಇದೀಗ ಮತ್ತೆ ಬರೆಯುವುದು. ಓದುವುದನ್ನು ಕಲಿತಿದ್ದೇನೆ. ನನ್ನ 14 ವರ್ಷದ ಮಗನಿಗೆ ಇದೀಗ ನಾನು ಪತ್ರವನ್ನೂ ಬರೆಯುತ್ತಿದ್ದೇನೆಂದು ಕೈದಿ ರಾಮಪ್ಪ ನಾಯಕ್ (ಹೆಸರು ಬದಲಿಸಲಾಗಿದೆ) ಹೇಳಿದ್ದಾರೆ.
ಹಲವಾರು ಕೈದಿಗಳು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಬರೆದಿದ್ದಾರೆ. ಅನೇಕರು ಜೈಲಿನಲ್ಲಿದ್ದಾಗಲೇ ಕಾನೂನು, ಪತ್ರಿಕೋದ್ಯಮ, ಸಾಹಿತ್ಯ ಇತ್ಯಾದಿಗಳಲ್ಲಿ ಪದವಿ ಪಡೆದಿದ್ದಾರೆ.
ಈ ನಡುವೆ ರಾಜ್ಯ ಸರ್ಕಾರ 2021ರಲ್ಲಿ ಕೈದಿಗಳ ಸಾಕ್ಷರತೆಯ ಮಟ್ಟವನ್ನು ಪರೀಕ್ಷಿಸಲು ಸಮೀಕ್ಷೆಯೊಂದನ್ನು ನಡೆಸಿದ್ದು, ಸಮೀಕ್ಷಾ ವರದಿಯಲ್ಲಿ ರಾಜ್ಯದಲ್ಲಿರುವ 51 ಜೈಲುಗಳಲ್ಲಿ ಬಂಧಿತರಾಗಿರುವ ಸುಮಾರು 15,000 ಕೈದಿಗಳಲ್ಲಿ ಸುಮಾರು 5,000 ಕೈದಿಗಳು ಸಂಪೂರ್ಣವಾಗಿ ಅನಕ್ಷರಸ್ಥರು ಅಥವಾ ಸಹಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆಂಬುದು ತಿಳಿದುಬಂದಿದೆ ಎಂದು ಜೈಲಿನ ಮುಖ್ಯ ಅಧೀಕ್ಷಕ ರಂಗನಾಥ್ ವಿವರಿಸಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳ ನಿರ್ಲಕ್ಷ್ಯ: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮಹಿಳಾ ಕೈದಿಗಳಿಗೆ ಸಂಕಷ್ಟ!
ಸಮೀಕ್ಷಾ ವರದಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನಕ್ಷರಸ್ಥ ಕೈದಿಗಳಿಗೆ ನವೆಂಬರ್ 1 2021ರಿಂದ ಓದಲು ಹಾಗೂ ಬರೆಯಲು ಅವಕಾಶ ಮಾಡಿಕೊಡಲು ಸಾಕ್ಷರತಾ ಕಾರ್ಯಕ್ರಮವನ್ನು ವಿಸ್ತರಣೆ ಮಾಡಿತು. ಸರ್ಕಾರ ಸಾಕ್ಷರತಾ ಕಾರ್ಯಕ್ರಮವು ಹಲವರ ಮನಸ್ಸು ಬದಲಾಗುವಂತೆ ಮಾಡಿದೆ.
ನಾನು 12 ವರ್ಷಗಳಿಂದ ಈ ಜೈಲಿನಲ್ಲಿದ್ದೇನೆ. ಕೌಶಲ್ಯಾಭಿವೃದ್ಧಿ ಕೋರ್ಸ್ಗಳು ಮತ್ತು ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ಸುಧಾರಣೆಯನ್ನು ಕಂಡಿದ್ದೇನೆ, ”ಎಂದು ಅಪರಾಧಿ ಚಂದ್ರಣ್ಣ (ಹೆಸರು ಬದಲಾಯಿಸಲಾಗಿದೆ) ಹೇಳಿದ್ದಾರೆ.
ಕಾರಾಗೃಹಗಳ ಡಿಜಿ ಅಲೋಕ್ ಮೋಹನ್ ಅವರು ಮಾತನಾಡಿ, ಈಗಾಗಲೇ ಶಿಕ್ಷಣ ಪಡೆದಿರುವ ಕೈದಿಗಳು ಕೂಡ ಇತರೆ ಕೈದಿಗಳಿಗೆ ಬೋಧನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಅನಕ್ಷರಸ್ಥರಾಗಿರುವ 10 ಕೈದಿಗಳನ್ನು ಒಂದು ಬ್ಯಾಚ್ ರಂತೆ ರಚಿಸುತ್ತಿದ್ದೇವೆ. ಇವರನ್ನು ಒಂದೆಡೆ ಸೇರಿಸಿ ಶಿಕ್ಷಣ ಪಡೆದುಕೊಳ್ಳುವಂತೆ ಮಾಡುತ್ತಿದ್ದೇವೆಂದು ವಿವರಿಸಿದ್ದಾರೆ.
ಕಾರಾಗೃಹಕ್ಕೆ ಪ್ರತೀನಿತ್ಯ 7 ದಿನಪತ್ರಿಕೆಗಳು, ನಿಯತಕಾಲಿಕೆಗಳು ಬರುತ್ತವೆ. ಗ್ರಂಥಾಲಯದಲ್ಲಿ ಸುಮಾರು 5,000 ಪುಸ್ತಕಗಳಿವೆ. ಹೊರಗಿನವರನ್ನು ಪುರಷರ ಸೆಲ್ ಗಳಿಗೆ ಕರೆತಂದು ಶಿಕ್ಷಣ ನೀಡುವಂತೆ ಮಾಡುವುದು ಅಪಾಯಕಾರಿಯಾಗಿದೆ. ಹೀಗಾಗಿ ವಿದ್ಯಾವಂತ ಕೈದಿಗಳನ್ನು ಪ್ರೇರೇಪಿಸುವ ಕೆಲಸ ಮಾಡಲಾಗುತ್ತಿದೆ. ಶಿಕ್ಷಣ ಪಡೆಯಲು ಹಿಂದೇಟು ಹಾಕುವವರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಇದು ಯಶಸ್ವಿಯಾಗುತ್ತಿದೆ. ಕೈದಿಗಳಿಗೆ ಸಮೂಹ ಶಿಕ್ಷಣ ಇಲಾಖೆ ಹೊರತಂದಿರುವ ‘ಬಾಳಿಗೆ ಬೆಳಕು’ ಎಂಬ ತರಬೇತುದಾರರ ಪಠ್ಯಕ್ರಮದ ಮೂಲಕ ತರಬೇತಿ ನೀಡಲಾಗುತ್ತದೆ. ಬೋಧನೆ ಮಾಡಲು ಮುಂದಾಗುವ ಕೈದಿಗಳಿಗೆ ಸಂಭಾವನೆ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ 211 ಕೈದಿಗಳು ಎಸ್ಎಸ್ಎಲ್'ಸಿ ಪರೀಕ್ಷೆ ಬರೆಯುತ್ತಿದ್ದು, 103 ಮಂದಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಾರೆ.
ಮಹಿಳೆಯರ ಸೆಲ್ ನಲ್ಲಿ ಇಬ್ಬರು ಕೈದಿಗಳು ಸಿಎ, 12 ಮಂದಿ ಬಿಎ/ಬಿಬಿಎಂ/ಬಿಕಾಂ ಪದವೀಧರರು, ಇಬ್ಬರು ಎಂಕಾಂ/ಎಂಎಸ್ಸಿ ಪದವೀಧರರು ಮತ್ತು ಇಬ್ಬರು ಬಿಇ ಪದವೀಧರರಿದ್ದಾರೆ.
ಇನ್ನು ಪುರುಷರಲ್ಲಿ, ಪಿಎಚ್ಡಿ ಪಡೆದವರಿದ್ದಾರೆ, ಮೂವರು ವೈದ್ಯರು, 28 ಬಿಇ/ಬಿಸಿಎ ಪದವಿ ಪಡೆದವರು, 111 ಬಿಎ/ಎಂಎ ಪದವೀಧರರು, 116 ಐಟಿಐ/ಡಿಪ್ಲೊಮಾ ಪಡೆದವರು, 75 ಬಿಕಾಂ/ಎಂಕಾಂ ಪದವೀಧರರು ಮತ್ತು ಸುಮಾರು 30 ಬಿಎಸ್ಸಿ/ಎಂಎಸ್ಸಿ ಪದವೀಧರರಿದ್ದಾರೆ.