ಐಎಸ್ಎಸ್‍ಎಫ್ ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಸ್ವರ್ಣ, ಏಷ್ಯನ್ ಕುಸ್ತಿಯಲ್ಲಿ ದಿವ್ಯಾ, ಮಂಜುಗೆ ಕಂಚು

ಭಾರತದ ಸ್ಟಾರ್ ಶೂಟರ್ ಗಳಾದ ಅಂಜುಮ್ ಮುದಗಿಲ್ -ದಿವ್ಯಾಂಶ್ ಸಿಂಗ್ ಪವಾರ್ ಮತ್ತು ಮನು ಭಾಕರ -ಸೌರಭ್ ಚೌಧರಿ ಚೀನಾದ ಬೀಜಿಂಗ್ ನಲ್ಲಿ ನಡೆಯುತ್ತಿರುವ...

Published: 25th April 2019 12:00 PM  |   Last Updated: 25th April 2019 08:46 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಬೀಜಿಂಗ್: ಭಾರತದ ಸ್ಟಾರ್ ಶೂಟರ್ ಗಳಾದ ಅಂಜುಮ್ ಮುದಗಿಲ್ -ದಿವ್ಯಾಂಶ್ ಸಿಂಗ್ ಪವಾರ್ ಮತ್ತು ಮನು ಭಾಕರ, ಸೌರಭ್ ಚೌಧರಿ ಚೀನಾದ ಬೀಜಿಂಗ್ ನಲ್ಲಿ ನಡೆಯುತ್ತಿರುವ ಐಎಸ್ಎಸ್‍ಎಫ್ ಶೂಟಿಂಗ್ ವಿಶ್ವಕಪ್ ನ 10 ಮೀಟರ್ ಏರ್ ರೈಫಲ್ ಹಾಗೂ ಪ್ಯಾರಾ ಪಿಸ್ತೂಲ್ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿದ್ದಾರೆ. 

ಅಂಜುಮ್ ಹಾಗೂ ದಿವ್ಯಾಂಶಾ ಅವರು ಕೊನೆಯ ಪ್ರಯತ್ನದಲ್ಲಿ 20.6 ಅಂಕ ಕಲೆ ಹಾಕಿ ಮೊದಲ ಸ್ಥಾನ ಭದ್ರ ಪಡಿಸಿಕೊಂಡರು. ಮನು ಹಾಗೂ ಸೌರಭ್ ಜೋಡಿ ಗುರುವಾರ ಎರಡನೇ ಬಂಗಾರ ಪಡೆದು ಬೀಗಿದರು. ಮನು ಜೋಡಿ ಚೀನಾ ಜೋಡಿಯನ್ನು ಬಗ್ಗು ಬಡೆದು ಪ್ರಥಮ ಸ್ಥಾನ ಪಡೆಯಿತು. 

ಮನು ಹಾಗೂ ಸೌರಭ್ ಜೋಡಿ ಐಎಸ್ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ ಸತತ ಎರಡನೇ ಬಂಗಾರ ಗೆದ್ದಿದೆ. ಈ ಜೋಡಿ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ನಡೆದಿದ್ದ ಶೂಟಿಂಗ್ ವಿಶ್ವಕಪ್‍ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. 

ಫೈನಲ್ ಗೂ ಮೊದಲು ನಡೆದ ಕ್ವಾಲಿಫೈಯರ್ ಸುತ್ತಿನಲ್ಲಿ ಮನು ಜೋಡಿ 482 ಅಂಕ  ಪಡೆದು ಐದನೇ ಸ್ಥಾನದಲ್ಲಿತ್ತು. ಆದರೆ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಈ ಜೋಡಿ ಭರ್ಜರಿ ಪ್ರದರ್ಶನ ನೀಡಿತು. ಅರ್ಹತಾ ಸುತ್ತಿನಲ್ಲಿ ದಾಖಲೆಯ ಅಂಕಗಳನ್ನು ಸೇರಿಸಿದ ಜೋಡಿ ಲಯಕ್ಕೆ ಮರಳಿತು.  ಸೌರಭ್ ಚೌಧರಿ ಅವರು ಈಗಾಗಲೇ 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ತಮ್ಮ ಸ್ಥಾನ ಖಚಿತ ಪಡಿಸಿಕೊಂಡಿದ್ದಾರೆ.

ಏಷ್ಯನ್ ಕುಸ್ತಿಯಲ್ಲಿ ದಿವ್ಯಾ, ಮಂಜುಗೆ ಕಂಚು
ಭಾರತದ ದಿವ್ಯಾ ಕಕ್ರನ್ ಹಾಗೂ ಮಂಜು ಕುಮಾರಿ ಅವರು ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್ ನಲ್ಲಿ ಕಂಚಿನ ಪದಕ ಗೆದ್ದು ಕೊಂಡಿದ್ದಾರೆ. 

ಕಕ್ರನ್ 68 ಕೆ.ಜಿ ವಿಭಾಗದಲ್ಲಿ ಮಂಗೋಲಿಯಾದ ಕುಸ್ತಿ ಪಟುವನ್ನು ಮಣಿಸಿದರು. ಮಂಜು ಅವರು ವಿಯೆಟ್ನಾಮ್ ಕುಸ್ತಿ ಪಟು ಥೈ ಹುಂಗ್ ದಾ ಅವರನ್ನು 59 ಕೆ.ಜಿ ವಿಭಾಗದಲ್ಲಿ 11-2 ರಿಂದ ಮಣಿಸಿ ಕಂಚು ಪಡೆದರು. ಇದಕ್ಕೂ ಮೊದಲು ಭಾರತೀಯ ಕುಸ್ತಿ ಪಟುಗಳು 50, 55, 76 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್ಸ್ ನಲ್ಲಿ ನಿರಾಸೆ ಅನುಭವಿಸಿದ್ದರು. 

ಏಷ್ಯನ್ ಗೇಮ್ಸ್ ನಲ್ಲಿ ಬಂಗಾರ ಬಾಚಿಕೊಂಡ ವಿನೀಶ ಪೋಗಟ್ (53), ಪೂಜಾ ಧಂಡಾ (57), ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿದ ಸಾಕ್ಷಿ ಮಲಿಕ್ (62), ನವಜೋತ್ ಕೌರ್ (65), ಕಿರಣ್ ಬಿ (72) ಶುಕ್ರವಾರ ಕಣಕ್ಕೆ ಇಳಿಯಲಿದ್ದು, ಪದಕ ಆಸೆ ಚಿಗುರಿಸಿದ್ದಾರೆ.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp