ಅನ್ನ ಕೊಟ್ಟ ಧಣಿ ಸತ್ತಾಗ ಮುತ್ತು ಕೊಟ್ಟು ಅಂತಿಮ ನಮನ ಸಲ್ಲಿಸಿದ ಮಂಗ
ಮನುಷ್ಯ ಸತ್ತ ಮೇಲೆ ಸಂಬಂಧಿಕರು, ಸ್ನೇಹಿತರು ಅಂತಿಮ ಗೌರವ ಸಲ್ಲಿಸುವುದು ವಾಡಿಕೆ.. ಆದರೆ ಇಲ್ಲಿ ತನಗೆ ಅನ್ನ ಹಾಕಿದ ವ್ಯಕ್ತಿ ಸತ್ತಾಗ ಆತನ ಕೊನೆಯ ದರ್ಶನಕ್ಕೆ ಆಗಮಿಸಿದ ಮಂಗ ಆತನ ತಲೆಗೆ ಮುತ್ತುಕೊಟ್ಟು ಅಂತಿಮ ನಮನ ಸಲ್ಲಿಸಿದೆ.
Published: 07th April 2023 06:53 PM | Last Updated: 07th April 2023 06:53 PM | A+A A-

ಅಂತಿಮ ನಮನ ಸಲ್ಲಿಸಿದ ಮಂಗ
ವಿಜಯನಗರ: ಮನುಷ್ಯ ಸತ್ತ ಮೇಲೆ ಸಂಬಂಧಿಕರು, ಸ್ನೇಹಿತರು ಅಂತಿಮ ಗೌರವ ಸಲ್ಲಿಸುವುದು ವಾಡಿಕೆ.. ಆದರೆ ಇಲ್ಲಿ ತನಗೆ ಅನ್ನ ಹಾಕಿದ ವ್ಯಕ್ತಿ ಸತ್ತಾಗ ಆತನ ಕೊನೆಯ ದರ್ಶನಕ್ಕೆ ಆಗಮಿಸಿದ ಮಂಗ ಆತನ ತಲೆಗೆ ಮುತ್ತುಕೊಟ್ಟು ಅಂತಿಮ ನಮನ ಸಲ್ಲಿಸಿದೆ.
ವಿಜಯನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹೊಟೆಲ್ ಉದ್ಯಮಿ ಶವಕ್ಕೆ ಮಂಗ ಮುತ್ತುಕೊಟ್ಟು ನಮನ ಸಲ್ಲಿಸಿ ತನ್ನ ಅನ್ನದ ಋಣ ತೀರಿಸಿದೆ. ಹಗರಿಬೊಮ್ಮನಹಳ್ಳಿ ಪಟ್ಟಣದ ಹೊಟೇಲ್ ಉದ್ಯಮಿ ಪರಶುರಾಮಸಾ ಪೋಮುಸಾ ಹಬೀಬ್ ಸಾವಜಿ ಏಪ್ರಿಲ್ 3 ರಂದು ಇಹಲೋಕ ತ್ಯಜಿಸಿದ್ದರು.
ಪರಶುರಾಮಸಾ ಪೋಮುಸಾ ಹಬೀಬ್ ಸಾವಜಿ ಹುಟ್ಟು ಪ್ರಾಣಿ-ಪಕ್ಷಿ ಪ್ರಿಯರು. ತಮ್ಮ ಜೀವಮಾನದುದ್ದಕ್ಕೂ ಪ್ರಾಣಿ ಪಕ್ಷಿಗಳಿಗೆ ತಮ್ಮ ಕೈಲಾದ ನೆರವು ನೀಡುತ್ತಿದ್ದರು. ಅದರಲ್ಲೂ ಆ ಒಂದು ಕೋತಿಗೆ ದಿನನಿತ್ಯವೂ ಹಣ್ಣು, ರೊಟ್ಟಿ ನೀಡಿ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದರು. ಮನೆಯ ಬಳಿ ಬರುತ್ತಿದ್ದ ಕೋತಿ ಕಿಟಕಿ ಬಳಿ ಬಂದು ಈ ಅಜ್ಜನನ್ನು ನೋಡುತ್ತಿತ್ತು. ಇದನ್ನು ಗಮನಿಸಿದ ಅಜ್ಜ ಮನೆಯವರಿಗೆ ಹೇಳಿ ಅದಕ್ಕೆ ಆಹಾರ ಕೊಡಿಸುತ್ತಿದ್ದರು.
ಇದನ್ನೂ ಓದಿ: ಪಾದರಾಯನಪುರ ಹಿಂದೂ ಸ್ಮಶಾನ ಅತಿಕ್ರಮಣ: ಸ್ಥಳಕ್ಕೆ ಲೋಕಾಯುಕ್ತ ಪೊಲೀಸರ ಭೇಟಿ, ಏ.12ರೊಳಗೆ ವರದಿ ಸಲ್ಲಿಕೆ
ಅಜ್ಜನ ಆಣತಿಯಂತೆ ಮನೆಯವರು ಕೋತಿಗೆ ಆಹಾರ ನೀಡುತ್ತಿದ್ದರು. ಅದನ್ನು ತಿಂದ ಕೋತಿ ಸಂತೃಪ್ತಿಯಿಂದ ಹೋಗುತ್ತಿತ್ತು. ಆದರೆ ಇಂದು ಅಜ್ಜ ಇಹಲೋಕ ತ್ಯಜಿಸಿದ್ದು, ನಿತ್ಯ ತನಗೆ ಆಹಾರ ನೀಡುತ್ತಿದ್ದ ಅಜ್ಜನ ಹಣೆಗೆ ಮುತ್ತು ನೀಡಿ ಕೋತಿ ತನ್ನ ನಮನ ಅಂತಿಮ ಸಲ್ಲಿಸಿದೆ.
ಗೌರವ ಸಲ್ಲಿಸಿದ ಬಳಿಕ ಬಂದಷ್ಟೇ ವೇಗವಾಗಿ ಅಲ್ಲಿಂದ ತೆರಳಿದೆ. ಈ ಮೂಲಕ ಉಪ್ಪು ಕೊಟ್ಟವರನ್ನು ಮುಪ್ಪಿನವರೆಗೂ ನೆನೆಯಬೇಕು ಎಂಬ ಸಂದೇಶವನ್ನು ಕೋತಿ ಸಾರಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಸಾವಿರಾರು ಮಂದಿ ಲೈಕ್ ಮಾಡಿ ಶೇರ್ ಮಾಡಿದ್ದಾರೆ.