ಗೈರಾದ ವಿದ್ಯಾರ್ಥಿಗಳ ಮನೆ ಮುಂದೆಯೇ ಪಾಠ; ಮಾದರಿ ಶಿಕ್ಷಕನ ಕ್ಷಮೆ ಯಾಚಿಸಿ ಮಕ್ಕಳನ್ನು ಶಾಲೆಗೆ ಕಳಿಸಿದ ಪೋಷಕರು!
ಆರ್ಥಿಕ ಸಂಕಷ್ಟದಿಂದ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದ ಮಕ್ಕಳ ಪೋಷಕರ ಮನವೊಲಿಸಲು ಮಾದರಿ ಶಿಕ್ಷಕರೊಬ್ಬರು ಮಾಡಿದ ಕಾರ್ಯವೊಂದು ಇಡೀ ದೇಶದ ಗಮನ ಸೆಳೆಯುತ್ತಿದೆ.
Published: 30th September 2023 05:45 PM | Last Updated: 30th September 2023 07:56 PM | A+A A-

ಗೈರಾದ ಮಕ್ಕಳ ಮನೆ ಮುಂದೆ ಪಾಠ ಮಾಡುತ್ತಿರುವ ಶಿಕ್ಷಕ ಅಮಿತ್ ವರ್ಮಾ
ಲಖನೌ: ಆರ್ಥಿಕ ಸಂಕಷ್ಟದಿಂದ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದ ಮಕ್ಕಳ ಪೋಷಕರ ಮನವೊಲಿಸಲು ಮಾದರಿ ಶಿಕ್ಷಕರೊಬ್ಬರು ಮಾಡಿದ ಕಾರ್ಯವೊಂದು ಇಡೀ ದೇಶದ ಗಮನ ಸೆಳೆಯುತ್ತಿದೆ.
ಹೌದು.. ಉತ್ತರ ಪ್ರದೇಶದ ಝಾನ್ಸಿಯ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಬೋಧನೆಯ ಕಲೆ ಮತ್ತು ಶಕ್ತಿಯನ್ನು ಇಡೀ ಪ್ರಪಂಚಕ್ಕೇ ತೋರಿಸಿದ್ದು, ಗೈರಾಗಿದ್ದ ಮಕ್ಕಳನ್ನೂ ಕೂಡ ಶಾಲೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಝಾನ್ಸಿಯ ಲಕಾರ ಪ್ರಾಥಮಿಕ ಶಾಲೆಯಲ್ಲಿ ನಿಯೋಜನೆಗೊಂಡ ಪ್ರಾಥಮಿಕ ಶಾಲಾ ಶಿಕ್ಷಕ ಅಮಿತ್ ವರ್ಮಾ ಅವರು ಒಂದೆರಡು ತಿಂಗಳಿಂದ ಸತತವಾಗಿ ಶಾಲೆಗೆ ಗೈರಾಗುತ್ತಿದ್ದ ವಿದ್ಯಾರ್ಥಿಗಳನ್ನು ಶಾಲೆಗೆ ವಾಪಸ್ ಕರೆತರುವ ಸಾಹಸ ಮಾಡಿದ್ದು, ಅವರ ಈ ಸಾಹಸ ಇದೀಗ ದೇಶಾದ್ಯಂತ ಮೆಚ್ಚುಗೆಗೆ ಕಾರಣವಾಗಿದೆ.
ಶಾಲೆಯಲ್ಲಿ ಮೀನಾ ಮತ್ತು ಗಜರಾಜ್ ಎಂಬ 4ನೇ ತರಗತಿ ವಿದ್ಯಾರ್ಥಿಗಳು 2 ತಿಂಗಳುಗಳಿಂದ ಶಾಲೆಗೆ ಗೈರಾಗಿದ್ದರು. ಇದನ್ನು ಗಮನಿಸಿದ ಶಿಕ್ಷಕ ಅಮಿತ್ ವರ್ಮಾ ಈ ಬಗ್ಗೆ ಅವರ ಸಹಪಾಠಿಗಳ ಬಳಿ ವಿಚಾರಿಸಿದ್ದಾರೆ. ಈ ವೇಳೆ ಇಬ್ಬರೂ ತಮ್ಮ ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ. ಬಳಿಕ ಅಮಿತ್ ವರ್ಮಾ ಇಬ್ಬರು ವಿದ್ಯಾರ್ಥಿಗಳನ್ನು ಗೈರಾದ ಮಕ್ಕಳ ಮನೆಗೆ ಕಳುಹಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಅದರಂತೆ ವಿದ್ಯಾರ್ಥಿಗಳು ಮೀನಾ ಮತ್ತು ಗಜರಾಜ್ ಮನೆಗೆ ಹೋಗಿ ಅವರ ಪೋಷಕರಿಗೆ ಈ ವಿಷಯ ತಿಳಿಸಿದ್ದಾರೆ. ಆದರೆ ಇದಕ್ಕೆ ಸೊಪ್ಪು ಹಾಕದ ಪೋಷಕರು ತಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: 'ಕೆಪಿಎಸ್'ನಿಂದ ಕರ್ನಾಟಕದಲ್ಲಿ ಸಾರ್ವಜನಿಕ ಶಿಕ್ಷಣ ಬದಲಾವಣೆ ಸಾಧ್ಯ: ಶಿಕ್ಷಣ ಸಚಿವ ಮಧು ಬಂಗಾರಪ್ಪ (ಸಂದರ್ಶನ)
ಬಳಿಕ ಖುದ್ದು ಶಿಕ್ಷಕ ಅಮಿತ್ ವರ್ಮಾ ಅವರೇ ಮೂರು ಬಾರಿ ಮೀನಾ ಮತ್ತು ಗಜರಾಜ್ ಮಕ್ಕಳ ಮನೆಗೆ ಹೋಗಿ ಅವರ ಪೋಷಕರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಪ್ರತೀ ಬಾರಿಯೂ ಪೋಷಕರು ಅವರಿಗೆ ನಿರ್ಲಕ್ಷ್ಯದ ಉತ್ತರ ನೀಡಿ ತಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಶಿಕ್ಷಕ ಅಮಿತ್ ವರ್ಮಾ ಹೇಗಾದರೂ ಸರಿ ಮಕ್ಕಳನ್ನು ಶಾಲೆಗೆ ವಾಪಸ್ ಕರೆತರಬೇಕು ಎಂಬ ಗಟ್ಟಿ ನಿರ್ಧಾರ ಮಾಡಿ ಒಂದು ಯೋಜನೆ ರೂಪಿಸಿದರು. ಅದರಂತೆ ತಮ್ಮ ಶಾಲೆಯ 33 ಮಕ್ಕಳನ್ನು ಜೊತೆ ಮಾಡಿಕೊಂಡು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮೀನಾ ಮತ್ತು ಗಜರಾಜ್ ಮಕ್ಕಳ ಮನೆ ಇರುವ ಗ್ರಾಮಕ್ಕೆ ತೆರಳಿದ್ದಾರೆ.
ಅಲ್ಲದೆ ಅವರ ಮನೆಯ ಮುಂದೆ ಇರುವ ಜಾಗದಲ್ಲೇ ಎಲ್ಲಾ 33 ಮಕ್ಕಳನ್ನೂ ಕೂರಿಸಿ ಅವರಿಗೆ ಅಲ್ಲಿಯೇ ಪಾಠ ಮಾಡಲು ಆರಂಭಿಸಿದ್ದಾರೆ. ಆರಂಭದಲ್ಲಿ ಅಲ್ಲಿನ ಗ್ರಾಮಸ್ಥರು ಇದನ್ನು ನಿರ್ಲಕ್ಷಿಸಿದರೂ ಬಳಿಕ ಒಬ್ಬೊಬ್ಬರಾಗಿ ಗ್ರಾಮಸ್ಥರು ಅಲ್ಲಿ ಸೇರತೊಡಗಿದ್ದಾರೆ. ಈ ವೇಳೆ ಹಲವರು ಶಿಕ್ಷಕ ಅಮಿತ್ ವರ್ಮಾ ವಿರುದ್ದ ಕಿಡಿಕಾರಿದ್ದು, ಅವರ ಆರ್ಥಿಕ ಸಂಕಷ್ಟಕ್ಕಾಗಿ ಮಕ್ಕಳನ್ನು ಕೆಲಸಕ್ಕೆ ಕಳುಹಿಸಿದ್ದಾರೆ. ಅದರಲ್ಲೇನು ತಪ್ಪು.. ಬಡವರ ಮನೆಗಳಲ್ಲಿ ಇದು ಸಾಮಾನ್ಯ ಎಂದು ಕೂಗಾಡಿದ್ದಾರೆ. ಆದರೂ ಧೃತಿಗೆಡದ ಶಿಕ್ಷಕ ವರ್ಮಾ ಶಾಂತವಾಗಿಯೇ ತಮ್ಮ ಕರ್ತವ್ಯ ಮುಂದುವರೆಸಿದ್ದಾರೆ. ಕೆಲವರು ತಮ್ಮ ಮೊಬೈಲ್ ನಲ್ಲಿ ಇದರ ವಿಡಿಯೋ ಕೂಡ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಇತ್ತ ಮಕ್ಕಳ ಪರಿಸ್ಥಿತಿ ಮತ್ತು ಶಿಕ್ಷಕ ಅಮಿತ್ ವರ್ಮಾರ ಪಟ್ಟಿಗೆ ಕೊನೆಗೂ ಮನಸೋತ ಗ್ರಾಮಸ್ಥರು ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರ ಮನವೊಲಿಸಿದ್ದಾರೆ.
ಪೋಷಕರೂ ಕೂಡ ಗ್ರಾಮಸ್ಥರ ಮಾತಿಗೆ ಒಪ್ಪಿ ಶಿಕ್ಷಕ ಅಮಿತ್ ವರ್ಮಾ ಅವರ ಕ್ಷಮೆಯಾಚಿಸಿ ಮಕ್ಕಳನ್ನು ಶಾಲೆಗೆ ವಾಪಸ್ ಕಳುಹಿಸಲು ನಿರ್ಧರಿಸಿದ್ದಾರೆ. ಈ ವೇಳೆ ಪೋಷಕರಿಗೆ ಶಿಕ್ಷಕ ಅಮಿತ್ ವರ್ಮಾ, ವಿದ್ಯಾರ್ಥಿಗಳ ಕಲಿಕೆಯನ್ನು ನಿರ್ಣಯಿಸಲು ಸರ್ಕಾರವು ನಿಗದಿಪಡಿಸಿದ ಮಾನದಂಡವಾದ ‘ನಿಪುಣ್ ಲಕ್ಷ್ಯ’ವನ್ನು ಪೂರೈಸಲು ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ಹಾಜರಾಗುವುದು ಅತ್ಯಗತ್ಯ ಎಂದು ವಿವರಿಸಿದ್ದಾರೆ. ಇನ್ನು ಶಿಕ್ಷಕ ಅಮಿತ್ ವರ್ಮಾ ಅವರ ಈ ಕೆಲಸ ಇದೀಗ ವ್ಯಾಪಕ ಮೆಚ್ಚುಗೆಗೆ ಕೂಡ ಪಾತ್ರವಾಗಿದ್ದು ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಸರ್ಕಾರಿ ಶಾಲೆಯಲ್ಲಿ ಮೊದಲ ಬಾಹ್ಯಾಕಾಶ ಪ್ರಯೋಗಾಲಯ ಸ್ಥಾಪನೆ!
ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ಇದೇ ರೀತಿಯ ಪ್ರಯತ್ನಗಳನ್ನು ಪ್ರೋತ್ಸಾಹಿಸಲು ವರ್ಮಾ ಶಿಕ್ಷಕರ ಗುಂಪುಗಳಲ್ಲಿ ವೀಡಿಯೊವನ್ನು ಹಂಚಿಕೊಳ್ಳಲು ಯೋಜಿಸಿದ್ದಾರೆ. ''ಶಿಕ್ಷಕರ ಶ್ರಮ ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಬರಲು ಉತ್ತೇಜನ ನೀಡುವುದಲ್ಲದೆ ಮಕ್ಕಳನ್ನು ನಿಯಮಿತವಾಗಿ ಕಳುಹಿಸಲು ಪಾಲಕರಿಗೆ ಪ್ರೇರಣೆಯಾಗುತ್ತದೆ’ ಎಂದು ಬಡಗಾಂವ್‌ನ ಬ್ಲಾಕ್ ಶಿಕ್ಷಣಾಧಿಕಾರಿ ಮನೋಜ ಲಕ್ಷಕರ್ ಹೇಳಿದ್ದಾರೆ.
ಅಂದಹಾಗೆ ಝಾನ್ಸಿಯ ಮೌರಾನಿಪುರ ಪಟ್ಟಣದ ಘಾಟ್‌ಕೋತ್ರ ಗ್ರಾಮದವರಾದ ಶಿಕ್ಷಕ ಅಮಿತ್ ವರ್ಮಾ ಅವರು ಸುಮಾರು 14 ವರ್ಷಗಳ ಹಿಂದೆ ಶಿಕ್ಷಕ ವೃತ್ತಿಗೆ ಸೇರಿದ್ದರು. ಪ್ರಸ್ತುತ, ಅವರು ಜಿಲ್ಲೆಯ ಬಡಗಾಂವ್ ಬ್ಲಾಕ್‌ನಲ್ಲಿರುವ ಲಕಾರ ಪ್ರಾಥಮಿಕ ಶಾಲೆಗೆ ನಿಯೋಜನೆಗೊಂಡಿದ್ದಾರೆ. ಶಾಲೆಯಲ್ಲಿ 241 ವಿದ್ಯಾರ್ಥಿಗಳಿದ್ದು, ಪ್ರಾಂಶುಪಾಲರು, ಅರ್ಧ ಡಜನ್ ಸಹಾಯಕ ಶಿಕ್ಷಕರು ಮತ್ತು ಅವರಿಗೆ ಸೇವೆ ಸಲ್ಲಿಸಲು ಶಿಕ್ಷಾ ಮಿತ್ರರನ್ನು ನೇಮಿಸಲಾಗಿದೆ.