ಮಿಡಿತ!

ಮಿಡಿತ!

ಅಪ್ಪೆಮಿಡಿ ತೊಟ್ಟು ಸಹಿತವಾಗಿದ್ದರೆ ಮಾತ್ರ ಅದಕ್ಕೆ ಬೇಡಿಕೆ. ತೊಟ್ಟಿನಲ್ಲಿ ಸಂಗ್ರಹವಾಗಿರುವ ಸೊನೆಯೇ ಅದರ ವಿಶಿಷ್ಠ ಪರಿಮಳಕ್ಕೆ ಕಾರಣ...

ಉಪ್ಪಿನಕಾಯಿಯಲ್ಲಿ ಥರಾವರಿ ವೆರೈಟಿಗಳಿದ್ದರೂ ಅಪ್ಪೆಮಿಡಿಗಿರುವ ಡಿಮ್ಯಾಂಡು ಬೇರೊಂದಕ್ಕಿಲ್ಲ. ಉಪ್ಪಿನಕಾಯಿಗೇಂದೇ ವಿಶೇಷವಾಗಿ ಗುರುತಿಸಿಕೊಂಡಿರುವ ಅಪ್ಪೆಮಿಡಿ ಹಾಗೂ ಜೀರಿಗೆ ಮಿಡಿ ಮಾವಿನಕಾಯಿಗಳ ಸುವಾಸನೆ ಈಗಾಗಲೇ ಮಾರುಕಟ್ಟೆಯಲ್ಲಿ ಶುರುವಾಗಿದೆ.
ಇದರ ಸುವಾಸನೆ ಸ್ವೀಕರಿಸಲು ನಿಜಕ್ಕೂ ಒಂದು ಮೂಗು ಸಾಲದು. ಸೂಕ್ತವಾಗಿ ಸಂಸ್ಕರಿಸಿ ಭರಣಿಗಳಲ್ಲಿ ಸಂಗ್ರಹಿಸಿಟ್ಟರೆ ನಾಲ್ಕಾರು ವರ್ಷಗಳವರೆಗೂ ಅಪ್ಪೆಮಿಡಿ ತನ್ನ ವಿಶಿಷ್ಠ ರುಚಿಯನ್ನು ಕಳೆದುಕೊಳ್ಳುವುದಿಲ್ಲ. ಅಲ್ಲದೆ ಕೆಡುವುದೂ ಇಲ್ಲ. ಹೊಳೆ, ಹಳ್ಳಗಳ ದಂಡೆಯಲ್ಲಿಯೇ ಹೆಚ್ಚಾಗಿ ಬೆಳೆಯುವ ಮಿಡಿಮಾವಿನ ಮರದ ಸ್ವಭಾವವೂ ತುಸು ವಿಚಿತ್ರವೇ. ಪ್ರತಿವರ್ಷ ಕಾಯಿ ಬಿಡುತ್ತದೆಯೆಂಬ ನಿಯಮವಿಲ್ಲ. ಆದರೆ ಕಾಯಿ ಬಂತೆಂದರೆ, ಎಲೆಯೂ ಮರೆಯಾಗುವಷ್ಟು ಒತ್ತಾಗಿ ಕಾಯಿ ಬಿಡುತ್ತದೆ.
ಹಳ್ಳಿಯಿಂದ ನಗರಕ್ಕೆ
ಇಂತಿಪ್ಪ ಅಪ್ಪೆಮಿಡಿ ಗ್ರಾಮೀಣ ಪ್ರದೇಶದ ಸಿದ್ದಿ, ಕುಣಬಿ, ಗೌಳಿ ಮುಂತಾದ ಜನಾಂಗದವರ ಕಿರು ಆದಾಯದ ಮೂಲವೂ ಆಗುತ್ತದೆ. ವಾಸಕ್ಕೆ ಕಾಡಿನ ಸನಿಹದ ಜಾಗವನ್ನೇ ಆಯ್ಕೆಮಾಡಿಕೊಳ್ಳುವ ಇವರು, ಮಾವಿನಮಿಡಿಗಳನ್ನು ಕೊಯ್ದು ಸಂಗ್ರಹಿಸಿ ಮಾರಾಟಕ್ಕೆಂದು ಪಟ್ಟಣಕ್ಕೆ ತರುತ್ತಾರೆ. ಹೀಗೆ ಅವರು ಸಂಗ್ರಹಿಸಿ ತಂದ ಹೆಚ್ಚಿನ ಮಿಡಿಗಳನ್ನು ನಗರದಲ್ಲಿರುವ ಮಧ್ಯವರ್ತಿಗಳು ಸಾರಾಸಗಟಾಗಿ ಖರೀದಿಸುತ್ತಾರೆ. ಇನ್ನೂ ಕೆಲವರು ತಾವೇ ಮಾರುತ್ತಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಮಾರುಕಟ್ಟೆಗೆ ಮಲೆನಾಡಿನ ಎಲ್ಲ ಕಡೆಗಳಿಂದ ಮಾವಿನಮಿಡಿಗಳನ್ನು ತರಿಸಲಾಗುತ್ತದೆ.
ಈ ಮಿಡಿಗಳನ್ನು ಕೊಯ್ಯುವಾಗ ಬೀಳಿಸಿದರೆ, ಜಜ್ಜಿ ಹೋದರೆ ಅದರ ಬಾಳಿಕೆ ತಗ್ಗುತ್ತದೆ. ಇಂಥ ಮಿಡಿಗಳನ್ನು ಸಂಸ್ಕರಿಸಿ ಬಹಳ ದಿನ ಇಡುವಂತೆಯೂ ಇಲ್ಲವಾದ್ದರಿಂದ ಆದಷ್ಟೂ ನಾಜೂಕಾಗಿ ಕೊಯ್ಯಬೇಕು. ಮರ ಹತ್ತಿ ಮಿಡಿಗಳನ್ನು ಕೊಯ್ದು ಚೀಲದಲ್ಲಿ ಸಂಗ್ರಹಿಸಿ ನಂತರ ಹಗ್ಗದ ಮೂಲಕ ಕೆಳಕ್ಕೆ ತರಲಾಗುತ್ತದೆ ಎಂದು ವಿವರಣೆ ನೀಡುತ್ತಾರೆ ಯಲ್ಲಾಪುರದ ವ್ಯಾಪಾರಿ ಮಹಮದ್ ನಿಸಾರ್.
ಅಪ್ಪೆಮಿಡಿ ತೊಟ್ಟು ಸಹಿತವಾಗಿದ್ದರೆ ಮಾತ್ರ ಅದಕ್ಕೆ ಬೇಡಿಕೆ. ತೊಟ್ಟಿನಲ್ಲಿ ಸಂಗ್ರಹವಾಗಿರುವ ಸೊನೆಯೇ ಅದರ ವಿಶಿಷ್ಠ ಪರಿಮಳಕ್ಕೆ ಕಾರಣ. ತೊಟ್ಟು ಮುರಿದಿದ್ದರೆ ಗ್ರಾಹಕರು ಖರೀದಿಸಲು ಬಯಸುವುದಿಲ್ಲ. ಎಲ್ಲಿಯೂ ಜಜ್ಜಿ ಹೋಗಿರಬಾರದು. ಉದ್ದುದ್ದನೆಯ 'ಎಸ್‌' ಆಕಾರದ ಅಪ್ಪೆಮಿಡಿಗಳು ಹೆಚ್ಚಿನ ದರ ಪಡೆದುಕೊಳ್ಳುತ್ತವೆ. ತೊಟ್ಟನ್ನು ಮುರಿದಾಗ ಚಿಮ್ಮುವ ಸೊನೆಗೆ ಬೆಂಕಿ ತಾಕಿಸಿದರೆ, ತಕ್ಷಣವೇ ಅದು ಮೇಣದಬತ್ತಿಯಂತೆ ಉರಿಯತೊಡಗುತ್ತದೆ. ಅಂಥವುಗಳನ್ನು ಅತ್ಯುತ್ತಮ ದರ್ಜೆಯ ಮಾವಿನಮಿಡಿಗಳೆಂದು ತಿಳಿಯಬಹುದು.
ಮಾರುಕಟ್ಟೆಯ ವಾತಾವರಣಕ್ಕೆ ತಕ್ಕಂತೆ 80- 100 ರು.ಗಳಿಗೆ 100 ಅಪ್ಪೆಮಿಡಿಗಳನ್ನು ಮಾರಲಾಗುತ್ತದೆ. ಅತ್ಯುತ್ತಮ ದರ್ಜೆಯ ಮಿಡಿಗಳಿಗೆ 100ಕ್ಕೆ 150 ರು.ನಿಂದ 350 ರು. ವರೆಗೂ ದರವನ್ನು ಪಡೆದುಕೊಳ್ಳುತ್ತವೆ.
ಮಿಡಿಗಳ ಗುಣಮಟ್ಟದೊಂದಿಗೆ, ಅವುಗಳನ್ನು ಸಂಗ್ರಹಿಸಿಡುವ ರೀತಿಯೂ ಅವುಗಳ ಬಾಳಿಕೆಗೆ ಕಾರಣವಾಗುತ್ತದೆ. ಭರಣಿಯಲ್ಲಿ ತುಂಬುವುದಕ್ಕಿಂತ ಮೊದಲು ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಬೇಕು. ಭರಣಿಗೆ ತುಂಬಿಸಿದ ನಂತರ ನೀರು ತಾಕಿಸಬಾರದು. ಇನ್ನೂ ಕೆಲವು ಅಂಶಗಳನ್ನು ಅನುಸರಿಸಿದರೆ, ಮೂರ್ನಾಲ್ಕು ವರ್ಷಗಳವರೆಗೂ ಒಂದಿನಿತೂ ಹಾಳಾಗುವುದಿಲ್ಲವಂತೆ.
ಅಂದಹಾಗೆ, ಮಾರುಕಟ್ಟೆಯಲ್ಲೇನಾದರೂ ಅಪ್ಪೆಮಿಡಿಯ ಘಮಲು ಮೂಗು ಸವರಿತೆಂದರೆ, ನಾಳೆ ಖರೀದಿಸಿದರಾಯಿತೆಂದು ಬಿಟ್ಟುಬಿಡಬೇಡಿ. ಮತ್ತೆ ಮುಂದಿನ ಸೀಸನ್‌ವರೆಗೂ ಕಾಯಬೇಕಾದೀತು!

-ಚಿತ್ರ-ಲೇಖನ: ಸತೀಶ್ ಭಟ್ ಮಾಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com