ಟೆನಿಸ್ ಆಟಗಾರ ಜೊಕೊವಿಚ್ ವೀಸಾ ರದ್ದು: ಸಂಚಲನ ಮೂಡಿಸಿದ ಆಸ್ಟ್ರೇಲಿಯ ಸರ್ಕಾರದ ನಿರ್ಧಾರ
ಸೆರ್ಬಿಯಾದ ವಿಶ್ವ ವಿಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಅವರ ವೀಸಾವನ್ನು ಆಸ್ಟ್ರೇಲಿಯದ ಬಾರ್ಡರ್ ಫೋರ್ಸ್ ಅಧಿಕಾರಿಗಳು ರದ್ದುಗೊಳಿಸಿದ್ದಾರೆ.
Published: 06th January 2022 01:34 PM | Last Updated: 06th January 2022 01:34 PM | A+A A-

ನೊವಾಕ್ ಜೊಕೊವಿಚ್
ಮೆಲ್ಬೋರ್ನ್: ಸೆರ್ಬಿಯಾದ ವಿಶ್ವ ವಿಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಅವರ ವೀಸಾವನ್ನು ಆಸ್ಟ್ರೇಲಿಯದ ಬಾರ್ಡರ್ ಫೋರ್ಸ್ ಅಧಿಕಾರಿಗಳು ರದ್ದುಗೊಳಿಸಿದ್ದಾರೆ.
ಜೊಕೊವಿಚ್ ಬುಧವಾರ ಮಧ್ಯರಾತ್ರಿ ಮೆಲ್ಬೋರ್ನ್‌ಗೆ ಆಗಮಿಸಿದ ನಂತರ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡಲು ಜೊಕೊವಿಚ್ ಅವರಿಗೆ ಅನುಮತಿ ಲಭಿಸುವ ಜತೆಗೆ ವೈದ್ಯಕೀಯ ವಿನಾಯಿತಿ ಪಡೆದುಕೊಂಡಿದ್ದರು. ಆದರೆ, ಕೋವಿಡ್ ನಿಬಂಧನೆಗಳಿಂದಾಗಿ ಜೊಕೊವಿಚ್ ವೀಸಾ ರದ್ದುಗೊಳಿಸಿದ್ದೇವೆ ಎಂದು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್ ಟ್ವೀಟ್ ಮಾಡಿದ್ದಾರೆ.
ನೊವಾಕ್ ಜೊಕೊವಿಕ್‌ಗೆ ಪ್ರವೇಶ ನಿರ್ಬಂಧ ಕುರಿತು ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್'' ಜೋಕ್‌ವಿಕ್‌ನ ವೀಸಾವನ್ನು ರದ್ದುಗೊಳಿಸಲಾಗಿದೆ. ವಿಶೇಷವಾಗಿ ನಮ್ಮ ಗಡಿಗಳ ವಿಚಾರಕ್ಕೆ ಬಂದಾಗ ನಿಯಮಗಳು ಎಲ್ಲರಿಗೂ ಒಂದೇ ಆಗಿದೆ. ಈ ನಿಯಮಗಳನ್ನ ಯಾರೂ ಮೀರುವುದಿಲ್ಲ. ಕೋವಿಡ್‌ನಿಂದ ವಿಶ್ವದ ಅತ್ಯಂತ ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿರುವ ಆಸ್ಟ್ರೇಲಿಯಾಕ್ಕೆ ನಮ್ಮ ಬಲವಾದ ಗಡಿ ನೀತಿಗಳು ನಿರ್ಣಾಯಕವಾಗಿವೆ, ನಾವು ಜಾಗರೂಕರಾಗಿರುತ್ತೇವೆ'' ಎಂದು ಮಾರಿಸನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಟೆನಿಸ್ ಆಟಗಾರ ರಾಫೆಲ್ ನಡಾಲ್ ಗೆ ಕೋವಿಡ್-19 ದೃಢ
ಆಸ್ಟ್ರೇಲಿಯಾಗೆ ತೆರಳುವ ಮೊದಲು ವ್ಯಾಕ್ಸಿನೇಷನ್ ನಿಯಮಗಳಿಂದ ವಿನಾಯಿತಿ ದೊರೆತಿದೆ ಎಂದಿದ್ದ ನೊವಾಕ್ ಜೊಕೊವಿಕ್ ಅವರು ಬುಧವಾರ ಸಂಜೆ ಮೆಲ್ಬೋರ್ನ್ನಲ್ಲಿ ಬಂದಿಳಿದ ನಂತರ ಅವರು ಸೂಕ್ತ ಪುರಾವೆ ಒದಗಿಸಲು ವಿಫಲರಾಗಿದ್ದಾರೆ ಎಂಬ ಆರೋಪ ಮೇಲೆ ವೀಸಾವನ್ನು ರದ್ದುಗೊಳಿಸಿ, ಆಸ್ಟ್ರೇಲಿಯಾದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಆಸ್ಟ್ರೇಲಿಯ ಪ್ರವೇಶಕ್ಕೆ ಜೊಕೊವಿಚ್ ಅವರು ಸಾಕಷ್ಟು ಪುರಾವೆ ಒದಗಿಸಲು ವಿಫಲರಾಗಿದ್ದಾರೆ. ಹಾಗಾಗಿ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾ ಹೇಳಿದೆ. ಆದರೆ ಮೆಲ್ಬೊರ್ನ್ ನಲ್ಲಿರುವ ತುಲ್ಲಾಮರೈನ್ ವಿಮಾನ ನಿಲ್ದಾಣದಲ್ಲಿ ತಮ್ಮ ಪುತ್ರನನ್ನು ಗಂಟೆಗಳ ಕಾಲ ನಿರ್ಬಂಧಿಸಿ, ವಿನಾಯಿತಿಯ ಬಗ್ಗೆ ಪ್ರಶ್ನಿಸಿರುರವುದನ್ನು ಜೊಕೊವಿಚ್ ತಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.