
ಸತ್ಯಮೇವ ಜಯತೇ: ಸತ್ಯಕ್ಕಷ್ಟೇ ಗೆಲವು
ನನ್ನ ಪ್ರೀತಿಯ ಸಹೋದರಿಯರೇ ಮತ್ತು ಸಹೋದರರೇ,
ಕಾನೂನಿನಲ್ಲಿ ನನಗೆ ಗೆಲವು ಸಿಕ್ಕಿದೆ. ನಮ್ಮ ಕಾನೂನು ವ್ಯವಸ್ಥೆ ಮಾತನಾಡಿದೆ. ಈ ಮೂಲಕ ಸತ್ಯಕ್ಕಷ್ಟೇ ಗೆಲವು - ಸತ್ಯಮೇವ ಜಯತೇ ಎಂಬುದನ್ನು ರುಜುವಾತು ಮಾಡಿದೆ. ಈ ಸಂದರ್ಭದಲ್ಲಿ ದೇಶದ ಮುಂದೆ ನನ್ನ ಮನದಾಳದ ಭಾವನೆಗಳನ್ನು ಹಂಚಿಕೊಳ್ಳಲೇಬೇಕು.
ನನ್ನ ಮನಸ್ಸು ಆರಂಭದ ಘಟ್ಟಕ್ಕೆ ಹೋಗುತ್ತಿದೆ. 2001ರ ಭೂಕಂಪದಿಂದಾದ ಸಾವು ನೋವುಗಳು ನಮ್ಮನ್ನು ಅಸಹಾಯಕ ಪರಿಸ್ಥಿತಿಗೆ ನೂಕಿದ್ದವು . ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಲಕ್ಷಾಂತರ ಮಂದಿ ಮನೆಮಠ ಕಳೆದುಕೊಂಡಿದ್ದರು. ಇಡೀ ಬದುಕೇ ನಾಶವಾಗಿತ್ತು,. ಕಲ್ಪನೆಗೂ ನಿಲುಕದಾದ ಇಂಥ ಪರಿಸ್ಥಿತಿಯಲ್ಲಿ ನಾನು ಪುನರ್ನಿರ್ಮಾಣದ ಜವಾಬ್ದಾರಿ ಬಗ್ಗೆ ಯೋಚಿಸುತ್ತಿದ್ದೆ. ಅಲ್ಲದೆ ಮುಂದಿನ ಸವಾಲುಗಳ ಬಗ್ಗೆಯೂ ಚಿಂತಾಕ್ರಾಂತನಾಗಿದ್ದೆ.
ಇದಾಗಿ 5 ತಿಂಗಳಾಗಿತ್ತು, 2002ರಲ್ಲಿ ಅನಿರೀಕ್ಷಿತವಾಗಿ ಹಿಂಸಾಚಾರವೊಂದು ನಡೆದುಹೋಯಿತು. ಮುಗ್ಧರು ಪ್ರಾಣ ಕಳೆದುಕೊಂಡರು, ಕುಟುಂಬಗಳು ಅಸಹಾಯಕವಾದವು. ವರ್ಷಗಳಿಂದ ಕಟ್ಟಿಕೊಂಡು ಬಂದಿದ್ದ ಆಸ್ತಿಪಾಸ್ತಿ ಹಾಳಾಯಿತು. ಭೂಕಂಪದಿಂದಾದ ಹಾನಿಯನ್ನು ಸರಿಪಡಿಸಿಕೊಳ್ಳುವುದರೊಳಗೆ ಗುಜರಾತ್ಗೆ ಮತ್ತೊಂದು ವಿನಾಶಕಾರಿ ಘಟನೆ ಎದುರಾಗಿತ್ತು.
ಹಿಂಸಾಚಾರದಿಂದಾಗಿ ನಾನೂ ಪೂರ್ಣ ಜರ್ಜರಿತನಾಗಿದ್ದೆ. 'ವ್ಯಥೆ', 'ದುಃಖ', 'ಕ್ಲೇಷ', 'ನೋವು', 'ಯಾತನೆ' ಮತ್ತು 'ಪ್ರಾಣಸಂಕಟ'ದಿಂದ ನರಳಿದ್ದೆ. ನನ್ನ ವ್ಯಾಕುಲಕ್ಕೆ ಇದಕ್ಕಿಂತ ಹೆಚ್ಚಿನ ನೋವಿನ ಪದಗಳು ಬೇಕಿಲ್ಲ ಎಂದೆನಿಸುತ್ತದೆ.
ಒಂದು ಕಡೆ ಭೂಕಂಪದಿಂದ ತೊಂದರೆಗೀಡಾದ ಜನ, ಮತ್ತೊಂದು ಕಡೆ ಹಿಂಸಾಚಾರದ ದಳ್ಳುರಿಗೆ ಸಿಕ್ಕ ಸಂತ್ರಸ್ತರ ನೋವು.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ ಮನಸ್ಸು ಸಂಪೂರ್ಣವಾಗಿ ಶಾಂತಿ, ನ್ಯಾಯ ಮತ್ತು ಪುನರ್ವಸತಿ ಬಗ್ಗೆ ಯೋಚಿಸುತ್ತಿತ್ತು. ಈ ಸಂದರ್ಭದಲ್ಲಿ ನಾನು ನನ್ನ ನೋವು ಮತ್ತು ವ್ಯಥೆಯನ್ನು ಸಂಪೂರ್ಣವಾಗಿ ಅಡಗಿಸಿಟ್ಟಿದ್ದೆ.
ಇಂಥ ಸವಾಲಿನ ಸಂದರ್ಭದಲ್ಲಿ ನಾನು ಧರ್ಮಗ್ರಂಥಗಳ ಮೊರೆ ಹೋದೆ. ನೋವು ಮತ್ತು ಬೇಗುದಿಯನ್ನು ಪಕ್ಕಕ್ಕಿಟ್ಟು ಹೇಗೆ ಒಬ್ಬ ನಾಯಕನಾಗಿ ಕೆಲಸ ಮಾಡಬೇಕು ಎಂಬುದನ್ನು ಅರಿತುಕೊಂಡೆ. ಇವು ಆಂತರಿಕವಾಗಿ ನೋವು ತಂದುಕೊಟ್ಟರೂ ಸಹ, ಇವನ್ನೆಲ್ಲಾ ಸಹಿಸಿಕೊಂಡು ಕೆಲಸ ಮಾಡಿದೆ. ತೀರಾ ಕಷ್ಟದ ದಿನಗಳಲ್ಲಿ ದೇವರನ್ನು ನೆನೆದೆ. ಇಂಥ ದಿನಗಳು ಯಾರ ಜೀವನದಲ್ಲೂ, ದೇಶದಲ್ಲೂ, ಸಮಾಜದಲ್ಲೂ ಮತ್ತೊಮ್ಮೆ ಬರಬಾರದು ಎಂದು ದೇವರಲ್ಲಿ ಪ್ರಾರ್ಥಿಸಿದೆ.
ಇದೇ ಮೊದಲ ಬಾರಿಗೆ ನಾನು ಅಂದು ಅನುಭವಿಸಿದ ಕಷ್ಟದ ದಿನಗಳನ್ನು ವೈಯಕ್ತಿಕವಾಗಿ ಇಂದು ಹಂಚಿಕೊಳ್ಳುತ್ತಿದ್ದೇನೆ.
ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ದಿನವೂ ನಾನು ಜನರಲ್ಲಿ ಶಾಂತಿಗಾಗಿ ಪ್ರಾರ್ಥಿಸಿದ್ದೆ. ಮುಗ್ಧರ ಜೀವಗಳಿಗೆ ಯಾವುದೇ ಹಾನಿ ಮಾಡಬೇಡಿ ಎಂದೂ ಹೇಳಿದ್ದೆ. 2002ರ ಫೆಬ್ರವರಿ - ಮಾರ್ಚ್ನಲ್ಲಿ ಮಾಧ್ಯಮದವರ ಜೊತೆಯಲ್ಲೂ ಶಾಂತಿ ಸುವ್ಯವಸ್ಥೆಯ ಬಗ್ಗೆ ಮಾತನಾಡಿದ್ದೆ. ರಾಜಕೀಯವಾಗಿ ಮತ್ತು ನೈತಿಕವಾಗಿ ಶಾಂತಿ ಸ್ಥಾಪನೆಯ ಬಗ್ಗೆ ಸಾರ್ವಜನಿಕವಾಗಿ ಹೇಳಿದ್ದೆ. ಹಿಂಸಾಚಾರಕ್ಕೆ ಕಾರಣವಾದ ಜನರಿಗೆ ಶಿಕ್ಷೆಯಾಗಬೇಕು ಎಂದೂ ಉಚ್ಚರಿಸಿದ್ದೆ. ಇತ್ತೀಚಿನ ನನ್ನ ಸದ್ಭಾವನಾ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ನಾನು ಮಾತನಾಡಿದ ಬಗ್ಗೆಯೂ ನೀವು ಗಮನಿಸಬಹುದು. ಆ ದಿನಗಳು ಎಷ್ಟು ಕಠಿಣವಾಗಿದ್ದವು, ನಾಗರಿಕ ಸಮಾಜದಲ್ಲಿ ಇಂಥ ಘಟನೆಗಳು ನಡೆಯಬಾರದು ಎಂದು ಹೇಳಿದ್ದನ್ನೂ ನೆನಪಿಸಿಕೊಳ್ಳಬಹುದು.
ಆದಾಗ್ಯೂ, ನನ್ನ ದೃಷ್ಟಿ 5 ಕೋಟಿ ಗುಜರಾತಿಗಳಲ್ಲಿ ಏಕತೆ ಮೂಡಿಸುವುದಷ್ಟೇ. ನಾನು ಸಿಎಂ ಆದಾಗಿನಿಂದಲೂ ಗುಜರಾತ್ನ ಸಹೋದರ, ಸಹೋದರಿಯರು ಏಕತೆಗೆ ಕಾಣಿಕೆ ನೀಡುತ್ತಲೇ ಬಂದಿದ್ದಾರೆ.
ಇದಿಷ್ಟೇ ಅಲ್ಲ, ನೋವು ಅನುಭವಿಸುವುದಷ್ಟೇ ಸಾಕಾಗುವುದಿಲ್ಲ, ನನ್ನ ಗುಜರಾತಿ ಸಹೋದರ, ಸಹೋದರಿಯರ ಸಾವಿಗಾಗಿಯೂ ನನ್ನ ವಿರುದ್ಧ ಆರೋಪಿಸಲಾಗುತ್ತಿದೆ. ಇದರಿಂದ ನನಗೆಷ್ಟು ಮಾನಸಿಕ ತುಮುಲಗಳುಂಟಾಗಿವೆ, ನೋವಾಗಿದೆ ಎಂಬುದು ನಿಮಗೆ ಗೊತ್ತಿದೆಯೇ?
2002ರ ಹಿಂಸಾಚಾರವಾಗಿ ಅದೆಷ್ಟೋ ವರ್ಷಗಳಾಗಿವೆ. ಆದರೂ ನನ್ನನ್ನು ರಾಜಕೀಯವಾಗಿ ಹಣಿಯಲು ಪ್ರಯತ್ನಿಸಲಾಗುತ್ತಿದೆ. ಸಮಯ ಸಿಕ್ಕಾಗಲೆಲ್ಲಾ ಗೋಧ್ರಾ ಘಟನೆಗೆ ನಾನೇ ಕಾರಣ ಎಂದೇ ಆರೋಪಿಸಲಾಗುತ್ತಿದೆ. ಈ ಮೂಲಕ ಆಗಿರುವ ಗಾಯದ ಮೇಲೆ ಗಾಯ ಮಾಡುತ್ತಲೇ ಇದ್ದಾರೆ. ಇದರಿಂದ ಎಷ್ಟು ನೋವಾಗುತ್ತದೆ ಎಂಬುದು ಅವರಿಗೆಲ್ಲಿ ಅರ್ಥವಾಗಬೇಕು. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಇಂದಿನವರೆಗೂ ಕೋರ್ಟ್ಗೆ ಹೋಗುತ್ತಲೇ ಇದ್ದಾರೆ. ಇದರಿಂದ ಈಗಾಗಲೇ ನೋವುಂಡಿರುವ ಜನರಿಗೆ ನೋವು ಮಾಡುತ್ತಿರುವ ಬಗ್ಗೆ ಅವರಿಗೆ ಗೊತ್ತಾಗುತ್ತಲೇ ಇಲ್ಲ.
ಇಷ್ಟೆಲ್ಲಾ ಆದಾಗ್ಯೂ, ಗುಜರಾತ್ ತನ್ನ ದಾರಿಯನ್ನು ಆರಿಸಿಕೊಂಡಿದೆ. ಇಲ್ಲಿ ಶಾಂತಿ ಮಂತ್ರ ಪಠಣವಾಗುತ್ತಿದೆ. ನಾವು ಒಗ್ಗಟ್ಟು ಮತ್ತು ಏಕತೆಯನ್ನು ಆಯ್ದುಕೊಂಡಿದ್ದೇವೆ. ದ್ವೇಷದ ಜಾಗದಲ್ಲಿ ಸ್ನೇಹತ್ವವನ್ನು ಆರಿಸಿದ್ದೇವೆ. ಇದು ಸುಲಭದ ಕೆಲಸವಲ್ಲ, ಆದರೂ ನಾವು ಸಾಧಿಸಿದ್ದೇವೆ. ಗುಜರಾತ್ ಶಾಂತಿ, ಏಕತೆ, ಸದ್ಭಾವನೆಯನ್ನು ಸಾಧಿಸಿದೆ. ಇಂದು ನಾನು ತೃಪ್ತಿ ಮತ್ತು ಭರವಸೆ ಹೊಂದಿದ ವ್ಯಕ್ತಿಯಾಗಿದ್ದೇನೆ. ಇದರ ಸಂಪೂರ್ಣ ಸಾಧನೆ ಪ್ರತಿಯೊಬ್ಬ ಗುಜರಾತಿಗೂ ಸಲ್ಲಬೇಕು.
ದೇಶದಲ್ಲಿ ಹಿಂದೆ ನಡೆದ ಎಲ್ಲಾ ಹಿಂಸಾಚಾರಗಳಿಗಿಂತಲೂ ಗುಜರಾತ್ನಲ್ಲಿ ನಡೆದ ಹಿಂಸಾಚಾರವನ್ನು ಬಹು ಜಾಗರೂಕತೆಯಿಂದ ನಿರ್ವಹಿಸಲಾಗಿದೆ. ನಿನ್ನೆಯ ತೀರ್ಪು ಗುಜರಾತ್ನ 12 ವರ್ಷಗಳ ಹೋರಾಟಕ್ಕೆ ತಾರ್ಕಿಕ ಅಂತ್ಯ ತಂದುಕೊಟ್ಟಿದೆ. ನಾನೀಗ ನಿರಾಳವಾಗಿದ್ದೇನೆ, ಮನಸ್ಸು ಶಾಂತಿಯಿಂದ ತುಂಬಿದೆ.
ಕಷ್ಟಕಾಲದಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ನನ್ನ ಅಭಿನಂದನೆಗಳು. ನನ್ನ ವಿರುದ್ಧ ನಡೆಸಲಾದ ಎಲ್ಲಾ ಕೀಳು ಮಟ್ಟದ ಆರೋಪಗಳು ಸುಳ್ಳು ಎಂಬುದು ಗೊತ್ತಾಗಿದೆ. ಇನ್ನು ಮುಂದಾದರೂ ಜನ ನಿಜವಾದ ನರೇಂದ್ರ ಮೋದಿಯನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದು ಭಾವಿಸುತ್ತೇನೆ.
ಕೋರ್ಟ್ ಕ್ಲೀನ್ಚಿಟ್ ಕೊಟ್ಟರೂ, ವಿರೋಧಿಸುವವರು ಅದೇ ರೀತಿ ಮಾಡುತ್ತಲೇ ಇರುತ್ತಾರೆ. ಇವರು ನಿಲ್ಲಿಸುವುದಿಲ್ಲ ಎಂಬುದೂ ಗೊತ್ತು. ಇನ್ನು ಮುಂದಾದರೂ ಬೇಜವಾಬ್ದಾರಿಯಿಂದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ.
ನೋವು ಮತ್ತು ಬೇಗುದಿಯಿಂದ ಕುಗ್ಗಿರುವ ಮನಸ್ಸಿಗೆ ಯಾವುದೇ ಕಹಿ ಭಾವನೆ ಇಣುಕದಿರಲಿ ಎಂದು ದೇವರಲ್ಲಿ ಬೇಡುತ್ತೇನೆ. ಈ ತೀರ್ಪು ನನ್ನ ಜಯ ಎಂದು ಖಂಡಿತವಾಗಿಯೂ ನಾನು ಹೇಳುವುದಿಲ್ಲ. ನನ್ನ ಸ್ನೇಹಿತರಿಗೂ ಮತ್ತು ಮುಖ್ಯವಾಗಿ ನನ್ನ ವಿರೋಧಿಗಳಿಗೂ ಸಹ ಇದೇ ಮಾತನ್ನು ಹೇಳುತ್ತೇನೆ.
ಯಾವುದೇ ಸಮಾಜ, ದೇಶ ಅಥವಾ ರಾಜ್ಯ ಸಾಮರಸ್ಯದಿಂದ ಬದುಕಬೇಕು ಎಂಬುದು ನನ್ನ ಆಶಯ. ಇದರಿಂದಾಗಿಯೇ ದೇಶವೊಂದನ್ನು ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಕೈಜೋಡಿಸಿ ಎಂದು ಎಲ್ಲರಲ್ಲಿ ಕೇಳಿಕೊಳ್ಳುತ್ತೇನೆ. ಎಲ್ಲರ ಮುಖದಲ್ಲೂ ನಗು ಮೂಡಲಿ ಎಂದೂ ಹಾರೈಸುತ್ತೇನೆ.
ಮತ್ತೊಮ್ಮೆ, ಸತ್ಯಮೇವ ಜಯತೇ!
ವಂದೇ ಮಾತರಂ
ನರೇಂದ್ರ ಮೋದಿ
ಇಷ್ಟು ದಿನಗಳ ಕಾಲ ಮೋದಿ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿಕೊಂಡು ಬಂದ ಕಾಂಗ್ರೆಸ್ ಕ್ಷಮೆ ಕೇಳಬೇಕು.
-ಪ್ರಕಾಶ್ ಜಾವಡೇಕರ್ ಬಿಜೆಪಿ ವಕ್ತಾರ
2014ರ ಲೋಕಸಭೆ ಚುನಾವಣೆಗಾಗಿ ವರ್ಚಸ್ಸು ಗಳಿಸಿಕೊಳ್ಳುವ ಒಂದು ಪ್ರಯತ್ನವಷ್ಟೇ. ಸಾವಿರಾರು ಮಂದಿಯ ಸಾವಿಗೆ ಒಂದು ಪಶ್ಚಾತ್ತಾಪವನ್ನಾಗಲಿ, ಕ್ಷಮೆಯನ್ನಾಗಲಿ ವ್ಯಕ್ತಪಡಿಸಿಲ್ಲ.
-ಮನೀಷ್ ತಿವಾರಿ ಕಾಂಗ್ರೆಸ್ ವಕ್ತಾರ
Stay up to date on all the latest ಪ್ರಧಾನ ಸುದ್ದಿ news