
ಹೊಸ ಸ್ವಿಫ್ಟ್ ಬಿಡುಗಡೆ: ಹೊಸತೇನಿದೆ? ಬೆಲೆ ಎಷ್ಟು ಗೊತ್ತೇ?
ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಝೂಕಿ ಇಂಡಿಯಾ (ಎಂಎಸ್ಐ) ಫೆ.24 ರಂದು ಹೊಸ ಪ್ರೀಮಿಯಮ್ ಹ್ಯಾಚ್ ಬ್ಯಾಕ್ ಸ್ವಿಫ್ಟ್ ಬಿಡುಗಡೆ ಮಾಡಿದೆ.
ಗ್ರಾಹಕರಿಗೆ ಅಗತ್ಯವಿರುವ ಹೊಸತನ ಹಾಗೂ ಹೊಸ ತಂತ್ರಜ್ಞಾನದೊಂದಿಗೆ ಸ್ವಿಫ್ಟ್-2021 ಮಾರುಕಟ್ಟೆಗೆ ಪರಿಚಯಗೊಂಡಿದ್ದು, 5.73 ಲಕ್ಷದಿಂದ 8.41 ಲಕ್ಷದ ನಡುವಿನ ಬೆಲೆ(ಎಕ್ಸ್ ಶೋರೂಮ್ ಬೆಲೆ, ದೆಹಲಿ)ಯಲ್ಲಿ ಲಭ್ಯವಿದೆ.
2005 ರಲ್ಲಿ ಸ್ವಿಫ್ಟ್ ನ್ನು ಪರಿಚಯಿಸಿದಾಗಿನಿಂದ ಭಾರತದ ಪ್ರೀಮಿಯಮ್ ಹ್ಯಾಚ್ ಬ್ಯಾಕ್ ವಿಭಾಗವನ್ನು ಬದಲಾಯಿಸಿದ್ದು, ಸ್ಪ್ರೋರ್ಟಿ ಪರ್ಫಾರ್ಮೆನ್ಸ್ ಗಳಿಂದ ಸಾಟಿ ಇಲ್ಲದ ಜನಪ್ರಿಯತೆ ಗಳಿಸಿ ವಿಭಿನ್ನವಾಗಿ ಗುರುತಿಸಿಕೊಂಡಿದೆ ಎಂದು ಹೊಸ ಸ್ವಿಫ್ಟ್ ಬಿಡುಗಡೆ ವೇಳೆ ಎಂಎಸ್ಐ ನ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.
ಈ ವರೆಗೂ 2.4 ಮಿಲಿಯನ್ ಸ್ವಿಫ್ಟ್ ಗ್ರಾಹಕರಿದ್ದು, ಹೊಸ ಸ್ವಿಫ್ಟ್ ಅತ್ಯಂತ ಶಕ್ತಿಶಾಲಿ ಕೆ-ಸರಣಿ ಇಂಜಿನ್, ಸ್ಪೋರ್ಟಿಯರ್ ಡ್ಯುಯಲ್ ಟೋನ್ ಹೊರಭಾಗದ ವಿನ್ಯಾಸ, ಅತ್ಯುತ್ತಮ ಇಂಧನ ಕ್ಷಮತೆ ಹಾಗೂ ಹೆಚ್ಚಿನ ಸುರಕ್ಷತಾ ಸೌಲಭ್ಯಗಳ ಮೂಲಕ ಸ್ವಿಫ್ಟ್ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊಸ ಸ್ವಿಫ್ಟ್ ಮಾನವ ಚಾಲಿತ ಹಾಗೂ ಸ್ವಯಂಚಾಲಿತ ಸ್ವಯಂಚಾಲಿತ ಗೇರ್ ಶಿಫ್ಟ್ (ಎಜಿಎಸ್) ಟ್ರಾನ್ಸ್ಮಿಷನ್ ಗಳಲ್ಲಿ ಲಭ್ಯವಿದೆ. ಮಾನವ ಚಾಲಿತ ಗೇರ್ ಶಿಫ್ಟ್ ಟ್ರಾನ್ಸ್ಮಿಷನ್ ಮಾದರಿಯ ಕಾರು 5.73 ಲಕ್ಷ ರೂಪಾಯಿಗಳಿಂದ 7.91 ಲಕ್ಷ ರೂಪಾಯಿಗಳ ನಡುವೆ ಲಭ್ಯವಿದ್ದರೆ, ಎಜಿಎಸ್ ಆವೃತ್ತಿಯ ಬೆಲೆ 6.86 ಲಕ್ಷಗಳಿಂದ 8.41 ಲಕ್ಷ ರೂಪಾಯಿಗಳವರೆಗೆ ಇದೆ.
ಮಾನವ ಚಾಲಿತ ಟ್ರಾನ್ಸ್ಮಿಷನ್ ಸಹಿತ 1.2 ಲೀಟರ್ ಪೆಟ್ರೋಲ್ ಮಾಡಲ್ ನ ಇಂಧನ ಕ್ಷಮತೆ ಪ್ರತಿ ಲೀಟರ್ ಗೆ 23.2 ಕಿ.ಮೀ ನಷ್ಟಿದ್ದರೆ, ಸ್ವಯಂ ಚಾಲಿತ ಆವೃತ್ತಿಯಲ್ಲಿ ಪ್ರತಿ ಲೀಟರ್ ಗೆ 23.76 ಕಿ.ಮೀ ನಷ್ಟಿದೆ ಎಂದು ಮಾರುತಿ ಸಂಸ್ಥೆ ತಿಳಿಸಿದೆ.