ಬಜಾಜ್ ಪಲ್ಸರ್ ಎನ್ ಎಸ್ 125 ಬೈಕ್ ಬಿಡುಗಡೆ; ಬೆಲೆ ಮತ್ತು ವೈಶಿಷ್ಟ್ಯಗಳು ಇಂತಿವೆ

ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಬಜಾಜ್ ತನ್ನ ಪಲ್ಸರ್ ಸರಣಿಯಲ್ಲಿ ಮತ್ತೊಂದು ಹೊಸ ಬಜಾಜ್ ಪಲ್ಸರ್ ಎನ್ಎಸ್ 125 ಬೈಕ್ ಬಿಡುಗಡೆ ಮಾಡಿದ್ದು, ಈ ಬೈಕ್ ನ ವೈಶಿಷ್ಟಗಳು ಇಲ್ಲಿವೆ.
ಬಜಾಜ್ ಪಲ್ಸರ್ ಎನ್ಎಸ್ 125
ಬಜಾಜ್ ಪಲ್ಸರ್ ಎನ್ಎಸ್ 125

ನವದೆಹಲಿ: ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಬಜಾಜ್ ತನ್ನ ಪಲ್ಸರ್ ಸರಣಿಯಲ್ಲಿ ಮತ್ತೊಂದು ಹೊಸ ಬಜಾಜ್ ಪಲ್ಸರ್ ಎನ್ಎಸ್ 125 ಬೈಕ್ ಬಿಡುಗಡೆ ಮಾಡಿದ್ದು, ಈ ಬೈಕ್ ನ ವೈಶಿಷ್ಟಗಳು ಇಲ್ಲಿವೆ.

ಹೌದು.. ಬಜಾಜ್ ಸಂಸ್ಥೆ ತನ್ನ ಪಲ್ಸರ್ ಸರಣಿಯ ಎನ್ಎಸ್ 125 ಬೈಕ್ ಅನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಇದರ ಬೆಲೆ 93,690 ರೂ ಎಂದು ಹೇಳಿದೆ. ಬಜಾಜ್ ಸಂಸ್ಥೆಯ ಪಲ್ಸರ್ ಬೈಕ್ ಗಳು ಈಗಾಗಲೇ ಸಾಕಷ್ಟು ಖ್ಯಾತಿಗಳಿಸಿದ್ದು, ಸ್ಪೋರ್ಟ್ಸ್ ಮಾದರಿಯ ಆರಂಭಿಕ ಶ್ರೇಣಿಯ ಬೈಕ್ ಗಳಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಬೈಕ್ ಎಂಬ ಕೀರ್ತಿಗೂ ಭಾಜನವಾಗಿವೆ.

ಬಜಾಜ್ ಸಂಸ್ಥೆ ಯುವಕರನ್ನು ಗುರಿಯಾಗಿಸಿಕೊಂಡು ಮೂರು ಮಾದರಿಯ ಬೈಕ್ ಗಳನ್ನು ಬಿಡುಗಡೆ ಮಾಡಿದ್ದು, ಪಲ್ಸರ್ ಎನ್ಎಸ್ 125, ಪಲ್ಸರ್ ಎನ್ಎಸ್ 160 ಮತ್ತು ಪಲ್ಸರ್ ಎನ್ಎಸ್ 200 ಬೈಕ್ ಗಳು ಮಾರುಕಟ್ಟೆಯಲ್ಲಿವೆ. ಈ ಬೈಕ್‌ನ ತಾಂತ್ರಿಕ ವಿವರಗಳಿಗೆ ಸಂಬಂಧಿಸಿದಂತೆ, ಪಲ್ಸರ್ ಎನ್ಎಸ್  125 ಬೈಕ್ 125 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್, ಫ್ಯೂಲ್ ಇಂಜೆಕ್ಷನ್, ಡಿಟಿಎಸ್-ಐ ಎಂಜಿನ್ ಹೊಂದಿದೆ. ಸಾಮಾನ್ಯ ಪಲ್ಸರ್ 125 ಬೈಕ್‌ನಲ್ಲೂ ಇದೇ ಎಂಜಿನ್ ನೀಡಲಾಗಿದ್ದು, ಇದು 5-ಸ್ಪೀಡ್ ಗೇರ್‌ಬಾಕ್ಸ್‌ ಸಿಸ್ಟಂ ಹೊಂದಿದೆ. ಅಂತೆಯೇ ಹೊಸ ಹೊರಸೂಸುವಿಕೆ ಮಾನದಂಡಗಳನ್ನು ಹೊಂದಿರುವ  ಬಿಎಸ್ 6 ಎಂಜಿನ್ ಆಗಿದ್ದು, ಅದರಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆ. ಪಲ್ಸರ್ 125 ಬೈಕ್ ಗಿಂತ ಎನ್ಎಸ್ 125 ಬೈಕ್ ಹೆಚ್ಚು ಶಕ್ತಿಯುತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಎಂಜಿನ್ ಈಗ ಗರಿಷ್ಠ 12 ಪಿಎಸ್ ಪವರ್ ಮತ್ತು 11 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಪಲ್ಸರ್ ಎನ್ಎಸ್ 125 ಮೋಟಾರ್ಸೈಕಲ್ ಉತ್ತಮ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಪಡೆಯುತ್ತದೆ. ಇದರೊಂದಿಗೆ, ಈ ವಿಭಾಗದ ಬೈಕ್‌ಗಳಿಗೆ ಹೋಲಿಸಿದರೆ ಇದರಲ್ಲಿ ಹಲವು ವಿಶೇಷತೆಗಳಿವೆ. ದ್ವಿಚಕ್ರ ವಾಹನ ತಯಾರಕರು ಈ ಬೈಕನ್ನು ವಿಶೇಷವಾಗಿ ಸವಾರಿ ಮಾಡಲು ಇಷ್ಟಪಡುವ ಯುವಕರಿಗೆ  ಮಾಡಿದ್ದಾರೆ. ಹೊಸ ಪಲ್ಸರ್ ಎನ್ಎಸ್ 125 ಬೈಕ್ 144 ಕೆಜಿ ತೂಕ ಹೊಂದಿದ್ದು. ಇದು ಸಾಮಾನ್ಯ ಪಲ್ಸರ್ 125 ಗಿಂತ ಸುಮಾರು 4 ಕೆಜಿ ಭಾರ ಮತ್ತು ಎನ್ಎಸ್ 160ಗಿಂತ 7 ಕಿ.ಗ್ರಾಂ ಕಡಿಮೆ ತೂಕ ಹೊಂದಿದೆ.

ಹೊಸ ಪಲ್ಸರ್ ಎನ್ಎಸ್ 125 ಬೈಕ್ ಹೊರ ವಿನ್ಯಾಸವನ್ನು ನೋಡಿದರೆ, ಪಲ್ಸರ್ 125 ಬೈಕ್ ಗಿಂತ ಹೆಚ್ಚಿನ ವ್ಯತ್ಯಾಸವಿಲ್ಲ. ಈ ಬೈಕಿನ ಮುಂಭಾಗದಲ್ಲಿ ಪಲ್ಸರ್ ಸರಣಿಯ ಸಿಗ್ನೇಚರ್ ವುಲ್ಫ್-ಐ ಹೆಡ್ ಲೈಟ್ ವಿನ್ಯಾಸ ನೀಡಲಾಗಿದೆ. ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಅನ್ನು ಬಳಸಲಾಗಿದ್ದು, ಬೈಕ್‌ನ ಹಿಂಭಾಗದಲ್ಲಿ  ಸಿಗ್ನೇಚರ್ ಟ್ವಿನ್ ಎಲ್ಇಡಿ-ಸ್ಟ್ರಿಪ್ ಟೈಲ್ಲೈಟ್‌ಗಳನ್ನು ನೀಡಲಾಗಿದೆ. ಅಂತೆಯೇ ಈ ಬೈಕ್ ಎನ್ಎಸ್ 125 17 ಇಂಚಿನ ಅಲಾಯ್ ವೀಲ್ ಗಳನ್ನು ಹೊಂದಿದ್ದು, ಸಿಬಿಎಸ್ 240 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 130 ಎಂಎಂ ರಿಯರ್ ಡ್ರಮ್ ಬ್ರೇಕಿಂಗ್ ಸಿಸ್ಟಂ ಹೊಂದಿದೆ. ಎನ್ ಎಸ್ 125 ಬೈಕ್ ಗಳು  ಬೀಚ್ ಬ್ಲೂ, ಫಿಯರಿ ಆರೆಂಜ್, ಬರ್ನ್ಟ್ ರೆಡ್ ಮತ್ತು ಪ್ಯೂಟರ್ ಗ್ರೇ ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಈ ಬೈಕ್ ನ ಬೆಲೆ 93,690 ರೂ ಎಂದು ಹೇಳಲಾಗಿದ್ದು, ಇದು ಎನ್ಎಸ್ 160 ಬೈಕ್ ನ ಬೆಲೆಗಿಂತ ಸುಮಾರು 16 ಸಾವಿರ ರೂ ಕಡಿಮೆ. ಬೆಲೆಯಲ್ಲಿ ಅಲ್ಪ ಸಾಮ್ಯತೆ ಇದ್ದರೂ ಈ ಪೈಕ್ ಆ್ಯಕ್ಸೆಸರಿಗಳಿಗೆ  ಹೋಲಿಕೆ ಮಾಡಿದರೆ ಎಲ್ ಎಸ್ 160ಬೈಕ್ ಆ್ಯಕ್ಸೆಸರಿಗಳಿಗೆ 20 ಸಾವಿರ ರೂ ಹೆಚ್ಚು ಖರ್ಚಾಗುತ್ತದೆ ಎಂದು ಬೈಕ್ ತಜ್ಞರು ಹೇಳಿದ್ದಾರೆ.

ಆದಾಗ್ಯೂ ಎನ್ಎಸ್ 125 ಬೈಕ್ ತನ್ನ ಶ್ರೇಣಿಯ ಇತರೆ ದೊಡ್ಡ ಬೈಕ್ ಗಳಿಗೆ ಉತ್ತಮ ಪೈಪೋಟಿ ನೀಡಬಲ್ಲದು ಎಂದು ಹೇಳಲಾಗಿದೆ.ಬಜಾಜ್ ಸಂಸ್ಥೆ ಸ್ಪೋರ್ಟ್ ಬೈಕಿಂಗ್ ಉತ್ಸಾಹಿಗಳನ್ನು ಗುರಿಯಾಗಿಸಿಕೊಂಡ ಈ ಬೈಕ್ ಅನ್ನು ಮಾರುಕಟ್ಟೆಗೆ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com