ಒಲಿಂಪಿಯನ್ ಸುಶೀಲ್ ಕುಮಾರ್ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಲು ದೆಹಲಿ ಹೈಕೋರ್ಟ್ ನಕಾರ
ಹತ್ಯೆಯ ಆರೋಪ ಎದುರಿಸುತ್ತಿರು ಕುಸ್ತಿಪಟು ಸುಶೀಲ್ ಕುಮಾರ್ ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ವರದಿ ಮಾಡುವುದರ ಮೇಲೆ ನಿರ್ಬಂಧ ಹೇರುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಪರಿಗಣಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
Published: 28th May 2021 05:05 PM | Last Updated: 28th May 2021 05:22 PM | A+A A-

ಸುಶೀಲ್ ಕುಮಾರ್
ನವದೆಹಲಿ: ಹತ್ಯೆಯ ಆರೋಪ ಎದುರಿಸುತ್ತಿರು ಕುಸ್ತಿಪಟು ಸುಶೀಲ್ ಕುಮಾರ್ ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ವರದಿ ಮಾಡುವುದರ ಮೇಲೆ ನಿರ್ಬಂಧ ಹೇರುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಪರಿಗಣಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಅರ್ಜಿದಾರರಾದ ಶ್ರೀಕಾಂತ್ ಪ್ರಸಾದ್ , ಪ್ರಕರಣದ ತೀರ್ಪು ಬರುವ ಮುನ್ನವೇ ಮಾಧ್ಯಮಗಳು ಆರೋಪಿಯನ್ನು 'ತಪ್ಪಿತಸ್ಥ'ರೆಂದು ಘೋಷಿಸುತ್ತಿದ್ದಾರೆ. ಇದು ಆರೋಪಿಗಳ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುವ ಮೂಲಕ ಮತ್ತು ಮುಕ್ತ ಮತ್ತು ನ್ಯಾಯಯುತ ವಿಚಾರಣೆಯ ಹಕ್ಕಿನ ವಿರುದ್ಧ 'ಪೂರ್ವಾಗ್ರಹ' ಉಂಟುಮಾಡುತ್ತಿದೆ ಎಂದು ಆರೋಪಿಸಿದರು.
ಜೊತೆಗೆ, ಮಾಧ್ಯಮಗಳಿಗೆ ಪ್ರತಿಯೊಂದು ಮಾಹಿತಿಯನ್ನು 'ಸೋರಿಕೆ' ಮಾಡುತ್ತಿರುವವರನ್ನು ಅನಾವರಣಗೊಳಿಸಲು ಉನ್ನತ ಅಧಿಕಾರ ಸಮಿತಿ ರಚಿಸುಚಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದರು. ಇದು ಆರೋಪಿಯ ವೃತ್ತಿಜೀವನವನ್ನು ಕೊನೆಗೊಳಿಸುವ ಉದ್ದೇಶ ಎಂದು ಆರೋಪಿಸಿದ್ದರು.
ಅರ್ಜಿಯಲ್ಲಿ ಸಹ-ಅರ್ಜಿದಾರರಾಗಿ ಸುಶೀಲ್ ಕುಮಾರ್ ಅವರ ತಾಯಿ ಕಮಲಾ ದೇವಿ ಅವರ ಹೆಸರು ಉಲ್ಲೇಖಿಸಲಾಗಿದೆ. ಆದರೆ, ಕುಸ್ತಿಪಟು ತಾಯಿ ಪಿಐಎಲ್ ಸಲ್ಲಿಸಲು ಯಾವುದೇ ಒಪ್ಪಿಗೆ ನೀಡಿಲ್ಲ ಎಂದು ಕುಮಾರ್ ಪರ ವಕೀಲರು ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿಗಳಾದ ಡಿ.ಎನ್. ಪಟೇಲ್ ಮತ್ತು ಜ್ಯೋತಿ ಸಿಂಗ್ ಅವರ ವಿಭಾಗೀಯ ನ್ಯಾಯಪೀಠ, ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿತು. ಯಾವ ವ್ಯಕ್ತಿಗೆ ಇದರಿಂದ ತೊಂದರೆಯಾಗಿದೆಯೋ ಅವರೇ ನೇರ ಅರ್ಜಿ ಸಲ್ಲಿಸಿದರೆ ಮಾತ್ರ ಪರಿಗಣಿಸಬಹುದು ಎಂದು ಸ್ಪಷ್ಟಪಡಿಸಿತು.
ಮೇ 4ರಂದು ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ ವರ್ಷದ ಕುಸ್ತಿಪಟು ಸಾಗರ್ ಧಂಕರ್ ಹತ್ಯೆ ಆರೋಪದ ಮೇಲೆ 38 ವರ್ಷದ ಕುಸ್ತಿಪಟು ಮತ್ತು ಒಲಿಂಪಿಯನ್ ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಗಿತ್ತು.