ಬಿಲಿಂದರ್, ಗಿರ್ಮಿಟ್, ಅಮ್ಮಚ್ಚಿ ಎಂಬ ನೆನಪು, ಕಡಲ್ ಸಿನಿಮಾಗಳಲ್ಲಿ ಸಾಮಾನ್ಯ ಅಂಶ ಯಾವುದು ಗೊತ್ತೇ...?
ಕರ್ನಾಟಕದಲ್ಲಿ ಪ್ರತಿಯೊಂದು ಪ್ರಾಂತ್ಯದಲ್ಲೂ ಕನ್ನಡದ ಭಾಷೆಯ ಸೊಗಡು ಬದಲಾಗುತ್ತದೆ. ಅಂತೆಯೇ ಕುಂದಾಪುರದಲ್ಲಿ ಕುಂದಾಪ್ರ ಕನ್ನಡವೂ ಜನಪ್ರಿಯವಾದ ಆಡು ಭಾಷೆ.
Published: 11th November 2023 02:15 PM | Last Updated: 11th November 2023 02:15 PM | A+A A-

ಯಕ್ಷಗಾನ (ಸಾಂಕೇತಿಕ ಚಿತ್ರ)
ಬೆಂಗಳೂರು: ಕರ್ನಾಟಕದಲ್ಲಿ ಪ್ರತಿಯೊಂದು ಪ್ರಾಂತ್ಯದಲ್ಲೂ ಕನ್ನಡದ ಭಾಷೆಯ ಸೊಗಡು ಬದಲಾಗುತ್ತದೆ. ಅಂತೆಯೇ ಕುಂದಾಪುರದಲ್ಲಿ ಕುಂದಾಪ್ರ ಕನ್ನಡವೂ ಜನಪ್ರಿಯವಾದ ಆಡು ಭಾಷೆ.
ಇದೇನು ಶೀರ್ಷಿಕೆಯಲ್ಲಿ ಒಂದು ವಿಷಯ ಪ್ರಸ್ತಾಪಿಸಿ ಇಲ್ಲಿ ವಿಷಯಾಂತರವಾಗುತ್ತಿದ್ಯಾ ಎಂದು ಗೊಂದಲಕ್ಕೀಡಾಗಬೇಡಿ.. ಆ ಸಿನಿಮಾಗಳಲ್ಲಿನ ಸಾಮಾನ್ಯ ಅಂಶವೇ ಕುಂದಾಪ್ರ ಕನ್ನಡ!
ಸಾಮಾನ್ಯವಾಗಿ ರಾಜ್ಯದ ಯಾವುದೇ ಭಾಗಕ್ಕೆ ತೆರಳಿದರೂ ಕುಶಲೋಪರಿ ವಿಚಾರಿಸುವಾಗ ಹೇಗಿದ್ದೀರಿ? ಎಂಬ ಶಬ್ದ ಕೇಳ ಸಿಗುವುದು ಸಹಜ ಅಲ್ವೇ? ಆದರೆ ಹ್ವಾಯ್ ಹೆಂಗಿದ್ರಿ? ಎಂಬ ಶಬ್ದ ನಿಮ್ಮ ಕಿವಿಗೆ ಬಿತ್ತು ಎಂದಾದರೆ, ಒಂದೋ ನೀವು ಕುಂದಾಪ್ರದಲ್ಲಿದ್ದೀರಿ, ಇಲ್ಲ ಕುಂದಾಪುರದವರು ನಿಮ್ಮ ಸುತ್ತಾ ಇದ್ದಾರೆ ಎಂದರ್ಥ.
ಉಡುಪಿಯ ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕುಗಳ ಸುತ್ತ ಮುತ್ತಲ ಪ್ರದೇಶಗಳಲ್ಲಿ ಮಾತನಾಡುವ ಕನ್ನಡದ ಸೊಗಡು ಕುಂದಾಪ್ರ ಕನ್ನಡ ಎಂದೇ ಜನಜನಿತ.
ಇಲ್ಲಿ ಮಾತನಾಡುವುದಷ್ಟೇ ಅಲ್ಲದೇ ಯಕ್ಷಗಾನ, ತಾಳ ಮದ್ದಳೆಯಂತಹ ಕಾರ್ಯಕ್ರಮಗಳೂ ಕುಂದಾಪ್ರ ಕನ್ನಡದಲ್ಲೇ ನಡೆಯುತ್ತವೆ, ಇದೇ ಭಾಷಾ ಸೊಗಡಿನಲ್ಲಿ ಸಿನಿಮಾಗಳೂ ಬಂದಿವೆ ಎಂಬುದು ಮತ್ತೊಂದು ಅಚ್ಚರಿ!
ಕುಂದಾಪ್ರ ಕನ್ನಡದ ಮೇಲೆ ಅಲ್ಲಿನ ಜನರಿಗೆ ಇರುವ ಅದಮ್ಯ ಪ್ರೇಮಕ್ಕೆ ಸಾಕ್ಷಿಯಾಗಿ ಕೆಲವು ವರ್ಷಗಳ ಹಿಂದೆ, ತಲ್ಲೂರು ಕುಟುಂಬ ಟ್ರಸ್ಟ್ ನಿಂದ ಕುಂದಾಪ್ರ ಕನ್ನಡ ನಿಘಂಟು ಬಿಡುಗಡೆಯಾಗಿತ್ತು. ನಿಘಂಟಿನಲ್ಲಿ ಎರಡು ಭಾಗಗಳಿದ್ದು, 10,500 ಕುಂದಾಪ್ರ ಕನ್ನಡದ ಶಬ್ದಗಳು ಹಾಗೂ ಅದಕ್ಕೆ ಸಾಮಾನ್ಯ ಕನ್ನಡದ ಅರ್ಥಗಳಿವೆ. ಎರಡನೇ ಭಾಗಗಳಲ್ಲಿ 1,700 ನುಡಿಗಟ್ಟುಗಳಿವೆ.
20 ವರ್ಷಗಳ ಹಿಂದೆ ಈ ಯೋಜನೆಗೆ ತೊಡಗಿಸಿಕೊಂಡ ಪಂಜು ಗಂಗುಲಿ ಹಾಗೂ ತಂಡದ ಶ್ರಮದ ಫಲವಾಗಿ ಈ ನಿಘಂಟು ಮೂಡಿಬಂದಿದೆ. ಪಂಜು ನಿಘಂಟಿಗೆ ಮುಖ್ಯ ಸಂಪಾದಕರಾಗಿದ್ದರೆ, ಸಿಎ ಪೂಜಾರಿ ಹಾಗೂ ರಾಮಚಂದ್ರ ಉಪ್ಪುಂದ ಈ ನಿಘಂಟಿಗೆ ಸಂಪಾದಕರಾಗಿದ್ದಾರೆ.
ಈ ಕೆಲಸದಲ್ಲಿ ನಾವು ನೂರಾರು ಮಂದಿಯಿಂದ ಸಹಾಯ ಪಡೆದಿದ್ದೇವೆ. ಸಾಮಾನ್ಯವಾಗಿ ಇಂತಹ ಕೆಲಸಗಳನ್ನು ವಿಶ್ವವಿದ್ಯಾನಿಲಯಗಳು ಮಾಡುತ್ತವೆ. ನಮ್ಮ ತಂಡ ಈ ನಿಘಂಟು ತಯಾರಿಸುವುದರಲ್ಲಿ ಸಾಕಷ್ಟು ಶ್ರಮಿಸಿದೆ. ಈ ನಿಘಂಟಿನಲ್ಲಿ ಕೇವಲ ಶಬ್ದಗಳಿಗೆ ಅರ್ಥವನ್ನಷ್ಟೇ ಅಲ್ಲದೇ, ವಾಕ್ಯಗಳಲ್ಲಿ ಬಳಕೆಯಾಗುವ ಸಂದರ್ಭ ಸಹಿತ ಉದಾಹರಣೆ ವಿವರಿಸಲಾಗಿದೆ. ಈ ವರೆಗೂ ನಿಘಂಟಿನ 1,000 ಪ್ರತಿಗಳು ಮುದ್ರಣಗೊಂಡು ಮಾರಾಟವಾಗಿವೆ ಎನ್ನುತ್ತಾರೆ ಪಂಜು.
"ನನ್ನ ಬಳಿ ಕೇವಲ ದಾಖಲೆಗಳಿಗಾಗಿ ನಿಘಂಟಿನ 8 ಪ್ರತಿಗಳಿವೆ. ಭಾಷೆಗಳ ಬೇರೆಲ್ಲಾ ಸೊಗಡು (ಆಡು ಭಾಷೆಗಳು) ನೇಪಥ್ಯಕ್ಕೆ ಸರಿಯುತ್ತಿರುವಾಗ ಕುಂದಾಪ್ರ ಕನ್ನಡ ಈಗಲೂ ಜನಪ್ರಿಯತೆ ಉಳಿಸಿಕೊಂಡಿದೆ ಎಂದು ನಿಘಂಟು ಪ್ರಕಟಿಸಲು 2ಲಕ್ಷ ರೂಪಾಯಿ ಖರ್ಚು ಮಾಡಿರುವ ಟ್ರಸ್ಟ್ ನ ಮುಖ್ಯಸ್ಥರಾದ ರಾಜಾರಾಮ್ ತಲ್ಲೂರ್ ಹೇಳಿದ್ದಾರೆ.
ಹಾಗಾದರೆ ಈ ಕುಂದಾಪ್ರ ಕನ್ನಡದಲ್ಲಿನ ವಿಶೇಷತೆ ಏನು ಎಂಬುದನ್ನು ನೋಡಿದರೆ, ಅತ್ಯಂತ ಕಡಿಮೆ ಶಬ್ದಗಳಿರುವುದಾಗಿದೆ. ಉದಾಹರಣೆಗೆ ಸಾಮಾನ್ಯವಾಗಿ ಬಳಕೆ ಮಾಡುವ ಭಾಷೆಯಲ್ಲಿ ನಾನು ಅಲ್ಲಿಗೆ ಹೋಗುತ್ತೇನೆ ಎಂದು ಹೇಳುತ್ತಾರೆ, ಆದರೆ ಕುಂದಾಪ್ರ ಕನ್ನಡದಲಿ ನಾ ಅಲ್ಲಿ ಹೋತೆ ಎನ್ನುತ್ತಾರೆ. ಬರೆದುಕೊಂಡು ಬರಬೇಕಾ? ಎಂದು ಸಾಮಾನ್ಯ ಕನ್ನಡದಲ್ಲಿ ಹೇಳುವುದಾದರೆ, ಅದನ್ನೇ ಕುಂದಾಪ್ರ ಕನ್ನಡದಲ್ಲಿ ಬರ್ಕ, ಬರ್ಕ ಎನ್ನುತ್ತಾರೆ ಎಂದು ಪಂಜು ವಿವರಿಸಿದ್ದಾರೆ.
ಪ್ರಸಾದ್ ಮೊಗಬೆಟ್ಟು ಎಂಬುವವರು ಕುಂದಾಪ್ರ ಕನ್ನಡದಲ್ಲಿ ಯಕ್ಷಗಾನ ಸಂಚಿಕೆಗಳನ್ನು ಬರೆದಿದ್ದು, ತಾಳ ಮದ್ದಳೆಗೂ 5 ಕಥೆಗಳನ್ನು ಕುಂದಾಪ್ರ ಕನ್ನಡದಲ್ಲೇ ರಚಿಸಿದ್ದಾರೆ, ನಾವು ಕುಂದಾಪ್ರ ಕನ್ನಡವನ್ನು ಜೀವಿಸುತ್ತೇವೆ ಆ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ ಪ್ರಸಾದ್ ಮೊಗಬೆಟ್ಟು.
ಎಸ್ ವಿ ಕಿರಿಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಸುಜಯೇಂದ್ರ ಹಂದೆ, ಈ ಬಗ್ಗೆ ಮಾತನಾಡಿದ್ದು, ಕುಂದಾಪ್ರ ಕನ್ನಡದಲ್ಲಿ ಯಕ್ಷಗಾನ ಕಾರ್ಯಕ್ರಮಗಳನ್ನು ಜನರು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ.
ಅಡ್ವೊಕೇಟ್ ಹಾಗೂ ಬರಹಗಾರ ಎಎಸ್ ಎನ್ ಹೆಬ್ಬಾರ್ 2 ದಶಕಗಳ ಹಿಂದೆ ಶಿಕಾಗೋದಲ್ಲಿ ನಡೆದ ಅಕ್ಕಾ ಸಮ್ಮೇಳನದಲ್ಲಿ ಕುಂದಾಪ್ರ ಕನ್ನಡದಲ್ಲಿ ಮಾತನಾಡಿನ್ನು ನೆನಪಿಸಿಕೊಂಡಿದ್ದು, ಕುಂದಾಪ್ರ ಕನ್ನಡ ಹಳೆಗನ್ನಡದ ಪ್ರಾಚೀನ ರೂಪವನ್ನು ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ.
ಬಿಲಿಂದರ್, ಗಿರ್ಮಿಟ್, ಅಮ್ಮಚ್ಚಿ ಎಂಬ ನೆನಪು, ಗರ್ಗರ್ ಮಂಡ್ಲಾ, ಕಡಲ್ ಎಂಬ ಚಲನಚಿತ್ರಗಳೂ ಕುಂದಾಪ್ರ ಕನ್ನಡದಲ್ಲಿ ಮೂಡಿಬಂದಿದ್ದು ಈ ಪ್ರದೇಶದ ಜನಪ್ರಿಯತೆ ಗಳಿಸಿವೆ.
ಕುಂದಾಪ್ರ ಕನ್ನಡದ ಮೇಲೆ ಸಾಕಷ್ಟು ಅಭಿಮಾನ ಹೊಂದಿರುವ ಈ ಪ್ರಾಂತ್ಯದ ಜನತೆ ಆಷಾಡ ಅಮಾವಾಸ್ಯೆಯ ದಿನದಂದು ವಿಶ್ವ ಕುಂದಾಪ್ರ ಕನ್ನಡ ದಿನವನ್ನೂ ಆಚರಿಸುತ್ತಾರೆ. ಕುಂದಾಪ್ರ ಕನ್ನಡವನ್ನು ಉತ್ತೇಜಿಸುವುದಕ್ಕಾಗಿ ಪ್ರತ್ಯೇಕ ಅಕಾಡೆಮಿ ಯನ್ನು ಸರ್ಕಾರ ಸ್ಥಾಪಿಸಬೇಕು ಎಂದು ರಾಜಾರಾಮ್ ಅಭಿಪ್ರಾಯಪಟ್ಟಿದ್ದಾರೆ.