2 ಬಾರಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸಂಜಿತಾ ಚಾನು ಡೋಪ್ ಪರೀಕ್ಷೆಯಲ್ಲಿ ವಿಫಲ: 4 ವರ್ಷ ನಿಷೇಧ!
ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಭಾರತೀಯ ಮಹಿಳಾ ವೇಟ್‌ಲಿಫ್ಟರ್ ಸಂಜಿತಾ ಚಾನು ಅವರು ಕಳೆದ ವರ್ಷ ಡೋಪ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯ(ನಾಡಾ) ಶಿಸ್ತು ಸಮಿತಿಯಿಂದ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ.
Published: 04th April 2023 11:21 PM | Last Updated: 05th April 2023 12:20 AM | A+A A-

ಸಂಜಿತಾ ಚಾನು
ನವದೆಹಲಿ: ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಭಾರತೀಯ ಮಹಿಳಾ ವೇಟ್‌ಲಿಫ್ಟರ್ ಸಂಜಿತಾ ಚಾನು ಅವರು ಕಳೆದ ವರ್ಷ ಡೋಪ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯ(ನಾಡಾ) ಶಿಸ್ತು ಸಮಿತಿಯಿಂದ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ. 2022 ನವೆಂಬರ್ 12ರಂದು ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದು ಅಂದಿನಿಂದಲೇ ನಿಷೇಧವು ಪ್ರಾರಂಭವಾಗುತ್ತದೆ.
ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ವೇಳೆ ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿಯ (ವಾಡಾ) ನಿಷೇಧಿತ ಪಟ್ಟಿಯಲ್ಲಿರುವ ಅನಾಬೊಲಿಕ್ ಸ್ಟೀರಾಯ್ಡ್ - ಡ್ರೊಸ್ಟಾನೊಲೋನ್‌ನ ಮೆಟಾಬೊಲೈಟ್ ಪರೀಕ್ಷೆ ನಡೆಸಲಾಗಿತ್ತು. 2022ರ ಸೆಪ್ಟೆಂಬರ್ 30ರಂದು ಸಂಚಿತಾ ಅವರ ಮಾದರಿಯನ್ನು ಡೋಪ್ ಪರೀಕ್ಷೆಗೆ ತೆಗೆದುಕೊಳ್ಳಲಾಯಿತು.
ಚೈತನ್ಯ ಮಹಾಜನ್ ನೇತೃತ್ವದ NADA ಸಮಿತಿಯು ತನ್ನ ವರದಿಯಲ್ಲಿ, ಆಟಗಾರ್ತಿ NADA ADR, 2021ರ ಆರ್ಟಿಕಲ್ 2.1 ಮತ್ತು 2.2 ಅನ್ನು ಉಲ್ಲಂಘಿಸಿದ್ದಾರೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಅವರಿಗೆ NADA ADR, 2021ರ ಆರ್ಟಿಕಲ್ 10.2.1ರ ಪ್ರಕಾರ 4 ವರ್ಷಕ್ಕೆ ನಿಷೇಧಿಸಲಾಗಿದೆ ಎಂದು ಆದೇಶಿಸಿದೆ. ಆದೇಶದ ಪ್ರಕಾರ, ತಾತ್ಕಾಲಿಕ ಅಮಾನತಿನ ದಿನಾಂಕವಾದ 12 ನವೆಂಬರ್ 2022ರಿಂದ ಅಮಾನತಿನ ಅವಧಿಯನ್ನು ಪರಿಗಣಿಸಲಾಗುತ್ತದೆ. NADA ADR 2023 ರ ಆರ್ಟಿಕಲ್ 10.2.1.1 ರ ಪ್ರಕಾರ ADRV ಉದ್ದೇಶಪೂರ್ವಕವಲ್ಲ ಎಂದು ಸಮಿತಿಯನ್ನು ತೃಪ್ತಿಪಡಿಸಲು ಆಟಗಾರ್ತಿ ವಿಫಲರಾಗಿದ್ದಾರೆ.
ಇದನ್ನೂ ಓದಿ: 2022ರಲ್ಲಿ ಕ್ರೀಡಾ ಪ್ರಾಯೋಜಕತ್ವ 5,900 ಕೋಟಿ ರೂ. ಗೆ ಏರಿಕೆ; ಶೇ.85ರಷ್ಟು ಕ್ರಿಕೆಟ್‌ನ ಪಾಲು: ವರದಿ
ಇದು ಸಂಜಿತಾಗೆ ದೊಡ್ಡ ಹೊಡೆತವಾಗಿದೆ. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಹೊಸ ಬೆಳವಣಿಗೆಯ ಬಗ್ಗೆ ಅವರ ಪ್ರತಿಕ್ರಿಯೆಯನ್ನು ನೀಡಿಲ್ಲ. 2014ರಲ್ಲಿ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 48 ಕೆಜಿ ತೂಕ ವಿಭಾಗದಲ್ಲಿ ಸಂಜಿತಾ ಚಿನ್ನದ ಪದಕ ಗೆದ್ದಿದ್ದರು. 2018ರಲ್ಲಿ ಅವರು 53 ಕೆಜಿ ತೂಕ ವಿಭಾಗದಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು.
ಸಂಜಿತಾಗೆ ಮೇಲ್ಮನವಿ ಸಲ್ಲಿಸಲು ಅವಕಾಶ
ಮಣಿಪುರ ಆಟಗಾರ್ತಿ ಇನ್ನೂ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವ ಆಯ್ಕೆಯನ್ನು ಹೊಂದಿದ್ದಾರೆ ಆದರೆ ಅವರು ಹಾಗೆ ಮಾಡುತ್ತಾರೆಯೇ ಎಂಬುದು ಖಚಿತವಾಗಿಲ್ಲ. ಅವರು ನಿರ್ಧಾರವನ್ನು ಪಡೆದ 21 ದಿನಗಳಲ್ಲಿ NADA ಯ ಮೇಲ್ಮನವಿ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದು. ವಿಚಾರಣೆ ವೇಳೆ ಸಂಜಿತಾ ಅವರೇ ತಮ್ಮ ಪರ ವಾದ ಮಂಡಿಸಿದ್ದರು. ಉದ್ದೇಶಪೂರ್ವಕವಾಗಿ ನಿಷೇಧಿತ ಔಷಧ ಸೇವಿಸಿಲ್ಲ ಎಂದಿದ್ದರು. ಆಹಾರ ಮತ್ತು ಸಪ್ಲಿಮೆಂಟ್ಸ್ ತೆಗೆದುಕೊಳ್ಳುವಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದೇನೆ ಎಂದು ಹೇಳಿದ್ದರು.