ಸಾಹಿತ್ಯೋದಯ

ಸಾಹಿತ್ಯೋದಯ

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು, ಆಕಾಶವೆ ಬೀಳಲಿ ಮೇಲೆ, ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ, ನಲಿವಾ ಗುಲಾಬಿ ಹೂವೆ...!
ಈ ಮಧುರ ಗೀತೆಗಳನ್ನು ಕೇಳದ ಕನ್ನಡ ಚಿತ್ರಪ್ರೇಮಿಗಳು ವಿರಳ. ಹೀಗೆ ಅಸಂಖ್ಯಾತ ಸುಂದರ ಹಾಡುಗಳನ್ನು ತಮ್ಮ 30 ವರ್ಷದ ಚಿತ್ರಜೀವನದಲ್ಲಿ ಮೊಗೆಮೊಗೆದು ಕನ್ನಡ ಚಿತ್ರರಸಿಕರಿಗೆ ನೀಡಿದವರು ಸಾಹಿತ್ಯರತ್ನ ಚಿ. ಉದಯಶಂಕರ್. ಮಾತು-ಬರಹ ಎರಡಕ್ಕೂ ಸಮಾನ ನೆಲೆ ಕಲ್ಪಿಸಿ ಸರಳಸಾಹಿತ್ಯದಲ್ಲೇ ಜನಮನ ಮುಟ್ಟಬಹುದೆಂಬುದನ್ನು ಜಗಜ್ಜಾಹೀರು ಮಾಡಿದ ಪ್ರತಿಭೆ.
ನಾನು 'ಕನ್ನಡ ಚಿತ್ರರಂಗಕ್ಕೆ ಚಿ. ಉದಯಶಂಕರ್ ಕೊಡುಗೆ' ಎಂಬ ವಿಷಯವನ್ನು ಎಂಫಿಲ್‌ಗೆ ಆರಿಸಿಕೊಂಡಾಗ 'ಈ ವಿಷಯದಲ್ಲಿ ಹೆಚ್ಚೆಂದರೆ 2-3 ಪುಟದ ಲೇಖನ ಬರೀಬಹುದಪ್ಪ, ಸಂಶೋಧನೆಗೆ ಏನಿದೆ' ಎಂದು ಹಂಗಿಸಿದರೇ ಅನೇಕ. ಆದರೆ ನಾನು ನನ್ನ ಎಂಫಿಲ್ ಮುಗಿಸಿ, ಉದಯಶಂಕರ್ ಕುರಿತ ಪುಸ್ತಕ ಬರೆದ ಮೇಲೂ ಕನಿಷ್ಟ 200 ಪುಟಗಳ ಮಾಹಿತಿ ನನ್ನ ಬಳಿ ಇದೆ. ಇದು ಉದಯಶಂಕರ್ ಅವರ ಪರಿಶ್ರಮ- ಸಾಮರ್ಥ್ಯದ ಪರಿಚಯ ಮಾಡಿಸುತ್ತದೆ. ಉದಯಶಂಕರ್ ಸಾಹಿತ್ಯದ ಸರಳತೆ ಚಿತ್ರದ ಸನ್ನಿವೇಶಕ್ಕೆ ಮತ್ತು ಹಾಡು ಕೇಳುವವರ ಮನಸ್ಸಿಗೆ ತಲುಪುವಂಥ ಸಂಬಂಧವನ್ನು ಉಳಿಸಿಕೊಂಡಿತ್ತು. ಒಮ್ಮೆ ಸಹೋದರರ ಸವಾಲ್ ಚಿತ್ರದ ಧ್ವನಿಮುದ್ರಣದ ಸಂದರ್ಭ, ಸಂಗೀತ ನಿರ್ದೇಶಕ ಸತ್ಯಂ ತಮಾಷೆ ಮಾಡುತ್ತಾ 'ಈಗ ನಾನೊಂದು ಟ್ಯೂನ್ ಕೊಡ್ತೀನಿ, ನೋಡೋಣ ಇದಕ್ಕೆ ಸಾಹಿತ್ಯ ರಚಿಸು' ಎಂದರು. ಆಗ ಉದಯಶಂಕರ್ ಕಟ್ಟಿದ ಹಾಡೇ ಇಂದಿಗೂ ನಾವೆಲ್ಲ ಗುನುಗುನಿಸುವ 'ಓ ನಲ್ಲನೆ ಸವಿಮಾತೊಂದ ನುಡಿವೆಯಾ...' ಇದು ಉದಯಶಂಕರ್ ತಾಕತ್ತು.
ಉದಯಶಂಕರ್ ಸಾಹಿತ್ಯದ ಹಿಂದೆ ಅವರು ವಚನಗಳನ್ನು ಅಪಾರವಾಗಿ ಓದಿಕೊಂಡಿದ್ದರ ಫಲಶೃತಿಯಿದೆ. ಅದನ್ನು ಅವರೇ ಒಪ್ಪಿಕೊಂಡಿದ್ದಲ್ಲದೆ, 'ನಾನು ಮಾಡುತ್ತಿರುವುದು ದೀಪದಿಂದ ದೀಪ ಹಚ್ಚುವ ಕೆಲಸ' ಎಂದಿದ್ದರು. ಅವರ ಮಾತುಗಳಿಗೆ ಹಿನ್ನೆಲೆಯಾಗಿ 'ಮಾಮರವೆಲ್ಲೋ ಕೋಗಿಲೆಯೆಲ್ಲೋ', 'ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ' ಮುಂತಾದ ಹಾಡುಗಳಿವೆ.
ಕುವೆಂಪು, ಬೇಂದ್ರೆ, ಡಿವಿಜಿ ಬರಹಗಳ ನಿರಂತರ ಅಭ್ಯಾಸಿಯಾಗಿದ್ದ ಚಿ. ಉದಯಶಂಕರ್ ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ತಾತ್ವಿಕ ವಿಷಯಗಳನ್ನೂ ಕೇಳುಗರ ಮನತಟ್ಟುವಂತೆ ಒಬ್ಬ ಕಂಡಕ್ಟರ್ ಬಾಯಲ್ಲಿ ಹೇಳಿಸಿ ಸ್ಯೆ ಎನ್ನಿಸಿಕೊಂಡಿದ್ದಾರೆ. 'ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ' ನೆನಪಿಸಿಕೊಳ್ಳಿ.
ಈ ಹಾಡಿನ 'ಬದುಕು ಒಂದು ಬಸ್ಸಿನಂತೆ ನಿಲ್ಲದಂತೆ ಸಾಗಿದೆ ವಿಧಿಯೆ ಅದರ ಡ್ರೈವರ್ ಆಗಿ ಕಾಣದಂತೆ ಕೂತಿದೆ...' ಸಾಲುಗಳಲ್ಲಿ ಮಂಕುತಿಮ್ಮನ ಕಗ್ಗದ ಸುಪ್ರಸಿದ್ಧ ಸಾಲುಗಳಾದ 'ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ'ದ ಪ್ರೇರಣೆಯನ್ನು ಕಾಣಬಹುದು.
ಡಾ.ರಾಜಕುಮಾರ್ ಚಿತ್ರಗಳ ಬೆನ್ನೆಲುಬಾಗಿದ್ದ ಉದಯಶಂಕರ್ ತೀರಿಹೋದ ಮೇಲೆ ಡಾ.ರಾಜ್ ಚಿತ್ರಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಯಿತು. ಪ್ರೇಮದ ಕಾಣಿಕೆ, ಭಾಗ್ಯದ ಲಕ್ಷ್ಮಿ ಬಾರಮ್ಮ, ಮಲಯಮಾರುತದಂಥ ಚಿತ್ರಕಥೆಗಳ ನವಿರಾದ ನಿರೂಪಣೆಯ ಉದಯಶಂಕರ್ ಅಜಾತಶತ್ರುವಾಗಿದ್ದರು. ಎಲ್ಲರೊಂದಿಗೂ ಸಕ್ಕರೆಯಂತೆ ಬದುಕಿದ್ದ ಅವರು ಸಕ್ಕರೆ ಕಾಯಿಲೆ, ಹೃದಯಬೇನೆಗಳಿಂದ ಜುಲೈ 2 1993ರಂದು ನಿಷ್ಕ್ರಿಯರಾದರು. ಕನ್ನಡ ಚಿತ್ರರಂಗ ಇರುವವರೆಗೂ ಚಿ. ಉದಯಶಂಕರ್ ಹೆಸರು ಉಳಿಯುವಂಥದ್ದು. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೊಂದು ನೆನಪಿನ ನಮನ.

=  ಡಿ.ಎಸ್.ಶ್ರೀನಿವಾಸ ಪ್ರಸಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com