ಜಪಾನ್ ಓಪನ್: ಶ್ರೀಕಾಂತ್, ಸಮೀರ್ ವರ್ಮಾ ಔಟ್, ಸಿಂಧೂ, ಪ್ರಣಯ್ ಗೆ ಮುನ್ನಡೆ

ಭಾರತದ ಅಗ್ರ ಕ್ರಮಾಂಕದ ಬ್ಯಾಡ್ಮಿಂಟನ್‌ ಆಟಗಾರ ಕಿಡಂಬಿ ಶ್ರೀಕಾಂತ್‌ ಅವರ 2019ರ ವೈಫಲ್ಯ ಮುಂದುವರಿದಿದ್ದು, ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್‌ ಮೊದಲ ಸುತ್ತಿನಲ್ಲಿಯೇ....
ಕೆ.ಶ್ರೀಕಾಂತ್, ಸಮೀರ್ ವರ್ಮಾ
ಕೆ.ಶ್ರೀಕಾಂತ್, ಸಮೀರ್ ವರ್ಮಾ
ಟೋಕಿಯೋ: ಭಾರತದ ಅಗ್ರ ಕ್ರಮಾಂಕದ ಬ್ಯಾಡ್ಮಿಂಟನ್‌ ಆಟಗಾರ ಕಿಡಂಬಿ ಶ್ರೀಕಾಂತ್‌ ಅವರ 2019ರ ವೈಫಲ್ಯ ಮುಂದುವರಿದಿದ್ದು, ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್‌ ಮೊದಲ ಸುತ್ತಿನಲ್ಲಿಯೇ ಭಾರತದ ಮತ್ತೊಬ್ಬ ಆಟಗಾರ ಎಚ್‌.ಎಸ್‌ ಪ್ರಣಯ್‌ ವಿರುದ್ಧ ಸೋಲು ಅನುಭವಿಸಿದರು.
55 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಎಚ್‌.ಎಸ್‌ ಪ್ರಣಯ್‌ ಅವರು ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದರೂ ಬಳಿಕ ಪುಟಿದೆದ್ದು 13-21, 21-11, 22-20 ಅಂತರದಲ್ಲಿ ಕಿಡಂಬಿ ಶ್ರೀಕಾಂತ್‌ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿದರು.
ಎಂಟನೇ ಶ್ರೇಯಾಂಕದ ಶ್ರೀಕಾಂತ್‌ ಅವರು ಅಂದುಕೊಂಡಂತೆ ಮೊದಲನೇ ಸೆಟ್‌ನಲ್ಲಿ 21-13 ಅಂತರದಲ್ಲಿ ಎಚ್‌.ಎಸ್‌ ಪ್ರಣಯ್‌ ಅವರನ್ನು ಮಣಿಸಿದರು. ನಂತರ, ಎರಡನೇ ಸೆಟ್‌ ಹಾಗೂ ಮೂರನೇ ಸೆಟ್‌ನಲ್ಲಿ ಎಚ್ಚೆತ್ತುಕೊಂಡ ಪ್ರಣಯ್‌ 21-11, 22-20 ಅಂತರದಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡರು. 
ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ಆಂಡರ್ಸ್ ಆಂಟನ್‌ಸೆನ್‌ ಹಾಗೂ ಭಾರತದ ಸಮೀರ್ ವರ್ಮಾ ಎದುರಾಗಿದ್ದು ಇಲ್ಲಿಯೂ ಭಾರತೀಯ ಆಟಗಾರರು ನಿರಾಶೆ ಮೂಡಿಸಿದ್ದಾರೆ.  46 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ  ಸಮೀರ್ ವರ್ಮಾ  17-21 12-21 ಸೆಟ್ ಗಳಿಂದ ಸೋಲುಂಡರು. 
ಮಿಶ್ರ ಡಬಲ್ಸ್ ನಲ್ಲಿ ಸಹ  ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಜೋಡಿ ಚೀನಾದ ಜೋಡಿ ಎದುರಿಗೆ  11-21, 14-21 ಸೆಟ್ ಗಳಿಂದ ಸೋತಿದೆ.
ಸಿಂಧೂ ಶುಭಾರಂಭ

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 21-9, 21-17 ರಿಂದ ಚೀನಾದ ಹನ್ ಯು ವಿರುದ್ಧ 37 ನಿಮಿಷಗಳ ಕಾದಾಟದಲ್ಲಿ ಜಯ ಸಾಧಿಸಿ, ಎರಡನೇ ಸುತ್ತು ಪ್ರವೇಶಿಸಿದರು. ಈ ಮೂಲಕ ಹನ್ ಯು ವಿರುದ್ಧ ಸಿಂಧು ತಮ್ಮ ಅಜೇಯ ಓಟವನ್ನು ಮುಂದುವರೆಸಿದ್ದಾರೆ.

ಮೊದಲ ಗೇಮ್ ನಲ್ಲಿ ಆರಂಭದಿಂದಲೂ ಅಂಕದ ಬೇಟೆಯಲ್ಲಿ ಮುನ್ನಡೆ ಸಾಧಿಸಿದ್ದ ಸಿಂಧು ಅವರು, ಹಿಂದೆ ಬೀಳಲಿಲ್ಲ. ಭರ್ಜರಿ ಪ್ರದರ್ಶನ ನೀಡಿದ ಸಿಂಧು, ಅಂಕಗಳಿಸಿ ಮುಂದೆ ಸಾಗಿದರು. ಎರಡನೇ ಗೇಮ್ ನಲ್ಲಿ ಸಿಂಧು ಅವರಿಗೆ ಕೊಂಚ ಪ್ರತಿರೋಧ ಒಡ್ಡಿದ ಹನ್ ಯು ಅವರು, ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ತಾಳ್ಮೆ ಕಳೆದುಕೊಳ್ಳದೆ ಆಡಿದ ಸಿಂಧು ಅರ್ಹ ಗೆಲುವು ದಾಖಲಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com