ಮೊಯ್ಲಿ ಹಾಕಿದ ವೀರಗಲ್ಲುಗಳು!

ವೀರಪ್ಪ ಮೊಯ್ಲಿ ಅವರಿಗೆ ಭರವಸೆ ನೀಡುವ ವೀರ, ಸಾವಿರ ಸುಳ್ಳಿನ ಸರದಾರ ಎಂದು ಜನರೇ ಪ್ರೀತಿಯಿಂದ ಇಟ್ಟ ಹೆಸರು...
ಮೊಯ್ಲಿ ಹಾಕಿದ ವೀರಗಲ್ಲುಗಳು!

ಕನ್ನಡಪ್ರಭ ವಾರ್ತೆ  ಮಂಗಳೂರು  ಜ.31
ವೀರಪ್ಪ ಮೊಯ್ಲಿ ಅವರಿಗೆ ಭರವಸೆ ನೀಡುವ ವೀರ, ಸಾವಿರ ಸುಳ್ಳಿನ ಸರದಾರ ಎಂದು ಜನರೇ ಪ್ರೀತಿಯಿಂದ ಇಟ್ಟ ಹೆಸರು!
ಕೇಂದ್ರದಿಂದ ವೀರಪ್ಪ ಮೊಯ್ಲಿ ಹೆಸರು ಲಕೋಟೆಯಲ್ಲಿ ಬಂದಾಗ ಮುಖ್ಯಮಂತ್ರಿಯಾಗುವ ಅದೃಷ್ಟ ಪಡೆದ ಬಳಿಕ ಅವರ ಭರವಸೆಗಳು ಭರಪೂರವಾಗಿದ್ದವು. ಅವರು ಮಾಡಿದ ಶಿಲಾನ್ಯಾಸ, ಶಂಕುಸ್ಥಾಪನೆಗಳಿಗೆ ಲೆಕ್ಕವೇ ಇಲ್ಲ. ಈ ಶಿಲಾನ್ಯಾಸಗಳಿಗೆ ಮೂರು ದಶಕಗಳ ಇತಿಹಾಸವೇ ಇದೆ. ಕಾರ್ಕಳದ ಹಲವು ಕಡೆ ವೀರಪ್ಪ ಮೊಯ್ಲಿ ಅವರ ಶಂಕುಸ್ಥಾಪನೆ ಕಲ್ಲುಗಳ ಸುತ್ತ ಹುತ್ತ ಬೆಳೆದಿದೆ. ದಟ್ಟವಾದ ಪೊದೆ, ಗಿಡ ಮರಗಂಟಿಗಳಿವೆ. ಪ್ರತಿಯೊಂದು ಕಲ್ಲುಗಳ ಹಿಂದೆಯೂ 'ವೀರಗಲ್ಲು'ಗಳಂಥ ಕತೆಗಳಿವೆ.
ಮಂಗಳೂರಿನ ಹೃದಯಭಾಗದಲ್ಲಿಯೇ ಇಂಥ ಅನೇಕ ಸಾಧನೆಯ ಮೊಯ್ಲಿಗಲ್ಲುಗಳಿವೆ. ಇದಕ್ಕೆ ಜ್ವಲಂತ ಉದಾಹರಣೆ ಮಂಗಳೂರು ಹೂವಿನ ಮಾರುಕಟ್ಟೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ 1994ರಲ್ಲಿ ರಥ ಬೀದಿ ಮಾರುಕಟ್ಟೆಯಲ್ಲಿ ತರಾತುರಿಯಲ್ಲಿ ಬಂದು ಉರ್ವ ಮಾರುಕಟ್ಟೆ, ಕದ್ರಿ ಮಾರುಕಟ್ಟೆ ಮತ್ತು ರಥಬೀದಿ ಮಾರುಕಟ್ಟೆಗೆ ಶಂಕುಸ್ಥಾಪನೆ ಮಾಡಿದ್ದರು. ಬಳಿಕ ತಿರುಗಿಯೂ ನೋಡಿಲ್ಲ.
 ಕಲ್ಲು ಹುಡುಕುವ ಕತೆ, ವ್ಯಥೆ...!
ಮಾರುಕಟ್ಟೆಗೆ ಕಲ್ಲು ಹಾಕಿರುವ ಬಗ್ಗೆ ಮಾಹಿತಿ ಪಡೆದು ಹೂವಿನ ಮಾರುಕಟ್ಟೆಗೆ ಹೋದಾಗ ಅಲ್ಲಿ ಕಲ್ಲು ಹುಡುಕುವುದೇ ದೊಡ್ಡ ಕೆಲಸವಾಗಿತ್ತು. ಮಾರುಕಟ್ಟೆಯಲ್ಲಿ ವಿಚಾರಿಸಿದಾಗ ದೂರದಲ್ಲಿರುವ ಕೈಕಾಲು ತೊಳೆಯುವ ನಲ್ಲಿ ತೋರಿಸಿದರು. ಹತ್ತಿರ ಬಂದು ನೋಡಿದಾಗ ಅದು ಶಂಕುಸ್ಥಾಪನೆ ಕಲ್ಲಾಗಿತ್ತು.
ಕಲ್ಲು ಮಾರ್ಬಲ್ ಆಗಿರುವುದರಿಂದ ಇದನ್ನು ಯಾರೋ ಒಯ್ಯಲು ಎತ್ತಿಕೊಳ್ಳುತ್ತಿದ್ದಾಗ ಸ್ಥಳೀಯರು ತೆಗೆದಿಟ್ಟಿದ್ದರಂತೆ. ಇನ್ನು ಈ ಕಲ್ಲು ಕಾಯುವುದೇ ಕೆಲಸ ಆಗುತ್ತದೆ ಎಂಬ ಕಾರಣಕ್ಕೆ ಅದನ್ನು ಕವುಚಿ ಹಾಕಿ ನಳ್ಳಿ ನೀರಿನ ಅಡಿ ಇಟ್ಟಿದ್ದರು. ಎಷ್ಟೋ ಮಂದಿಗೆ ಅದು ಕೈಕಾಲು ತೊಳೆಯುವುದಕ್ಕಾದರೂ ಉಪಯೋಗ ಆಗತೊಡಗಿತು.         

ಈಗ ಮತ್ತೆ ಕಲ್ಲು ತಿರುಗಿಸಿ ಹಾಕಿದ್ದು, ಅದರಲ್ಲಿ ವೀರಪ್ಪ ಮೊಯ್ಲಿ ಅವರ ಹೆಸರು ಅಸ್ಪಷ್ಟವಾಗಿ ಕಾಣುತ್ತಿದೆ!
ತೊಟ್ಟಿ ಒಳಗಿತ್ತು ಕಲ್ಲು!: ಇನ್ನೊಂದೆಡೆ ಮೊಯ್ಲಿ ಹಾಕಿದ ಶಿಲಾನ್ಯಾಸ ಕಲ್ಲು ಹುಡುಕಿದಾಗ ಅದು ನೀರಿನ ತೊಟ್ಟಿ ಒಳಗೆ ಇದೆ ಎಂದು ತಿಳಿದು ಬಂತು. ನೀರನ್ನು ತಕ್ಷಣ ಖಾಲಿ ಮಾಡಲು ಅದಕ್ಕೆ ಬೂಚ್ ಕೂಡಾ ಇರಲಿಲ್ಲ. ಹೀಗಾಗಿ ಅಲ್ಲಿಯವರಿಂದ ಬಾಲ್ದಿ ಪಡೆದು ಸುಮಾರು ಮುಕ್ಕಾಲು ಗಂಟೆ ಶ್ರಮ ವಹಿಸಿ ವರದಿಗಾರರೇ ನೀರು ಖಾಲಿ ಮಾಡಬೇಕಾಯಿತು. ಅಷ್ಟು ಹೊತ್ತಿಗೆ ಜನ ಸೇರಿ ತೊಟ್ಟಿ ಒಳಗಿದ್ದ ಕಲ್ಲು ಮೇಲೆತ್ತಲು ನೆರವಾದರು. ಅದರಲ್ಲಿ ಮಾತ್ರ ವೀರಪ್ಪ ಮೊಯ್ಲಿ ಹೆಸರು ಸ್ಪಷ್ಟವಾಗಿತ್ತು. ಆದರೆ, ಅದರಲ್ಲಿ ಹೆಸರು ಹಾಕಿದ್ದ ಮೊದಲ ಮೇಯರ್ ರಮೇಶ್ ಕೋಟ್ಯಾನ್ ಹಾಗೂ ಶಾಸಕ ಬ್ಲೇಸಿಯಸ್ ಕೂಡಾ ಈಗಿಲ್ಲ. ಕಲ್ಲುಗಳನ್ನು ಕದ್ದು ಒಯ್ಯಬಾರದು ಎಂಬ ಕಾರಣಕ್ಕೆ ಟ್ಯಾಂಕಿಯಲ್ಲಿ ಹಾಕಿದ್ದಾರೆ ಎಂದು ಸ್ಥಳೀಯ ರಂಜಿತ್ ಕನ್ನಡಪ್ರಭಕ್ಕೆ ತಿಳಿಸಿದರು.
ವಿವಿಧ ಶಂಕುಸ್ಥಾಪನೆ: ನೂರಐವತ್ತು ವರ್ಷಗಳ ಇತಿಹಾಸದ ಮಂಗಳೂರಿನ ಸರ್ಕಾರಿ ಕಾಲೇಜ್‌ನಲ್ಲಿ ದಿಗ್ಗಜರೇ ಕಲಿತು ಶ್ರೇಷ್ಠ ಸಾಧಕರಾಗಿದ್ದಾರೆ. ನೂರಾರು ಮಂದಿ ಕೋಟ್ಯಧಿಪತಿಗಳಿದ್ದಾರೆ. ಇಂಥ ಹಳೆವಿದ್ಯಾರ್ಥಿಗಳ ವತಿಯಿಂದ ವ್ಯವಹಾರ ಆಡಳಿತ ಕಟ್ಟಡ ನಿರ್ಮಾಣಕ್ಕೆ ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ತೀರ್ಮಾನವಾಯಿತು. 2007ರಲ್ಲಿ ಶಂಕುಸ್ಥಾಪನೆಯೂ ಆಯಿತು. ಆದರೆ ಕಟ್ಟಡ ಪೂರ್ಣಗೊಳ್ಳಲೇ ಇಲ್ಲ. ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಹಣಕಾಸಿನ ಕೊರತೆಯಿಂದ ಸ್ಥಗಿತವಾಗಿದೆ. ಕಟ್ಟಡದ ಅಸ್ಥಿಪಂಜರದಂತೆ ಪಿಲ್ಲರ್‌ನ ರಾಡ್‌ಗಳು ಕಾಣುತ್ತಿವೆ!
ಹೇಗೆ ಗ್ಯಾಸ್, ರೈಲು ಬಿಡ್ತಾರೆ ನೋಡಿ!: ಗ್ಯಾಸ್ ಸಿಲಿಂಡರ್ ಆಧಾರ್ ಕಾರ್ಡ್ ಕಡ್ಡಾಯ ಅಲ್ಲ ಎಂದು ಮೊದಲ ಬಾರಿ ಕೇಂದ್ರ ಇಂಧನ ಸಚಿವ ವೀರಪ್ಪ ಮೊಯ್ಲಿ ಹೇಳಿದರು. ಒಂದು ವಾರ ಕಳೆದು ಗ್ಯಾಸ್ ಸಿಲಿಂಡರ್ ಸಬ್ಸಿಡಿ ವರ್ಗಾವಣೆಗೆ ಆಧಾರ್ ಕಾರ್ಡ್ ಅಗತ್ಯ ಎಂದರು. ಆ ಮೇಲೆ ಗ್ಯಾಸ್ ಕಡ್ಡಾಯ ಸದ್ಯಕ್ಕೆ ಕೈಬಿಡಲಾಗಿದೆ ಎಂದು ಗುರುವಾರ ಘೋಷಣೆ ಮಾಡಿದರು. ಏನೇ ಮಾಡಿದರೂ ಸಬ್ಸಿಡಿ ಸಿಲಿಂಡರ್ 6ಕ್ಕಿಂತ ಹೆಚ್ಚು ಮಾಡುವುದಿಲ್ಲ. ಗರಿಷ್ಠ 9 ಸಿಲಿಂಡರ್ ಎಂದು ಹೇಳಿಕೆ ನೀಡಿದ್ದರು. ಆದರೆ, ರಾಹುಲ್ ಗಾಂಧಿ ಹೇಳಿದ್ದಕ್ಕೆ 9ರಿಂದ 12 ಸಿಲಿಂಡರ್ ಮಾಡಿದ್ದೇವೆ ಎಂದು ಈಗ ಹೇಳುತ್ತಿದ್ದಾರೆ.
ನಿಲ್ಲಲ್ಲ  ಎಂದು ನಿಂತರು!:  ಹಿಂದೊಮ್ಮೆ (2004ರಲ್ಲಿ) ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಂಗಳೂರಲ್ಲಿ ಸ್ಪರ್ಧಿಸುವುದೇ ಇಲ್ಲ ಎಂದು ವೀರಪ್ಪ ಮೊಯ್ಲಿ ಘಂಟಾ ಘೋಷವಾಗಿ ಹೇಳಿದರು. ಪಾಪ ಪೂಜಾರಿ ಸಹಿತ ಎಲ್ಲರೂ ನಂಬಿದರು. ಟಿಕೆಟ್ ಮೊಯ್ಲಿ ಹೆಸರಿಗೆ ಬಂದಾಗ 'ನಾನು ಟಿಕೆಟ್‌ಗೆ ಪ್ರಯತ್ನಿಸಲಿಲ್ಲ. ಹೈಕಮಾಂಡ್ ಟಿಕೆಟ್ ಕೊಟ್ಟಾಗ ನಾನು ಅದನ್ನು ಧಿಕ್ಕರಿಸಲು ಸಾಧ್ಯವೇ?' ಎಂದು ಅಮಾಯಕನ ಹೇಳಿಕೆ!  
ಮೊನ್ನೆ ಮೊನ್ನೆ ಮಗ ಹರ್ಷ ಮೊಯ್ಲಿ ಚುನಾವಣೆಗೆ ನಿಲ್ತಾನಾ? ನನಗೆ ಗೊತ್ತಿಲ್ಲ ಎಂದರು. ಈಗ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಹರ್ಷ ಮೊಯ್ಲಿ ಹೆಸರು ಕಾಣಿಸಿಕೊಂಡ ತಕ್ಷಣ, ಟಿಕೆಟ್ ಸಿಗುವುದು ಮಗನ ಅರ್ಹತೆಯಿಂದಲೇ ಹೊರತು ನನ್ನ ಕೈವಾಡ ಇಲ್ಲ... ಹೀಗೆ ಯಾವ ರೀತಿ ಬಣ್ಣ ಬದಲಾಗುತ್ತದೆ ನೋಡಿ.


ಎಲ್ಲರೆದುರು ಅವಳಿ ಜವಳಿ, ಹಿಂದುಗಡೆ ಚೂರಿ !
ಎಲ್ಲರ ಎದುರು ಬಹಿರಂಗ ಸಭೆಯಲ್ಲಿ ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯ್ಲಿ ಅವಳಿ ಜವಳಿ ಎನ್ನುತ್ತಾರೆ. ಬಳಿಕ ಲೋಕಸಭೆ ಕ್ಷೇತ್ರದಲ್ಲಿ ಪೂಜಾರಿಯಿಂದ ಎರಡು ಬಾರಿ ಟಿಕೆಟ್ ಕಬಳಿಸಿ ಸ್ಪರ್ಧಿಸಿದ್ದರು. ಈ ಬಾರಿ ಮಗನ ಮೂಲಕ  ಟಿಕೆಟ್ ಕಸಿಯುವ ಯತ್ನದಲ್ಲಿದ್ದಾರೆ ಎಂದು ಪೂಜಾರಿ ಅಭಿಮಾನಿಗಳು ಕೆಂಡ ಕಾರುತ್ತಾರೆ.
ಮದ್ಯ ಕೇಶವ ಕೈಬಿಟ್ಟರು, ಈಗ ನೀರೇ ಗತಿ!
ಆಂಧ್ರದ ಮದ್ಯ ದೊರೆ ಆದಿಕೇಶವುಲು ವೀರಪ್ಪ ಮೊಯ್ಲಿಯವರು ಖಾಸಾ ದೋಸ್ತು. ಚಿಕ್ಕಬಳ್ಳಾಪುರದಲ್ಲಿ ಗೆಲ್ಲಿಸುತ್ತೇನೆ ಎಂದು ಕಳೆದ ಬಾರಿ ಭರವಸೆ ನೀಡಿ ಗೆಲ್ಲಿಸಿದ್ದರು. ಈಗ ಕೇಶವುಲು ನಿಧನರಾಗಿದ್ದಾರೆ. ಈಗ ಗೆಲ್ಲಲು ಚಿಕ್ಕಬಳ್ಳಾಪುರದ ಜನರಿಗೆ ಎತ್ತಿನಹೊಳೆಯ ನೀರು ತೋರಿಸುವುದೇ ಗತಿ.
ಒಂದು ಗುಡಿಸಲ ಕತೆ
ಮೂಡುಬಿದರೆಯಲ್ಲಿ ಅವರು ವಾಸವಾಗಿದ್ದ ಹಿರಿಯರ ಮನೆ ಹುಲ್ಲಿನ ಗುಡಿಸಲು. ಮೊನ್ನೆ ಮೊನ್ನೆವರೆಗೆ ಇದು ಹುಲ್ಲಿನ ಗುಡಿಸಲಾಗಿಯೇ ಇತ್ತು. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, 'ಹೌದಾ ನನಗೆ ಗೊತ್ತೇ ಇಲ್ಲ' ಎಂದು ಹೇಳುವ ಅಪರಿಮಿತ ಜಾಣ್ಮೆ ಮೊಯ್ಲಿಯವರಿಗೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಮಾಧ್ಯಮದವರು ಗುಡಿಸಲಿನ ಕುರಿತ ಲೇಖನ ಬರೆಯುತ್ತಾರೆ ಎಂಬ ಕಾರಣಕ್ಕೆ ಇತ್ತೀಚೆಗೆ ಗುಡಿಸಲು ಡೆಮಾಲಿಶ್ ಮಾಡಿದ್ದಾರೆ.

ಸತ್ಯ ವಾಕ್ಯ...!
ವೀರಪ್ಪ ಮೊಯ್ಲಿ ಮಾತನಾಡುವುದರಲ್ಲಿ ಸತ್ಯ ಇರುವುದು ಅವರಿಗೆ ಕರೆ ಮಾಡಿದಾಗ 'ಎಸ್, ವೀರಪ್ಪ ಮೊಯ್ಲಿ ಸ್ಪೀಕಿಂಗ್‌' ಎನ್ನುವುದು ಮಾತ್ರ ಸತ್ಯ ಎಂಬ ಜೋಕ್ ವಿರೋಧಿಗಳು ಸದಾ ಹೇಳುತ್ತಾರೆ. ಈಗ ಮತ್ತೊಂದು ಗರಿಮೆ ಎಂದರು ಕೇಜ್ರಿವಾಲ ಭ್ರಷ್ಟರಲ್ಲಿ ಪಟ್ಟಿಯಲ್ಲಿ ಮೊಯ್ಲಿ ಹೆಸರು ಸೇರ್ಪಡೆಯಾಗಿರುವುದು.

- ಜಿತೇಂದ್ರ ಕುಂದೇಶ್ವರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com