ಪ್ರಥಮಂ ವಂದೇ

Published: 08th September 2013 02:00 AM  |   Last Updated: 07th September 2013 04:31 AM   |  A+A-


Posted By : Lingaraj

ಭಾರತೀಯ ಆಧ್ಯಾತ್ಮ ಪ್ರಪಂಚದಲ್ಲಿ ದೈವ, ವೈಷ್ಣವ, ಶಾಸ್ತ್ರೀಯ, ಗಾಣಪತ, ಅದ್ವೈತ, ವಿಶಿಷ್ಟಾದ್ವೈತ ಪಂಥದವರೆಂಬ ಭೇದವಿಲ್ಲದೆ ವಿಶ್ವದೆಲ್ಲೆಡೆ ಸಮಸ್ತ ಹಿಂದುಗಳಿಗೆ ಪ್ರಥಮ ವಂದ್ಯನಾಗಿ ಆದಿ ಪೂಜ್ಯನೆನಿಸಿದವನು ನಮ್ಮ ಮಹಾಗಣಪತಿ.

ಹಾಗಾಗಿಯೇ ಗಣೇಶ ಪುರಾಣದಲ್ಲಿ 'ಶೈವೈತ್ವೆ ೈತೀಯರಥ ವೈಷ್ಣವೈಶ್ಯ ಶಾಕ್ತೈಶ್ಚ ಸೌರೈರಥ ಶುಭಾಶುಭೇಲೌಕಿಕ ವೈದಿಕೇಚ ತ್ವರ್ಚನೀಯಃ ಪ್ರಥಮಂ ಪ್ರಯತ್ನಾತ್‌' ಎಂದು ವ್ಯಾಸರು ಗಣೇಶನ ಹೆಗ್ಗಳಿಕೆಯನ್ನು ಸಾರಿದ್ದಾರೆ.

'ಗಣನಾಂತ್ವಾಗಣಪತಿಂ ಹವಾಮಹೇ ಕವಿ ಕವೀನಾಮುಪವಕ್ರವೆಸ್ತಮಮ್‌'(ಋಗ್ವೇದ) ಎಂಬಿವೇ ಮೊದಲಾದ ಹಲವು ವೇದ ಮಂತ್ರಗಳ ಮೂಲಕ ಗಣಪತಿಯನ್ನು ಬ್ರಾಹ್ಮಣಸ್ಪತಿಯೆಂದೂ ಧನಾಧಿಪತಿಯೆಂದೂ ತುಂಟತನದಿಂದ ತಂದೆ ತಾಯಿಗಳಾದ ಶಿವ ಪಾರ್ವತಿಯರನ್ನು ರಂಜಿಸುವ ದಂತವುಳ್ಳವನೆಂದೂ ಪ್ರತಿಪಾದಿಸಿ ಸ್ತುತಿಸುತ್ತವೆ.
ಅಥರ್ವವೇದ, ಋಗ್ವೇದ, ಶೌನಕ ಸಂಹಿತೆಯ ಗಣೇಶ ಗಾಯತ್ರಿ ಮತ್ತು ತೈತ್ತೀರೀಯ ಆರಣ್ಯಕದ ಗಣೇಶ ಗಾಯತ್ರಿಗಳು ವೇದ ಪ್ರತಿಪಾದ್ಯವಾದ ಗಣಪತಿ ಹಾಗೂ ಪುರಾಣ ಪ್ರತಿಪಾದ್ಯವಾದ ಶಿವ ಪಾರ್ವತೀಸುತನಾದ ಗಣಪತಿ ಒಬ್ಬನೇ ಎಂದು ಸೂಚಿಸುತ್ತವೆ ಎಂದು ವಿದ್ವಾಂಸರು ಒಪ್ಪಿಕೊಳ್ಳುತ್ತಾರೆ. ಭೋಧಾಯನ ಗೃಹ್ಯಸೂತ್ರಗಳಲ್ಲಿ ಹಾಗೂ ಯಜ್ಞವಲ್ಕ್ಯ ಸ್ಮೃತಿಯಲ್ಲಿ ಇದನ್ನೇ ಸಮರ್ಥಿಸಲಾಗಿದೆ.

ಗಣಪತಿ ಅಥರ್ವಶೀರ್ಷೋಪನಿಷತ್, ಹೇರಂಭೋಪನಿಷತ್, ಗಣೇಶ ಪೂರ್ವ ಮತ್ತು ಉತ್ತರ ತಾಪ್ಯೂಪನಿಷತ್‌ಗಳಂತೂ ಗಣಪತಿಯೇ ಸೃಷ್ಟಿ, ಸ್ಥಿತಿ, ಲಯಕರ್ತನಾದ ಬ್ರಹ್ಮ, ವಿಷ್ಣು, ಶಿವ ರೂಪಿಯಾಗಿದ್ದಾನೆ. ಆತನೇ ಸರ್ವಶಕ್ತ ಸರ್ವವ್ಯಾಪ್ತನಾದ ಸರ್ವಲೋಕನಿಯಾಮಕನಾದಪರಬ್ರಹ್ಮಸ್ವರೂಪಿ ಎಂದು ಗಣಪತಿಯ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತವೆ.

 ವೇದ ಪ್ರತಿಪಾದ್ಯನಾದ, ಜ್ಞಾನಗಮ್ಯನಾದ ಆಕಾಶತತ್ವಾಭಿಮಾನಿ ದೇವತೆಯಾದ ಶಬ್ದ ಬ್ರಹ್ಮ ಸ್ವರೂಪಿಯಾದ ಗಣಪತಿಯು ಜನಸಾಮಾನ್ಯರಿಗೂ ಅರ್ಥವಾಗಿ ಒಪ್ಪಿತನಾಗಬೇಕು ಎಂಬ ಕಾರಣಕ್ಕಾಗಿ ದೈವಾಂಶಸಂಭೂತನಾದ ಮಹರ್ಷಿ ವೇದವ್ಯಾಸರು ತಾವು ರಚಿಸಿದ 18 ಪುರಾಣಗಳಲ್ಲಿ ಗಣಪತಿಯ ಆವಿರ್ಭಾವವನ್ನು ರೋಚಕ ಕಥೆಗಳ ಮುಖಾಂತರ ಪ್ರಚುರ ಪಡಿಸಿದ್ದಾರೆ.

ಬ್ರಹ್ಮವೈವರ್ತ ಪುರಾಣದ ಪ್ರಕಾರ ಪಾರ್ವತಿಯ ಇಚ್ಛೆಯಂತೆ ವಿಷ್ಣುವೇ ಆಕೆಯ ಕುಮಾರನಾಗಿ ಜನಿಸಿ ಶನಿಯ ಕುದೃಷ್ಟಿಯ ದೆಸೆಯಿಂದ ಶಿರವು ಭಿನ್ನವಾಗಿ ದೂರ್ವಾಸರ ವರಪ್ರಸಾದದಿಂದ ಮಹಾಜ್ಞಾನಿ ಶಿರಸ್ಸನ್ನು ಹೊಂದಿದ ಗಜದ ಶಿರಸ್ಸು ವಿಷ್ಣುವಿನಿಂದ ಗಣಪತಿಗೆ ಕೊಡಲ್ಪಟ್ಟು ಲೋಕೋತ್ತರ ತೇಜಸ್ವಿಯಾಗಿ ಮೆರೆದವನು ಗಣೇಶ. ಶಿವಪುರಾಣದ ಪ್ರಕಾರ ಮೃಣ್ಮಯವಾದ ತನ್ನ ಸುಗಂಧ ದ್ರವ್ಯದಿಂದ ಪಾರ್ವತಿಯು ಒಂದು ಸುಂದರ ಶಿಶುರೂಪವನ್ನು ಸೃಷ್ಟಿಸಿ ಅದಕ್ಕೆ ಜೀವವಿತ್ತು ತನ್ನ ದ್ವಾರಪಾಲನಾಗಿ ನೇಮಿಸುತ್ತಾಳೆ. ಆ ಶಿಶು ಶಿವನನ್ನು ಪ್ರವೇಶಿಸದಂತೆ ತಡೆದು ಶಿರಶ್ಛೇದನಕ್ಕೊಳಗಾಗಿ ಬಳಿಕ ವಿಷ್ಣುವಿನಿಂದ ಗಜಮುಖ ಕೊಡಲ್ಪಟ್ಟು ಗಣಪತಿಯಾಗುತ್ತಾನೆ.

ಪದ್ಮಪುರಾಣದಲ್ಲಿ ಪಾರ್ವತಿಯಿಂದ ಮೃಣ್ಮಯನಾಗಿ ಸೃಜಿಸಲ್ಪಟ್ಟ ಗಣಪತಿ ಬಳಿಕ ಗಂಗೆ ಗೌರಿ ಈ ಇಬ್ಬರಿಂದಲೂ ಪೋಷಿಸಲ್ಪಟ್ಟು ದ್ವೈಮಾತುರನೆನಿಸಿದ. ವರಾಹ ಪುರಾಣದಲ್ಲಿ ದೇವತೆಗಳ ಅನುರೋಧಕ್ಕೊಳಗಾದ ಶಿವ, ಗಣೇಶನನ್ನು ಸೃಷ್ಟಿಸಿ ಆಕಾಶತತ್ವಾಭಿಮಾನಿ ದೇವತೆಯಾಗಿಸಿ ಬಳಿಕ ಗಜಮುಖನಾಗಿಸಿ ಗಣಪತಿಯಾಗಿಸಿದನೆಂದು ಉಲ್ಲೇಖವಿದೆ.
ಬ್ರಹ್ಮಾಂಡ ಪುರಾಣದ ಪ್ರಕಾರ ಭಂಡಾಸುರನೆಂಬ ದುಷ್ಟ ದೈತ್ಯನ ವಧೆಗಾಗಿ ಗಣಪತಿಯು ದೇವಿಯಿಂದ ಸೃಷ್ಟಿಸಲ್ಪಟ್ಟವನು. ಗಣೇಶ ಪುರಾಣದ ಪ್ರಕಾರ ತತ್ವಮಸಿ ಎಂಬ ಮಹಾವಾಕ್ಯದಲ್ಲಿ ಪ್ರತಿಪಾದ್ಯನಾದ ಪರಬ್ರಹ್ಮ ಸ್ವರೂಪಿಯಾಗಿ ಸರ್ವರಿಂದ ಪ್ರಥಮವಂದ್ಯನೆನಿಸುತ್ತಾನೆ.

ಲಿಂಗಪುರಾಣ, ಸ್ಕಾಂದಪುರಾಣ, ಭವಿಷ್ಯ ಪುರಾಣ, ಅಗ್ನಿಪುರಾಣ, ನಾರದ ಪುರಾಣ, ದೇವಿ ಭಾಗವತ ಪುರಾಣ, ಬ್ರಹ್ಮ ಪುರಾಣ, ಸೌರಪುರಾಣ, ಮುದ್ಗಲಪುರಾಣ, ಗರುಡ ಪುರಾಣಗಳಲ್ಲಿ ಗಣಪತಿಯು ಶಿವ ಪಾರ್ವತೀಸುತನಾಗಿ, ಸ್ಕಂದ ಸಹೋದರನಾಗಿ ಮಹಾ ಚಾಣಾಕ್ಷನಾಗಿ, ವಿಘ್ನ ನಿವಾರಕನಾಗಿ, ಶಬ್ದಬ್ರಹ್ಮನಾಗಿ, ವಿವಿಧ ನಾಮಾಂಕಿತನಾಗಿ ಕ್ಷಿಪ್ರ ಪ್ರಸಾದ ಸ್ವಭಾವವುಳ್ಳವನಾಗಿ, ದುಷ್ಟ ಶಿಕ್ಷಕನಾಗಿ ಶಿಷ್ಟ ರಕ್ಷಕನಾಗಿ ಚಿತ್ರಿಸಲ್ಪಟ್ಟಿದ್ದಾನೆ. ಹೆಚ್ಚಿನ ಪುರಾಣಗಳ ಪ್ರಕಾರ ಆತ ಹುಟ್ಟಿರುವುದು ಭಾದ್ರಪದ ಶುಕ್ಲ ಚತುರ್ಥಿ ತಿಥಿಯಂದು. ವಿವಿಧ ಪುರಾಣಗಳಲ್ಲಿ ಆತನ ಪೂಜಾ ಕ್ರಮವೂ ವಿವರಿಸಲ್ಪಟ್ಟಿದೆ.

ಮಹಾಭಾರತವನ್ನು ಸಮಗ್ರವಾಗಿ ಭಾವಪೂರ್ಣವಾಗಿ ಅರ್ಥೈಸಿಕೊಂಡು ಗಣಪತಿಯೇ ಬರೆದ ಎಂದು ವೇದವ್ಯಾಸರೇ ಮಹಾಭಾರತದಲ್ಲಿ ಉಲ್ಲೇಖಿಸಿದ್ದಾರೆ. ಸಂಸ್ಕೃತ ಕಾವ್ಯ ಪ್ರಪಂಚದಲ್ಲಿ ಭವಭೂತಿ, ಭೋಜರಾಜಾಧಿಗಳು ಗಣಪತಿಯನ್ನು ವಿಘ್ನನಿವಾರಕನೆಂದು ಪೂಜಿಸಿದ್ದಾರೆ. ಕನ್ನಡದ ಪ್ರಾಚೀನ ಕವಿಗಳಾದ ಪಂಪ, ರನ್ನ, ಹರಿಹರಾದಿಗಳು ತಮ್ಮ ಮಹಾಕಾವ್ಯಗಳಲ್ಲಿ ಗಣಪತಿಯನ್ನು ಸ್ತುತಿಸಿದ್ದಾರೆ.
ಕನಕದಾಸ, ಪುರಂದರದಾಸ, ಜಗನ್ನಾಥ ದಾಸವರೇಣ್ಯರುಗಳು ಗಣಪತಿಯ ಸ್ತುತಿರೂಪದ ಹಲವಾರು ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಯಕ್ಷಗಾನ ಸಾಹಿತ್ಯದಲ್ಲೂ ಸಾಕಷ್ಟು ಗಣೇಶ ವಂದನೆಯ ಪದ್ಯಗಳಿವೆ. ಅರ್ವಾಚೀನ ಸಾಹಿತ್ಯ ಪ್ರಪಂಚದ ದಿಗ್ಗಜರೆನಿಸಿದ ರಾಷ್ಟ್ರಕವಿ ಕುವೆಂಪು (ಗಣೇಶಗಾಥ), ಪುತಿನ, ಡಿವಿಜಿ ಮೊದಲಾದವರೂ ಗಣೇಶನ ಹಿರಿಮೆಯನ್ನು ಸ್ತುತಿಸಿ ಕವಿತೆ ರಚಿಸಿದ್ದಾರೆ.

ಹೀಗೆ ಸಮಗ್ರ ಹಿಂದೂಗಳಿಗೆ ಪ್ರಥಮ ವಂದ್ಯನೆನಿಸಿ ಆರಾಧ್ಯನಾದ ಮಹಾಗಣಪತಿಯು ಲೋಕಕಲ್ಯಾಣದಾಯಕನಾಗಿ, ಮಹಾಜ್ಞಾನಿಯಾಗಿ, ಸರ್ವಸಂಪನ್ನನೆನಿಸಿದ್ದು ಭಾರತೀಯವಾದ ಯಾವ ಸಾಹಿತ್ಯದಲ್ಲೂ ಯಾರಿಂದಲೂ, ಜಾರಸುತನಾಗಿ, ಅನಾರ್ಯನಾಗಿ, ಕ್ರೂರಿಯಾಗಿ, ಅನಾಗರಿಕನಾಗಿ ಚಿತ್ರಿತವಾಗಿಲ್ಲ.
ಆತ ವಿಘ್ನಕರ್ತಾ ಹೌದು. ಯಾರಿಗೆ? 'ದುಷ್ಟಾನಾಂ ವಿಘ್ನಕರ್ತಾ' ದುಷ್ಟರಿಗೆ ದುರುಳರಿಗೆ ಲೋಕಕಂಟಕರಿಗೆ (ಉದಾ: ರಾವಣ ವಿಘ್ನ ಕರ್ತಾನಾಗಿದ್ದ. ಆದರೆ ಸಜ್ಜನರಿಗೆ? 'ಸುಚರಿತ ಸುಜನ ಸ್ತೋಮ ವಿಘ್ನಾಪಹರ್ತಾ'  ಸಚ್ಚಾರಿತ್ರ್ಯವಂತ, ಸಜ್ಜನರ ವಿಘ್ನಗಳನ್ನು ನಿವಾರಿಸುತ್ತಾನೆ. 'ತಸ್ಮಾದ್ವಿಘ್ನಾಧಿಪ' ಆದ್ದರಿಂದಲೇ ವಿಘ್ನಾಧಿಪನೆನಿಸಿದ್ದಾನೆ.
ಆತನ ಸಮಗ್ರ ಸ್ವರೂಪ ನಮಗೆ ಆಧ್ಯಾತ್ಮದ ವಿಶಿಷ್ಟ ಸಂದೇಶವನ್ನೇ ನೀಡುತ್ತದೆ. ಆತನ ಮುಖ ಓಂಕಾರ ಪ್ರಣವಸ್ವರೂಪಿಯಾಗಿ ಗೋಚರಿಸುತ್ತದೆ. ಆತನು ಶಬ್ದತತ್ವಾಭಿಮಾನಿಯಾಗಿ ಆಕಾಶತತ್ವದ ದೇವರಾಗಿ ವೇದ ಪ್ರತಿಪಾದ್ಯನೂ ಪ್ರತಿಪಾದಕನೂ ಆಗಿ ಕೆಟ್ಟದ್ದನ್ನು ಸೋಸಿ ಒಳ್ಳೆಯದನ್ನು ಸ್ವೀಕರಿಸುವ ಗೆರಸೆಯಂತಹ ಕಿವಿಗಳುಳ್ಳವನಾಗಿ ಶೂರ್ಪಕರ್ಣನೆನಿಸಿದ್ದಾನೆ. ಶುದ್ಧಜ್ಞಾನ ಪ್ರಾಪ್ತಿಗಾಗಿ ಹೊರಗಿನ ಕಣ್ಣನ್ನು ಕಿರಿದಾಗಿಸಿಯೂ ಮುಚ್ಚಿ ಒಳಗಣ್ಣು ತೆರೆದಿರಬೇಕೆಂದು ಸೂಚಿಸಲು ಕಿರುಗಣ್ಣುಳ್ಳವನಾಗಿದ್ದಾನೆ. ಬ್ರಹ್ಮಾಂಡವನ್ನೆ ತನ್ನೊಳಗಿರಿಸಿ ವಿಶ್ವಂಭರನೆನಿಸಿದ್ದಾನೆಂದು ಸೂಚಿಸಲು ಡೊಳ್ಳುಹೊಟ್ಟೆ ಹೊಂದಿದ್ದಾನೆ. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುಣ್ಯಫಲದಾಯಕನೂ ಚತುರ್ವೇದ ಪ್ರತಿಪಾದಕನೂ ಆಗಿರುವುದನ್ನು ಸೂಚಿಸಲು ಚತುರ್ಭುಜನಾಗಿದ್ದಾನೆ. ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟಾಗ ಮಾತ್ರ ಪೂರ್ಣಜ್ಞಾನ ಪ್ರಾಪ್ತಿ ಸಾಧ್ಯವೆಂಬುದನ್ನು ತಿಳಿಸಲು ಮನಃಕಾರಣನಾದ ಚಂದ್ರನನ್ನು ದಂಡಿಸಿ ಏಕದಂತನಾಗಿದ್ದಾನೆ. ಇಂದ್ರಿಯನಿಗ್ರಹ ಹಾಗೂ ಏಕಾಗ್ರತೆಯಿಂದ ಮಾತ್ರ ಪಾರಮಾರ್ಥಿಕ ಸತ್ಯವನ್ನರಿಯಲು ಸಾಧ್ಯ ಎಂಬುದನ್ನು ಸೂಚಿಸಲು ಅಂಕುಶ ಮತ್ತು ಪಾಶಧಾರಿಯಾಗಿದ್ದಾನೆ. ಕುಂಡಲಿನೀಶಕ್ತಿ ಪ್ರಚೋದಕಗಳಾದ ಷಟ್‌ಚಕ್ರಗಳಲ್ಲಿ ಮೂಲಾಧಾರ ಚಕ್ರಸಿತನೆಂದು ಸೂಚಿಸಲು ಕಟಿಯಲ್ಲಿ ಸರ್ಪವೇಷ್ಟಿತನಾಗಿದ್ದಾನೆ. ಈತಿಬಾಧೆಗಳ ಪರಿಹಾರಕನೆಂದು ಸೂಚಿಸಲು ಈತಿಬಾಧೆಗಳಲ್ಲೊಂದಾದ ಇಲಿಯನ್ನೇ ದಮನಿಸಿ ವಾಹನವಾಗಿಸಿಕೊಂಡಿದ್ದಾನೆ. ಜ್ಞಾನ ಮತ್ತು ವಿವೇಕಗಳ ಅಧಿದೇವತೆಯಾಗಿ ಸಿದ್ಧಿ ಬುದ್ಧಿಯರ ಪತಿಯೆನಿಸಿದ್ದಾನೆ. ಲೋಕಕ್ಕೆ ಪ್ರಯೋಜಕನಾದ ಕ್ಷಿಪ್ರ ಪ್ರಸಾದನೆಂಬುದನ್ನು ಸೂಚಿಸಲು ಲಾಭ ಮತ್ತು ಲಕ್ಷಗಳನ್ನು ಮಕ್ಕಳಾಗಿ ಹೊಂದಿದ್ದಾನೆ. ಭಕ್ತಪ್ರಿಯನಾಗಿ ಕಮಲದಂತಹ ಮೃದುಪಾದವುಳ್ಳವನಾಗಿದ್ದಾನೆ.
ಚೇತನ, ಚಿತ್ತ, ಅಹಂಕಾರ, ಬುದ್ಧಿ ಮನಸ್ಸು, ಪಂಚಜ್ಞಾನೇಂದ್ರಿಯಗಳು ಪಂಚಕರ್ಮೇದ್ರಿಯಗಳು ಪಂಚತನ್ಮಾತ್ರೆಗಳು, ಪಂಚಭೂತಗಳು ಹೀಗೆ 25 ತತ್ವಗಳಲ್ಲಿ 21ನೇ ಆಕಾಶತತ್ವದೇವತೆ ಎಂಬ ಕಾರಣದಿಂದ 21 ಗರಿಕೆಗಳ ಅರ್ಚನಾಪ್ರಿಯನೀತ. ತನ್ನ ಕಾಂಡದಿಂದಲೇ ಜನಿಸಿ ಒಂದು ನೂರಾಗಿ ಸಾವಿರವಾಗಬಲ್ಲ ಅನಂತ ವ್ಯಕ್ತಿತ್ವ ಸಂಕೇತವಾಗಿ ಗರಿಕೆ ಕಬ್ಬುಗಳು ಈತನಿಗೆ ಪ್ರಿಯ ಎಂದೂ ಎಂಜಲಿನಿಂದ ಹುಟ್ಟಿದ ತೆಂಗಿನಕಾಯಿ ಬಾಳೆಹಣ್ಣುಗಳು ಆತನಿಗೆ ಇಷ್ಟವಾದವು.

ಮೋದಕವೆಂದರೆ ಆನಂದ ಆದುದರಿಂದ ಮೋದಕಪ್ರಿಯ. ಮೂಲಾಧಾರ ಚಕ್ರ ಪೃಥ್ವಿಯ ಸ್ಪರ್ಶವುಳ್ಳ ಚಕ್ರ - ಅದರ ಅಧಿದೇವತೆಯಾಗಿ ಮಣ್ಣಿನಲ್ಲಿ ಸೃಷ್ಟಿಸಲ್ಪಟ್ಟು ಪೂಜಿತನಾಗಿ ಪುನಃ ಪೂಜಾಂತ್ಯದಲ್ಲಿ ಜಲದಲ್ಲಿ ವಿಸರ್ಜಿಸಲ್ಪಟ್ಟು ಅಡಿಯ ಮಣ್ಣನ್ನು ಸೇರುವುದನ್ನು ಸೂಚಿಸುವ ಹಬ್ಬವಾಗಿ ಗಣೇಶ ಹಬ್ಬವನ್ನು ಭಾದ್ರಪದಶುದ್ಧ ಚೌತಿಯಂದು ಆಚರಿಸಲ್ಪಡುವುದೂ ಅರ್ಥಪೂರ್ಣ.

ಹೀಗೆ ಭಾವನಾತ್ಮಕವಾಗಿ ಆಧ್ಯಾತ್ಮಿಕವಾಗಿ ವಿಶ್ವದೆಲ್ಲೆಡೆ ಹಿಂದೂಗಳ ಆರಾಧ್ಯ ದೇವರಾಗಿರುವ ವಿಘ್ನನಿವಾರಕನೂ, ವಿಶ್ವಂಭರನೂ, ಕ್ಷಿಪ್ರಪ್ರಸಾದನೂ ಆಗಿರುವ ನಮ್ಮ ವಿನಾಯಕ ದೇವರನ್ನು ಕೃತಜ್ಞತೆಯೊಂದಿಗೆ ಭಕ್ತಿಭಾವದೊಂದಿಗೆ ಅರ್ಚಿಸಿ ಪೂಜಿಸಿ ಸಂಭ್ರಮಿಸಿ ಕೃತಾರ್ಥರಾಗೋಣ.

-ಕಬಿಯಾಡಿ ಜಯರಾಮ ಆಚಾರ್ಯ


Stay up to date on all the latest ಸಾಪ್ತಾಹಿಕಪ್ರಭ news
Poll
Omicron

ಮಾಲ್‌ಗಳು/ಥಿಯೇಟರ್‌ಗಳಿಗೆ ಭೇಟಿ ನೀಡಲು ಎರಡು ಡೋಸ್ ಲಸಿಕೆಯನ್ನು ಕಡ್ಡಾಯಗೊಳಿಸಿರುವುದು ಸರಿಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp