ಬಿಡಬ್ಲ್ಯೂಎಫ್ ಬ್ಯಾಡ್ಮಿಂಟನ್: ಪಿವಿ ಸಿಂಧು ಸೆಮೀಸ್‌ಗೆ, ಇತಿಹಾಸ ಬರೆದ ಸಾಯಿ ಪ್ರಣಿತ್

ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಪಿವಿ ಸಿಂಧು ಹಾಗೂ ಸಾಯಿ ಪ್ರಣಿತ್ ಅವರು ಇಲ್ಲಿ ನಡೆದಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಜಯ ಸಾಧಿಸಿದ್ದಾರೆ.
ಪಿವಿ ಸಿಂಧು-ಸಾಯಿ ಪ್ರಣೀತ್
ಪಿವಿ ಸಿಂಧು-ಸಾಯಿ ಪ್ರಣೀತ್

ಬಾಸೆಲ್(ಸ್ವಿಟ್ಜರ್ಲೆಂಡ್): ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಪಿವಿ ಸಿಂಧು ಹಾಗೂ ಸಾಯಿ ಪ್ರಣಿತ್ ಅವರು ಇಲ್ಲಿ ನಡೆದಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಜಯ ಸಾಧಿಸಿದ್ದಾರೆ.  
  
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 12-21, 23-21, 21-19 ರಿಂದ ಚೈನಿಸ್ ತೈಪಿಯ ತೈ ಜು ವಿಂಗ್ ವಿರುದ್ಧ ಒಂದು ಗಂಟೆ 11 ನಿಮಿಷದ ಕಾದಾಟದಲ್ಲಿ ಜಯ ಸಾಧಿಸಿದರು. ಈ ಆಟಗಾರ್ತಿಯರು ಒಟ್ಟು 15 ಬಾರಿ ಮುಖಾಮುಖಿಯಾಗಿದ್ದು, ಸಿಂಧು ಐದನೇ ಗೆಲುವು ದಾಖಲಿಸಿದರು. ಈ ಮೂಲಕ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಐದನೇ ಪದಕವನ್ನು ಖಚಿತ ಪಡಿಸಿಕೊಂಡಿದ್ದಾರೆ. 
  
ಪುರುಷರ ಸಿಂಗಲ್ಸ್ ನಲ್ಲಿ ಬಿ.ಸಾಯಿ ಪ್ರಣೀತ್ ಅವರು 24-22, 21-14 ರಿಂದ ಇಂಡೋನೇಷ್ಯಾದ ಜೋನಾಥನ್ ಕ್ರೆಸ್ಟ್ ಅವರನ್ನು 51 ನಿಮಿಷಗಳ ಕಾದಾಟದಲ್ಲಿ ಮಣಿಸಿದರು. 1983ರಲ್ಲಿ ಪ್ರಕಾಶ್ ಪಡುಕೋಣೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕಂಚು ಪಡೆದು ಬೀಗಿದ್ದರು. 36 ವರ್ಷಗಳ ಬಳಿಕ ಭಾರತದ ಮತ್ತೋರ್ವ ಬ್ಯಾಡ್ಮಿಂಟನ್ ಆಟಗಾರ, ಪದಕ ಖಾತರಿ ಪಡಿಸಿಕೊಂಡಿದ್ದಾರೆ. 
  
ಮೊದಲ ಗೇಮ್ ನಲ್ಲಿ ಸಿಂಧು ನಿರಾಸೆ ಅನುಭವಿಸಿದರು. ಎರಡನೇ ಗೇಮ್ ನಲ್ಲಿ ಎಚ್ಚರಿಕೆಯ ಆಟವನ್ನು ಆಡಿದರು. ನಿರ್ಣಾಯಕ ಗೇಮ್ ನಲ್ಲಿ ಮೊದಲಿನಿಂದಲೂ ಎದುರಾಳಿ ಆಟಗಾರ್ತಿಗೆ ತೀವ್ರ ಪೈಪೋಟಿ ನೀಡಿದ ಸಿಂಧು ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿದರು. ಮೊದಲಾವಧಿಯಲ್ಲಿ ತೈ ಜು ಅಂಕಗಳಿಕೆಯಲ್ಲಿ ಮುಂದಿದ್ದರು. ಎರಡನೇ ಅವಧಿಯಲ್ಲಿ ಅಮೋಘ ಗ್ಯಾಪ್ ಶಾಟ್ ಹಾಗೂ ಸರ್ವ್ ಗಳನ್ನು ಮಾಡಿದ ಸಿಂಧು, ಶ್ರೇಷ್ಠ ಪ್ರದರ್ಶನ ನೀಡಿ ಗೇಮ್ ಗೆದ್ದರು. 
  
ಮೂರನೇ ಗೇಮ್ ನ ಆರಂಭದಿಂದಲೂ ಹಿನ್ನಡೆ ಅನುಭವಿಸಿದ್ದ ಸಿಂಧು, ಒತ್ತಡಕ್ಕೆ ಒಳಗಾಗದೆ ಆಡಿದರು. ಫಲವಾಗಿ 14-14, 15-15, 17-17 ಹಾಗೂ 19-19 ರಿಂದ ಸಮಬಲದಲ್ಲಿ ಸಾಗುತ್ತಿದ್ದ ಪಂದ್ಯದ ಕೊನೆಯಲ್ಲಿ ಸತತ ಅಂಕಗಳನ್ನು ಕಲೆ ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com