ಭಾರತ-ಪಾಕ್ ವಿಭಜನೆಯ ಸಂದರ್ಭದಲ್ಲಿ ಬೇರೆಯಾಗಿದ್ದ ಸಿಖ್ ಸೋದರರ ಕುಟುಂಬಗಳು 75 ವರ್ಷಗಳ ನಂತರ ಮತ್ತೆ ಒಂದು!

1947ರ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಎಪ್ಪತ್ತೈದು ವರ್ಷಗಳ ನಂತರ, ಇಬ್ಬರು ಸಿಖ್ ಸಹೋದರರ ಕುಟುಂಬಗಳು ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಭೇಟಿಯಾಗಿವೆ. ಈ ಭಾವನಾತ್ಮಕ ಪುನರ್ಮಿಲನಕ್ಕೆ ಸಾಮಾಜಿಕ ಮಾಧ್ಯಮ ವೇದಿಕೆಯಾಯಿತು.
ವಿಭಜನೆಯ ಸಮಯದಲ್ಲಿ ಬೇರ್ಪಟ್ಟಿದ್ದ ಗುರುದೇವ್ ಸಿಂಗ್ ಮತ್ತು ದಯಾ ಸಿಂಗ್ (ಬೂದು ಸೂಟ್‌ನಲ್ಲಿ) ಕುಟುಂಬಗಳು ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಒಂದುಗೂಡಿದವು
ವಿಭಜನೆಯ ಸಮಯದಲ್ಲಿ ಬೇರ್ಪಟ್ಟಿದ್ದ ಗುರುದೇವ್ ಸಿಂಗ್ ಮತ್ತು ದಯಾ ಸಿಂಗ್ (ಬೂದು ಸೂಟ್‌ನಲ್ಲಿ) ಕುಟುಂಬಗಳು ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಒಂದುಗೂಡಿದವು

ಲಾಹೋರ್: 1947ರ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಎಪ್ಪತ್ತೈದು ವರ್ಷಗಳ ನಂತರ, ಇಬ್ಬರು ಸಿಖ್ ಸಹೋದರರ ಕುಟುಂಬಗಳು ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಭೇಟಿಯಾಗಿವೆ. ಈ ಭಾವನಾತ್ಮಕ ಪುನರ್ಮಿಲನಕ್ಕೆ ಸಾಮಾಜಿಕ ಮಾಧ್ಯಮ ವೇದಿಕೆಯಾಯಿತು.

ಗುರುದೇವ್ ಸಿಂಗ್ ಮತ್ತು ದಯಾ ಸಿಂಗ್ ಅವರ ಕುಟುಂಬಗಳು ಒಂದುಗೂಡಲು ಗುರುವಾರ ಕರ್ತಾರ್‌ಪುರ ಕಾರಿಡಾರ್‌ಗೆ ಆಗಮಿಸಿದರು.

ಕರ್ತಾರ್‌ಪುರ ಸಾಹಿಬ್‌ನ ಗುರುದ್ವಾರ ದರ್ಬಾರ್ ಸಾಹಿಬ್‌ನಲ್ಲಿ ಕುಟುಂಬ ಮತ್ತೆ ಒಂದುಗೂಡಿದ ಭಾವನಾತ್ಮಕ ದೃಶ್ಯಗಳಿಗೆ ಸಾಕ್ಷಿಯಾಯಿತು. ಅಲ್ಲಿ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಹಾಡುಗಳನ್ನು ಹಾಡಿದರು ಮತ್ತು ಪರಸ್ಪರರ ಮೇಲೆ ಹೂವುಗಳನ್ನು ಸುರಿಸಿದರು.

ಇಬ್ಬರೂ ಸಹೋದರರು ಮೂಲತಃ ಹರಿಯಾಣದವರು ಮತ್ತು ವಿಭಜನೆಯ ಸಮಯದಲ್ಲಿ ತಮ್ಮ ದಿವಂಗತ ತಂದೆಯ ಸ್ನೇಹಿತ ಕರೀಂ ಭಕ್ಷ್ ಅವರೊಂದಿಗೆ ಮಹೇಂದ್ರಗಢ ಜಿಲ್ಲೆಯ ಗೊಮ್ಲಾ ಗ್ರಾಮದಲ್ಲಿ ವಾಸಿಸುತ್ತಿದ್ದರು.

ಹಿರಿಯ ಸೋದರ ಗುರುದೇವ್ ಸಿಂಗ್ ಜೊತೆಗೆ ಕರೀಂ ಬಕ್ಷ್ ಅವರು ಪಾಕಿಸ್ತಾನಕ್ಕೆ ವಲಸೆ ಹೋದರು. ಆದರೆ, ಕಿರಿಯ ಸೋದರ ದಯಾ ಸಿಂಗ್ ತಮ್ಮ ತಾಯಿಯ ಚಿಕ್ಕಪ್ಪನೊಂದಿಗೆ ಹರಿಯಾಣದಲ್ಲಿಯೇ ಉಳಿದರು. ಬಕ್ಷ್ ಪಾಕಿಸ್ತಾನವನ್ನು ತಲುಪಿದ ನಂತರ, ಲಾಹೋರ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯಲ್ಲಿ ತಂಗಿದರು ಮತ್ತು ಗುರುದೇವ್ ಸಿಂಗ್‌ಗೆ ಮುಸ್ಲಿಂ ಹೆಸರನ್ನು (ಗುಲಾಮ್ ಮುಹಮ್ಮದ್) ನೀಡಿದರು.

ಗುರುದೇವ್ ಸಿಂಗ್ ಕೆಲವು ವರ್ಷಗಳ ಹಿಂದೆ ನಿಧನರಾದರು.

ಗುರುದೇವ್ ಅವರ ಪುತ್ರ ಮುಹಮ್ಮದ್ ಷರೀಫ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, 'ಕಳೆದ ಕೆಲ ವರ್ಷಗಳಲ್ಲಿ ನನ್ನ ತಂದೆ ಅವರ ಸಹೋದರ ದಯಾ ಸಿಂಗ್ ಅವರು ಇರುವ ಸ್ಥಳವನ್ನು ಕಂಡುಕೊಳ್ಳಲು ಭಾರತ ಸರ್ಕಾರಕ್ಕೆ ಹಲವು ಪತ್ರಗಳನ್ನು ಬರೆದಿದ್ದಾರೆ. ಆರು ತಿಂಗಳ ಹಿಂದೆ, ನಾವು ಸಾಮಾಜಿಕ ಮಾಧ್ಯಮದ ಮೂಲಕ ಚಿಕ್ಕಪ್ಪ ದಯಾ ಸಿಂಗ್ ಅವರನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದೇವೆ' ಎಂದು ಅವರು ಹೇಳಿದರು. 

ಬಳಿಕ ಎರಡೂ ಕುಟುಂಬಗಳು ಒಂದುಗೂಡಲು ಕರ್ತಾರ್‌ಪುರ ಸಾಹಿಬ್ ತಲುಪಲು ನಿರ್ಧರಿಸಿದವು. ಹರಿಯಾಣದಲ್ಲಿರುವ ಅವರ ಪೂರ್ವಜರ ಮನೆಗೆ ಭೇಟಿ ನೀಡಲು ಅವರ ಕುಟುಂಬ ಸದಸ್ಯರಿಗೆ ವೀಸಾ ನೀಡುವಂತೆ ಅವರು ಭಾರತ ಸರ್ಕಾರವನ್ನು ಒತ್ತಾಯಿಸಿದರು.

ಮತ್ತೊಂದು ಪ್ರಕರಣದಲ್ಲಿ, ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಮತ್ತೆ ಒಂದಾದರು. ಪಾಕಿಸ್ತಾನದ ಮುಹಮ್ಮದ್ ಸಿದ್ದಿಕ್ (80) ಮತ್ತು ಭಾರತದ ಹಬೀಬ್ (78) 2022ರ ಜನವರಿಯಲ್ಲಿ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಭೇಟಿಯಾದರು. ಸಾಮಾಜಿಕ ಜಾಲತಾಣಗಳ ನೆರವಿನಿಂದ ಅವರು ಕೂಡ ಮತ್ತೆ ಒಂದಾಗಿದ್ದರು.

ಕರ್ತಾರ್‌ಪುರ ಕಾರಿಡಾರ್ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಅಂತಿಮ ವಿಶ್ರಾಂತಿ ಸ್ಥಳವನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ಸಂಪರ್ಕ ಕಲ್ಪಿಸುತ್ತದೆ. 4 ಕಿಮೀ ಉದ್ದದ ಕಾರಿಡಾರ್ ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ವೀಸಾ ಮುಕ್ತ ಪ್ರವೇಶವನ್ನು ಒದಗಿಸುತ್ತದೆ.  ಇದನ್ನು 2019ರ ನವೆಂಬರ್‌ನಲ್ಲಿ ಉದ್ಘಾಟಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com