ಛತ್ರಸಾಲ್ ಸ್ಟೇಡಿಯಂ ಕೊಲೆ ಪ್ರಕರಣ: ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ

ಕುಸ್ತಿಪಟುವೊಬ್ಬನ ಕೊಲೆ ಪ್ರಕರಣದಲ್ಲಿ 2012ರ ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಭಾಗಿಯಾಗಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದು, ಪ್ರಕರಣ ಸಂಬಂಧ ದೆಹಲಿ ಪೊಲೀಸರು ಸುಶೀಲ್ ಕುಮಾರ್ ವಿರುದ್ಧ ಲುಕ್'ಔಟ್ ನೋಟಿಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ. 
ಸುಶೀಲ್ ಕುಮಾರ್
ಸುಶೀಲ್ ಕುಮಾರ್

ನವದೆಹಲಿ: ಕುಸ್ತಿಪಟುವೊಬ್ಬನ ಕೊಲೆ ಪ್ರಕರಣದಲ್ಲಿ 2012ರ ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಭಾಗಿಯಾಗಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದು, ಪ್ರಕರಣ ಸಂಬಂಧ ದೆಹಲಿ ಪೊಲೀಸರು ಸುಶೀಲ್ ಕುಮಾರ್ ವಿರುದ್ಧ ಲುಕ್'ಔಟ್ ನೋಟಿಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ. 

ವಾಯುವ್ಯ ದೆಹಲಿಯ ಛತ್ರಸಾಲ್ ಸ್ಟೇಡಿಯಂನ ಪಾರ್ಕಿಂಗ್ ಪ್ರದೇಶದಲ್ಲಿ 23ರ ಹರೆಯದ ಮಾಜಿ ಜ್ಯೂನಿಯರ್ ರಾಷ್ಟ್ರೀಯ ಚಾಂಪಿಯನ್ ಸಾಗರ್ ಧಂಕಡ್ ಎಂಬ ಯುವನ ಮೇಲೆ ಗಂಭೀರ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಸುಶೀಲ್ ಕುಮಾರ್ ಅವರ ಹೆಸರು ಕೇಳಿ ಬಂದಿತ್ತು. 

ತಮ್ಮ ವಿರುದ್ಧ ಕೊಲೆ ಆರೋಪಗಳು ಕೇಳಿಬಂದ ಬಳಿಕ ಸುಶೀಲ್ ಕುಮಾರ್ ಅವರು ತಲೆಮರೆಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ಸುಶೀಲ್ ಕುಮಾರ್ ಅವರ ಪತ್ತೆಗೆ ಪೊಲೀಸರು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. 

ಮೊದಲಿಗೆ ದೆಹಲಿ ಪೊಲೀಸರು ಹರಿದ್ವಾರಕ್ಕೆ ತೆರಳಿದ್ದು, ನಂತರ ರಿಷಿಕೇಶಕ್ಕೆ ತೆರಳಿ ಹುಡುಕಾಟ ನಡೆಸಿದ್ದರು. ಹರಿದ್ವಾರದಲ್ಲಿ ಅವರು ಆಶ್ರಮವೊಂದರಲ್ಲಿ ಉಳಿದುಕೊಂಡಿದ್ದರು ಹೇಳಲಾಗುತ್ತಿತ್ತು. ನಂತರ ದೆಹಲಿಗೆ ಮರಳಿದ ಅವರು, ಸತತವಾಗಿ ತಮ್ಮ ಸ್ಥಳವನ್ನು ಬದಲಾಯಿಸುತ್ತಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಸುಶೀಲ್ ಕುಮಾರ್ ಸೇರಿದಂತೆ ಶಂಕಿತ ವ್ಯಕ್ತಿಗಳಿಗಾಗಿ ಸಾಕಷ್ಟು ಬಾರಿ ಹುಡುಕಾಟ ನಡೆಸಿದ್ದೇವೆ. ಆದರೆ, ಎಲ್ಲಿಯೂ ಪತ್ತೆಯಾಗುತ್ತಿಲ್ಲ. ಪೊಲೀಸರ ತಂಡ ಸುಶೀಲ್ ಕುಮಾರ್ ಅವರ ಮನೆಗೂ ತೆರಳಿತ್ತು. ಆದರೆ, ಅಲ್ಲಿಯೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಡಾ.ಗುರಿಗ್ಬಾಲ್ ಸಿಂಗ್ ಸಿಧು ಅವರು ಹೇಳಿದ್ದಾರೆ. 

ಅಪರಾಧ ನಡೆದ ಸ್ಥಳ ಮತ್ತು ಸ್ಥಳದಲ್ಲಿ ದೊರೆತ ಎಲ್ಲಾ ಐದು ವಾಹನಗಳನ್ನು ಪರಿಶೀಲಿಸಲಾಗಿದ್ದು, ತಪಾಸಣೆಯ ಸಮಯದಲ್ಲಿ, ಒಂದು ಸ್ಕಾರ್ಪಿಯೋದಲ್ಲಿ ಒಂದು ಡಬಲ್ ಬ್ಯಾರೆಲ್ ಲೋಡೆಡ್ ಗನ್ ಕಂಡುಬಂದಿದೆ ಮತ್ತು ಎರಡು ಮರದ ತುಂಡುಗಳನ್ನು ಸಹ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪ ಕುರಿತು ಈ ಹಿಂದೆ ಹೇಳಿಕೆ ನೀಡಿದ್ದ ಸುಶೀಲ್ ಕುಮಾರ್ ಅವರು, ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಪರಿಚಯ ನನಗಿಲ್ಲ. ಅವರು ನಮ್ಮ ಕುಸ್ತಿಪಟುಗಳಲ್ಲ. ಕೆಲವು ಅಪರಿಚಿತ ವ್ಯಕ್ತಿಗಳು ನಮ್ಮ ಕಾಂಪೌಂಡ್ ಒಳಗೆ ಬಂದು ಜಗಳವಾಡಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com