ಕೊರೋನಾ ಪಾಸಿಟಿವ್ ಬಂದ 24 ಗಂಟೆಗಳಲ್ಲೇ ಬೆಲ್‍ಗ್ರೇಡ್ ಕಾರ್ಯಕ್ರಮದಲ್ಲಿ ನೊವಾಕ್ ಜೊಕೊವಿಕ್ ಭಾಗಿ
ಸೆರ್ಬಿಯಾದ ವಿಶ್ವ ವಿಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ವೀಸಾ ಮತ್ತು ವೈದ್ಯಕೀಯ ವಿನಾಯಿತಿ ವಿಚಾರ ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದೆ.
Published: 08th January 2022 11:36 PM | Last Updated: 10th January 2022 01:16 PM | A+A A-

ಬೆಲ್‍ಗ್ರೇಡ್ ಕಾರ್ಯಕ್ರಮದಲ್ಲಿ ನೊವಾಕ್ ಜೊಕೊವಿಕ್
ಮೆಲ್ಬೋರ್ನ್: ಸೆರ್ಬಿಯಾದ ವಿಶ್ವ ವಿಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ವೀಸಾ ಮತ್ತು ವೈದ್ಯಕೀಯ ವಿನಾಯಿತಿ ವಿಚಾರ ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದೆ.
ಜೊಕೊವಿಕ್ ಬುಧವಾರ ಮಧ್ಯರಾತ್ರಿ ಮೆಲ್ಬೋರ್ನ್‍ಗೆ ಆಗಮಿಸಿದ ನಂತರ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡಲು ಜೊಕೊವಿಕ್ ಅವರಿಗೆ ಅನುಮತಿ ಲಭಿಸುವ ಜತೆಗೆ ವೈದ್ಯಕೀಯ ವಿನಾಯಿತಿ ಪಡೆದುಕೊಂಡಿದ್ದರು.
ನ್ಯಾಯಾಲಯಕ್ಕೆ ನೀಡಿರುವ ಮಾಹಿತಿಯ ಪ್ರಕಾರ, “ಮಿಸ್ಟರ್ ಜೊಕೊವಿಕ್ ಡಿಸೆಂಬರ್ 30, 2021 ರಂದು ಟೆನಿಸ್ ಆಸ್ಟ್ರೇಲಿಯಾದ ಮುಖ್ಯ ವೈದ್ಯಕೀಯ ಅಧಿಕಾರಿಯಿಂದ ವಿನಾಯಿತಿ ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದರು. ಅವರಿಗೆ ಕೋವಿಡ್ ಲಸಿಕೆಯಿಂದ ವೈದ್ಯಕೀಯ ವಿನಾಯಿತಿ ನೀಡಲಾಗಿದೆ ಎಂದು ಪತ್ರದಲ್ಲಿ ದಾಖಲಿಸಲಾಗಿದೆ. ಅವರು ಇತ್ತೀಚೆಗೆ ಕೋವಿಡ್‍ನಿಂದ ಚೇತರಿಸಿಕೊಂಡಿದ್ದಾರೆ ಎಂದು ಮೊದಲ ಪಾಸಿಟಿವ್ ಕೋವಿಡ್ ಪರೀಕ್ಷೆಯ ದಿನಾಂಕವನ್ನು ಡಿಸೆಂಬರ್ 16, 2021 ಎಂದು ನಮೂದಿಸಲಾಗಿದೆ. ಅಲ್ಲದೆ ಈಗ 14 ದಿನಗಳು ಕಳೆದಿವೆ ಮತ್ತು ಕಳೆದ 72 ಗಂಟೆಗಳಲ್ಲಿ ಜೊಕೊವಿಕ್ ಜ್ವರ ಅಥವಾ ಕೋವಿಡ್-19 ಉಸಿರಾಟದ ಸಮಸ್ಯೆಯ ಲಕ್ಷಣಗಳನ್ನು ಹೊಂದಿರಲಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಇದನ್ನು ಓದಿ: ಟೆನಿಸ್ ಆಟಗಾರ ಜೊಕೊವಿಚ್ ವೀಸಾ ರದ್ದು: ಸಂಚಲನ ಮೂಡಿಸಿದ ಆಸ್ಟ್ರೇಲಿಯ ಸರ್ಕಾರದ ನಿರ್ಧಾರ
ಆದರೆ ನೊವಾಕ್ ಮಾರನೇ ದಿನ ಅಂದರೆ ಡಿಸೆಂಬರ್ 17ರಂದು ಬೆಲ್‍ಗ್ರೇಡ್‍ನಲ್ಲಿ ನಡೆದ ಉತ್ತಮ ಯುವ ಆಟಗಾರರು 2021 ಸಮಾರಂಭದಲ್ಲಿ ಮಾಸ್ಕ್ ಇಲ್ಲದೇ ಭಾಗವಹಿಸಿದ್ದು, ಪ್ರಶಸ್ತಿ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಅದೇ ದಿನ ಅಂಚೆ ಕಚೇರಿಯ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಖುದ್ದಾಗಿ ಅವರೇ ಟ್ವೀಟ್ ಮಾಡಿದ್ದಾರೆ.
ಸೆರ್ಬಿಯಾದ ವಿಶ್ವ ವಿಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ವೀಸಾವನ್ನು ಆಸ್ಟ್ರೇಲಿಯದ ಬಾರ್ಡರ್ ಪ್ರಾಧಿಕಾರದ ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಕೊರೋನಾ ವೈರಸ್ ವಿರುದ್ಧ ಲಸಿಕೆಹಾಕಿಸಿಕೊಳ್ಳದೆ ವೈದ್ಯಕೀಯ ವಿನಾಯಿತಿ ಇದೆ ಎಂದು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ನೊವಾಕ್ ಜೊಕೊವಿಕ್ ಅವರನ್ನು ಮುಂದಿನ ವಿಮಾನದಲ್ಲಿ ದೇಶದಿಂದ ಹೊರಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಆಸ್ಟ್ರೇಲಿಯ ಪ್ರವೇಶಕ್ಕೆ ಜೊಕೊವಿಕ್ ಅವರು ಸಾಕಷ್ಟು ಪುರಾವೆ ಒದಗಿಸಲು ವಿಫಲರಾಗಿದ್ದಾರೆ. ಹಾಗಾಗಿ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾ ಹೇಳಿತ್ತು.