
ಭಾರತದ ನಿಖತ್ ಜರೀನ್ ಚಾಂಪಿಯನ್
ನವದೆಹಲಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಗೆದ್ದ ಭಾರತದ ನಿಖತ್ ಜರೀನ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇಸ್ತಾಂಬುಲ್ನಲ್ಲಿ ಗುರುವಾರ ನಡೆದ ಮಹಿಳಾ ವಿಶ್ವ ಚಾಂಪಿಯನ್ಶಿಪ್ನ ಫ್ಲೈವೇಯ್ಟ್ (52 ಕೆಜಿ) ಫೈನಲ್ ನಲ್ಲಿ ಭಾರತದ ಬಾಕ್ಸರ್ ನಿಖತ್ ಜರೀನ್ ಥಾಯ್ಲೆಂಡ್ ನ ಜಿಟ್ಪಾಂಗ್ ಜುಟಮಾಸ್ ವಿರುದ್ಧ 5-0 ಅಂತರದಲ್ಲಿ ಸುಲಭ ಗೆಲುವು ಸಾಧಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇದನ್ನೂ ಓದಿ: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಭಾರತದ ನಿಖತ್ ಜರೀನ್ ಫೈನಲ್ ಗೆ ಲಗ್ಗೆ
ತೆಲಂಗಾಣದ ಬಾಕ್ಸರ್ ತನ್ನ ಥಾಯ್ಲೆಂಡ್ ಪ್ರತಿಸ್ಪರ್ಧಿಯನ್ನು ಸೋಲಿಸಿ 5-0 ಅಂತರದ ಸರ್ವಾನುಮತದ ತೀರ್ಪಿನ ಮೂಲಕ ಗೆದ್ದರು. ಈ ಗೆಲುವಿನೊಂದಿಗೆ ಜರೀನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಐದನೇ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಹಿಂದೆ ಆರು ಬಾರಿಯ ಚಾಂಪಿಯನ್ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018) ಸರಿತಾ ದೇವಿ (2006), ಜೆನ್ನಿ ಆರ್ ಎಲ್ (2006) ಮತ್ತು ಲೇಖಾ ಕೆಸಿ (2006) ವಿಶ್ವ ಪ್ರಶಸ್ತಿ ಗೆದ್ದ ಇತರ ಆಟಗಾರ್ತಿಯರಾಗಿದ್ದಾರೆ.
ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೂರು ಪದಕ ಖಚಿತ!
ಜರೀನ್ ಚಿನ್ನದ ಪದಕದ ಹೊರತಾಗಿ, ಮನೀಷಾ ಮೌನ್ (57 ಕೆಜಿ) ಮತ್ತು ಚೊಚ್ಚಲ ಆಟಗಾರ ಪರ್ವೀನ್ ಹೂಡಾ (63 ಕೆಜಿ) ಕಂಚಿನ ಪದಕಗಳೊಂದಿಗೆ ತವರಿಗೆ ಮರಳಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು 12 ಸದಸ್ಯರ ಭಾರತೀಯ ತಂಡವನ್ನು ಕಳುಹಿಸಲಾಗಿತ್ತು. ನಾಲ್ಕು ವರ್ಷಗಳ ನಂತರ ಭಾರತೀಯರೊಬ್ಬರು ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಮೇರಿ ಕೋಮ್ ಕೊನೆಯ ಬಾರಿಗೆ 2018ರ ಆವೃತ್ತಿಯಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.