ಬಹ್ರೈನ್ ತಂಡ ಅನರ್ಹ: ಭಾರತದ ಮಿಶ್ರ ರಿಲೆ ತಂಡಕ್ಕೆ 2018ರ ಏಷ್ಯನ್ ಗೇಮ್ಸ್ ಚಿನ್ನದ ಪದಕ!
ತಂಡದ ಆಟಗಾರರೊಬ್ಬರು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ ಆರೋಪದ ಮೇಲೆ ಬಹ್ರೈನ್ ತಂಡ ಅನರ್ಹಗೊಂಡಿರುವುದರಿಂದ 2018ರ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದ ಭಾರತದ 4*400 ಮೀ. ರಿಲೆ ತಂಡ ಇದೀಗ ಚಿನ್ನದ ಪದಕಕ್ಕೆ ಬಡ್ತಿ ಪಡೆದಿದೆ.
Published: 24th July 2020 10:31 AM | Last Updated: 24th July 2020 12:18 PM | A+A A-

ಭಾರತದ ಮಿಶ್ರ ಡಬಲ್ಸ್ ರಿಲೆ ತಂಡ
ನವದೆಹಲಿ: ತಂಡದ ಆಟಗಾರರೊಬ್ಬರು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ ಆರೋಪದ ಮೇಲೆ ಬಹ್ರೈನ್ ತಂಡ ಅನರ್ಹಗೊಂಡಿರುವುದರಿಂದ 2018ರ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದ ಭಾರತದ 4*400 ಮೀ. ರಿಲೆ ತಂಡ ಇದೀಗ ಚಿನ್ನದ ಪದಕಕ್ಕೆ ಬಡ್ತಿ ಪಡೆದಿದೆ.
ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದ ಆರೋಪದ ಮೇಲೆ ಬಹ್ರೈನ್ ನ ರಿಲೆ ತಂಡದ ಆಟಗಾರ್ತಿ ಕೆಮಿ ಅಡೆಕೊಯ ಅವರಿಗೆ ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್(ಎಐಯು) ನಾಲ್ಕು ವರ್ಷಗಳ ಕಾಲ ಆಟದಿಂದ ನಿಷೇಧ ಹೇರಿದೆ. ಅಲ್ಲದೆ ಅಡೆಕೊಯ ಅವರ ಫಲಿತಾಂಶವನ್ನು ರದ್ದುಪಡಿಸಿರುವುದರಿಂದ ಮಹಿಳೆಯರ 400 ಮೀಟರ್ ಹರ್ಡಲ್ಸ್ ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಭಾರತದ ಅನು ರಾಘವನ್ ಅವರಿಗೆ ಕಂಚಿನ ಪದಕ ನೀಡಲಾಗಿದೆ.
2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ 4*400 ಮೀಟರ್ ರಿಲೆಯಲ್ಲಿ ಭಾರತದ ಮೊಹಮ್ಮದ್ ಅನಸ್, ಎಂ ಆರ್ ಪೂವಮ್ಮ, ಹಿಮಾ ದಾಸ್, ಅರೊಕಿಯಾ ರಾಜೀವ್ 3:15:71ರಲ್ಲಿ ಮುಗಿಸಿತ್ತು. ಬಹ್ರೈನ್ ತಂಡ 3:11:89ರಲ್ಲಿ ಮುಗಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತ್ತು. 400 ಮೀಟರ್ ಹರ್ಡಲ್ಸ್ ನಲ್ಲಿ ರಾಘವನ್ 56.92 ರಲ್ಲಿ ಮುಗಿಸಿ ನಾಲ್ಕನೇ ಸ್ಥಾನ ಪಡೆದಿದ್ದರು.