600 ವರ್ಷಗಳ ಹಳೆಯ ಶಿವಾಲಯ ಜೀರ್ಣೋದ್ಧಾರಕ್ಕೆ ಒಗ್ಗೂಡಿದ ಮುಸ್ಲಿಮರು

ಕೋಮು ಸೌಹಾರ್ದತೆಗೆ ಮತ್ತೊಂದು ಉದಾಹರಣೆ ಎಂಬಂತೆ ಕೇರಳದಲ್ಲಿ 600 ವರ್ಷಗಳ ಹಳೆಯ ಶಿವಾಲಯ ಜೀರ್ಣೋದ್ಧಾರಕ್ಕೆ ಮುಸ್ಲಿಮರು ಒಗ್ಗೂಡಿದ್ದಾರೆ.
600 ವರ್ಷಗಳ ಹಳೆಯ ಶಿವಾಲಯ ಜೀರ್ಣೋದ್ಧಾರಕ್ಕೆ ಒಗ್ಗೂಡಿದ ಮುಸ್ಲಿಮರು
600 ವರ್ಷಗಳ ಹಳೆಯ ಶಿವಾಲಯ ಜೀರ್ಣೋದ್ಧಾರಕ್ಕೆ ಒಗ್ಗೂಡಿದ ಮುಸ್ಲಿಮರು

ಕಣ್ಣೂರು: ಕೋಮು ಸೌಹಾರ್ದತೆಗೆ ಮತ್ತೊಂದು ಉದಾಹರಣೆ ಎಂಬಂತೆ ಕೇರಳದಲ್ಲಿ 600 ವರ್ಷಗಳ ಹಳೆಯ ಶಿವಾಲಯ ಜೀರ್ಣೋದ್ಧಾರಕ್ಕೆ ಮುಸ್ಲಿಮರು ಒಗ್ಗೂಡಿದ್ದಾರೆ.

ಕೇರಳದ ಕಣ್ಣೂರಿನ ತೆರ್ಲಾಯಿ ದ್ವೀಪದಲ್ಲಿ ಸುಮಾರು 600 ವರ್ಷಗಳಷ್ಟು ಹಳೆಯದಾದ ಶಿವನ ದೇವಾಲಯವನ್ನು ಪುನರುಜ್ಜೀವನಗೊಳಿಸಲು ಚೆಂಗಲಾಯಿ ಪಂಚಾಯತ್‌ನ ಮುಸ್ಲಿಂ ಸಮುದಾಯ ಟೊಂಕ ಕಟ್ಟಿ ನಿಂತಿದೆ. ಇಲ್ಲಿನ ಲಾವಿಲ್ ಶಿವ ದೇವಾಲಯವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದು, ದೇವಾಲಯವನ್ನು ನಿರ್ವಹಿಸುವವರು ದೈನಂದಿನ ಆಚರಣೆಗಳನ್ನು ನಡೆಸಲು ಸಾಕಷ್ಟು ಆರ್ಥಿಕ ಸಂಪನ್ಮೂಲಗಳನ್ನು ಹುಡುಕಲು ಹೆಣಗಾಡುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಮುಸ್ಲಿಂ ಸಮುದಾಯದ ಕೈ ಜೋಡಿಸುವಿಕೆ ದೇಗುಲದ ಜೀರ್ಣೋದ್ಧಾರ ಕನಸಿಗೆ ನೀರೆರೆದಿದೆ.

ಈ ಕುರಿತು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ ಎಂ ಗಿರೀಶ್ ಮಾತನಾಡಿ, ದೇವಸ್ಥಾನಕ್ಕೆ ನಿತ್ಯ ಹೆಚ್ಚು ಭಕ್ತರು ಬರುವುದಿಲ್ಲ. ದ್ವೀಪದಲ್ಲಿ ವಾಸಿಸುವ 140 ಕುಟುಂಬಗಳಲ್ಲಿ ಕೇವಲ ಮೂರು ಕುಟುಂಬಗಳು ಮಾತ್ರ ಹಿಂದೂಗಳು. ಉಳಿದವರು ಮುಸ್ಲಿಮರು.  ಹೀಗಾಗಿ ಆದಾಯವನ್ನು ಗಳಿಸಲು, ದ್ವೀಪದ ಹೊರಗಿನ ಭಕ್ತರು ಸ್ಥಳಕ್ಕೆ ಭೇಟಿ ನೀಡಬೇಕು. ಹಾಗಾಗಿ, ಇರಕ್ಕೂರು ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ದೇವಸ್ಥಾನವನ್ನು ಸಂಪರ್ಕಿಸಲು ನಾವು ಯೋಜಿಸುತ್ತಿದ್ದೇವೆ. ಹಣಕಾಸಿನ ಕೊರತೆಯು ಪ್ರಮುಖ ಸಮಸ್ಯೆಯಾಗಿದೆ. ದೇವಸ್ಥಾನಕ್ಕೆ ಹೊಸ ರೂಪ ನೀಡಲು ನಮಗೆ ಸುಮಾರು 25-30 ಲಕ್ಷ ರೂಪಾಯಿ ಬೇಕು. ಮುಸ್ಲಿಂ ಕುಟುಂಬಗಳು ಪುನರುಜ್ಜೀವನದ ಪ್ರಯತ್ನದ ಬಗ್ಗೆ ಕೇಳಿದಾಗ, ಅವರು ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದರು ಎಂದು ಹೇಳಿದರು.

ಚೆಂಗಲಾಯಿ ಪಂಚಾಯಿತಿ ಅಧ್ಯಕ್ಷ ವಿ ಎಂ ಮೋಹನನ್ ಅವರು ಮಾತನಾಡಿ, ಆರು ಶತಮಾನಗಳಷ್ಟು ಹಳೆಯದಾದ ದೇವಾಲಯವನ್ನು ಪುನರುಜ್ಜೀವನಗೊಳಿಸಬೇಕು. ಒಮ್ಮೆ ಪ್ರವಾಸೋದ್ಯಮ ಯೋಜನೆಗೆ ಸ್ಥಳವನ್ನು ಸೇರಿಸಿದರೆ, ಅದರ ಸ್ಥಿತಿ ಸುಧಾರಿಸುತ್ತದೆ ಎಂದು ಅವರು ಹೇಳಿದರು.

ದೇವಸ್ಥಾನ ಅಭಿವೃದ್ಧಿಗೆ ಮುಸ್ಲಿಂ ಸಂಘಟನೆಯ ಬೆಂಬಲ, ಆರ್ಥಿಕ ನೆರವು
“ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಕಳೆಗಳು ಮತ್ತು ಪೊದೆಗಳು ಆಕ್ರಮಿಸಿಕೊಂಡಿವೆ. ತೆರ್ಲಾಯಿ ಶಾಖೆಯ ಮುಸ್ಲಿಂ ಲೀಗ್ ಸಮಿತಿ ಸದಸ್ಯರು ಹಾಗೂ ಸುಮಾರು 15 ಕುಟುಂಬಗಳ ನೆರವಿನಿಂದ ರಸ್ತೆಯನ್ನು ತೆರವುಗೊಳಿಸಿದೆವು. ಕೆಲವು ಕುಟುಂಬಗಳು ರಸ್ತೆ ಅಗಲೀಕರಣಕ್ಕಾಗಿ ತಮ್ಮ ಜಮೀನಿನ ಒಂದು ಭಾಗವನ್ನು ಸಹ ಹಂಚಿಕೊಂಡಿದ್ದಾರೆ ಎಂದು ವಾರ್ಡ್ ಸದಸ್ಯ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಇರಕ್ಕೂರು ಕ್ಷೇತ್ರದ ಕಾರ್ಯದರ್ಶಿ ಮೂಸನಕುಟ್ಟಿ ತೇರ್ಲಾಯಿ ಹೇಳಿದರು.

ಯೂತ್ ಲೀಗ್ ರಾಜ್ಯಾಧ್ಯಕ್ಷ ಸಯ್ಯದ್ ಮುನವ್ವರ್ ಅಲಿ ಶಿಹಾಬ್ ತಂಗಳ್ ಅವರು ಪುನರುಜ್ಜೀವನದ ಪ್ರಯತ್ನದ ಭಾಗವಾಗುವಂತೆ ನಮ್ಮನ್ನು ಕೇಳಿಕೊಂಡರು. ಅವರು ದ್ವೀಪಕ್ಕೆ ಭೇಟಿ ನೀಡಲು ಮತ್ತು ದೇವಾಲಯದ ಅಧಿಕಾರಿಗಳ ಪುನರುಜ್ಜೀವನದ ಪ್ರಯತ್ನಗಳಿಗೆ ಪಕ್ಷದ ಬೆಂಬಲವನ್ನು ನೀಡಲು ಯೋಜಿಸುತ್ತಿದ್ದಾರೆ, ಈಗಿನಂತೆ, ನಾವು ದೇವಾಲಯದ ಹೊರಗೆ ಮಾಡಬೇಕಾದ ಅಭಿವೃದ್ಧಿ ಚಟುವಟಿಕೆಗಳಿಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ. ದೇವಸ್ಥಾನದ ಪುನರುತ್ಥಾನಕ್ಕೆ ಒಂದಿಷ್ಟು ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದೇವೆ. ಇದು ಸಹಿಷ್ಣುತೆಯ ಬಗ್ಗೆ ಅಲ್ಲ. ಇದು ಮಾನವೀಯತೆಗೆ ಸಂಬಂಧಿಸಿದ್ದಾಗಿದೆ ಎಂದು ಅವರು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com