
ಹಿರಿಯ ರಾಜತಾಂತ್ರಿಕ ಅಧಿಕಾರಿ ಅದರಲ್ಲೂ ಮುಖ್ಯವಾಗಿ ಮಹಿಳೆಯೊಬ್ಬಳ ಜತೆಗೆ ಪೊಲೀಸರು ನಡೆದುಕೊಂಡ ರೀತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅಮೆರಿಕದ ವರ್ತನೆಗೆ ಈಗ ಭಾರತ ಪ್ರತೀಕಾರದ ಕ್ರಮಕ್ಕೆ ಮುಂದಾಗಿದೆ.
ಭಾರತದಲ್ಲಿರುವ ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಅವರ ಕುಟುಂಬಕ್ಕೆ ನೀಡಲಾಗುತ್ತಿದ್ದ ವಿಶೇಷ ಸವಲತ್ತುಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಡಿತಗೊಳಿಸಿಸಲಾಗಿದೆ. ರಾಜತಾಂತ್ರಿಕ ಅಧಿಕಾರಿಗಳಿಗೆ ನೀಡಲಾಗಿದ್ದ ಗುರುತುಪತ್ರ ವಾಪಸ್ ನೀಡುವಂತೆ ಭಾರತ ಸೂಚಿಸಿದೆ. ಇದಲ್ಲದೆ, ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಅವರ ಕುಟುಂಬಕ್ಕೆ ನೀಡಿದ್ದ ಏರ್ಪೋರ್ಟ್ ಪಾಸ್ಗಳನ್ನು ಹಿಂತೆಗೆದುಕೊಂಡಿದೆ. ಮದ್ಯ ಸೇರಿದಂತೆ ರಾಯಭಾರ ಕಚೇರಿ ಆಮದು ಮಾಡಿಕೊಳ್ಳುತ್ತಿದ್ದ ವಿವಿಧ ವಸ್ತುಗಳ ಆಮದಿಗೆ ನೀಡುತ್ತಿದ್ದ ಅನುಮತಿಯನ್ನೂ ರದ್ದು ಮಾಡಿದೆ.
ಕ್ಷಮೆ ಕೋರಲಿ
ದೇವಯಾನಿ ಪ್ರಕರಣದಲ್ಲಿ ತನ್ನ ವರ್ತನೆಗೆ ಅಮೆರಿಕ ಕ್ಷಮೆ ಕೋರಬೇಕೆಂದು ಭಾರತ ಒತ್ತಾಯಿಸಿದೆ. ಮಹಿಳಾ ರಾಜತಾಂತ್ರಿಕ ಅಧಿಕಾರಿಯೊಬ್ಬರ ಜತೆಗಿನ ಈ ರೀತಿಯ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ಅಮೆರಿಕ ಬೇಷರತ್ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ.
ಭದ್ರತೆ ಕಟ್
ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳಿಗೆ ಸಿಗುತ್ತಿದ್ದ ವಿಶೇಷ ಸವಲತ್ತು ಮಾತ್ರವಲ್ಲ ಈಗ ದೆಹಲಿಯ ನ್ಯಾಯಮಾರ್ಗ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಗೆ ಒದಗಿಸಲಾಗಿರುವ ಭದ್ರತೆಯನ್ನೂ ಭಾರತ ಕಡಿತಗೊಳಿಸಿದೆ. ಮೊದಲ ಹಂತವಾಗಿ ಕಚೇರಿ ಎದುರು ಹಾಕಲಾಗಿದ್ದ ಟ್ರಾಫಿಕ್ ಬ್ಯಾರಿಕೇಡ್ಗಳನ್ನು ದೆಹಲಿ ಪೊಲೀಸರು ತೆರವುಗೊಳಿಸಿದ್ದಾರೆ.
ನೌಕರರ ಮಾಹಿತಿ ಕೊಡಿ
ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನೌಕರರ ವೇತನ ಸೇರಿದಂತೆ ಪ್ರಮುಖ ಮಾಹಿತಿಗಳನ್ನೂ ಕೇಳಿದೆ. ಜತೆಗೆ, ಭಾರತದಲ್ಲಿರುವ ಅಮೆರಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಭಾರತೀಯ ಶಿಕ್ಷಕರ ವೇತನ, ವೀಸಾ, ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನೂ ಕೇಳಿದೆ.
ಅಮೆರಿಕ ಪ್ರತಿನಿಧಿಗಳ ಭೇಟಿ ಆಗಲ್ಲ
ಲೋಕಸಭಾ ಸ್ಪೀಕರ್ ಮೀರಾಕುಮಾರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಬೆನ್ನಲ್ಲೇ ಈಗ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ಅಮೆರಿಕದ ಕಾಂಗ್ರೆಸ್ ನಿಯೋಗವನ್ನು ಭೇಟಿಯಾಗಲು ಮಂಗಳವಾರ ನಿರಾಕರಿಸಿದ್ದಾರೆ.
ಅಮೆರಿಕ ಸಮರ್ಥನೆ
ವಾಷಿಂಗ್ಟನ್: ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಪೊಲೀಸರು ನಡೆಸಿಕೊಂಡ ರೀತಿಯನ್ನು ಅಮೆರಿಕ ಸಮರ್ಥಿಸಿಕೊಂಡಿದೆ. ದೇವಯಾನಿ ಬಂಧನ ವೇಳೆ ಮಾಮೂಲಿ ವಿಧಿವಿಧಾನವನ್ನೇ ಅನುಸರಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರೆ ಮೇರಿ ಹಾರ್ಫ್ ತಿಳಿಸಿದ್ದಾರೆ. ಅಲ್ಲದೆ, ರಾಜತಾಂತ್ರಿಕ ಅಧಿಕಾರಿ ಜತೆಗೆ ಅಮಾನವೀಯ ರೀತಿಯಲ್ಲಿ ವರ್ತಿಸಿದ ಆರೋಪವನ್ನು ತಳ್ಳಿಹಾಕಿದ್ದಾರೆ.
ಭಾರತ ಬನಾನ ರಿಪಬ್ಲಿಕ್ ದೇಶವಲ್ಲ. ಅಮೆರಿಕ ಹಾಗೂ ಇತರೆ ದೇಶಗಳು ಇನ್ನೊಂದು ದೇಶಕ್ಕೆ ಗೌರವ ನೀಡಬೇಕು. ಉಳಿದ ದೇಶಗಳ ಜತೆ ಅವು ಈ ರೀತಿ ವರ್ತಿಸಬಾರದು. ಜಗತ್ತು ಬದಲಾಗಿದೆ. ಅಮೆರಿಕ ಎಚ್ಚೆತ್ತುಕೊಳ್ಳುವ ಅಗತ್ಯ ಇದೆ.
- ಕಮಲ್ನಾಥ್, ಸಂಸದೀಯ ವ್ಯವಹಾರಗಳ ಸಚಿವ
Stay up to date on all the latest ಪ್ರಧಾನ ಸುದ್ದಿ news