ದೀಪಾವಳಿಗಾಗಿ ಕಾಶ್ಮೀರಿ ಮುಸ್ಲಿಂ ಕುಟುಂಬದಿಂದ 16 ಸಾವಿರ ಮಣ್ಣಿನ ದೀಪಗಳ ತಯಾರಿಕೆ

ಕಾಶ್ಮೀರಿ ಮುಸ್ಲಿಂ ಕುಂಬಾರರೊಬ್ಬರಿಗೆ ಬೃಹತ್ ಆರ್ಡರ್ ಸಿಕ್ಕಿದ್ದು ಈ ವರ್ಷದ ದೀಪಾವಳಿಗಾಗಿ 16,000 ಮಣ್ಣಿನ ದೀಪಗಳನ್ನು ಅತ್ಯಂತ ಉತ್ಸಾಹದಿಂದ ತಯಾರಿಸಿದ್ದಾರೆ.
ಕುಂಬಾರ ಮೊಹಮ್ಮದ್ ಉಮರ್
ಕುಂಬಾರ ಮೊಹಮ್ಮದ್ ಉಮರ್

ಶ್ರೀನಗರ: ಕಾಶ್ಮೀರಿ ಮುಸ್ಲಿಂ ಕುಂಬಾರರೊಬ್ಬರಿಗೆ ಬೃಹತ್ ಆರ್ಡರ್ ಸಿಕ್ಕಿದ್ದು ಈ ವರ್ಷದ ದೀಪಾವಳಿಗಾಗಿ 16,000 ಮಣ್ಣಿನ ದೀಪಗಳನ್ನು ಅತ್ಯಂತ ಉತ್ಸಾಹದಿಂದ ತಯಾರಿಸಿದ್ದಾರೆ.

ಈ ದೀಪಾವಳಿ ಹಬ್ಬಕ್ಕಾಗಿ ಬರೋಬ್ಬರಿ 16,000 ಮಣ್ಣಿನ ದೀಪಗಳನ್ನು ಪೂರೈಸುವ ಬೃಹತ್ ಆರ್ಡರ್ ಸಿಕ್ಕಿತ್ತು. ಸಮಯಕ್ಕೆ ಸರಿಯಾಗಿ ದೀಪಗಳನ್ನು ಪೂರೈಕೆ ಮಾಡುವ ಸಲುವಾಗಿ ತುಂಬಾ ಶ್ರಮಿಸಬೇಕಾಯಿತು ಎಂದು ಮೊಹಮ್ಮದ್ ಉಮರ್ ಹೇಳಿದ್ದಾರೆ.

ನನ್ನ ತಂದೆ, ಸಹೋದರ ಮತ್ತು ನಾನು ಸುಮಾರು ಒಂದು ತಿಂಗಳ ಕಾಲ ತುಂಬಾ ಕಷ್ಟಪಟ್ಟು ದೀಪಗಳನ್ನು ತಯಾರಿಸಿದೆವು. ನಾವು ದಿನಕ್ಕೆ ಸುಮಾರು 500-600 ದೀಪಗಳನ್ನು ತಯಾರಿಸುತ್ತಿದ್ದೇವೆ. ನಮ್ಮ ಶ್ರಮದಿಂದ ಸಮಯಕ್ಕೆ ಸರಿಯಾಗಿ ಆರ್ಡರ್ ಅನ್ನು ಪೂರ್ಣಗೊಳಿಸಿದ್ದೇವೆ. ಈ ದೀಪಗಳನ್ನು ಇತರ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಮೊಹಮ್ಮದ್ ಉಮರ್ ಹೇಳಿದರು.

'ದೀಪ ತಯಾರಿಕೆ ಒಂದು ಕಲೆಯಾಗಿರುವುದರಿಂದ ನಾವು ದೀಪ ತಯಾರಿಕೆಯನ್ನು ಬಿಡಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು. ಶ್ರೀನಗರದ ನಿಶಾತ್ ಪ್ರದೇಶದ ಇಸ್ಬೇರ್‌ನಿಂದ ಬಂದಿರುವ ಉಮರ್, ಹಿಂದೂ ಸಹೋದರರು ಈ ವರ್ಷ ದೀಪಾವಳಿಯನ್ನು ತಮ್ಮ ಮನೆಗಳಲ್ಲಿ ಮುಸ್ಲಿಂ ತಯಾರಿಸಿದ ದೀಪಗಳನ್ನು ಬೆಳಗಿಸಿ ಆಚರಿಸುತ್ತಿರುವುದು ತನಗೆ ತೃಪ್ತಿ ತಂದಿದೆ. ಹಣ ಸಂಪಾದನೆಯ ಜೊತೆಗೆ ದೀಪಗಳನ್ನು ತಯಾರಿಸುವ ಮೂಲಕ ಕೋಮು ಸೌಹಾರ್ದತೆ, ಬಾಂಧವ್ಯ ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಬೆಳಕಿನ ಹಬ್ಬ ದೀಪಾವಳಿಯನ್ನು ಇಂದು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಉಮರ್ ಅವರು ಈ ಹಿಂದೆ ಪ್ರತಿ ವರ್ಷ 500-700 ದೀಪಗಳನ್ನು ತಯಾರಿಸುತ್ತಿದ್ದರು. ಆದರೆ ಈ ವರ್ಷ ಅವರು ಬೃಹತ್ ಆರ್ಡರ್ ಪಡೆದಿದ್ದರು.

ಇದಲ್ಲದೆ, ನಾನು ಇತರ ಕೆಲವು ಗ್ರಾಹಕರಿಗಾಗಿ ದೀಪಗಳನ್ನು ಸಹ ತಯಾರಿಸಿದ್ದೇವೆ. ನಾನು ಶ್ರೀನಗರದ ಹಜರತ್‌ಬಾಲ್ ಪ್ರದೇಶದಲ್ಲಿನ ನನ್ನ ಅಂಗಡಿಯಲ್ಲಿಯೂ ಸಹ ದೀಪಗಳನ್ನು ಮಾರುತ್ತಿದ್ದೆ. ಪ್ರತಿ ದೀಪಗಳ ತಯಾರಿಕೆಗೆ 2 ರಿಂದ 5 ರೂಪಾಯಿ ವೆಚ್ಚವಾಗುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಪ್ರತಿ ದೀಪ 5 ರಿಂದ 10 ರೂಪಾಯಿಗೆ ಮಾರಾಟವಾಗುತ್ತದೆ ಎಂದು ಅವರು ಹೇಳಿದರು. ಪದವೀಧರರಾಗಿರುವ ಉಮರ್ ಅವರು ಸರ್ಕಾರಿ ಉದ್ಯೋಗವನ್ನು ಹುಡುಕುವ ಬದಲು ಕಣಿವೆಯಲ್ಲಿ ನಶಿಸುತ್ತಿರುವ ಕುಂಬಾರಿಕೆ ಮತ್ತು ಅಲಂಕಾರಿಕ ಕುಂಬಾರಿಕೆ ಕಲೆಯನ್ನು ಪುನರುಜ್ಜೀವನಗೊಳಿಸಲು ಬಯಸುತ್ತಾರೆ.

'ಒಂದು ಕಾಲದಲ್ಲಿ ಕಾಶ್ಮೀರದಲ್ಲಿ 600ಕ್ಕೂ ಹೆಚ್ಚು ಕುಟುಂಬಗಳು ಈ ವ್ಯಾಪಾರದೊಂದಿಗೆ ಸಂಬಂಧ ಹೊಂದಿದ್ದವು. ಆದರೆ ಪ್ರಸ್ತುತ ಬೆರಳೆಣಿಕೆಯಷ್ಟು ಕುಟುಂಬಗಳು ಮಾತ್ರ ಮಡಿಕೆ ತಯಾರಿಕೆಯಲ್ಲಿ ತೊಡಗಿವೆ' ಎಂದು ಅವರು ಹೇಳಿದರು. ಪುರಾತನವಾದ ಕರಕುಶಲತೆಯನ್ನು ಪುನರುಜ್ಜೀವನಗೊಳಿಸುವುದು ಕಠಿಣ ಸವಾಲಾಗಿದೆ ಎಂದು ಉಮರ್ ಹೇಳಿದರು. ಆದರೆ ಅದರ ಪುನರುಜ್ಜೀವನಗೊಳಿಸಲು ತಾನು ನಿರ್ಧರಿಸಿದ್ದೇನೆ. ಇದನ್ನು ಬಿಟ್ಟುಕೊಡುವುದಿಲ್ಲ. ಕುಂಬಾರಿಕೆಗೆ ಬೇಡಿಕೆ ಹೆಚ್ಚಿರುವುದರಿಂದ ಕೆಲವು ಉತ್ತೇಜಕ ಚಿಹ್ನೆಗಳು ಇವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com