'ಆಸ್ಟ್ರೇಲಿಯನ್ ಓಪನ್' ನಲ್ಲಿ ಆಡುವ ಕನಸು ಭಗ್ನ: ನೊವಾಕ್ ಜೊಕೊವಿಕ್ ಗಡೀಪಾರಿಗೆ ಫೆಡರಲ್ ಕೋರ್ಟ್ ಆದೇಶ
ವಿಶ್ವದ ನಂಬರ್ 1 ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ಆಸ್ಟ್ರೇಲಿಯಾ ಮುಕ್ತ ಟೆನ್ನಿಸ್ ಪಂದ್ಯ ಆಡುವ ಕನಸು ಭಗ್ನವಾಗಿದೆ. ತಮ್ಮ ವಿರುದ್ಧ ಗಡೀಪಾರು ಆದೇಶವನ್ನು ರದ್ದುಪಡಿಸುವಂತೆ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ತಿರಸ್ಕರಿಸಿದೆ.
Published: 16th January 2022 01:51 PM | Last Updated: 17th January 2022 01:14 PM | A+A A-

ನೊವಾಕ್ ಜೊಕೊವಿಕ್
ವಿಶ್ವದ ನಂಬರ್ 1 ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ಆಸ್ಟ್ರೇಲಿಯಾ ಮುಕ್ತ ಟೆನ್ನಿಸ್ ಪಂದ್ಯ ಆಡುವ ಕನಸು ಭಗ್ನವಾಗಿದೆ. ತಮ್ಮ ವಿರುದ್ಧ ಗಡೀಪಾರು ಆದೇಶವನ್ನು ರದ್ದುಪಡಿಸುವಂತೆ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ 21ನೇ ಗ್ರಾಂಡ್ ಸ್ಲಾಮ್ ಗೆದ್ದು ದಾಖಲೆ ನಿರ್ಮಿಸುವ ಅವರ ಕನಸು ನುಚ್ಚುನೂರಾಗಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ 34 ವರ್ಷದ ಸೆರ್ಬಿಯಾದ ಆಟಗಾರ ನೊವಾಕ್ ಜೊಕೊವಿಕ್ ಅವರ ವೀಸಾವನ್ನು ರದ್ದುಗೊಳಿಸಿ ಆಸ್ಟ್ರೇಲಿಯಾ ವಲಸೆ ಖಾತೆ ಸಚಿವರು ಹೊರಡಿಸಿದ್ದ ನಿರ್ಧಾರವನ್ನು ಮೂವರು ನ್ಯಾಯಾಧೀಶರನ್ನೊಳಗೊಂಡ ಫೆಡರಲ್ ಕೋರ್ಟ್ ಎತ್ತಿಹಿಡಿದಿದೆ.
ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ ರದ್ದು; ಆಸ್ಟ್ರೇಲಿಯ ಓಪನ್ನಲ್ಲಿ ಆಡುವುದು ಅನುಮಾನ
ಅಂದರೆ ಕೋವಿಡ್-19 ಲಸಿಕೆ ಪಡೆಯದಿರುವ ನೊವಾಕ್ ಜೊಕೊವಿಕ್ ಅವರನ್ನು ಗಡೀಪಾರು ಮಾಡುವವರೆಗೆ ಮೆಲ್ಬೋರ್ಲ್ ನಲ್ಲಿ ಗೃಹಬಂಧನದಲ್ಲಿರಿಸಲಾಗುತ್ತದೆ. ಅಲ್ಲದೆ ಇನ್ನು ಮೂರು ವರ್ಷಗಳವರೆಗೆ ಆಸ್ಟ್ರೇಲಿಯಾಕ್ಕೆ ಅವರು ಹಿಂತಿರುಗುವಂತಿಲ್ಲ.
ಆಸ್ಟ್ರೇಲಿಯಾದಲ್ಲಿ ಜೊಕೊವಿಕ್ ಅವರ ಉಪಸ್ಥಿತಿಯು ಆಸ್ಟ್ರೇಲಿಯಾದ ಸಾರ್ವಜನಿಕರ ಆರೋಗ್ಯ ಮತ್ತು ಜನರ ದೃಷ್ಟಿಯಿಂದ ಅಪಾಯವನ್ನುಂಟುಮಾಡಬಹುದು. ಆಸ್ಟ್ರೇಲಿಯಾದಲ್ಲಿ ಇತರರು ಲಸಿಕೆ ಹಾಕುವ ಪ್ರಯತ್ನಗಳಿಗೆ ಪ್ರತಿಕೂಲವಾಗಬಹುದು ಎಂಬ ಆಧಾರದ ಮೇಲೆ ಸಚಿವರು ವೀಸಾವನ್ನು ರದ್ದುಪಡಿಸಿದ್ದರು.