ಜುಲೈಯಲ್ಲಿ ಒಲಿಂಪಿಕ್ ಪಂದ್ಯ ನಡೆಸಿಯೇ ಸಿದ್ದ; ಕ್ರೀಡಾಕೂಟ ರದ್ದು ವದಂತಿ ತಳ್ಳಿ ಹಾಕಿದ ಒಲಿಂಪಿಕ್ ಸಮಿತಿ
ಒಲಿಂಪಿಕ್ಸ್ ಕ್ರೀಡೆಯನ್ನು ಮುಂದೂಡಲಾಗುತ್ತಿದೆ ಎಂಬ ವರದಿಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ)ಯ ಅಧ್ಯಕ್ಷ ಥಾಮಸ್ ಬಚ್ ಮತ್ತು ಸ್ಥಳೀಯ ಸಂಘಟಕರು ತಳ್ಳಿಹಾಕಿದ್ದಾರೆ.
Published: 22nd January 2021 09:47 AM | Last Updated: 22nd January 2021 12:39 PM | A+A A-

ಸಾಂದರ್ಭಿಕ ಚಿತ್ರ
ಟೊಕ್ಯೊ:ಒಲಿಂಪಿಕ್ಸ್ ಕ್ರೀಡೆಯನ್ನು ಮುಂದೂಡಲಾಗುತ್ತಿದೆ ಎಂಬ ವರದಿಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ)ಯ ಅಧ್ಯಕ್ಷ ಥಾಮಸ್ ಬಚ್ ಮತ್ತು ಸ್ಥಳೀಯ ಸಂಘಟಕರು ತಳ್ಳಿಹಾಕಿದ್ದಾರೆ.
ಒಲಿಂಪಿಕ್ ಕ್ರೀಡಾಕೂಟ ಜುಲೈ 23ಕ್ಕೆ ಆರಂಭವಾಗಲಿದೆ, ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ಹಿಂದೆ ಕ್ರೀಡಾಕೂಟವನ್ನು 10 ತಿಂಗಳುಗಳ ಕಾಲ ಮುಂದೂಡಲಾಗಿತ್ತು. ಇದೀಗ ಮತ್ತೆ ಪಂದ್ಯ ಆಯೋಜನೆಗೆ ಧಕ್ಕೆ ಎದುರಾಗಿದೆಯೇ ಎಂಬ ಆತಂಕ ಉಂಟಾಗಿದೆ.
ಅನಧಿಕೃತ ಸರ್ಕಾರಿ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಕ್ರೀಡಾಕೂಟವನ್ನು ಮುಂದೂಡಲಾಗಿದೆ ಎಂದು ಟೈಮ್ಸ್ ಆಫ್ ಲಂಡನ್ ವರದಿ ಮಾಡಿತ್ತು. ಯಾರು ಕೂಡ ಪಂದ್ಯ ನಡೆಯುವುದಿಲ್ಲ ಎಂದು ಮುಂದೆ ಬಂದು ಹೇಳಲು ಸಿದ್ದರಿಲ್ಲ. ಆದರೆ ಸಹಮತಕ್ಕೆ ಬಂದಿರುವಂತೆ ಒಲಿಂಪಿಕ್ಸ್ ನಡೆಸುವುದು ಸದ್ಯದ ಮಟ್ಟಿಗೆ ಕಷ್ಟವಾಗಿದೆ. ವೈಯಕ್ತಿಕವಾಗಿ ಇದು ನಡೆಯುತ್ತದೆ ಎಂದು ನನಗೆ ಅನಿಸುವುದಿಲ್ಲ ಎಂದು ಸರ್ಕಾರದ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಆದರೆ ಇಂದು ಒಲಿಂಪಿಕ್ಸ್ ನ ಸ್ಥಳೀಯ ಸಮಿತಿ ಆಯೋಜಕರು ಪತ್ರಿಕೆಯಲ್ಲಿ ಬಂದಿರುವ ವರದಿಯನ್ನು ನೇರವಾಗಿ ಪ್ರಸ್ತಾಪಿಸದೆ, ಒಲಿಂಪಿಕ್ಸ್ ನಿಗದಿಯಂತೆ ನಡೆಯಲಿದ್ದು ಪ್ರಧಾನ ಮಂತ್ರಿ ಯೊಶಿಹಿಡೆ ಸುಗ ಅವರ ಬೆಂಬಲ ಸಂಪೂರ್ಣವಾಗಿ ಇದೆ ಎಂದಿದ್ದಾರೆ.
ಸರ್ಕಾರ, ಟೋಕಿಯೊ ಮೆಟ್ರೋಪಾಲಿಟನ್ ಸರ್ಕಾರ, ಟೋಕಿಯೊ 2020 ಸಂಘಟನಾ ಸಮಿತಿ, ಐಒಸಿ ಮತ್ತು ಐಪಿಸಿ (ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ) ಸೇರಿದಂತೆ ನಮ್ಮ ಎಲ್ಲಾ ಪಾಲುದಾರರು ಈ ಬೇಸಿಗೆಯಲ್ಲಿ ಒಲಿಂಪಿಕ್ಸ್ ಆಯೋಜಿಸುವತ್ತ ಸಂಪೂರ್ಣ ಗಮನ ಹರಿಸಿದ್ದಾರೆ ಎಂದು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಸದ್ಯದಲ್ಲಿಯೇ ಕೋವಿಡ್-19 ನಿಯಂತ್ರಣಕ್ಕೆ ಬಂದು ಜನಜೀವನ ಸಹಜ ಸ್ಥಿತಿಗೆ ಮರಳುತ್ತದೆ ಎಂಬ ವಿಶ್ವಾಸವಿದೆ. ಪಂದ್ಯಗಳನ್ನು ಸುರಕ್ಷಿತವಾಗಿ ನಡೆಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದೆ.
ಮೊದಲನೆಯದಾಗಿ, ವಿಜ್ಞಾನ, ಔಷಧ, ವ್ಯಾಕ್ಸಿನೇಷನ್ ಮತ್ತು (ವೈರಸ್) ಪರೀಕ್ಷೆಗಳಲ್ಲಿ ಅಂತಹ ದೊಡ್ಡ ಪ್ರಗತಿ ಇರುವುದರಿಂದ ನೀವು ಮಾರ್ಚ್ 2021 ಅನ್ನು ಮಾರ್ಚ್ 2020 ರೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಬಚ್ ಹೇಳಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಇದೆಲ್ಲವೂ ಲಭ್ಯವಿರಲಿಲ್ಲ. ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸಬೇಕೆಂದು ಯಾರಿಗೂ ಇನ್ನೂ ತಿಳಿದಿರಲಿಲ್ಲ, ಈಗ ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ.