ಕೊನೆಗೂ, ನಾನು ವಿಶ್ವಚಾಂಪಿಯನ್: ಪಿ ವಿ ಸಿಂಧು 

ನನಗೆ ಈ ಸಂದರ್ಭದಲ್ಲಿ ಮಾತನಾಡಲು ಪದಗಳೇ ಸಿಗುತ್ತಿಲ್ಲ, ಈ ಗಳಿಗೆ ಬರಲು ನಾನು ಹಲವು ವರ್ಷಗಳಿಂದ ನಿರೀಕ್ಷೆ ಇಟ್ಟುಕೊಂಡಿದ್ದೆ. ಕೊನೆಗೂ ಅದು ನನಗೆ ಸಿಕ್ಕಿದೆ ಎಂದು ಪಿ ವಿ ಸಿಂಧು ಹೇಳಿದ್ದಾರೆ.

Published: 26th August 2019 10:11 AM  |   Last Updated: 26th August 2019 12:01 PM   |  A+A-


P V Sindhu

ಪಿ ವಿ ಸಿಂಧು

Posted By : Sumana Upadhyaya
Source : PTI

          ಈ ದಿನಕ್ಕಾಗಿ, ನಾನು ಇಷ್ಟು ದಿನ ಕಾಯುತ್ತಿದ್ದೆ

ಬಾಸೆಲ್ (ಸ್ವಿಟ್ಜರ್ಲ್ಯಾಂಡ್): ''ನನಗೆ ಈ ಸಂದರ್ಭದಲ್ಲಿ ಮಾತನಾಡಲು ಪದಗಳೇ ಸಿಗುತ್ತಿಲ್ಲ, ಈ ಗಳಿಗೆ ಬರಲು ನಾನು ಹಲವು ವರ್ಷಗಳಿಂದ ನಿರೀಕ್ಷೆ ಇಟ್ಟುಕೊಂಡಿದ್ದೆ. ಕೊನೆಗೂ ಅದು ನನಗೆ ಸಿಕ್ಕಿದೆ, ಅದನ್ನು ನಾನು ಖುಷಿಯಿಂದ ಅನುಭವಿಸಲು ಬಯಸುತ್ತೇನೆ'' ಹೀಗಂದಿದ್ದು ವಿಶ್ವದ ನಂಬರ್ ಒನ್ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು. 


ಎರಡು ಬಾರಿ ರಜತ ಪದಕದ ವಿಜೇತೆಯಾಗಿದ್ದ ಸಿಂಧುಗೆ ಸ್ವಿಡ್ಜರ್ಲ್ಯಾಂಡ್ ನ ಬಾಸೆಲ್ ನಲ್ಲಿ ನಿನ್ನೆ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಸ್ವರ್ಣ ಪದಕ ಗೆದ್ದಾಗ ನಿಜಕ್ಕೂ ಅವರ ಬಾಯಲ್ಲಿ ಒಂದು ಕ್ಷಣ ಮಾತೇ ಹೊರಡದಾಯಿತು. 


2016ರ ರಿಯೊ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕದ ಗರಿಯನ್ನು ಭಾರತಕ್ಕೆ ಸಿಂಧು ತಂದುಕೊಟ್ಟ ಮೇಲೆ ಅವರ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದವು. ಕಳೆದ ವರ್ಷ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಕೂಡ ಬೆಳ್ಳಿ ಪದಕ ಗಳಿಸಿದ್ದರು. ಆದರೆ ಕೊನೆಯ ಪಂದ್ಯದಲ್ಲಿ ಅದೃಷ್ಟ ಅವರ ಕೈಕೊಡುತ್ತಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ, ಅದೃಷ್ಟ ಕೈ ಹಿಡಿದಿದೆ.


ನಿನ್ನೆ ಬಾಸೆಲ್ ನ ಸೈಂಟ್ ಜಕೊಬ್ಶಲ್ಲೆ ಸ್ಟೇಡಿಯಂನಲ್ಲಿ ಭಾರತದ ರಾಷ್ಟ್ರಗೀತೆ ಮೊಳಗುತ್ತಿರುವಾಗ ಪೋಡಿಯಂನಲ್ಲಿ ನಿಂತ ಸಿಂಧು ಕಣ್ಣು ಆನಂದಭಾಷ್ಪಗಳಿಂದ ಒದ್ದೆಯಾಗಿದ್ದವು. ''ನಮ್ಮ ರಾಷ್ಟ್ರಧ್ವಜ ಅಲ್ಲಿ ಸ್ಟೇಡಿಯಂನಲ್ಲಿ ಮೇಲಕ್ಕೆ ಹಾರಿ ರಾಷ್ಟ್ರಗೀತೆ ಮೊಳಗುತ್ತಿರುವಾಗ ನನಗೆ ಆ ಕ್ಷಣ ನಿಜಕ್ಕೂ ವಿಶೇಷವಾಗಿತ್ತು. ರೋಮಾಂಚನವಾಗಿತ್ತು. ನನಗೆ ಈ ಕ್ಷಣ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ, ಯಾಕೆಂದರೆ ನಾನು ಆಡಿರುವುದು ನನಗೆ ವೈಯಕ್ತಿಕವಾಗಿ ಮತ್ತು ಎಲ್ಲಾ ಭಾರತೀಯರಿಗೆ ಇದು ವಿಶೇಷ ಎಂದರು ಸಿಂಧು.


ಬೇರೆ ಅಂತಿಮ ಪಂದ್ಯಗಳಂತೆ ಇದು ಕೂಡ ಆಗಿತ್ತು, ವಿಶೇಷ ಒತ್ತಡವೇನು ಅನಿಸಿರಲಿಲ್ಲ, ಹೀಗಾಗಿ ನನ್ನಿಂದ ಉತ್ತಮವಾದದ್ದನ್ನು ನೀಡಲು ಸಾಧ್ಯವಾಯಿತು. ಆ ಹೊತ್ತಿನಲ್ಲಿ ಪಂದ್ಯದ ಮೇಲಷ್ಟೇ ನನ್ನ ಗಮನವಿತ್ತು, ಅದು ಅಂತಿಮ ಪಂದ್ಯ ಎಂದು ನಾನು ಭಾವಿಸಲಿಲ್ಲ. ಸೆಮಿಪೈನಲ್, ಕ್ವಾರ್ಟರ್ ಫೈನಲ್ ಗೆ ಆಡಿದಂತೆಯೇ ಭಾವಿಸಿ ನಾನು ಇದಕ್ಕೆ ಕೂಡ ಆಡಿದೆ. ಸೋಲು-ಗೆಲುವು ನಂತರದ್ದು ಎಂದು ಭಾವಿಸಿ ನನ್ನ ಕೈಯಿಂದಾದ ಸಂಪೂರ್ಣ ಶ್ರಮ ಹಾಕಿದೆ. ಬ್ಯಾಡ್ಮಿಂಟನ್ ಕೋರ್ಟ್ ಗೆ ಹೋಗಿ ಶೇಕಡಾ 100ರಷ್ಟು ಪ್ರಯತ್ನ ಹಾಕುವುದು ನನಗೆ ಆ ಸಂದರ್ಭದಲ್ಲಿ ಮುಖ್ಯವೆನಿಸಿತು ಎಂದರು.

ಸಿಂಧು ಅವರ ಎದುರು ಸೋಲು ಕಂಡ ಜಪಾನ್ ನ ನೊಝೊಮಿ ಒಕುಹರಾ, ''ಸಿಂಧು ಅವರ ಆಟದ ವೇಗಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಸಿಂಧು ವೇಗವಾಗಿ ನನಗೆ ತಿರುಗಿಸಿ ಕೊಡುತ್ತಿದ್ದರು. ಅದಕ್ಕೆ ಸರಿಯಾಗಿ ನನ್ನ ಆಟದ ವೇಗ ಇರಲಿಲ್ಲ. ನನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಅದು ಕ್ರೀಡೆಯಲ್ಲಿ ಆಗಾಗ ಆಗುತ್ತದೆ, ಈ ಬಾರಿ ಆಟ ನನ್ನ ಕೈಹಿಡಿಯಲಿಲ್ಲ ಎಂದರು ವಿಶ್ವದ ನಂಬರ್ 4ನೇ ಶ್ರೇಯಾಂಕಿತೆ.


ಬೇರೆ ಸ್ಪರ್ಧೆಗಳಲ್ಲಿ ಕೂಡ ನಾನು ಪಂದ್ಯಗಳನ್ನು ಸೋತಿದ್ದೇನೆ. ನನ್ನ ಶಾರೀರಿಕ ಮತ್ತು ಮಾನಸಿಕ ದೃಢತೆಯನ್ನು ಸುಧಾರಿಸಿಕೊಂಡು ಮುಂದಿನ ಬಾರಿಗೆ ತಯಾರಿಯಾಗಬೇಕು ಎಂದು ಒಕುಹರಾ ಹೇಳಿದರು.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp