ಸಂಜಯ ಉವಾಚ

Published: 10th February 2014 02:00 AM  |   Last Updated: 09th February 2014 11:48 AM   |  A+A-


Posted By : Mainashree
ಭಾಗ -5
ಬೆಂಗಳೂರನ್ನು ನಾನು ಮೊಟ್ಟ ಮೊದಲು ನೋಡಿದ್ದು 1928ರಲ್ಲಿ.  ದೊಡ್ಡಮ್ಮನ ಶಸ್ತ್ರಚಿಕಿತ್ಸೆಗಾಗಿ ಮನೆಯವರೆಲ್ಲಾ ಚಿತ್ರದುರ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದೆವು. ಚಾಮರಾಜಪೇಟೆಯಲ್ಲಿ ಮನೆ ಇದ್ದುದರಿಂದ ತೊಂದರೆಯಾಗಲಿಲ್ಲ. ಒಂದು ತಿಂಗಳು ಪೂರ್ತಿ ಇದ್ದೆವು. ಪ್ರತಿದಿನ ನಾನು ಮತ್ತು ನನ್ನ ಅಣ್ಣ ಇಬ್ಬರೂ ಬೆಳಗಿನಿಂದ ಸಾಯಂಕಾಲದವರೆಗೂ ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ತಿರುಗಾಡುತ್ತಿದ್ದೆವು. ನಮಗೆ ಬೇರೆ ಯಾವ ಕೆಲಸವೂ ಇರಲಿಲ್ಲ. ಚಾಮರಾಜಪೇಟೆಯಿಂದ ಸಿಟಿ ರೇಲ್ವೆ ಸ್ಟೇಷನ್‌ಗೆ ಹೋಗುವ ಅರಳೇಪೇಟೆ ಅಥವಾ ಕಾಟನ್‌ಪೇಟೆ ಅಂದು ಬಹಳ ಮುಖ್ಯ ರಸ್ತೆಯಾಗಿತ್ತು. ಚಾಮರಾಜಪೇಟೆ, ಶಂಕರಪುರ, ಬಸವನಗುಡಿ ಮತ್ತು ವಿಶ್ವೇಶ್ವರಪುರ ಬಡಾವಣೆಯಿಂದ ಸಿಟಿ ರೇಲ್ವೇ ಸ್ಟೇಷನ್‌ಗೆ ಹಾಗೂ ಅಲ್ಲಿಂದ ಮಲ್ಲೇಶ್ವರಂಗೆ ಹೋಗುವ ಜನ ಹಾಗೂ ವಾಹನಗಳು ಈ ರಸ್ತೆಯಲ್ಲೇ ಸಾಮಾನ್ಯವಾಗಿ ಹೋಗುತ್ತಿದ್ದವು. ಮೈಸೂರು ಕಾಂಗ್ರೆಸ್ ಕಚೇರಿ ಮತ್ತು ಅದರ ಎದುರಿಗೆ ಅಂದಿನ ಸುಪ್ರಸಿದ್ಧ ವಕೀಲರು, ಕಾಂಗ್ರೆಸ್ ಮುಖಂಡರು ಹಾಗೂ ಮೈಸೂರು ಸರ್ಕಾರದ ಸಚಿವರೂ ಆಗಿದ್ದ ಕೆ.ಟಿ. ಭಾಷ್ಯಂ ಅಯ್ಯಂಗಾರ್‌ರವರ ಮನೆಯೂ ಇತ್ತು. ಕಾಂಗ್ರೆಸ್ ಕಚೇರಿಯ ಮುಂದೆ ಯಾವಾಗಲೂ ಭಾರಿ ಜನಸಂದಣಿ ಇರುತ್ತಿತ್ತು.
ಸಿಟಿ ರೇಲ್ವೆ ಸ್ಟೇಷನ್ ಎದುರಿಗೆ ಅಂದರೆ, ಈಗ ಸುಭಾಷನಗರ ಬಸ್‌ನಿಲ್ದಾಣ ಇರುವ ಪ್ರದೇಶದಲ್ಲಿ ಒಂದು ದೊಡ್ಡ ಕೆರೆ ಇತ್ತು. ಅದನ್ನು ಧರ್ಮಾಂಬುಧಿ ಕೆರೆ ಎಂದು ಕರೆಯುತ್ತಿದ್ದರು. ಅದಕ್ಕೂ ಮುಂದೆ ಸ್ವಲ್ಪ ದೂರದಲ್ಲಿ ಜಕ್ಕರಾಯನ ಕೆರೆ ಎಂಬ ಇನ್ನೊಂದು ಕೆರೆ ಇತ್ತು. ಸಿಟಿ ರೇಲ್ವೆ ಸ್ಟೇಷನ್ ಪಕ್ಕದಲ್ಲಿ ತೋಟದಪ್ಪನವರ ಛತ್ರ ಎಂಬ ದೊಡ್ಡ ಛತ್ರ ಇತ್ತು. ಈಗಲೂ ಇದೆ. ಆದರೆ ಆಗ ಇದ್ದಂತಿಲ್ಲ. ಆ ಕಾಲದಲ್ಲಿ ಬೆಂಗಳೂರಿಗೆ ಬರುವವರು ಊಟ ವಸತಿಗಾಗಿ ಹೋಟೆಲ್‌ಗಳಿಗೆ ಹೋಗುತ್ತಿರಲಿಲ್ಲ. ಹೋಟೆಲ್‌ಗೆ ಹೋಗುವುದು ತಪ್ಪು ಎಂದು ಆ ಕಾಲದ ಜನರ ಭಾವನೆ, ವ್ಯಾಪಾರ, ವ್ಯವಹಾರಗಳಿಗಾಗಿ ಮತ್ತು ಕಚೇರಿ ಕೆಲಸಗಳಿಗಾಗಿ ಪರ ಊರುಗಳಿಂದ ಬೆಂಗಳೂರಿಗೆ ಬರುವವರು ಸಾಮಾನ್ಯವಾಗಿ ಈ ಛತ್ರದಲ್ಲಿ ಇಳಿದುಕೊಳ್ಳುತ್ತಿದ್ದರು. ಓಡಾಡಲು ಆ ಕಾಲದಲ್ಲಿ ಆಟೋಗಳಾಗಲಿ ಬಸ್ಸುಗಳಾಗಲಿ ಇರಲಿಲ್ಲ. ಕೇವಲ ಜಟಕಾ ಗಾಡಿಗಳಲ್ಲಿ ಓಡಾಡಬೇಕಾಗಿತ್ತು.
ಬೆಂಗಳೂರಿನಲ್ಲಿ ನಾನು ಆಗಾಗ್ಗೆ ಹೋಗುತ್ತಿದ್ದ ಇನ್ನೊಂದು ಮಹತ್ವದ ಸ್ಥಳವೆಂದರೆ ಸುಲ್ತಾನ್‌ಪೇಟೆ. ವಿದ್ಯಾಗಣಪತಿ ಗುಡಿ, ಒಂದು ಸ್ಕೂಲ್‌ನ ಆವರಣದಲ್ಲಿ ಈ ಗುಡಿ ಇತ್ತು. ಅದರ ಎದುರಿಗೆ ನಗರದ ಪ್ರಮುಖ ಮುಸ್ಲಿಂ ಮುಖಂಡ ಅಬ್ಬಾಸ್‌ಖಾನ್‌ರ ಮನೆ ಇತ್ತು. ಅವರ ಮನೆ ಎದುರಿಗೆ ಆಗಾಗ್ಗೆ ಗಣಪತಿ ಗುಡಿಯಲ್ಲಿ ಪೂಜೆಗಳು ನಡೆಯುವುದು ಅಬ್ಬಾಸ್ ಖಾನರ ಬೆಂಬಲಿಗರಿಗೆ ಸಹನೆಯಾಗಲಿಲ್ಲ. ಗಲಾಟೆ ಮಾಡಿದರು. ಈ ಗಲಾಟೆಯೇ ಮುಂದೆ ಇಡೀ ಸಂಸ್ಥಾನದಲ್ಲಿ ಹಿಂದು ಮುಸುಲ್ಮಾನರ ಗಲಾಟೆಗಳಿಗೆ ಕಾರಣವಾಯಿತು.
ನಾವು ಬೆಂಗಳೂರಿಗೆ ಹೋದಾಗ ಗಲಭೆ ನಿಂತಿತ್ತು. ಈ ಬಗ್ಗೆ ತನಿಖೆ ನಡೆಸಲು ಮಹಾರಾಜರ ಸರ್ಕಾರ ಶ್ರೀ ವೇಪಾ ರಮೇಶಂ ಎಂಬವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತ್ತು. ಅದರ ಕಾರ್ಯಕಲಾಪಗಳು ಅಠಾರಾ ಕಚೇರಿಯಲ್ಲಿ ನಡೆಯುತ್ತಿದ್ದವು. ನಾನೂ ಒಮ್ಮೆ ಅಠಾರಾ ಕಚೇರಿಗೆ ಹೋಗಿ ಈ ಕಲಾಪಗಳನ್ನು ನೋಡಿ ಬಂದೆ. ಸಿಟಿ ಮಾರ್ಕೆಟ್‌ಗೆ ಹೋಗುವಾಗ ಅಥವಾ ಚಿಕ್ಕಪೇಟೆಯಿಂದ ಚಾಮರಾಜಪೇಟೆಗೆ ಬರುವಾಗ ಸುಲ್ತಾನಪೇಟೆ ಮುಖಾಂತರವೇ ಬರಬೇಕಾಗಿತ್ತು. ಅಬ್ಬಾಸ್ ಖಾನ್‌ರ ಮನೆ ಹತ್ತಿರ ಬಂದಾಗ ನಾವು ಹೆದರಿಕೆಯಿಂದ ಮುಖ ಬೇರೆ ಕಡೆಗೆ ತಿರುಗಿಸಿಕೊಂಡು ಹೋಗುತ್ತಿದ್ದೆವು.
ಚಿಕ್ಕಪೇಟೆ ಮತ್ತು ಬಳೇಪೇಟೆ ಸೇರುವ ಪ್ರದೇಶ ಮೈಸೂರು ಕಾಂಗ್ರೆಸ್ ಮುಖಂಡರ ತವರು ಮನೆಯಂತಿತ್ತು. ಇದನ್ನು ಬಳೇಪೇಟೆ ಚೌಕ ಎಂದು ಕರೆಯುತ್ತಿದ್ದರು. ಚಿಕ್ಕಪೇಟೆ ಕೊನೆಯಲ್ಲಿ 'ಉಡುಪಿ ಹೋಟೆಲ್‌' ಇತ್ತು. ಅದರ ಮುಂದೆ ಕಾಫಿ ಪುಡಿ ಅಂಗಡಿ ಇತ್ತು. ಅದರ ಮಾಲೀಕರು ಭೀಮರಾವ್ ಎಂಬವರು. ಮೈಸೂರು ಕಾಂಗ್ರೆಸ್ ಮುಖಂಡರಾಗಿದ್ದರು. ಈ ಅಂಗಡಿಯಲ್ಲಿ ಮತ್ತು ಉಡುಪಿ ಹೋಟೆಲ್‌ನಲ್ಲಿ ಮೈಸೂರು ಕಾಂಗ್ರೆಸ್‌ನ ಅನೇಕ ಮುಖಂಡರು ಆಗಾಗ್ಗೆ ಸೇರಿ ಆಗಿನ ದಿವಾನರಾಗಿದ್ದ ಸರ್. ಮಿರ್ಜಾ ಇಸ್ಮಾಯಿಲ್‌ರ ಆಡಳಿತವನ್ನು ಕುರಿತು ಚರ್ಚೆ ಮಾಡುತ್ತಿದ್ದರು ಮತ್ತು ಆಗ ಬ್ರಿಟಿಷ್ ಇಂಡಿಯಾದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಚಳವಳಿಯನ್ನೂ ಚರ್ಚಿಸುತ್ತಿದ್ದರು. ಈ ಚರ್ಚೆಗಳ ಪರಿಣಾಮವಾಗಿ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆಗೆ ಚಳವಳಿ ಮಾಡಬೇಕೆಂಬ ಆಲೋಚನೆ ಅವರಲ್ಲಿ ಉಂಟಾಯಿತು. ಇದೇ ಚೌಕದಲ್ಲಿ ಸ್ವಲ್ಪ ದೂರದಲ್ಲಿ 'ವಿಶ್ವಕರ್ನಾಟಕ ಪತ್ರಿಕೆ'ಯ ಕಚೇರಿ ಸಹ ಇತ್ತು. ಅದರ ಪಕ್ಕದಲ್ಲಿ ಅಂದಿನ ಕಾಂಗ್ರೆಸ್ ಮುಖಂಡರುಗಳಲ್ಲಿ ಒಬ್ಬರಾಗಿದ್ದ ಎಲ್.ಎಸ್. ರಾಜುರವರ ಆಫೀಸ್ ಇತ್ತು. ಸುಪ್ರಸಿದ್ಧ ಪತ್ರಕರ್ತ ತಿರುಮಲೆ ತಾತಾಚಾರ್ಯ ಶರ್ಮರವರು 'ವಿಶ್ವಕರ್ನಾಟಕ' ಪತ್ರಿಕೆಯ ಸಂಪಾದಕರಾಗಿದ್ದರು. ಕನ್ನಡದ ಸುಪ್ರಸಿದ್ಧ ಲೇಖಕರಾದ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸಾಕಷ್ಟು ಜನಜಾಗೃತಿಯನ್ನುಂಟು ಮಾಡಿಬಂದಿದ್ದ ಸಿದ್ಧವನಹಳ್ಳಿ ಕೃಷ್ಣಶರ್ಮರು ಅದರ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು. ಸಿದ್ಧವನಹಳ್ಳಿ ಕೃಷ್ಣ ಶರ್ಮರು ನಮ್ಮ ಊರಿನವರು. ಅಂದರೆ ಚಿತ್ರದುರ್ಗದವರು. ಅಯ್ಯಣ್ಣ ಪೇಟೆಯಲ್ಲಿದ್ದ ಅವರ ಮನೆಯ ಪರಿಚಯ ನನಗೆ ಚೆನ್ನಾಗಿತ್ತು. ಕೃಷ್ಣಶರ್ಮರವರ ತಂದೆಯವರ ಪರಿಚಯವೂ ಇತ್ತು. ಅವರ ಮನೆಗೆ ಆಗಾಗ್ಗೆ ಹೋಗುತ್ತಿದ್ದೆ. ಇದೇ ಪರಿಚಯದಿಂದ ನಾನು 1957ರಲ್ಲಿ ಬೆಂಗಳೂರಿಗೆ ಬಂದು 'ಸಂಯುಕ್ತ ಕರ್ನಾಟಕ'ದ ಬೆಂಗಳೂರು ಆವೃತ್ತಿಯನ್ನು ಪ್ರಾರಂಭಿಸಿದಾಗ, ಕೃಷ್ಣಶರ್ಮರಿಂದ ಲೇಖನಗಳನ್ನು ಬರೆಸಿ ಪ್ರಕಟಿಸುತ್ತಿದ್ದೆ. ಅವರು ಬರೆಯುತ್ತಿದ್ದ ಕೃಷ್ಣಾವತಾರದ ಧಾರಾವಾಹಿ ಅತ್ಯಂತ ಜನಪ್ರಿಯವಾಯಿತು. ಈ ಲೇಖನಗಳನ್ನು ಒಂಬತ್ತು ಭಾಗಗಳಲ್ಲಿ ಪ್ರಕಟಿಸಿದೆವು. ಇದರಿಂದ ಪತ್ರಿಕೆಯೂ ಬಹಳ ಜನಪ್ರಿಯವಾಯಿತು, ಅದರ ಪ್ರಸಾರವೂ ಹೆಚ್ಚಿತು.
ಒಂದು ತಿಂಗಳ ನಂತರ ನಾವು ಚಿತ್ರದುರ್ಗಕ್ಕೆ ವಾಪಸಾದೆವು. ನಮ್ಮ ಜೊತೆಗೆ ನಮ್ಮ ದೊಡ್ಡಪ್ಪನ ಇಬ್ಬರು ಮಕ್ಕಳು ವಾಪಸಾದರು. ಅವರ ಕಾಲೇಜು ವಿದ್ಯಾಭ್ಯಾಸಕ್ಕೆ ಹಣ ಸಹಾಯ ಮಾಡಲು ನಮ್ಮ ದೊಡ್ಡಪ್ಪ ನಿರಾಕರಿಸಿದ್ದ. ಆದರೆ ತನ್ನ ತಮ್ಮನಿಗೆ ಮಾತ್ರ ಹಣ ಕಳುಹಿಸುತ್ತಿದ್ದರಿಂದ ಮನೆಯಲ್ಲಿ ಅಸಮಾಧಾನ ತುಂಬಿತ್ತು. ನನ್ನ ಚಿಕ್ಕಪ್ಪ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿ ಎಂಜಿನಿಯರ್ ಆದರು. ನನ್ನ ದೊಡ್ಡಪ್ಪನ ಮಕ್ಕಳು ಮಾತ್ರ ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದರು. ಅವರಲ್ಲಿ ಹಿರಿಯವರು ಭದ್ರಾವತಿಗೆ ಹೋಗಿ ಕಬ್ಬಿಣದ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ. ಎರಡನೆಯವನನ್ನು ವಕೀಲಿ ವೃತ್ತಿಗೆ ಸಿದ್ಧಗೊಳಿಸಬೇಕೆಂಬ ನಮ್ಮ ದೊಡ್ಡಪ್ಪನ ಬಯಕೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಅವನು ಮೈಸೂರು ಬ್ಯಾಂಕ್‌ನಲ್ಲಿ ಗುಮಾಸ್ತ ಕೆಲಸಕ್ಕೆ ಸೇರಿಕೊಂಡ.
ಚಿತ್ರದುರ್ಗದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದ ನನಗೂ ಕಾಲೇಜಿಗೆ ಹೋಗಬೇಕೆಂಬ ಆಸೆಯಿತ್ತು. ಆ ಕಾಲದಲ್ಲಿ ಇಡೀ ಸಂಸ್ಥಾನದಲ್ಲಿ ಎರಡೇ ಕಾಲೇಜುಗಳಿದ್ದವು. ಒಂದು ಬೆಂಗಳೂರಿನಲ್ಲಿ ಮತ್ತೊಂದು ಮೈಸೂರಿನಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜು ಕೇವಲ ವಿಜ್ಞಾನ ವಿಷಯಗಳಿಗೆ, ಮೈಸೂರಿನ ಕಾಲೇಜು ಸಾಹಿತ್ಯ, ಕಲೆ, ಇತಿಹಾಸ ಮತ್ತು ವೇದಾಂತ ವಿಷಯಗಳಿಗೆ ಮೀಸಲಾಗಿದ್ದವು. ನನಗೆ ವಿಜ್ಞಾನದಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಮೈಸೂರು ಕಾಲೇಜನ್ನು ಆರಿಸಿಕೊಂಡೆ. ಆದರೆ ನನ್ನ ದೊಡ್ಡಪ್ಪ ನನ್ನ ಕಾಲೇಜು ವ್ಯಾಸಂಗಕ್ಕೆ ಸಹಾಯ ಮಾಡಲು ಒಪ್ಪಲಿಲ್ಲ. ಅವರಿಗೆ ಇಬ್ಬರು ಮಕ್ಕಳಿದ್ದರು. ಒಬ್ಬ ತಮ್ಮನೂ ಇದ್ದ. ಈ ಮೂವರು ಬೆಂಗಳೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರಿಗೆ ಧನಸಹಾಯ ಮಾಡುವುದೇ ಅವರಿಗೆ ಕಷ್ಟವಾಗಿತ್ತು. ನಾನು ಯಾರೋ ಸ್ನೇಹಿತರಿಂದ ಸಾಲ ಪಡೆದು, ಮನೆಯಲ್ಲಿ ಯಾರಿಗೂ ಹೇಳದೆ, ರೈಲಿನಲ್ಲಿ ಮೈಸೂರಿಗೆ ಬಂದೆ. ತಾರೀಕು ನೆನಪಿಲ್ಲ. ಬಹುಶಃ ಅದು 1934ರ ಜೂನ್ ಇರಬೇಕು.
ನನಗೆ ಹಣ ಬೇಕಾಗಿತ್ತು. ನನ್ನ ಹತ್ತಿರ ಹಣ ಇರುತ್ತಿರಲಿಲ್ಲ. ದೊಡ್ಡಪ್ಪನನ್ನು ಕೇಳಲು ಧೈರ್ಯ ಇರುತ್ತಿರಲಿಲ್ಲ. ದೊಡ್ಡಮ್ಮ ಕೊಡುತ್ತಿರಲಿಲ್ಲ. ಆದ್ದರಿಂದ ಏನಾದರೂ ಮಾಡಿ ಹಣ ಸಂಪಾದಿಸಬೇಕೆಂಬ ಆಲೋಚನೆ ಬಂದಿತು. ಒಮ್ಮೆ ಎಲ್ಲಿಯೋ ಕಲ್ಕತ್ತಾದ 'ಇಂಡಸ್ಟ್ರೀ' ಎಂಬ ಇಂಗ್ಲಿಷ್ ಮಾಸ ಪತ್ರಿಕೆ ನೋಡಿದ್ದೆ. ಅದನ್ನು ತಂದು ಓದಿದ್ದೆ. ಅನೇಕ ಸಣ್ಣ ಪುಟ್ಟ ವಸ್ತುಗಳನ್ನು ಮಾಡುವ ವಿಧಾನ ಅದರಲ್ಲಿತ್ತು. ಅವುಗಳಲ್ಲಿ ಮಸಿ (ಇಂಕ್) ಮಾಡುವ ವಿಧಾನವೂ ಇತ್ತು. ಕೂಡಲೇ ನನ್ನ ದೊಡ್ಡಪ್ಪ ಕೊಟ್ಟಿದ್ದ ಸಂತೆ ಖರ್ಚಿನಲ್ಲಿ ಒಂದೆರಡು ರು. ಉಳಿಸಿಕೊಂಡು, ಮಸಿ ತಯಾರಿಸುವ ಪ್ರಯೋಗ ಮಾಡಿದೆ. ಸ್ವಲ್ಪ ಮಟ್ಟಿಗೆ ಯಶಸ್ವಿಯಾದೆ. ನನ್ನ ಈ ಸಾಹಸವನ್ನು ನನ್ನ ಮುಖ್ಯಶಿಕ್ಷಕರು ಕೇಳಿ, ಸಂತೋಷಪಟ್ಟು, ಆ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಮಸಿ ಸರಬರಾಜು ಮಾಡಲು ಹೇಳಿದರು. ಇದಕ್ಕಾಗಿ 25 ರು. ಕೊಟ್ಟರು. ಇದರಿಂದ ನನಗೆ ಭಾರಿ ಶ್ರೀಮಂತನಾದಷ್ಟು ಸಂತೋಷವಾಯಿತು. ಇದೇ ಉತ್ಸಾಹದಲ್ಲಿ ಸಾಬೂನು ತಯಾರಿಸುವ ವಿಧಾನ ಕಲಿತೆ. ಆದರೆ ಈ ಪ್ರಯೋಗ ಮಾತ್ರ ಯಶಸ್ವಿಯಾಗಲಿಲ್ಲ. ಏಕೆಂದರೆ ಕುದಿಯುವ ಕೊಬ್ಬರಿ ಎಣ್ಣೆಗೆ ಕಾಸ್ಟಿಕ್ ಸೋಡಾವನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹಾಕಿದ್ದೆ. ಸಾಬೂನು ಸಿದ್ಧವಾಯಿತು. ಆದರೆ ಅದನ್ನು ಬಟ್ಟೆಗೆ ಹಚ್ಚಿದಾಗ ಎರಡೂ ಕೈಗಳು ಉರಿಯತೊಡಗಿದವು. ಆ ಸಾಬೂನಿನ ನೀರು ಸಿಡಿದಾಗ ಮೈ ಸಹ ಉರಿಯುತ್ತಿತ್ತು. ಕೊನೆಗೆ ನಿರಾಶನಾಗಿ ಎಲ್ಲ ಪ್ರಯೋಗಗಳನ್ನು ಕೈಬಿಟ್ಟು, ಓದಿನ ಕಡೆಗೆ ಹೆಚ್ಚು ಗಮನ ಕೊಟ್ಟೆ.
ನಿರೀಕ್ಷೆಯಂತೆ ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದೆ. ಒಂದು ವರ್ಷ ಮೊದಲು ನಮ್ಮ ಅಣ್ಣನೂ ಪಾಸಾಗಿದ್ದ. ಆದರೆ ಅವನು ಮುಂದೆ ಓದಲು ಇಷ್ಟಪಡದೆ, ಮನೆಯಲ್ಲಿ ಯಾರಿಗೂ ಹೇಳದೆ ಓಡಿ ಹೋದ. ಸುಮಾರು ಒಂದೆರಡು ವರ್ಷಗಳವರೆಗೆ ಅವನು ಎಲ್ಲಿದ್ದಾನೆಂಬುದು ಸಹ ಗೊತ್ತಾಗಲಿಲ್ಲ. ಯಾರೂ ಅವನನ್ನು ಹುಡುಕುವ ಪ್ರಯತ್ನ ಮಾಡಲಿಲ್ಲ. ನನ್ನ ಅಣ್ಣನ ಬಗ್ಗೆ ನಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮ ತೋರಿಸಿದ ಅಲಕ್ಷ್ಯದಿಂದ ನಾನು ತುಂಬಾ ದುಃಖ ಪಟ್ಟೆ. ರಾತ್ರಿ ಮಲಗಿದ್ದಾಗ ಯಾರಿಗೂ ಗೊತ್ತಾಗದಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ನನ್ನ ಅಣ್ಣನಂತೆ ನಾನೂ ಮನೆ ಬಿಟ್ಟು ಹೋಗಬೇಕೆಂದು ಆಗಲೇ ಸಂಕಲ್ಪ ಮಾಡಿದ್ದೆ.
ಪರೀಕ್ಷೆಯಲ್ಲಿ ಉತ್ತೀರ್ಣನಾದ ಮೇಲೆ, ಒಂದು ದಿನ ನನ್ನ ದೊಡ್ಡಪ್ಪನನ್ನು ಔಪಚಾರಿಕವಾಗಿ ನಾನು ಕಾಲೇಜಿಗೆ ಸೇರುತ್ತೇನೆ ಎಂದು ಕೇಳಿದೆ. ಅದಕ್ಕೆ ಅವರು ನಿನ್ನನ್ನು ಓದಿಸಲು ನನ್ನ ಕೈಯಲ್ಲಿ ಆಗುವುದಿಲ್ಲ. ಏನಾದರೂ ಮಾಡಿಕೋ ಎಂದು ಬೈದು, ಗದರಿಸಿ ಕಳಿಸಿದರು. ಸೈನ್ಸ್ ಪರೀಕ್ಷೆ (ಬಿಎಸ್ಸಿ) ಓದಲು ಬೆಂಗಳೂರಿಗೆ, ಆರ್ಟ್ಸ್ (ಬಿ.ಎ.) ಓದಲು ಮೈಸೂರಿಗೆ ಹೋಗಬೇಕಾಗಿತ್ತು. ನನ್ನ ದೊಡ್ಡಪ್ಪನ ಇಬ್ಬರೂ ಮಕ್ಕಳು ಬೆಂಗಳೂರಿನಲ್ಲಿ ಓದುತ್ತಿದ್ದರು. ಸ್ವಲ್ಪ ದಿನಗಳ ನಂತರ ನನ್ನ ದೊಡ್ಡಪ್ಪ ತನ್ನ ತಮ್ಮನನ್ನು ಅಂದರೆ ನನ್ನ ಕೊನೆಯ ಚಿಕ್ಕಪ್ಪನನ್ನು ಸಹ ಎಂಜಿನಿಯರಿಂಗ್ ಓದಲು ಬೆಂಗಳೂರಿಗೆ ಕಳುಹಿಸಿದ್ದರು. ಬೆಂಗಳೂರಿನ ಚಾಮರಾಜಪೇಟೆಯ ನಾಲ್ಕನೇ ಬೀದಿಯಲ್ಲಿ ಒಂದು ಮನೆಯನ್ನೂ ಬಾಡಿಗೆಗೆ ಹಿಡಿದಿದ್ದರು. ನನಗೂ ಅಲ್ಲಿಗೆ ಹೋಗಬೇಕೆಂಬ ಆಸೆಯಿತ್ತು. ನನ್ನ ದೊಡ್ಡಪ್ಪನ ಧೋರಣೆಯಿಂದ ಭಾರಿ ನಿರಾಶೆಯಾಯಿತು. ನನ್ನ ದೊಡ್ಡಪ್ಪನದು ವಿಚಿತ್ರ ಸ್ವಭಾವ, ಪ್ರೀತಿ ಮಾಡಿದರೆ ಅತಿ ಮಾಡುತ್ತಿದ್ದ. ಕೇಳಿದ್ದನ್ನೆಲ್ಲ ಕೊಡುತ್ತಿದ್ದ. ಇಲ್ಲ ಎಂದರೆ, ಯಾರು ಹೇಳಿದರೂ ಕೊಡುತ್ತಿರಲಿಲ್ಲ. ಆತನಿಗೆ ಸಿಟ್ಟು ಬಹಳ. ಆತನ ಎದುರಿಗೆ ನಿಂತು ಮಾತನಾಡಲು ಎಲ್ಲರೂ ಹೆದರುತ್ತಿದ್ದರು. ಒಮ್ಮೆ ತನ್ನ ತಂಗಿಯ ಮಗನನ್ನು ಮನೆಯಲ್ಲಿ ಇಟ್ಟುಕೊಳ್ಳಲಿಲ್ಲವೆಂಬ ಕಾರಣಕ್ಕೆ ಹೆಂಡತಿಯ ಮೇಲೆ ಸಿಟ್ಟಾಗಿ ಹದಿನೈದು ದಿನ ಊರು ಬಿಟ್ಟು ಹೋಗಿದ್ದರು.
ಒಟ್ಟಿನಲ್ಲಿ ಮನೆಯ ವಾತಾವರಣ ದಿನ ದಿನಕ್ಕೆ ಕೆಡುತ್ತಿತ್ತು. ನಾನು ಕಾಲೇಜು ಸೇರುವ ವಿಷಯ ಯಾರಿಗೂ ಬೇಕಾಗಿರಲಿಲ್ಲ. ಯಾರೂ ಮಾತನಾಡುತ್ತಿರಲಿಲ್ಲ.
ಆದರೆ ನಾನು ಮಾತ್ರ ಕಾಲೇಜಿಗೆ ಹೋಗಲೇಬೇಕೆಂದು ಮನಸ್ಸು ಮಾಡಿದ್ದೆ. ಸ್ನೇಹಿತರ ಸಹಾಯ ಕೇಳಿದೆ. ಸ್ವಲ್ಪ ಸಹಾಯವೂ ಸಿಕ್ಕಿತು. ಮೈಸೂರಿಗೆ ಹೋಗಬೇಕೆಂದು ನಿರ್ಧರಿಸಿದೆ. ನನ್ನ ಒಂದೆರಡು ಹಳೆಯ ಬಟ್ಟೆಗಳನ್ನು ಕೈಚೀಲದಲ್ಲಿಟ್ಟುಕೊಂಡು, ರೇಲ್ವೆ ಸ್ಟೇಷನ್ನಿಗೆ ಹೋದೆ. ಮನೆಯಲ್ಲಿ ಯಾರಿಗೂ ಹೇಳಲಿಲ್ಲ. ಅಂತೂ ಪರದೇಶಿಯಾಗಿ ಮನೆ ಬಿಟ್ಟೆ. ಊರನ್ನೂ ಬಿಟ್ಟೆ, ಕೋಟಿನ ಜೇಬಿನಲ್ಲಿ 4-5 ರು. ಇತ್ತು. ಸಾಕು ಎಂದು ರೈಲಿನಲ್ಲಿ ಕುಳಿತೆ. ಟಿಕೆಟ್ ಕೊಳ್ಳಲಿಲ್ಲ. ರೈಲಿನಲ್ಲಿ ಯಾರೂ ನನ್ನನ್ನು ತಡೆಯಲಿಲ್ಲ. ಆ ಕಾಲದಲ್ಲಿ ರೈಲು ಚಿತ್ರದುರ್ಗದಿಂದ ಚಿಕ್ಕಜಾಜೂರಿನವರೆಗೆ ಮಾತ್ರ ಹೋಗುತ್ತಿತ್ತು. ಚಿಕ್ಕಜಾಜೂರಿನಲ್ಲಿ ಮತ್ತೊಂದು ರೈಲನ್ನು ಹತ್ತಿ ಅರಸೀಕೆರೆಯಲ್ಲಿ ಇಳಿದು, ಮೈಸೂರಿಗೆ ಹೋಗುವ ಇನ್ನೊಂದು ರೈಲನ್ನು ಹತ್ತಬೇಕಾಗಿತ್ತು. ಹಾಗೆಯೇ ಮಾಡಿದೆ. ಆದರೆ ಸುದೈವದಿಂದ ದಾರಿಯಲ್ಲಿ ಒಬ್ಬ ಟಿಕೆಟ್ ಕಲೆಕ್ಟರ್‌ನೂ ಹಿಡಿಯಲಿಲ್ಲ. ಅಂತೂ ಟಿಕೆಟ್ ಇಲ್ಲದೆ ನಾನು ಮರುದಿನ ಬೆಳಗ್ಗೆ ಆರು ಗಂಟೆ ಹೊತ್ತಿಗೆ ಮೈಸೂರು ರೇಲ್ವೆ ನಿಲ್ದಾಣದಲ್ಲಿ ಇಳಿದೆ.
(ಮುಂದುವರಿಯುವುದು)


ಕೆ.ಶಾಮರಾವ್

Stay up to date on all the latest ಬೈಟುಕಾಫಿ news with The Kannadaprabha App. Download now
facebook twitter whatsapp