ವಿನಾಯಿತಿ ಇಲ್ದೆ ವಾಪಸಾದ್ರೆ ಸೆರೆ

ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಗಡೆ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಿದ ಬೆನ್ನಲ್ಲೇ ಆಕೆಯ ವಿರುದ್ಧ ಬಂಧನ ವಾರಂಟ್...
ವಿನಾಯಿತಿ ಇಲ್ದೆ ವಾಪಸಾದ್ರೆ ಸೆರೆ

ವಾಷಿಂಗ್ಟನ್: ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಗಡೆ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಿದ ಬೆನ್ನಲ್ಲೇ ಆಕೆಯ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುವ ಸೂಚನೆಯನ್ನು ಅಮೆರಿಕ ನೀಡಿದೆ.
ಈ ಸಂಬಂಧ ದೇವಯಾನಿ ವಿವರವನ್ನು ವೀಸಾ ಮತ್ತು ವಲಸೆ ಲುಕ್‌ಔಟ್ ವ್ಯವಸ್ಥೆಗೆ ಕಳುಹಿಸಿಕೊಡಲಾಗಿದೆ. ವೀಸಾ ನೀಡದಂತೆ ಸೂಚಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರೆ ಜೆನ್ ಸಾಕಿ ಮಾಹಿತಿ ನೀಡಿದ್ದಾರೆ.
ಈ ನಡುವೆ, ಸ್ವದೇಶಕ್ಕೆ ಹಿಂತಿರುಗಿರುವ ದೇವಯಾನಿ ಅವರು ಇದೀಗ ಕಾನೂನು ಹೋರಾಟ ಆರಂಭಿಸಿದ್ದಾರೆ. ಜಿ-1 ವೀಸಾದಿಂದಾಗಿ ಸಂಪೂರ್ಣ ರಾಜತಾಂತ್ರಿಕ ರಕ್ಷಣೆ ಸಿಗುತ್ತಿದ್ದಂತೆ ತಮ್ಮ ವಿರುದ್ಧ ದಾಖಲಾಗಿರುವ ಕೇಸು ವಜಾಗೊಳಿಸುವಂತೆ ಕೋರಿ ಅಮೆರಿಕದ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಸದ್ಯ ವಾರಂಟ್ ಜಾರಿ ಇಲ್ವೇ?: ಬಂಧನ ವಾರಂಟ್ ಸದ್ಯದಲ್ಲೇ ಜಾರಿಯಾಗಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದ್ದರೂ ಅಮೆರಿಕದ ಅಟಾರ್ನಿ ಪ್ರೀತ್ ಭರಾರ ಕಚೇರಿ ಮಾತ್ರ ಸದ್ಯ ಅಂಥ ಯಾವುದೇ ವಾರಂಟ್ ತಮ್ಮ ಕಚೇರಿ ತಲುಪಿಲ್ಲ
ಎಂದು ಸ್ಪಷ್ಟನೆ ನೀಡಿದೆ. ಮೂಲಗಳ ಪ್ರಕಾರ, ಸದ್ಯ ದೇವಯಾನಿ ಅಮೆರಿಕದಿಂದ ಹೊರಗಿದ್ದಾರೆ. ಹಾಗಾಗಿ ಆಕೆಯ ವಿರುದ್ಧ ತರಾತುರಿಯಲ್ಲಿ ಬಂಧನ ವಾರಂಟ್ ಜಾರಿಗೊಳಿಸುವ ಅಗತ್ಯ ಇಲ್ಲ. ಆದರೆ, ರಾಜತಾಂತ್ರಿಕ ರಕ್ಷಣೆಯಿಲ್ಲದೆ ಅಮೆರಿಕಕ್ಕೇನಾದರೂ ವಾಪಸಾದರೆ ವಾರಂಟ್ ಜಾರಿಗೊಳಿಸುವ ಸಾಧ್ಯತೆ ಇದೆ. ಈ ಕುರಿತು ದೇವಯಾನಿ ಹಾಗೂ ಭಾರತಕ್ಕೆ ಈಗಾಗಲೆ ಎಚ್ಚರಿಸಲಾಗಿದೆ.          
ವಿಶ್ವಾಸವೃದ್ಧಿಗೆ ಕ್ರಮ ಕೈಗೊಳ್ಳುವ ಭರವಸೆಯಿದೆ: ಅಮೆರಿಕ
ದೇವಯಾನಿಯ ರೀತಿಯಲ್ಲೇ ದೆಹಲಿಯಲ್ಲಿರುವ ಅಮೆರಿಕದ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ದೇಶಬಿಟ್ಟು ತೆರಳುವಂತೆ ಸೂಚಿಸಿದ ಭಾರತದ ಕ್ರಮಕ್ಕೆ ವಿದೇಶಾಂಗ ಇಲಾಖೆ ವಕ್ತಾರೆ ಜೆನಿಫರ್ ಸಾಕಿ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಎರಡೂ ದೇಶಗಳ ನಡುವಿನ ಬಾಂಧವ್ಯ ಉಳಿಸುವ ನಿಟ್ಟಿನಲ್ಲಿ ಸವಾಲಿನ ದಿನಗಳಾಗಿವೆ. ಈ ಬೆಳವಣಿಗೆ ಎರಡೂ ದೇಶಗಳ ನಡುವಿನ ಬಾಂಧವ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿರುವ ಅವರು, ಅಮೆರಿಕದೊಂದಿಗಿನ ಸಂಬಂಧ ಸುಧಾರಣೆಗೆ ಭಾರತ ಮಹತ್ವದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಪ್ಪಂದ ಪತ್ರ ಕೋರ್ಟ್‌ಗೆ ಸಲ್ಲಿಕೆ: ದೇವಯಾನಿ ಮತ್ತು ಮನೆಗೆಲಸದಾಕೆ ಸಂಗೀತಾ ರಿಚರ್ಡ್ ನಡುವಿನ ಎರಡು ಒಪ್ಪಂದ ಪತ್ರಗಳನ್ನು ಅಮೆರಿಕದ ಪ್ರಾಸಿಕ್ಯೂಟರ್ ಪ್ರೀತ್ ಭರಾರ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಮೂಲಕ ದೇವಯಾನಿ ಅಮೆರಿಕಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿಕ್ಷೆ ಪ್ರಮಾಣ ಕಡಿತಗೊಳಿಸುವ  ಪ್ರಸ್ತಾಪ ತಿರಸ್ಕರಿಸಿದ್ದ ಭಾರತ: ದೇವಯಾನಿ ಪ್ರಕರಣದಿಂದ ಸೃಷ್ಟಿಯಾಗಿದ್ದ ರಾಜತಾಂತ್ರಿಕ ಬಿಕ್ಕಟ್ಟು ನಿವಾರಣೆಗೆ ಸಂಬಂಧಿಸಿ ಎರಡೂ ದೇಶಗಳ ನಡುವೆ ನಡೆದ ಮಾತುಕತೆ ವೇಳೆ ಆಕೆಯ ವಿರುದ್ಧ ದಾಖಲಾದ ಎಲ್ಲ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡುವಂತೆ ಭಾರತ ಪಟ್ಟುಹಿಡಿದಿತ್ತು.
ಒಂದು ಹಂತದಲ್ಲಿ ಅಮೆರಿಕ ಆಕೆಯ ವಿರುದ್ಧ ದಾಖಲಾಗಿರುವ ಪ್ರಕರಣದ ಗಂಭೀರತೆಯನ್ನು ಕಡಿಮೆಗೊಳಿಸುವ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ, ಭಾರತ ಇದನ್ನು ಸರಾಸಗಟಾಗಿ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅಂತಿಮ ಆಯ್ಕೆಯಾಗಿ ದೇವಯಾನಿ ಅವರನ್ನು ವಿಶ್ವಸಂಸ್ಥೆಯ ಕಾಯಂ ರಾಯಭಾರಿಯಾಗಿ ವರ್ಗಾಯಿಸುವ ನಿರ್ಧಾರವನ್ನು ಭಾರತ ತೆಗೆದುಕೊಳ್ಳಬೇಕಾಯಿತು ಎಂದು ಮೂಲಗಳು ತಿಳಿಸಿವೆ.

ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ನನಗೆ ನೀಡಿದ ಬೆಂಬಲಕ್ಕೆ ಕೃತಜ್ಞತೆಗಳು. ನನ್ನ ಪರವಾಗಿ ವಕೀಲರು ಹಾಗೂ ಸರ್ಕಾರವೇ ಮಾತನಾಡಲಿದೆ.
- ದೇವಯಾನಿ ಖೋಬ್ರಗಡೆ, ಭಾರತೀಯ ರಾಜತಾಂತ್ರಿಕ ಅಧಿಕಾರಿ

ಇದೊಂದು ಸಣ್ಣ ಬಿಕ್ಕಟ್ಟು. ಎರಡೂ ದೇಶಗಳ ನಡುವೆ ಸದ್ಯ ಯಾವುದೇ ಬಿಕ್ಕಟ್ಟು ಉದ್ಭವವಾಗಿಲ್ಲ. ಮುಂದಿನ ದಿನಗಳಲ್ಲಿ ಆದ್ಯತೆ ಮೇಲೆ ವಿವಿಧ ವಿಚಾರಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದೇವೆ.
- ಸಲ್ಮಾನ್ ಖುರ್ಷಿದ್, ವಿದೇಶಾಂಗ ಸಚಿವ

ವಿದೇಶಾಂಗ ಇಲಾಖೆಗೆ ಭೇಟಿ
ಅಮೆರಿಕದಿಂದ ವಾಪಸಾಗಿರುವ ದೇವಯಾನಿ ಶನಿವಾರ ವಿದೇಶಾಂಗ ಸಚಿವಾಲಯಕ್ಕೆ ಭೇಟಿಕೊಟ್ಟಿದ್ದಾರೆ. ರಾಜತಾಂತ್ರಿಕ ಅಧಿಕಾರಿಗೆ ಇದೊಂದು ಮಾಮೂಲಿ ಭೇಟಿಯಾಗಿದ್ದರೂ ಅಮೆರಿಕದ ಜತೆಗಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಭೇಟಿಗೆ ಸಾಕಷ್ಟು ಪ್ರಾಮುಖ್ಯತೆ ಸಿಕ್ಕಿದೆ. ಅಮೆರಿಕಕ್ಕೆ ಸೆಡ್ಡುಹೊಡೆಯುವ ನಿಟ್ಟಿನಲ್ಲೇ ಸ್ವದೇಶಕ್ಕೆ ವಾಪಸಾದ ಮರುದಿನವೇ ಅವರು ವಿದೇಶಾಂಗ ಕಚೇರಿಯಲ್ಲಿ ಹಾಜರಾಗಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com