ಮುದ್ರಾಂಕ ಶುಲ್ಕ ವಂಚನೆ ನಿರ್ಮಾಣ ಸಂಘಗಳ ತನಿಖೆ

ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನ ಪಡೆದಿದ್ದೀರಾ? ನೋಂದಣಿಯೂ ಆಗಿದೆಯೇ? ಅದು ಹಿಂದೆ ಕೃಷಿ ಭೂಮಿ ಆಗಿತ್ತೇ?

Published: 15th October 2013 02:00 AM  |   Last Updated: 15th October 2013 11:54 AM   |  A+A-


Posted By : Srinivasamurthy
  • ರಾಜ್ಯದಲ್ಲಿನ ಎಲ್ಲ ಗೃಹ ನಿರ್ಮಾಣ ಸಹಕಾರ ಸಂಘಗಳು ನೀಡಿರುವ ನಿವೇಶನ ಬಗ್ಗೆ ತನಿಖೆ
  • ಮಾರುಕಟ್ಟೆ ದರ ಮರೆಮಾಚಿ ಮಾರ್ಗಸೂಚಿ ದರದಲ್ಲಿ ಮುದ್ರಾಂಕ ಶುಲ್ಕ ಪಾವತಿ
  • ನಿವೇಶನ ಖರೀದಿಸಿದವರಿಂದ ಹೆಚ್ಚಿನ ಹಣ ಪಡೆದಿರುವ ಭೂಮಾಲೀಕರು, ಅಭಿವೃದ್ಧಿದಾರರು
  • ರಾಜಸ್ವ ಸೋರಿಕೆಗೆ ಕಾರಣರಾದವರಿಂದಲೇ ನಷ್ಟ ವಸೂಲಿ ಜತೆಗೆ ಶಿಸ್ತು ಕ್ರಮ ಕೈಗೊಳ್ಳಲೂ ಆದೇಶ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.14-
ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನ ಪಡೆದಿದ್ದೀರಾ? ಅಥವಾ ಮನೆ ಖರೀದಿಸಿದ್ದೀರಾ? ನೋಂದಣಿಯೂ ಆಗಿದೆಯೇ? ಅದು ಹಿಂದೆ ಕೃಷಿ ಭೂಮಿ ಆಗಿತ್ತೇ? ಹಾಗಾದರೆ, ತನಿಖೆ ಎದುರಿಸಲು ಸಿದ್ಧರಾಗಿ. ಏಕೆಂದರೆ ಮುದ್ರಾಂಕ ಶುಲ್ಕ ವಂಚನೆಯಾಗಿದೆ!
ಅದ್ಹೇಗೆ ಸಾಧ್ಯ...? ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಾರ್ಗಸೂಚಿ ದರಕ್ಕೇ ನಿವೇಶನ ಮಾರಾಟ ಕ್ರಯ ನೋಂದಣಿಯಾಗಿದೆ. ಹೀಗಿರುವಾಗ ವಂಚನೆ ಹೇಗೆ ಎಂಬ ಪ್ರಶ್ನೆ ಉದ್ಭವಿಸಬಹುದು. ಮಾರ್ಗಸೂಚಿ ದರಕ್ಕೆ ನೋಂದಣಿ ಆಗಿದೆ ನಿಜ. ಆದರೆ, ಮಾರುಕಟ್ಟೆ ದರದಲ್ಲಿ ಭೂಮಾಲೀಕರು ಹಾಗೂ ಅಭಿವೃದ್ಧಿದಾರರು ಹಣ ಪಡೆದಿದ್ದಾರೆ. ಈ ಮಾಹಿತಿಯನ್ನು ಮರೆಮಾಚಲಾಗಿದೆ.
ರಾಜ್ಯದಲ್ಲಿರುವ ಗೃಹ ನಿರ್ಮಾಣ ಸಹಕಾರ ಸಂಘಗಳು ತಮ್ಮ ಸದಸ್ಯರಿಗೆ ಹಂಚಿಕೆ ಮಾಡಿರುವ ಎಲ್ಲ ನಿವೇಶನಗಳ ನೋಂದಣಿ ಮಾಹಿತಿ ತನಿಖೆ ಆಗಲಿದೆ. ಸಂಘಗಳ ಪದಾಧಿಕಾರಿಗಳು, ನಿವೇಶನದಾರರು, ಭೂಮಾಲೀಕರು, ಬಡಾವಣೆ ಅಭಿವೃದ್ಧಿದಾರರಿಗೆ ಶೀಘ್ರವೇ ನೋಟೀಸ್ ಜಾರಿಯಾಗಲಿದೆ. ಉಪನೋಂದಣಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಮಾಹಿತಿಗಳ ತನಿಖೆ ನಡೆಯಲಿದೆ.
ಗೃಹ ನಿರ್ಮಾಣ ಸಹಕಾರ ಸಂಘಗಳ ವತಿಯಿಂದ ಸದಸ್ಯರಿಗೆ ನಿವೇಶನ ಹಂಚಿಕೆಯಲ್ಲಿ ಮುದ್ರಾಂಕ ಶುಲ್ಕ ವಂಚನೆ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗಿದೆ. ರಾಜಸ್ವ ಸೋರಿಕೆಗೆ ಕಾರಣಕರ್ತರಾದವರಿಂದಲೇ ನಷ್ಟ ವಸೂಲಿ ಮಾಡುವ ಜತೆಗೆ ಶಿಸ್ತು ಕ್ರಮ ಕೈಗೊಳ್ಳಲೂ ಆದೇಶ ಹೊರಬಿದ್ದಿದೆ. ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಈ ಬಗ್ಗೆ ಅ.5ರಂದು ಸುತ್ತೋಲೆ ಹೊರಡಿಸಿ, ಜಿಲ್ಲಾ ನೋಂದಣಾಧಿಕಾರಿಗಳು ತನಿಖೆ ಮಾಡುವಂತೆ ಸೂಚಿಸಿದ್ದಾರೆ.
ಈ ಆದೇಶದಂತೆ, ಜಿಲ್ಲಾ ನೋಂದಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಉಪ ನೋಂದಣಿ ಕಚೇರಿಗಳನ್ನು ಸ್ವಯಂಪ್ರೇರಿತ ತನಿಖೆ ನಡೆಸಲಿದ್ದಾರೆ. ನೋಂದಣಿ ಪ್ರಕ್ರಿಯೆ ಮುಗಿದು 2 ವರ್ಷ ಪೂರ್ಣಗೊಳ್ಳದಿದ್ದರೆ ಕರ್ನಾಟಕ ಮುದ್ರಾಂಕ ಕಾಯಿದೆ 1957 ಕಲಂ 45(ಎ) ಪ್ರಕಾರ, 2 ವರ್ಷಕ್ಕಿಂತ ಹೆಚ್ಚಾಗಿದ್ದರೆ ಕಲಂ 46(ಎ)ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ದಸ್ತಾವೇಜಿನಲ್ಲಿ ಮುದ್ರಾಂಕ ಶುಲ್ಕ ಆಕರಣೆಗಾಗಿ ನೀಡಬೇಕಾದ ಮಾಹಿತಿಗಳನ್ನು ಮರೆಮಾಚದೇ ನಮೂದಿಸಿ ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ.

ರಾಜ್ಯ ಭೂ ಸುಧಾರಣೆ ಕಾಯಿದೆ ಪ್ರಕಾರ ಗೃಹ ನಿರ್ಮಾಣ ಸಹಕಾರ ಸಂಘಗಳು ತಮ್ಮ ಸದಸ್ಯರಿಗೆ ನಿವೇಶನ ನೀಡಲು ಕೃಷಿ ಜಮೀನನ್ನು ಖರೀದಿ ಮಾಡಲು ಅವಕಾಶ ಇಲ್ಲ. ಆದರೆ, ಇವರೆಲ್ಲ ಭೂ ಮಾಲೀಕರು ಮತ್ತು ಬಡಾವಣೆ ಅಭಿವೃದ್ಧಿದಾರರ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಭೂ ಪರಿವರ್ತನೆ ಹಾಗೂ ಅಭಿವೃದ್ಧಿಯಾದ ನಂತರ ನಿವೇಶನಗಳನ್ನು ತಮ್ಮ ಸದಸ್ಯರಿಗೆ ನೋಂದಣಿ ಮಾಡಿಸಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಭೂಮಾಲೀಕರು ಹಾಗೂ ಅಭಿವೃದ್ಧಿದಾರರಿಗೆ ಪಾವತಿ ಮಾಡಿರುವ ಮೊತ್ತವನ್ನು ಮರೆ ಮಾಚಿದ್ದಾರೆ. ಪ್ರಚಲಿತ ಮಾರ್ಗಸೂಚಿ ಬೆಲೆಗೆ ಅನುಗುಣವಾಗಿ ಮೊತ್ತ ನಮೂದಿಸಿ ಮುದ್ರಾಂಕ ಶುಲ್ಕ ವಂಚಿಸಿದ್ದಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ನೋಂದಣಿ ಮಹಾಪರಿವೀಕ್ಷಕರು ತನಿಖೆಗೆ ಆದೇಶಿಸಿದ್ದಾರೆ.

ಭೂಮಾಲೀಕರು, ಅಭಿವೃದ್ಧಿದಾರರು, ಸಹಕಾರ ಸಂಘಗಳ ಪದಾಧಿಕಾರಿಗಳು, ನಿವೇಶನದಾರರು ಮಾತ್ರ ಒಳಪಡುವುದಿಲ್ಲ. ಇವರಿಗೆ ಸಹಾಯ ಮಾಡಿ ಸರಿಯಾಗಿ ದಾಖಲೆಗಳನ್ನು ಪರಿಶೀಲಿಸದೆ ನೋಂದಣಿ ಮಾಡಿಕೊಟ್ಟು ರಾಜಸ್ವ ಸೋರಿಕೆಗೆ ಕಾರಣವಾದ ಉಪ ನೋಂದಣಾಧಿಕಾರಿಗಳ ಮೇಲೂ ಕ್ರಮ ಆಗಲಿದೆ. ಅವರಿಂದಲೂ ರಾಜಸ್ವ ನಷ್ಟ ವಸೂಲಿ ಮಾಡಿ, ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ.

ಏಕೆ ಈ ತನಿಖೆ?:
ಗೃಹ ನಿರ್ಮಾಣ ಸಹಕಾರ ಸಂಘಗಳು ಕೃಷಿ ಜಮೀನು ಖರೀದಿ ಮಾಡಲು ಸಾಧ್ಯ ಇಲ್ಲ ಎಂಬ ಕಾನೂನು ಇರುವುದರಿಂದ, ಅವರು ಕೃಷಿ ಭೂಮಾಲೀಕರ ಜತೆಗೆ ಒಪ್ಪಂದ (ಎಂಒಯು) ಮಾಡಿಕೊಳ್ಳುತ್ತಾರೆ. ಈ ಜಮೀನಿನಲ್ಲಿ ಬಡಾವಣೆ ನಿರ್ಮಿಸಲು ಅಭಿವೃದ್ಧಿದಾರರೊಂದಿಗೆ (ಡೆವೆಲಪರ್ಸ್/ಕಂಟ್ರ್ಯಾಕ್ಟರ್) ಒಪ್ಪಂದ ಮಾಡಿಕೊಳ್ಳುತ್ತಾರೆ. ಭೂಮಾಲೀಕರು ಹಾಗೂ ಅಭಿವೃದ್ಧಿದಾರರಿಗೆ ಮಾರುಕಟ್ಟೆ ದರದಲ್ಲಿ ಹಣ ಬಿಡುಗಡೆ ಮಾಡುತ್ತಾರೆ. ಆ ನಂತರ ಕೃಷಿ ಭೂಮಿಯನ್ನು ಖರೀದಿಸಿ, ಪರಿವರ್ತನೆ ಮಾಡುತ್ತಾರೆ.
ಇಂತಹ ಪ್ರಕರಣಗಳಲ್ಲಿ ಬಹುತೇಕ ಸಂದರ್ಭದಲ್ಲಿ ಮಾರ್ಗಸೂಚಿ ದರದಲ್ಲೇ ಭೂಮಿಯನ್ನು ಸಹಕಾರ ಸಂಘಗಳಿಗೆ ಮಾರಾಟ ಮಾಡಲಾಗಿರುತ್ತದೆ. ಆದರೆ, ವಾಸ್ತವದಲ್ಲಿ ಮಾರಾಟ ಮೌಲ್ಯಗಳು ಭೂಮಾಲೀಕರು, ಅಭಿವೃದ್ಧಿದಾರರು ಹಾಗೂ ಗೃಹ ಸಹಕಾರ ಸಂಘಗಳ ನಡುವಿನ ಒಪ್ಪಂದದಲ್ಲಿರುತ್ತವೆ. ಈ ದಾಖಲೆಗಳನ್ನು ನಿವೇಶನಗಳ ನೋಂದಣಿ ಸಂದರ್ಭದಲ್ಲಿ ಉಪ ನೋಂದಣಾಧಿಕಾರಿ ಮುಂದೆ ಪ್ರಸ್ತುತಪಡಿಸಿರುವುದಿಲ್ಲ. ಇಷ್ಟಾದರೂ, ಕ್ರಯ ಪತ್ರದಲ್ಲಿ ಒಪ್ಪಂದದ ಬಗ್ಗೆ ನಮೂದು ಮಾಡಲಾಗಿರುತ್ತದೆ. ಉಪ ನೋಂದಣಾಧಿಕಾರಿಗಳು ನೋಂದಣಿ ಸಮಯದಲ್ಲಿ ಇಂತಹ ಒಪ್ಪಂದಗಳ ಬಗ್ಗೆ ಗಮನಹರಿಸಿರುವುದಿಲ್ಲ. ಹೀಗಾಗಿ, ಮಾರ್ಗಸೂಚಿ ದರದಲ್ಲೇ ನೋಂದಣಿ ಆಗಿರುತ್ತದೆ. ಒಪ್ಪಂದದಲ್ಲಿ ಅತ್ಯಧಿಕ ಮೊತ್ತದಲ್ಲಿ ಮಾರಾಟ ಮೌಲ್ಯ ನಮೂದಾಗಿರುತ್ತದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ಆದಾಯ (ನೋಂದಣಿ ಶುಲ್ಕ) ನಷ್ಟವಾಗಿರುತ್ತದೆ. ಆದ್ದರಿಂದಲೇ ಈ ತನಿಖೆ ನಡಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮುಂದಾಗಿದೆ.

- ಕೆರೆ ಮಂಜುನಾಥ್

Stay up to date on all the latest ಪ್ರಧಾನ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp