ಸಿದ್ದರಾಮಯ್ಯ ವಿರುದ್ಧ ಶಾಸಕರ ಅಸಮಾಧಾನ

ಅಸಮರ್ಥ ಸಚಿವರನ್ನು ಸಂಪುಟದಿಂದ ಕೈ ಬಿಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು...

Published: 24th July 2014 02:00 AM  |   Last Updated: 24th July 2014 12:41 PM   |  A+A-


Posted By : Mainashree
ಬೆಂಗಳೂರು:  ಅಸಮರ್ಥ ಸಚಿವರನ್ನು ಸಂಪುಟದಿಂದ ಕೈ ಬಿಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಕಾಂಗ್ರೆಸ್‌ನ 35ಕ್ಕೂ ಹೆಚ್ಚು ಶಾಸಕರು ಆಗ್ರಹಿಸಿದ್ದಾರೆ.
ಹಿರಿಯ ಶಾಸಕರಾದ ಡಿ.ಬಿ.ಇನಾಂದಾರ್, ಕೋಳಿವಾಡ, ರಾಜಣ್ಣ, ಬಸವರಾಜ ರಾಯರೆಡ್ಡಿ, ಡಾ.ಮಾಲಕರಡ್ಡಿ, ಮಾಲೀಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಶಾಸಕರ ನಿಯೋಗ, ಮೂರು ವಿಧಾನಸಭಾ ಕ್ಷೇತ್ರಗಳ ಮರುಚುನಾವಣೆ ನಂತರ ನಿಗಮ-ಮಂಡಳಿ ನೇಮಕ ನಡೆಸದಿದ್ದರೆ ನಮ್ಮ ಸಹಕಾರ ಮುಂದೆ ನಿಮಗೆ ಸಿಗುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕರು ಮೊದಲ ಬಾರಿಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು, ಮರುಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆಯನ್ನು ಸೃಷ್ಟಿಸಿದೆ. ನಿಯೋಗದಲ್ಲಿ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಶಾಸಕರ ಸಂಖ್ಯೆ ಸಮಬಲವಾಗಿದ್ದು, ಮುಖ್ಯವಾಗಿ ಸಂಪುಟಕ್ಕೆ ಭಾರಿ ಸರ್ಜರಿಗೆ ಆಗ್ರಹಿಸಿದ್ದಾರೆ.
ಎಲ್ಲವೂ ಉಪಚುನಾವಣೆ ಬಳಿಕ: ಆದರೆ ಶಾಸಕರ ಇಷ್ಟೆಲ್ಲ ಒತ್ತಾಯದ ನಡುವೆಯೂ ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆಗೆ ಒಪ್ಪಿಲ್ಲ. ಹೈಕಮಾಂಡ್ ಒಪ್ಪಿಗೆ ಪಡೆದು ಉಪ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ನಡೆಸುವುದಾಗಿ ಹೇಳಿದ್ದಾರೆ.

ಏನೇನು ಬೇಡಿಕೆ?
- ಸಂಪುಟ ವಿಸ್ತರಣೆ ನೆಪದಲ್ಲಿ ಕೆಲ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರುವುದರಿಂದ ಪ್ರಯೋಜನವಿಲ್ಲ. ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಒಳ್ಳೆ ಹೆಸರು ಬರಬೇಕಿದ್ದರೆ ಸಂಪುಟಕ್ಕೆ ಪುನಶ್ಚೇತನ ನೀಡಬೇಕು.
-ಹಾಲಿ ಸಚಿವರಲ್ಲಿ ಹಲವರು ಸರ್ಕಾರವನ್ನಾಗಲಿ, ಮುಖ್ಯಮಂತ್ರಿಗಳನ್ನಾಗಲಿ ಸಮರ್ಥಿಸಿಕೊಳ್ಳುತ್ತಿಲ್ಲ. ಜನರ ಕೆಲಸ, ಶಾಸಕರ ಕೆಲಸವಾಗುತ್ತಿಲ್ಲ. ಹೀಗಾಗಿ ಅಂಥವರನ್ನು ಕೈ ಬಿಟ್ಟು ಅರ್ಹರಿಗೆ ಅವಕಾಶ ನೀಡಬೇಕು.
- ಮುಖ್ಯವಾಗಿ ನಿಗಮ -ಮಂಡಳಿ ನೇಮಕ ವಿಚಾರದಲ್ಲಿ ಯಾವುದೇ ಪ್ರಕ್ರಿಯೆಯನ್ನು ಇದುವರೆಗೆ ಆರಂಭಿಸಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಿಂದ ಸಮ್ಮತಿ ಸಿಕ್ಕರೂ ನೀವು ನೇಮಕಕ್ಕೆ ಮುಂದಾಗಿಲ್ಲ. ಇದು ಕಾರ್ಯಕರ್ತರಲ್ಲಿ ಹತಾಶೆ ಮೂಡಿಸಿದೆ.
-ಇಲ್ಲಿಯವರೆಗೆ ಸಹಿಸಿಕೊಂಡು ನಿಮಗೆ ಸಹಕಾರ ನೀಡಿದ್ದೇವೆ. ಆದರೆ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಂತರ ನಾವು ಸಹಿಸಿಕೊಳ್ಳುವುದಿಲ್ಲ.
- ನಿಗಮ-ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರ ನೇಮಕ ಸಂದರ್ಭದಲ್ಲಿ ಶೇ.50 ಶಾಸಕರಿಗೆ, ಶೇ.50 ಕಾರ್ಯಕರ್ತರಿಗೆ ಆದ್ಯತೆ ಬೇಕು.

ಕ್ಷೇತ್ರಕ್ಕೆ 15 ಶಾಸಕರ ತಂಡ
ಮೂರು ವಿಧಾನಸಭಾ ಕ್ಷೇತ್ರಗಳ ಮರುಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಸಿಎಂ, ಗೆಲವಿಗಾಗಿ ಕಾರ್ಯತಂತ್ರ ಹೆಣೆದಿದ್ದಾರೆ. ಶಾಸಕರ ನಿಯೋಗದೆದುರೇ ಈ ವಿಚಾರ ಪ್ರಸ್ತಾಪಿಸಿದ್ದು, ಪ್ರತಿ ಕ್ಷೇತ್ರಕ್ಕೆ 15 ಶಾಸಕರ ತಂಡ ರಚಿಸಲು ನಿರ್ಧರಿಸಿದ್ದಾರೆ.  ಶಿಕಾರಿಪುರ, ಚಿಕ್ಕೋಡಿ ಹಾಗೂ ಬಳ್ಳಾರಿ ಮರುಚುನಾವಣೆಯಲ್ಲಿ ಕಾಂಗ್ರೆಸ್‌ನ 45 ಶಾಸಕರು ಮತ್ತು ಉಸ್ತುವಾರಿ ಸಚಿವರು ಪಕ್ಷದ ಅಭ್ಯರ್ಥಿ ಗೆಲವಿಗೆ ಶ್ರಮಿಸಲಿದ್ದಾರೆ.Stay up to date on all the latest ಪ್ರಧಾನ ಸುದ್ದಿ news with The Kannadaprabha App. Download now
facebook twitter whatsapp