ಗಗನಕ್ಕೇರಿದ ಇಂಧನ ದರ, ಪೆಟ್ರೋಲ್ ಉಳಿಕೆಗೆ ಇಲ್ಲಿದೆ ಕೆಲ ಟಿಪ್ಸ್!

ಮನೆಗೊಂದು ಕಾರು.. ಇದು ಲಕ್ಸುರಿ ಜೀವನ ಎನ್ನುವುದಕ್ಕಿಂತ ಇಂದಿನ ಬದಲಾದ ಜೀವನಕ್ಕೆ ಅನಿವಾರ್ಯ ಎನ್ನಬಹುದು. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಜನರು ಕಾರುಗಳನ್ನು ಹೊಂದಿರುತ್ತಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮನೆಗೊಂದು ಕಾರು.. ಇದು ಲಕ್ಸುರಿ ಜೀವನ ಎನ್ನುವುದಕ್ಕಿಂತ ಇಂದಿನ ಬದಲಾದ ಜೀವನಕ್ಕೆ ಅನಿವಾರ್ಯ ಎನ್ನಬಹುದು. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಜನರು ಕಾರುಗಳನ್ನು ಹೊಂದಿರುತ್ತಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಕಾರು ಮಾಲೀಕರನ್ನು ಅತೀ ಹೆಚ್ಚು ಆತಂಕಕ್ಕೀಡು ಮಾಡಿರುವ ವಿಚಾರವೆಂದರೆ ಅದು.. ಪೆಟ್ರೋಲ್ ಮತ್ತು ಡೀಸೆಲ್ ನ ದರ ಏರಿಕೆ. ಕಳೆದೊಂದು ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದ್ದು, ಮಧ್ಯಮ ವರ್ಗದ ಕಾರು ಮಾಲೀಕರು ಕಾರಿನ ಬಳಕೆಗಿಂತ ಕಾರಿನ ನಿರ್ವಹಣೆ ಕುರಿತಂತೆ ಹೆಚ್ಚು ಚಿಂತಾಕ್ರಾಂತರಾಗುವಂತೆ ಮಾಡಿದೆ. ಹೀಗಾಗಿ ಕಾರಿನ ಇಂಧನ ದಕ್ಷತೆ ಹೆಚ್ಚಿಸುವ ಅಥವಾ ಕಾರಿನಲ್ಲಿ ಶೇ.20 ರಿಂದ 30ರವರೆಗೂ ಇಂಧನ ಉಳಿಸುವ ಕೆಲ ಅಮೂಲ್ಯ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಡ್ರೈವಿಂಗ್ ವೇಳೆ ಪಾಲಿಸಬೇಕಾದ ಸಲಹೆಗಳು
1. ಕಾರು ಚಲಿಸುವಾಗ ಸುಖಾಸುಮ್ಮನೆ ಬ್ರೇಕ್ ಒತ್ತಬೇಡಿ. ಕಾರಿನ ಬ್ರೇಕಿಂಗ್ ಸಿಸ್ಟಮ್ ನಿಯಂತ್ರಣ ಕೂಡ ಇಂಧನ ದಕ್ಷತೆ ಮೇಲೆ ಪರಿಣಾಮ ಬೀರುತ್ತದೆ. ಅನಿವಾರ್ಯತೆ ಎದುರಾದಾಗ ಮಾತ್ರ ಬ್ರೇಕ್ ಬಳಕೆ ಮಾಡಿ..
2. ಎಕ್ಸಲರೇಟರ್ ಬೇಕಾಬಿಟ್ಟಿ ಬಳಕೆ ಬೇಡ.. ಕೆಲವರಿಗೆ ಕಾರು ನಿಂತಿದ್ದರೂ ಕಾರಿನ ಎಕ್ಸಲರೇಟರ್ ಒತ್ತುವ ಗುಣವಿರುತ್ತದೆ. ಸುಖಾಸುಮ್ಮನೆ ಎಕ್ಸಲರೇಟರ್ ಬಳಕೆ ಪೆಟ್ರೋಲ್ ಅನ್ನು ಹೀರುತ್ತದೆ.
3. ಕಾರು ಚಲಾಯಿಸುವಾಗ ವೇಗದ ಮೇಲೆ ಗಮನವಿರಲಿ.. ಅತಿಯಾದ ವೇಗ ಕಾರಿನ ಇಂಧನ ದಕ್ಷತೆಗೂ ಮತ್ತು ನಿಮ್ಮ ಜೀವಕ್ಕೂ ಅಪಾಯ. ಹೀಗಾಗಿ ಸಾಮಾನ್ಯ ಸರಾಸರಿ ವೇಗದಲ್ಲಿ ಕಾರು ಚಲಾಯಿಸಿ. ಸಾಮಾನವಾಗಿ ಗಂಟೆಗೆ 60 ರಿಂದ 70 ಕಿ.ಮೀ ವೇಗ ಸಾಮಾನ್ಯ ವೇಗ ಎಂದು ಗುರುತಿಸಲಾಗಿದೆ. ಆದರೆ ಇದು ಕಾರುಗಳ ಸಾಮರ್ಥ್ಯದ ಮೇಲೆ ಆಧಾರಿತವಾಗಿರುತ್ತದೆ.
4. ಕಾರಿನಲ್ಲಿ ಚಲಿಸುವಾಗ ಟ್ರಾಫಿಕ್ ಸಿಗ್ನಲ್ ಅಥವಾ ಇನ್ನಾವುದೇ ಪರಿಸ್ಥಿತಿಯಲ್ಲಿ 1 ನಿಮಿಷಕ್ಕೂ ಹೆಚ್ಚು ಕಾಲ ನೀವು ಕಾರನ್ನು ನಿಲ್ಲಿಸಬೇಕಿದ್ದರೆ ಆಗ ಕಾರಿನ ಎಂಜಿನ್ ಆಫ್ ಮಾಡಿ.. ಆಗ ಸುಖಾಸುಮ್ಮನೆ ಇಂಧನ ಬಳಕೆ ತಪ್ಪುತ್ತದೆ.
5. ಹತ್ತಿರದ ಪ್ರದೇಶಗಳಿಗೆ ತೆರಳವು ಕಾರು ಬಳಕೆ ಮಾಡುತ್ತಿದ್ದರೆ, ಸಾಧ್ಯವಾದಷ್ಟೂ ಅದನ್ನು ತಡೆಯಿರಿ. ಇದರಿಂದ ಕಾರಿನ ಎಂಜಿನ್ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರುತ್ತದೆ. 
6. ಕಾರು ಚಾಲನೆ ವೇಳೆ ಚಾಲಕನಿಗೆ ಕಾಪಿನ ಗೇರ್ ಬಳಕೆ ಬಗ್ಗೆ ಖಂಡಿತ ಜ್ಞಾನ ಇರಲೇಬೇಕು. ಸರಿಯಾದ ವೇಗದಲ್ಲಿ ಸರಿಯಾದ ಗೇರ್ ನ ಬಳಕೆ ಮಾಡಿದರೆ ಕಾರಿನ ಇಂಧನ ದಕ್ಷತೆ ಹೆಚ್ಚುತ್ತದೆ. ಕಡಿಮೆ ವೇಗದಲ್ಲಿ ಟಾರ್ ಗೇರ್ ಗಳ ಬಳಕೆ ಯಾವಾಗಲೂ ಹೆಚ್ಚು ಇಂಧನವನ್ನು ಬಳಕೆ ಮಾಡುತ್ತದೆ.
 ಕಾರಿನ ನಿರ್ವಹಣಾ ಸಲಹೆಗಳು
1. ಕಾರು ಯಾವುದೇ ಇರಲಿ.. ಆಗಾಗ ಕಾರನ್ನು ಸರ್ವಿಸ್ ಮಾಡಿಸಿ. ಸರ್ವಿಸ್ ಗಾಗಿ ಉತ್ತಮವಾದ ಮತ್ತು ನಂಬಿಕಸ್ಥ ಸರ್ವಿಸಿಂಗ್ ಸೆಂಟರ್ ಗಳನ್ನೇ ಆಯ್ಕೆ ಮಾಡಿ..
2. ಅನಿವಾರ್ಯದ ಪರಿಸ್ಥಿತಿಗಳಲ್ಲಿ ಹೊರತು ಪಡಿಸಿ, ಕಾರಿನಲ್ಲಿ ಹೆಚ್ಚು ಭಾರದ ವಸ್ತುಗಳನ್ನು ಕೊಂಡೊಯ್ಯ ಬೇಡಿ.. ಕಾರಿನಲ್ಲಿರುವ ಭಾರ ಕೂಡ ಕಾರಿನ ಇಂಧನ ದಕ್ಷತೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕಾರಿನಲ್ಲಿರುವ ಅನಗತ್ಯ ಭಾರದ ವಸ್ತುಗಳನ್ನು ತೆಗೆದುಬಿಡಿ..
3. ಕಾರಿನ ಏರ್ ಫಿಲ್ಟರ್ ಅನ್ನು ನಿಯಮಿತವಾಗಿ ಕ್ಲೀನ್ ಮಾಡಿ.. ಅಂತೆಯೇ ಕಾರಿನ ಸ್ಪಾರ್ಕ್ ಪ್ಲಗ್ ಅನ್ನೂ ಕೂಡ ಸರಿಯಾಗಿ ನಿರ್ವಹಣೆ ಮಾಡಬೇಕು.
4. ವಾಹನಗಳ ಇಂಧನ ದಕ್ಷತೆ ಹೆಚ್ಚಿಸಬಲ್ಲ ಇಂಧನ ಮಿಶ್ರಣಗಳು (fuel additives) ಮಾರುಕಟ್ಟೆಯಲ್ಲಿ ಲಭ್ಯವಿದೆ. ಉತ್ತಮವಾದ ಮಿಶ್ರಣಗಳನ್ನು ಇಂಧನದೊಂದಿಗೆ ಬಳಕೆ ಮಾಡಬಹುದು. ಈ ಇಂಧನ ಮಿಶ್ರಣಗಳು ಕಾರಿನ ಇಂಧನ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತದೆ.
5. ಉತ್ತಮವಾದ ಎಂಜಿನ್ ಆಯಿಲ್ ಗಳನ್ನು ಮಾತ್ರ  ಬಳಕೆ ಮಾಡಿ.. ಇಂಜಿನ್ ಆಯಿಲ್ ಗಳು ಕೂಡ ಇಂಧನ ದಕ್ಷತೆ ಮತ್ತು ಕಾರಿನ ಎಂಜಿನ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 
6. ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಸ್ವಚ್ಛಂದವಾಗಿ ಸಂಚರಿಸುವುದು ತುಂಬಾ ಕಷ್ಟಕರ. ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ಹಾಗೂ ತಾಪಮಾನ ಏರಿಕೆಯಿಂದಾಗಿ ಎಸಿ ಬಳಕೆ ಮಾಡಲು ಪ್ರೇರಿತರಾಗುತ್ತೀರಿ. ಆದರೆ ಎಸಿಯಿಂದಾಗಿ ಹೆಚ್ಚು ಪವರ್ ಹಾಗೂ ಇಂಧನ ವ್ಯಯವಾಗುತ್ತದೆ.
ಈ ಮೇಲಿನ ಎಲ್ಲ ಅಂಶಗಳನ್ನು ಪಾಲಿಸಿದ ಬಳಿಕ ಕಾರಿನಲ್ಲಿ ಕಂಡುಬರುವ ಬದಲಾವಣೆಯನ್ನು ಗಮನಿಸಿ. ಯಾವುದೇ ಕಾರಣಕ್ಕೂ ಕಾರಿನ ಸರ್ವಿಸ್ ಅನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಕಾರಿನ ಇಂಧನ ದಕ್ಷತೆಯೂ ಹೆಚ್ಚುತ್ತದೆ.. ನಿಮ್ಮ ಜೇಬಿನ ಭಾರವೂ ಕಡಿಮೆಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com