'ನ್ಯಾನೊ' ನೊ... ನೊ ಎನ್ನುತ್ತಿರುವ ಗ್ರಾಹಕರು, ಕಳೆದ 9 ತಿಂಗಳಲ್ಲಿ ಮಾರಾಟವಾಗಿದ್ದು ಒಂದೇ ಒಂದು ಕಾರು!

ಭಾರತದ ಆಟೊಮೊಬೈಲ್ ಕ್ಷೇತ್ರದಲ್ಲಿ ಮಹಾತ್ವಾಕಾಂಕ್ಷಿ ಯೋಜನೆಯಾಗಿ ಆರಂಭಗೊಂಡಿದ್ದ ಟಾಟಾ ನ್ಯಾನೊ ಕಾರು ಉತ್ಪಾದನೆ ನಿಲ್ಲುವ ಹಂತಕ್ಕೆ ಬಂದು ತಲುಪಿದೆ.

Published: 09th October 2019 01:59 PM  |   Last Updated: 09th October 2019 02:13 PM   |  A+A-


Nano, the cheapest car and brainchild of Ratan Tata.

ರತನ್ ಟಾಟಾ ಅವರ ಕನಸಿನ ಕೂಸು ನ್ಯಾನೊ ಕಾರು

Posted By : Sumana Upadhyaya
Source : The New Indian Express

ನವದೆಹಲಿ: ಭಾರತದ ಆಟೊಮೊಬೈಲ್ ಕ್ಷೇತ್ರದಲ್ಲಿ ಮಹಾತ್ವಾಕಾಂಕ್ಷಿ ಯೋಜನೆಯಾಗಿ ಆರಂಭಗೊಂಡಿದ್ದ ಟಾಟಾ ನ್ಯಾನೊ ಕಾರು ಉತ್ಪಾದನೆ ನಿಲ್ಲುವ ಹಂತಕ್ಕೆ ಬಂದು ತಲುಪಿದೆ. ಪ್ರಸಕ್ತ ವರ್ಷ ಕಳೆದ 9 ತಿಂಗಳಲ್ಲಿ ಒಂದೇ ಒಂದು ಕಾರು ಉತ್ಪಾದನೆಯಾಗಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಕೇವಲ ಒಂದು ನ್ಯಾನೊ ಕಾರು ಮಾತ್ರ ಮಾರಾಟವಾಗಿದೆ.


ದೇಶದ ಕಾರುಗಳಲ್ಲಿ ಅತ್ಯಂತ ಅಗ್ಗದ ಮಧ್ಯಮ ಮತ್ತು ಕೆಳ ಮಧ್ಯಮ ಪ್ರಯಾಣಿಕ ಸ್ನೇಹಿ ಕಾರು ಎಂಬ ಪ್ರಚಾರದೊಂದಿಗೆ ಆರಂಭಗೊಂಡ ನ್ಯಾನೊ ಕಾರು ಟಾಟಾ ಗ್ರೂಪ್ ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ಕನಸಿನ ಕೂಸು. ಆರಂಭದಲ್ಲಿ ಮೂರ್ನಾಲ್ಕು ವರ್ಷ ಚೆನ್ನಾಗಿಯೇ ಮಾರಾಟವಾಗುತ್ತಿತ್ತು. ಜನರಿಗೆ ಆಕರ್ಷಣೆಯೂ ಆಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದರ ಮಾರಾಟದಲ್ಲಿ ಪ್ರಗತಿ ಕಂಡುಬಂದಿಲ್ಲ, ಕಳೆದ ವರ್ಷ ಡಿಸೆಂಬರ್ ನಲ್ಲಿ ಗುಜರಾತ್ ನ ಸನಂದ್ ಘಟಕದಲ್ಲಿ ಕೇವಲ 82 ಕಾರುಗಳು ಮಾತ್ರ ಉತ್ಪಾದನೆ ಮಾಡಲಾಗಿತ್ತು. 


ಗ್ರಾಹಕರ ಬೇಡಿಕೆಯನ್ನು ನೋಡಿಕೊಂಡು ಕಾರು ಉತ್ಪಾದನೆ ಮಾಡಲಾಗುವುದು ಎಂದು ಟಾಟಾ ಕಂಪೆನಿ ಹೇಳುತ್ತಿದೆ. ಮುಂದಿನ ವರ್ಷ ಏಪ್ರಿಲ್ ನಿಂದ ನ್ಯಾನೊ ಕಾರು ಉತ್ಪಾದನೆ ನಿಲ್ಲಿಸುವ ನಿರ್ಧಾರಕ್ಕೆ ಕಂಪೆನಿ ಬಂದಿದೆ ಎಂದು ಹೇಳಲಾಗುತ್ತಿದೆ. 

ನ್ಯಾನೊ ಕಾರು ಆರಂಭವಾಗಿದ್ದು ಹೇಗೆ?: ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಕಾರು ಉತ್ಪಾದನೆ ಮಾಡಬೇಕೆಂಬ ಆಲೋಚನೆ ಉದ್ಯಮಿ ರತನ್ ಟಾಟಾ ಅವರಿಗೆ ಹೊಳೆಯಿತು. ಒಂದು ದಿನ ಮಳೆ ಬರುತ್ತಿದ್ದಾಗ ಕುಟುಂಬದ ನಾಲ್ವರು ದ್ವಿಚಕ್ರ ವಾಹನದಲ್ಲಿ ಒದ್ದೆಯಾಗಿ ಹೋಗುತ್ತಿದ್ದರು. ಆಗ ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದವರ ಕೈಗೆ ಎಟಕುವ ದರದಲ್ಲಿ ಕಾರು ಉತ್ಪತ್ತಿ ಮಾಡಬೇಕೆಂದು ಅವರ ಮನಸ್ಸಿಗೆ ಬಂತು.


2006ರಲ್ಲಿ ಟಾಟಾ ಕಂಪೆನಿ ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಕಾರು ಉತ್ಪಾದನೆ ಘಟಕವನ್ನು ಆರಂಭಿಸಲು ಮುಂದಾಯಿತು. ಸಣ್ಣ ಪಟ್ಟಣವನ್ನು ಆಟೊ ಸಿಟಿ ಮಾಡಲು 2 ಸಾವಿರ ಕೋಟಿ ರೂಪಾಯಿ ಹೂಡಿಕೆಗೆ ಮುಂದಾಯಿತು. ಆದರೆ ಅಲ್ಲಿ ಫಲವತ್ತಾದ ಭೂಮಿಯನ್ನು ರೈತರಿಂದ ಕಿತ್ತು ಟಾಟಾ ಮೋಟರ್ಸ್ ಗೆ ಮಾರಾಟ ಮಾಡುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಹೀಗಾಗಿ ಕಂಪೆನಿ ನ್ಯಾನೊ ಫ್ಯಾಕ್ಟರಿಯನ್ನು ಗುಜರಾತ್ ನ ಸಾನಂದ್ ಗೆ ವರ್ಗಾಯಿಸಿತು.


2009ರಲ್ಲಿ ಕಾರು ಎರಡು ಮಾದರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಯಿತು. ಬೇಸಿಕ್ ಮಾಡೆಲ್ ಗೆ 1.12 ಲಕ್ಷ ಮತ್ತು ಲಕ್ಷುರಿ ಮಾಡೆಲ್ ಗೆ 1.70 ಲಕ್ಷ ವೆಚ್ಚದಲ್ಲಿ ಮಾರುಕಟ್ಟೆಗೆ ಬಂತು. ಆರಂಭದ ವರ್ಷ ಗ್ರಾಹಕರಲ್ಲಿ ಉತ್ಸಾಹ ಕಂಡುಬಂತು. ನಂತರ ಅದು ಜನರ ಆಕರ್ಷಣೆಯಾಗಿ ಉಳಿಯಲೇ ಇಲ್ಲ.


ಇದೀಗ ನ್ಯಾನೊ ಕಾರನ್ನು ಬಿಎಸ್-6 ಹಂತಕ್ಕೆ ಮೇಲ್ದರ್ಜೆಗೇರಿಸುವ ಮತ್ತು ಇತರ ಸುರಕ್ಷತಾ ನಿಯಮಗಳನ್ನು ಪಾಲಿಸುವತ್ತ ಗಮನ ಹರಿಸದಿರುವುದರಿಂದ ಉತ್ಪಾದನೆ ಮುಂದಿನ ವರ್ಷ ನಿಲ್ಲುತ್ತದೆ ಎಂಬ ಮಾತು ಆಟೊ ಉದ್ಯಮ ವಲಯದಲ್ಲಿ ಕೇಳಿಬರುತ್ತಿದೆ.

Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp