
ಸೋಮವಾರಪೇಟೆ: ಹಾಕಿ ಟರ್ಫ್ ಗೆ ಕಾಮಗಾರಿ ಮುಕ್ತಾಯಗೊಳ್ಳುವುದಕ್ಕೂ ಮುನ್ನವೇ ಎಫ್ಐಎಚ್ ಪ್ರಮಾಣಪತ್ರ!
ಮಡಿಕೇರಿ: ಕೊಡಗಿನ ಸೋಮವಾರ ಪೇಟೆಯಲ್ಲಿ ನಿರ್ಮಾಣವಾಗಿರುವ ಸಿಂಥೆಟಿಕ್ ಹಾಕಿ ಟರ್ಫ್ ಗೆ ಅಂತಾರಾಷ್ಟ್ರೀಯ ದರ್ಜೆಯ ಎಫ್ಐಎಚ್ ಪ್ರಮಾಣಪತ್ರ ದೊರೆತಿದೆ.
ಈ ಬೆಳವಣಿಗೆಯ ಬಗ್ಗೆ ಹಾಕಿ ಆಟಗಾರರು ಸಂತಸ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರೆ ಹಾಕಿ ಕರ್ನಾಟಕಕ್ಕೆ ಮಾತ್ರ ಆಘಾತ ಉಂಟಾಗಿದೆ.
2013 ರಲ್ಲಿ ಅನುಮೋದನೆ ದೊರೆತ ಸೋಮವಾರ ಪೇಟೆ ಹಾಕಿ ಟರ್ಫ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ವೈಜ್ಞಾನಿಕ ನಿರ್ಮಾಣ, ಕ್ಷಮತೆ, ಆಟಗಾರರ ಕಲ್ಯಾಣ ಅಗತ್ಯತೆಗಳನ್ನು ಮಾನದಂಡವಾಗಿಟ್ಟುಕೊಂಡು ಎಫ್ಐಹೆಚ್ ಪ್ರಮಾಣಪತ್ರ ನೀಡಲಾಗುತ್ತದೆ.
ಆದರೆ ಇಲ್ಲಿ ನೀರಿನ ಸೌಕರ್ಯ, ಪೈಪ್ ಲೈನ್, ಚರಂಡಿ ವ್ಯವಸ್ಥೆ, ನೀರು ಸಂಗ್ರಹದ ವ್ಯವಸ್ಥೆ ಸೇರಿದಂತೆ ಯಾವುದೇ ವ್ಯವಸ್ಥೆಗಳ ಕಾಮಗಾರಿ ಇನ್ನಷ್ಟೇ ಪೂರ್ಣಗೊಳ್ಳಬೇಕಿದ್ದರೂ ಎಫ್ಐಎಚ್ ಪ್ರಮಾಣಪತ್ರ ಲಭ್ಯವಾಗಿರುವುದು ಹಾಕಿ ಕರ್ನಾಟಕದ ಅಘಾತಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರುವ ಹಾಕಿ ಕರ್ನಾಟಕದ ಕಾರ್ಯದರ್ಶಿ ಹಾಗು ಹಾಕಿ ಇಂಡಿಯಾದ ಆಯ್ಕೆ ಸಮಿತಿಯ ಸದಸ್ಯ ಡಾ.ಸುಬ್ಬಯ್ಯ ಎ.ಬಿ ಕಾಮಗಾರಿಯೇ ಪೂರ್ಣಗೊಂಡಿರದ ಟರ್ಫ್ ಗೆ ಎಐಎಚ್ ಸರ್ಟಿಫಿಕೇಷನ್ ದೊರೆತಿರುವುದು ಅಘಾತ ಉಂಟುಮಾಡಿದೆ, ಪ್ರದರ್ಶನ ಪಂದ್ಯವೊಂದು ನಡೆದು, ಅಗತ್ಯ ಪರೀಕ್ಷೆಗಳು ನಡೆದ ಬಳಿಕವಷ್ಟೇ ಈ ಪ್ರಮಾಣಪತ್ರ ಸಿಗಲಿದೆ. ಅಷ್ಟೇ ಅಲ್ಲದೇ ನೀರಿನ ಸೂಕ್ತ ವ್ಯವಸ್ಥೆ ಇಲ್ಲದೇ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿ ಈ ವಿಷಯವನ್ನು ಡಿವೈಇಎಸ್ ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಗಮನಕ್ಕೆ ತಂದಿರುವುದಾಗಿ ಹೇಳಿದ್ದಾರೆ.